ಕೆ. ಎಸ್. ಶರ್ಮಾ
ಕೆ. ಎಸ್. ಶರ್ಮಾ
ಕೆ.ಎಸ್. ಶರ್ಮಾ ಎಂದು ಪ್ರಸಿದ್ಧರಾದ ಡಾ. ಡಾ. ಕುವಲಯ ಶ್ಯಾಮ ಶರ್ಮ ಕರ್ನಾಟಕ ರಾಜ್ಯದ ದಿನಗೂಲಿ ಕರ್ಮಚಾರಿಗಳ ಪರ ಹೋರಾಟಗಾರರಾಗಿ, ಹಲವಾರು ಸಂಸ್ಥೆಗಳನ್ನು ಕಟ್ಟಿದವರಾಗಿ, ಪತ್ರಕರ್ತರಾಗಿ, ಪ್ರಾಧ್ಯಾಪಕರಾಗಿ, ಲೇಖಕರಾಗಿ, ಕಾನೂನುತಜ್ಞರಾಗಿ, ಪ್ರಕಾಶಕರಾಗಿ ಹೀಗೆ ಅನೇಕ ರೀತಿಯಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಕೆ. ಎಸ್. ಶರ್ಮಾ ಮೂಲತಃ ಚಿಕ್ಕಬಳ್ಳಾಪುರದವರು. ಅವರು 1934ರ ಸೆಪ್ಟೆಂಬರ್ 30ರಂದು ಜನಿಸಿದರು. ತಂದೆ ಎಂಬಾರ್ ಭಾಷ್ಯಾಚಾರ್ಯ. ತಾಯಿ ಸಂಪತ್ತಮ್ಮ. ಶರ್ಮಾ ಅವರ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದವರು. ರಾಜಾಜಿ ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಅವರದೊಂದು ಪ್ರಿಂಟಿಂಗ್ ಪ್ರೆಸ್ ಇತ್ತು. ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಪುಸ್ತಕಗಳು ಇವರ ಮನೆಯಲ್ಲಿರುತ್ತಿದ್ದವು.
ಶರ್ಮಾ ಅವರ ಆರಂಭಿಕ ವ್ಯಾಸಂಗ ನಡೆದದ್ದು ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದ ರಾಗಿ ಮಂಡಿ ಶಾಲೆಯಲ್ಲಿ. 1944-45ರ ಆಸುಪಾಸು. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಮೆರವಣಿಗೆಗಳು ಇವರ ಶಾಲೆಯ ಮುಂದೆ ಸಾಗುತ್ತಿದ್ದೆವು. ಆಗ ಆ ಶಾಲೆಯ ದೊಡ್ಡ ಗೇಟ್ ಹಾರಿ ಇವರೂ ಜಾಥಾಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂತಹ ಹಿನ್ನೆಲೆ ಇವರನ್ನು ಕಾನೂನು ಅಧ್ಯಯನ ಮಾಡಬೇಕೆಂಬ ಆಸೆಗೆ ಹಚ್ಚಿತ್ತು. ಶರ್ಮಾ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದರು. ಆಗಲೂ ವಿದ್ಯಾರ್ಥಿ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು.
