ಜೊನಥ್ನ್ ಸ್ವಿಫ್ಟ್
'ಗಲಿವರ್ಸ್ ಟ್ರಾವೆಲ್ಸ್' ಸೃಷ್ಟಿಸಿದ ಜೊನಥ್ನ್ ಸ್ವಿಫ್ಟ್
ಗಲಿವರ್ಸ್ ಟ್ರಾವೆಲ್ಸ್ ಸುಂದರ ಕಥೆಯನ್ನು ಸವಿಯದವರಿಲ್ಲ. ಅದರ ಕರ್ತೃ ಜೊನಥ್ನ್ ಸ್ವಿಫ್ಟ್. ಈತ ಇಂಗ್ಲಿಷ್ ಸಾಹಿತ್ಯದ ಪ್ರಸಿದ್ಧ ವಿಡಂಬನಕಾರ. ಇಂದು ಇವರ ಸಂಸ್ಮರಣಾ ದಿನ.
ಜೊನಥ್ನ್ ಸ್ವಿಫ್ಟ್ 1667 ನವೆಂಬರ್ 30ರಂದು ಡಬ್ಲಿನ್‍ನಲ್ಲಿ ಜನಿಸಿದರು. ಇವರ ತಂದೆತಾಯಿಗಳು ಯುರೋಪಿಯನ್ ಮೂಲದವರು. ಡಬ್ಲಿನ್‍ನ ಟ್ರಿನಿಟಿ ಕಾಲೇಜಿನಲ್ಲಿ ಪದವಿ ಗಳಿಸಿ 1689ರಲ್ಲಿ ಇಂಗ್ಲೆಂಡಿಗೆ ಹೋದರು. ಅಲ್ಲಿ ವಿಲಿಯಮ್ ಟೆಂಪಲ್ ಎಂಬ ರಾಜನೀತಿಜ್ಞನ ಕಾರ್ಯದರ್ಶಿಯಾಗಿ ಸುಮಾರು ಒಂದು ದಶಕಕಾಲ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಎಸ್ತರ್ ಜಾನ್‍ಸನ್ ಎಂಬಾಕೆಯನ್ನು ಭೇಟಿಯಾದರು. ಆಕೆಯನ್ನು ಈತ ಸ್ಟೆಲ್ಲ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಇವರಿಬ್ಬರೂ ಮುದುವೆಯಾಗದಿದ್ದರೂ ಜೀವನ ಪರ್ಯಂತ ಸಂಗಾತಿಗಳಾಗಿದ್ದರು.
ಸ್ವಿಫ್ಟ್ 1694ರಲ್ಲಿ ಚರ್ಚಿನ ಪಾದ್ರಿಯಾದರು. 1699ರಲ್ಲಿ ವಿಲಿಯಮ್ ಟೆಂಪಲ್ ನಿಧನಹೊಂದಿದ ಮೇಲೆ ಪ್ರಾಟಸ್ಟೆಂಟ್ ಪ್ಯಾರಿಷ್‍ಗೆ ಧರ್ಮಾಧಿಕಾರಿಯಾದರು. ಚರ್ಚಿನ ಕಾರ್ಯಗಳಿಗಾಗಿ 1703-10 ಅವಧಿಯಲ್ಲಿ ಇಂಗ್ಲೆಂಡಿಗೆ ಅನೇಕ ಬಾರಿ ಭೇಟಿಕೊಟ್ಟರು. ಈ ಸಂದರ್ಭದಲ್ಲಿ ಉನ್ನತವಲಯದ ಅನೇಕ ಸ್ನೇಹಿತರ ಪರಿಚಯವಾಯಿತು. 1710ರಲ್ಲಿ ಇಂಗ್ಲೆಂಡಿನಲ್ಲಿ ಹೊಸ ಟೋರಿ ಸರ್ಕಾರ ಆಡಳಿತಕ್ಕೆ ಬಂದಾಗ ಅನೇಕ ಲೇಖನಗಳನ್ನು ಕರಪತ್ರಗಳನ್ನು ರಚಿಸಿ, ಪ್ರಕಟಿಸಿ ಟೋರಿ ಪಕ್ಷದ ತತ್ತ್ವಗಳನ್ನು ಉಗ್ರವಾಗಿ ಬೆಂಬಲಿಸಿದರು. ಇದರಿಂದಾಗಿ ಸ್ವಿಫ್ಟ್ ಅವರಿಗೆ ಸಾಮಾಜಿಕ ಧುರೀಣನೆಂಬ ಖ್ಯಾತಿ ಬಂತು.
