ಪ್ರಿಯಾ ತೆಂಡೂಲ್ಕರ್
ಪ್ರಿಯಾ ತೆಂಡೂಲ್ಕರ್
ಪ್ರಿಯಾ ತೆಂಡೂಲ್ಕರ್ ಅವರು ಕಾರ್ಯಕ್ರಮ ನಿರೂಪಕಿಯಾಗಿ, ನಟಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಮತ್ತು ಬರಹಗಾರ್ತಿಯಾಗಿ ಪ್ರಸಿದ್ಧರಾಗಿದ್ದರು. ಕನ್ನಡದ 'ಹಯವದನ' ನಾಟಕ ಮತ್ತು 'ಮಿಂಚಿನ ಓಟ' ಚಿತ್ರದಲ್ಲಿ ಅವರು ನಟಿಸಿದ್ದರು. 1985ರ ದೂರದರ್ಶನ ಸರಣಿ 'ರಜನಿ' ಯಲ್ಲಿನ ಪಾತ್ರನಿರ್ವಹಣೆಯಿಂದ ದೇಶದೆಲ್ಲೆಡೆ ಮನೆಮಾತಾಗಿದ್ದರು.
ಜನಪ್ರಿಯ ನಾಟಕಕಾರ ಮತ್ತು ಬರಹಗಾರರಾದ ಪದ್ಮಭೂಷಣ ಪುರಸ್ಕೃತ ವಿಜಯ್ ತೆಂಡೂಲ್ಕರ್ ಅವರ ಪುತ್ರಿಯಾದ ಪ್ರಿಯಾ ತೆಂಡೂಲ್ಕರ್ 1954ರ ಅಕ್ಟೋಬರ್ 19ರಂದು ಜನಿಸಿದರು. ಬಾಲ್ಯದಿಂದಲೂ ಕಲೆ ಮತ್ತು ಸಂಸ್ಕೃತಿಯ ಕಡೆಗೆ ಅವರ ಒಲವು ಮೂಡಿತ್ತು.
ಪ್ರಿಯಾ 1969ರಲ್ಲಿ 'ಹಯವದನ' ನಾಟಕದಲ್ಲಿ ಕಲ್ಪನಾ ಲಜ್ಮಿ ಅವರೊಂದಿಗೆ ಗೊಂಬೆಯಾಗಿ ನಟಿಸಿದರು. ನಂತರ ಪಂಚತಾರಾ ಹೋಟೆಲ್‌ನಲ್ಲಿ ಸ್ವಾಗತಕಾರಿಣಿಯಾಗಿ, ಗಗನಸಖಿಯಾಗಿ ಮತ್ತು ಅರೆಕಾಲಿಕ ರೂಪದರ್ಶಿಯಾಗಿ, ಕಿರುತೆರೆಯಲ್ಲಿನ ಸುದ್ಧಿ ವಾಚಕಿಯಾಗಿ ಹೀಗೆ ಅನೇಕ ಕೆಲಸ ಮಾಡಿದರು.
ಪ್ರಿಯಾ ತೆಂಡುಲ್ಕರ್ ಶ್ಯಾಮ್ ಬೆನಗಲ್ ಅವರ 'ಅಂಕುರ್' (1974) ಚಿತ್ರದಲ್ಲಿ ಅನಂತ್ ನಾಗ್ ಅವರ ವಿಧೇಯ ಪತ್ನಿಯ ಪಾತ್ರ ನಿರ್ವಹಿಸಿದರು. ಅಶೋಕ್ ಸರಾಫ್, ರವೀಂದ್ರ ಮಹಾಜನ್, ಮಹೇಶ್ ಕೊಠಾರೆ ಅವರಂತಹ ಪ್ರಸಿದ್ಧ ನಟರ ಜೊತೆ ಸುಮಾರು ಹನ್ನೆರಡು ಮರಾಠಿ ಕೌಟುಂಬಿಕ ಮತ್ತು ಸಾಮಾಜಿಕ ಚಿತ್ರಗಳಲ್ಲಿ ಪಾತ್ರನಿರ್ವಹಿಸಿದರು. ಶಂಕರ್ ನಾಗ್ ನಿರ್ದೇಶನದ 'ಮಿಂಚಿನ ಓಟ' ಕನ್ನಡ ಚಲನಚಿತ್ರದಲ್ಲಿ ಅನಂತನಾಗ್ ಅವರಿಗೆ ನಾಯಕಿಯ ಪಾತ್ರ ನಿರ್ವಹಿಸಿದರು.
ಪ್ರಿಯಾ ತೆಂಡೂಲ್ಕರ್ ಅವರು 1985ರ ಟಿವಿ ಸರಣಿ 'ರಜನಿ'ಯೊಂದಿಗೆ ರಾಷ್ಟ್ರೀಯ ಖ್ಯಾತಿಗೆ ಏರಿದರು. ಯಾವುದೇ ಅನ್ಯಾಯವನ್ನು ಸಹಿಸದ ಮತ್ತು ಸಾರ್ವಜನಿಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ರಜನಿ ಎಂಬ ಗೃಹಿಣಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು. ರಜನಿಯ ಪಾತ್ರವು ಆಕೆಯನ್ನು ಭಾರತದಾದ್ಯಂತ ಮನೆಮಾತಾಗಿಸಿತು. ನಂತರ, ಅವರು ವಿಜಯ್ ತೆಂಡೂಲ್ಕರ್ ಅವರ ಟಿವಿ ಸರಣಿ ಸ್ವಯಂಸಿದ್ಧದಲ್ಲಿ ಪಾತ್ರವನ್ನು ನಿರ್ವಹಿಸಿದರು.
ಪ್ರಿಯಾ ತೆಂಡುಲ್ಕರ್ ಅವರು ಮುಕ್ತರೀತಿಯ ಜೀವನದ ಪ್ರತಿಪಾದಕರಾಗಿದ್ದು, ನಿರ್ಭೀತಿಯಿಂದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಭಿವ್ಯಕ್ತಿಸುತ್ತಿದ್ದರು. ಪ್ರಿಯಾ ತೆಂಡೂಲ್ಕರ್ ಟಾಕ್ ಶೋ ಮತ್ತು ಜಿಮ್ಮೆದಾರ್ ಕೌನ್‌ನಂತಹ ಅವರ ಟಾಕ್ ಶೋಗಳಲ್ಲಿ ಈ ಪ್ರತಿಫಲನವಿತ್ತು. ಅವರು ನಟಿಸಿದ ಗುಜರಾತಿ ಚಲನಚಿತ್ರ 'ಪೂಜಾ ನಾ ಫೂಲ್' ಅತ್ಯಂತ ಜನಪ್ರಿಯ ಚಲನಚಿತ್ರವಾಗಿತ್ತು. ಅವರ ಹಮ್ ಪಂಚ್ ಟಿವಿ ಸರಣಿಯಲ್ಲಿನ ಪಾತ್ರ ಸಹ ಬಹಳ ಜನಪ್ರಿಯವಾಗಿತ್ತು.
ಪ್ರಿಯಾ ತೆಂಡುಲ್ಕರ್ ಇನ್ನೂ 47ರ ವಯಸ್ಸಿನಲ್ಲೇ ಅನಾರೋಗ್ಯದ ದೆಸೆಯಿಂದ 2002ರ ಸೆಪ್ಟೆಂಬರ್ 19ರಂದು ನಿಧನರಾದರು.
On the birth anniversary of popular tv host, actress and activist Priya Tendulkar
ಕಾಮೆಂಟ್‌ಗಳು