ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿಮಿ ಗರೆವಾಲ್

 

ಸಿಮಿ ಗರೆವಾಲ್

ಸಿಮಿ ಗರೆವಾಲ್ ಚಲನಚಿತ್ರ ಮತ್ತು ಕಿರುತೆರೆಯ ಲೋಕದ ಪ್ರಸಿದ್ಧ ಕಲಾವಿದೆ ಮತ್ತು ಕಾರ್ಯಕ್ರಮ ನಿರ್ವಾಹಕರು. 

ಸಿಮಿ ಗರೆವಾಲ್ 1947ರ ಅಕ್ಟೋಬರ್ 17ರಂದು ದೆಹಲಿಯಲ್ಲಿ ಜನಿಸಿದರು. ತಂದೆ ಬ್ರಿಗೇಡಿಯರ್ ಜೆ. ಎಸ್. ಗರೆವಾಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು. ತಾಯಿ ದರ್ಶಿ.  ಸಿಮಿ ಇಂಗ್ಲೆಂಡಿನಲ್ಲಿ ಬೆಳೆದು ತನ್ನ ಸಹೋದರಿ ಅಮೃತಾ ಜೊತೆ ನ್ಯೂಲ್ಯಾಂಡ್ ಹೌಸ್ ಶಾಲೆಯಲ್ಲಿ ಓದಿದರು.

ತಮ್ಮ ಬಾಲ್ಯದ ಬಹುಭಾಗವನ್ನು ಇಂಗ್ಲೆಂಡಿನಲ್ಲಿ ಕಳೆದ ನಂತರ, ಗರೇವಾಲ್ ಹದಿಹರೆಯದಲ್ಲಿ ಭಾರತಕ್ಕೆ ಮರಳಿದಳು.

ಸಿಮಿ ಗರೆವಾಲ್ 1962ರಲ್ಲಿ 'ಟಾರ್ಜಾನ್ ಗೋಸ್ ಟು ಇಂಡಿಯಾ'  ಚಿತ್ರದಲ್ಲಿ ಫಿರೋಜ್ ಖಾನ್ ಜೊತೆಗೆ ಪಾದಾರ್ಪಣೆ ಮಾಡಿದರು. ಮೆಹಬೂಬ್ ಖಾನ್ ಅವರ ಸನ್ ಆಫ್ ಇಂಡಿಯಾ, ರಾಜ್‍ಕಪೂರ್ ಅವರ ಮೇರಾ ನಾಮ್ ಜೋಕರ್, ಸತ್ಯಜಿತ್ ರೇ ಅವರ 'ಅರಣ್ಯೇರ್ ದಿನ್ ರಾತ್ರಿ', ಮೃಣಾಲ್ ಸೇನ್ ಅವರ 'ಮಪಡಟಿಕ್‌',  ರಾಜ್ ಖೋಸ್ಲಾ ಅವರ 'ದೋ ಬದನ್‌', ಹರ್ಮನ್ ಹೆಸ್ಸೆ ಅವರ ಕಾದಂಬರಿ ಆಧಾರಿತ ಕೊಲಂಬಿಯಾ ಪಿಕ್ಚರ್ಸ್ ನಿರ್ಮಾಣದ 'ಸಿದ್ಧಾರ್ಥ'  ಎಂಬ ಇಂಗ್ಲಿಷ್ ಚಲನಚಿತ್ರ ಮುಂತಾದವು ಅವರ ಪ್ರಾರಂಭಿಕ ಚಿತ್ರಜೀವನದ ಮಹತ್ವದ ಚಿತ್ರಗಳು. 

1970ರ ದಶಕದ ಮಧ್ಯದಲ್ಲಿ, ತಮ್ಮ ಸೋದರಮಾವ ಯಶ್ ಚೋಪ್ರಾ ಅವರ  ಜನಪ್ರಿಯ ಚಲನಚಿತ್ರ ಕಭಿ ಕಭೀ (1976) ನಲ್ಲಿ ಕಾಣಿಸಿಕೊಂಡರು.  ಚಲ್ತೇ ಚಲ್ತೇ ಮತ್ತು ಕರ್ಜ್‌ ಚಿತ್ರಗಳಲ್ಲಿಯೂ  ನಟಿಸಿದ್ದರು.  