ಸ್ವಿಫ್ಟ್ ಅವರ ತೀವ್ರತರ ರಾಜಕೀಯ ಚಟುವಟಿಕೆಗಳಿಂದ ತೃಪ್ತಳಾದ ರಾಣಿ ಅನ್ನೆ 1713ರಲ್ಲಿ ಇವನನ್ನು ಡಬ್ಲಿನ್‍ನ ಸೇಂಟ್ ಪ್ಯಾಟ್ರಿಕ್ಸ್ ಕತೀಡ್ರಲ್‍ನ ಡೀನ್ ಆಗಿ ನೇಮಿಸಿದಳು. 1714ರಲ್ಲಿ ರಾಣಿ ಅನ್ನೆ ನಿಧನಹೊಂದಿ ಒಂದನೆಯ ಜಾರ್ಜ್ ಅಧಿಕಾರಿಕ್ಕೆ ಬಂದ. ಅದೇ ವರ್ಷ ಟೋರಿಪಕ್ಷ ಅಧಿಕಾರ ಕಳೆದುಕೊಂಡು ವಿಗ್‍ಪಕ್ಷ ಅಧಿಕಾರ ಗಳಿಸಿತು. ಅಲ್ಲಿಗೆ ಸ್ವಿಫ್ಟ್ ಅವರ ರಾಜಕೀಯ ಚಟುವಟಿಕೆಗಳೂ ಕೊನೆಗೊಂಡವು. ಮುಂದೆ ಕೂಡ ಇವರು ಸುಮಾರು 30ವರ್ಷಗಳ ಕಾಲ ಡೀನ್ ಆಗಿಯೇ ಕಾರ್ಯ ನಿರ್ವಹಿಸಿದರು.
ಸ್ವಿಫ್ಟ್ ತಮ್ಮ ಜೀವಿತದ ಕಡೆಗಾಲವನ್ನು ನಿರಾಶೆಯಲ್ಲಿ ಕಳೆದರು. ಆದರೆ ಐರಿಷ್ ಸಾಹಿತ್ಯದ ಮಹೋನ್ನತ ಕೃತಿಯೆಂದು ಪರಿಗಣಿತ ವಾಗಿರುವ ಗಲಿವರ್ಸ್ ಟ್ರಾವಲ್ಸ್ ಅನ್ನು ಈತ ರಚಿಸಿದ್ದು ಈ ಅವಧಿಯಲ್ಲೇ.
ಗಲಿವರ್ಸ್ ಟ್ರಾವಲ್ಸ್ ಚಿತ್ತಾಕರ್ಷಕವಾದ ಒಂದು ಅದ್ಭುತ ಕಥೆ. ಗಲಿವರ್ ಎಂಬ ಹಡಗು ವೈದ್ಯನೊಬ್ಬ ನಾಲ್ಕು ಅಪರಿಚಿತ ಸ್ಥಳಗಳಿಗೆ ಕೈಗೊಂಡ ಸಮುದ್ರಯಾನದ ಕಥೆಯನ್ನು ಬಲು ಸ್ವಾರಸ್ಯವಾಗಿ ವರ್ಣಿಸುತ್ತದೆ. ಮೊದಲ ಪ್ರಯಾಣದಲ್ಲಿ ಆತ ಲಿಲಿಪುಟಿಯನ್ಸ್ ದ್ವೀಪಕ್ಕೆ, ಎರಡನೆಯ ಪ್ರಯಾಣದಲ್ಲಿ ಬ್ರಾಬ್‍ಡಿಂಗ್‍ನಾಗ್ ಎಂಬ ದೈತ್ಯರ ನಾಡಿಗೆ, ಮೂರನೆಯ ಪ್ರಯಾಣದಲ್ಲಿ ಮೂರ್ಖರ ದಡ್ಡರ ಕೆಲವು ರಾಜ್ಯಗಳಿಗೆ, ನಾಲ್ಕನೆಯ ಪ್ರಯಾಣದಲ್ಲಿ ಪ್ರಾಣಿಗಳ ನಾಡಿಗೆ ಭೇಟಿಕೊಡುತ್ತಾನೆ. ಮೂರನೆಯ ಹಾಗೂ ನಾಲ್ಕನೆಯ ಪ್ರಯಾಣದ ಕಥೆಯಲ್ಲಿ ಸ್ವಿಫ್ಟ್ ತನ್ನ ಸಮಕಾಲೀನ ಸಮಾಜವನ್ನು ವಿಡಂಬಿಸಿದ್ದಾನೆಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.
ಗಲಿವರ್ಸ್ ಟ್ರಾವಲ್ಸ್ ಮಕ್ಕಳಿಗಂತೂ ಅತ್ಯದ್ಭುತ ಗ್ರಂಥ. ಈ ಕೃತಿ ಮಕ್ಕಳ ಪುಸ್ತಕವಾಗಿಯೇ ಪ್ರಖ್ಯಾತಿ ಪಡೆದಿದೆ. ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯ ಪ್ರಥಮ ಪ್ರಯಾಣದ ಕಥೆಯನ್ನು ಎಸ್.ಜಿ.ನರಸಿಂಹಾಚಾರ್ಯರು ಗಲಿವರನ ದೇಶಸಂಚಾರ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ (1900).