ಶರ್ಮಾ ಅವರಿಗೆ ಧಾರವಾಡದ ಎಲ್‌ಐಸಿ ಕಚೇರಿಯಲ್ಲಿ ಆಫೀಸ್ ಅಸಿಸ್ಟೆಂಟ್ ಆಗಿ ಕೆಲಸ ಸಿಕ್ಕಿತು. ಜೊತೆಗೆ ಕಾನೂನು ಕಲಿಯಲು ಆರಂಭಿಸಿದರು. ಕಚೇರಿಯ ವಾತಾವರಣ ಭಯಾನಕವಾಗಿತ್ತು. ಎಲ್‌ಐಸಿ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದರೂ ರಾತ್ರಿ ಹನ್ನೆರಡು ಗಂಟೆಯವರೆಗೂ ನೌಕರರನ್ನು ದುಡಿಸಿಕೊಳ್ಳುತ್ತಿದ್ದರು. ಸಂಬಂಧಿಕರು ಸತ್ತರೂ ಉದ್ಯೋಗಿಗಳಿಗೆ ರಜೆ ಸಿಗುತ್ತಿರಲಿಲ್ಲ. ಇದನ್ನು ಪ್ರತಿಭಟಿಸಲೆಂದು ನೌಕರರನ್ನು ಸಂಘಟಿಸಿದರು. ಇವರನ್ನು ಹಾವೇರಿ ಶಾಖೆಗೆ ವರ್ಗಾಯಿಸಿದರು. ಅಲ್ಲಿಗೆ ಹೋಗಲಿಲ್ಲ ಎಂದು ಕೆಲಸದಿಂದ ತೆಗೆದರು. ಅಷ್ಟರಲ್ಲಿ ಎಲ್‌ಎಲ್‌ಬಿ ಮುಗಿಸಿದ್ದರು. ಎಲ್‌ಎಲ್‌ಎಂಗೆ ಸೇರಿಕೊಂಡು ಪ್ರಾಕ್ಟೀಸ್ ಆರಂಭಿಸಿದರು. ಆಗಿನ ಪ್ರತಿಭಾಶಾಲಿ ಕ್ರಿಮಿನಲ್ ವಕೀಲರಾಗಿದ್ದ ರಾಮರಾವ್ ಜೋಷಿ ಹಾಗೂ ಎಂ ಎಸ್ ಪಾಟೀಲರೊಟ್ಟಿಗೆ ಕೆಲಸ ಮಾಡಿದರು. ಆದರೆ ಕೆಲ ಕೆಲಸಗಳಾಗಬೇಕಾದರೆ ಅಧಿಕಾರಿಗಳಿಗೆ ಲಂಚಕೊಡಬೇಕಿತ್ತು. ಇದು ಇವರಿಗೆ ಹಿಡಿಸಲಿಲ್ಲ. ಈ ಮಧ್ಯೆ ಸಂಘಟನೆಗಳ ಸೆಳೆತವೂ ಹೆಚ್ಚಾಗಿತ್ತು. ಧಾರವಾಡದ ಕಾರ್ಖಾನೆಯೊಂದರ ವಿರುದ್ಧದ ಹೋರಾಟದಲ್ಲಿ ಕಾರ್ಮಿಕರನ್ನು ಸಂಘಟಿಸಿದರು. ಮುಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಮಾರ್ಗದರ್ಶನ ನೀಡುವಂತೆ ಕೋರಿದರು.
ಈ ಮಧ್ಯೆ ಶರ್ಮಾ ಜೆಎಸ್‌ಎಸ್ ಕಲಾ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಪತ್ರಿಕೋದ್ಯಮ ಅಧ್ಯಯನದಲ್ಲಿ ತೊಡಗಿದ್ದರು. ಪತ್ರಿಕೆಯೊಂದಕ್ಕೆ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಕಾಲೇಜಿನ ಪ್ರಾಂಶುಪಾಲರು ದಿನವೂ ಕಾಲೇಜಿನ ಸುದ್ದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಹೇಳಿದರು. ಇದಕ್ಕೆ ಇವರ ಮನಸ್ಸು ಒಪ್ಪಲಿಲ್ಲ. ಅದೇ ನೆಪವಾಗಿ ಧಾರವಾಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ ಆಗಿದ್ದ ಅವರು ಶರ್ಮಾ ಅವರನ್ನು ಇಂಗ್ಲಿಷ್ ಎಂಎ ಆಗಿಲ್ಲ ಎಂಬ ಕಾರಣಕ್ಕೆ ಕೆಲಸದಿಂದ ತೆಗೆಸಿದರು. ಅದನ್ನು ಸವಾಲಾಗಿ ಸ್ವೀಕರಿಸಿ ಇಂಗ್ಲಿಷ್ ಎಂ.ಎ. ಪೂರೈಸಿದರು. ಇತ್ತ ಎಲ್‌ಎಲ್‌ಎಂ ಪೂರ್ಣಗೊಂಡಿದ್ದರಿಂದ ಅದೇ ಜೆಎಸ್‌ಎಸ್ ಸಂಸ್ಥೆಯ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿಕೊಂಡರು.
ಧಾರವಾಡದಲ್ಲಿ ʼಲೋಕೋಪಯೋಗಿ ಇಲಾಖೆ ಸುಶಿಕ್ಷಿತ ದಿನಗೂಲಿ ನೌಕರರ ಸಂಘʼ ಎಂಬ ಸಂಘಟನೆಯವರು ಶರ್ಮಾ ಅವರನ್ನು ತಮ್ಮ ಹೋರಾಟ ಬೆಂಬಲಿಸುವಂತೆ ಕೇಳಿಕೊಂಡರು. ಸುಶಿಕ್ಷಿತ-ಅಶಿಕ್ಷಿತ ಎಂಬ ಬೇಧ ಭಾವವಿಲ್ಲದೇ ಹೋರಾಡುವುದಾದರೆ ಮಾತ್ರ ಪಾಲ್ಗೊಳ್ಳುವುದಾಗಿ ಹೇಳಿ, ಅವರ ಸಮಸ್ಯೆಗಳನ್ನು ವಿಸ್ತಾರವಾಗಿ ಅಧ್ಯಯನ ಮಾಡಿ ಅವರ ಬೆಂಬಲಕ್ಕೆ ನಿಂತರು. ದಿನಗೂಲಿ ನೌಕರರ ಪರವಾಗಿ ಕಾನೂನು ಹೋರಾಟ ಮಾಡಿದರು. 1984 ರಿಂದ 2013ರವರೆಗೆ ನ್ಯಾಯಾಲಯದ ಒಳಗೆ ಹಾಗೂ ಜನಸಮುದಾಯದ ನಡುವೆ ನಡೆದ ಮಹತ್ವದ ಹೋರಾಟ ಇದು. ಮೂವತ್ತು ವರ್ಷಗಳ ಈ ಹೋರಾಟದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನೌಕರರಿಗೆ ನ್ಯಾಯ ದೊರೆಯಿತು.
ಕೆ. ಎಸ್. ಶರ್ಮಾ ಹುಬ್ಬಳ್ಳಿಯ ವಿಶ್ವಶ್ರಮ ಚೇತನದ ರೂವಾರಿಯಾಗಿದ್ದಾರೆ. ಅವರ ಮಾತೃಭಾಷೆ ತೆಲುಗು. ಆದರೂ ಕನ್ನಡದಲ್ಲಿ ಬರವಣಿಗೆ ಮಾಡಿದ್ದಾರೆ. ಕಟ್ಟಾ ಮಾರ್ಕ್ಸ್‌ವಾದಿಯಾಗಿದ್ದರೂ ಯಾವುದೇ ರಾಜಕೀಯ ಪಕ್ಷಪಂಗಡದ ಸದಸ್ಯರಾಗಿಲ್ಲ.
ಶರ್ಮಾ ಅವರು "ಮಾರ್ಕ್ಸ್ ಮತ್ತು ಬೇಂದ್ರೆ ನಡುವೆ ಒಂದು ಸಮಾನ ಅಂಶವಿದೆ. ಅದು ಮಾನವೀಯತೆ. ಆ ಮಾನವೀಯತೆಯೇ ನನ್ನ ಹೋರಾಟಗಳಿಗೆ ಸ್ಫೂರ್ತಿ” ಎನ್ನುತ್ತಾರೆ. ಕನ್ನಡದಲ್ಲಿ ಶರ್ಮಾ ಅವರು ಕೃತಿಗಳನ್ನು ಹೊರತರಲು, ಅನುವಾದ ಎಂಬುದು ಹೇಗಿರಬೇಕು ಎಂದು ಅರಿಯಲು ಮಾರ್ಗದರ್ಶಿಯಾದವರು ಬೇಂದ್ರೆ.
ವರಕವಿ ಬೇಂದ್ರೆ ಅವರ ಹಲವು ಪುಸ್ತಕಗಳಿಗೂ ಪ್ರಕಾಶಕರಾದರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸುಮಾರು ನಲವತ್ತು ಕೃತಿಗಳನ್ನು ರಚಿಸಿದರು.