ಎ ಟೇಲ್ ಆಫ್ ಎ ಟಬ್(1704), ದಿ ಬ್ಯಾಟ್ಲ್ ಆಫ್ ದಿ ಬುಕ್ಸ್(1704), ಎ ಮಾಡೆಸ್ಟ್ ಪ್ರೊಪೋಸಲ್(1729) - ಇವು ಸ್ವಿಫ್ಟ್ ಅವರ ಇತರ ಕೃತಿಗಳು. ಎ ಟೇಲ್ ಆಫ್ ಎ ಟಬ್‍ನ ಕಥೆ ಮೇಲುನೋಟಕ್ಕೆ ಮೂವರು ಮಕ್ಕಳು ತಮ್ಮ ತಂದೆಯ ಕಡೆಗಾಲದ ಬಯಕೆಯನ್ನು ಕುರಿತು ವಾದಿಸುವಂತೆ ಕಂಡರೂ ಮೂಲದಲ್ಲಿ ಕೆಲವು ಧಾರ್ಮಿಕ ನಂಬಿಕೆಗಳನ್ನು ಟೀಕಿಸುವುದೇ ಉದ್ದೇಶವಾಗಿದೆ. ಇಲ್ಲಿ ಪೀಟರ್ ರೋಮನ್ ಚರ್ಚಿನ ಪ್ರತಿನಿಧಿಯಾಗಿ, ಮಾರ್ಟಿನ್ ಆಂಗ್ಲಿಕನ್ ಚರ್ಚಿನ ಪ್ರತಿನಿಧಿಯಾಗಿ, ಜಾಕ್ ಧರ್ಮ ವಿರೋಧಿಗಳ ಪ್ರತಿನಿಧಿಯಾಗಿ ಕಂಡುಬರುತ್ತಾರೆ.
ದಿ ಟ್ರಾವಲ್ ಆಫ್ ದಿ ಬುಕ್ಸ್ ಎಂಬ ಕೃತಿಯಲ್ಲಿ ಪ್ರಾಚೀನ ಮತ್ತು ಆಧುನಿಕ ಬರೆಹಗಾರರ ಗುಣಾವಗುಣಗಳ ಪ್ರಶ್ನೆಯನ್ನು ಸ್ವಿಫ್ಟ್ ವಿಡಂಬನಾತ್ಮಕವಾಗಿ ಪ್ರತಿಪಾದಿಸಿದ್ದಾರೆ. ಇಲ್ಲಿ ಹೋಮರ್ ಅರಿಸ್ಟಾಟಲ್, ಪ್ಲೇಟೋ, ಪಿಂಡಾರ್ ಮೊದಲಾದ ಪ್ರಾಚೀನ ಸಾಹಿತಿಗಳಿಗೂ ಮಿಲ್ಟನ್, ಡ್ರೈಡನ್, ಹಾಬ್ಸ್ ಮೊದಲಾದ ಆಧುನಿಕರಿಗೂ ನಡೆಯುವ ಹೋರಾಟದ ವ್ಯಂಗ್ಯಚಿತ್ರ ಬರುತ್ತದೆ. ಇಲ್ಲಿಯ ವಿಡಂಬನೆಯಲ್ಲಿ ಸಮತೂಕ, ಸಮಚಿತ್ತತೆಯಿದೆ.
ಜೊನಥ್ನ್ ಸ್ವಿಫ್ಟ್ ತಮ್ಮ ಪ್ರೇಯಸಿ ಸ್ಟೆಲ್ಲಳಿಗೆ ಬರೆದ ಪತ್ರಗಳು ಇವರ ನಿಧನಾನಂತರ ಜರ್ನಲ್ ಟು ಸ್ಟೆಲ್ಲ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ದಿ ಡ್ರಾಪೀರ್ಸ್ ಲೆಟರ್ಸ್(1724) ಎಂಬುದು ಇವರು ತಮ್ಮ ರಾಜಕೀಯ ನಿಲವನ್ನು ಸ್ಥಾಪಿಸಿ ಬರೆದ ಕರಪತ್ರಗಳ ಸಂಗ್ರ್ರಹಗ್ರಂಥ.
ಮಿದುಳಿನ ರೋಗಕ್ಕೆ ಬಲಿಯಾದ ಸ್ವಿಫ್ಟ್ 1745 ಅಕ್ಟೋಬರ್ 19ರಂದು ನಿಧನಹೊಂದಿದರು.
ಆಧಾರ: ಮೈಸೂರು ವಿಶ್ವಕೋಶ
On the death anniversary Jonathan Swift
ಕಾಮೆಂಟ್‌ಗಳು