ಕೆ. ಎಸ್. ಶರ್ಮಾ ಕಾಲೇಜುಗಳಲ್ಲಿ ಪಾಠ ಹೇಳಿಕೊಟ್ಟ ಮಾಸ್ತರು. ಜಗದೀಶ್ ಶೆಟ್ಟರ್, ಬಸವರಾಜ ಹೊರಟ್ಟಿ, ಮೋಹನ ಲಿಂಬಿಕಾಯಿ ಅವರಂತಹ ಅನೇಕರಿಗೆ ಅವರು ಪಾಠ ಮಾಡಿದ್ದಾರೆ. ಅವರ ಬದುಕೇ ಒಂದು ಪಾಠ. ಅವರು ಪಿಎಚ್.ಡಿ ಅಧ್ಯಯನ ಮಾಡಿದ್ದಾರೆ. ಅವರ ಬಗ್ಗೆಯೇ ಹಲವು ಸಂಶೋಧನೆಗಳು ನಡೆದಿವೆ. ಅವರು ಬದುಕಿನಲ್ಲಿ ಐಷಾರಾಮಿ ಸುಖದ ಹಿಂದೆ ಹೋಗಬಹುದಿತ್ತು. ಆದರೆ ಅವಿವಾಹಿತರಾಗಿಯೇ ಉಳಿದು ಶ್ರಮಜೀವಿಗಳ ಬದುಕು ಹಸನು ಮಾಡಲು ಹೊರಟರು.
ಶರ್ಮಾ ಬಡತನವನ್ನು, ಶೋಷಣೆಯನ್ನು ಬಹಳ ಹತ್ತಿರದಿಂದ ಕಂಡು, ಶ್ರಮವೆಂಬೋ ಶಾಲೆಯಲ್ಲಿ ಅಪಾರ ಕಲಿತವರು. ಹೀಗೆ ಪ್ರಚಲಿತ ಸಮಸ್ಯೆಗಳಿಗೆ ಮಾರ್ಕ್ಸ್ ಪರಿಹಾರ ಎಂದು ಅರಿತರು. ಇವರ ಪಿಎಚ್.ಡಿ ಅಧ್ಯಯನ ಕೂಡ ಮಾರ್ಕ್ಸ್ ಕುರಿತಾಗಿಯೇ ಇದೆ. ʼಹೋರಾಟʼ ಎಂಬ ಇವರ ನಾಟಕವೊಂದಿದೆ. ಅದು ಶೋಷಣೆ ಮುಕ್ತ ಸಮಾಜ ಕುರಿತಾದದ್ದು.
ಶರ್ಮ ಅವರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದವು.
ಶರ್ಮಾ ಅವರಿಗೆ ಈಗ 90 ವರ್ಷ ವಯಸ್ಸು. ಇವತ್ತಿಗೂ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಬೇಂದ್ರೆಯವರ ಸಂದರ್ಶನಗಳನ್ನು ಸಂಕಲಿಸುವುದರಲ್ಲಿ ಮಗ್ನರಾಗಿದ್ದರು. ಅವರಿಗೆ ವಯಸ್ಸು ಒಂದು ಪ್ರಶ್ನೆಯಾಗಿಲ್ಲ. ಸ್ವಸ್ಥವಾಗಿ ಬದುಕುವುದು ಹೇಗೆ ಎಂದು ಕಂಡುಕೊಂಡಿದ್ದಾರೆ. "ಬೇಂದ್ರೆಯವರು ʼತಿಂದು ಬಾಳುವುದು ಬದುಕು, ತಿಳಿದು ಬಾಳುವುದು ಬಾಳುʼ ಎಂದಂತೆ, ತಿಳಿದು ಬಾಳಿದ್ದು ನನ್ನ ಬದುಕು” ಎನ್ನುತ್ತಾರೆ. ಶೋಷಣೆ ರಹಿತ ಸಮಾಜವೊಂದು ಜಗತ್ತಿನೆಲ್ಲೆಡೆ ನಿರ್ಮಾಣವಾಗಬೇಕು ಎನ್ನುವುದು ಶರ್ಮಾ ಅವರ ಗುರಿ. ಇತ್ತೀಚೆಗೆ ಗುತ್ತಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಡಬೇಕೆಂದು ಹೊರಟಿದ್ದಾರೆ. ಅವರದ್ದು ಎಡಬಿಡದ ಸ್ವಾರ್ಥರಹಿತ ಹೋರಾಟ.
On the birthday of great fighter for social Justice and writer Dr. K. S. Sharma
ಕಾಮೆಂಟ್‌ಗಳು