ಸಿಮಿ ಗರೆವಾಲ್ 1987ರಲ್ಲಿ ಬಿಬಿಸಿಯ 'ಡ್ರಾಮಾ ಮಹಾರಾಜಸ್'ನಲ್ಲಿ ನಟಿಸಿದರು. ಇದು ಚಾರ್ಲ್ಸ್ ಅಲೆನ್ ಅವರ ಪುಸ್ತಕವನ್ನು ಆಧರಿಸಿದೆ. 1980ರ ದಶಕದ ಆರಂಭದಲ್ಲಿ, ಅವರ ಗಮನವು ಬರವಣಿಗೆ ಮತ್ತು ನಿರ್ದೇಶನದ ಕಡೆಗೆ ತಿರುಗಿತು. ಅವರು ತಮ್ಮದೇ ಆದ 'ಸಿಗಾ ಆರ್ಟ್ಸ್ ಇಂಟರ್ನ್ಯಾಷನಲ್' ಸಂಸ್ಥೆಯನ್ನು ಸ್ಥಾಪಿಸಿದರು. ದೂರದರ್ಶನಕ್ಕಾಗಿ 'ಇಟ್ಸ್ ಎ ವುಮೆನ್ಸ್ ವರ್ಲ್ಡ್' (1983) ಎಂಬ ಟಿವಿ ಸರಣಿಯನ್ನು ಆಯೋಜಿಸಿ, ನಿರ್ಮಿಸಿ, ನಿರ್ದೇಶಿಸಿದರು. ಯುನೈಟೆಡ್ ಕಿಂಗ್ಡಂನ 'ಚಾನೆಲ್ 4'ಕ್ಕೆ 'ಲಿವಿಂಗ್ ಲೆಜೆಂಡ್ ರಾಜ್‍ಕಪೂರ್' (1984) ಎಂಬ ಸಾಕ್ಷ್ಯಚಿತ್ರವನ್ನು ಮಾಡಿದರು. ನಂತರ ರಾಜೀವ್ ಗಾಂಧಿಯವರ ಕುರಿತಾದ ಮೂರು ಭಾಗಗಳ ಸಾಕ್ಷ್ಯಚಿತ್ರವನ್ನು 'ಭಾರತದ ರಾಜೀವ್' ಎಂಬ ಹೆಸರಿನಲ್ಲಿ ತಯಾರಿಸಿದರು.  'ರುಖ್ಸತ್' ಎಂಬ ಹಿಂದಿ ಚಲನಚಿತ್ರವನ್ನು ಬರೆದು ನಿರ್ದೇಶಿಸಿದರಲ್ಲದೆ ದೂರದರ್ಶನ ಅನೇಕ ಜಾಹೀರಾತುಗಳನ್ನು ನಿರ್ಮಿಸಿದರು.

ಸಿಮಿ ಗಾರೆವಾಲ್ 'ರೆಂಡೆಜ್ವಸ್ ವಿಥ್ ಸಿಮಿ ಗಾರೆವಾಲ್'ಎಂಬ ಪ್ರಸಿದ್ಧ ಟಾಕ್ ಶೋ ನಿರೂಪಿಸಿದರು. ಸಾಮಾನ್ಯವಾಗಿ  ತಮ್ಮ ಬಿಳಿಯ ಶುಭ್ರ ಪೋಷಾಕಿನಲ್ಲಿ ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ  ಇವರು "ದಿ ಲೇಡಿ ಇನ್ ವೈಟ್" ಎಂದು ಜನಪ್ರಿಯರಾಗಿದ್ದಾರೆ. ಮುಂದೆ ಸಿಮಿ ಅವರು ಸ್ಟಾರ್ ಪ್ಲಸ್‌ನಲ್ಲಿ  'ಇಂಡಿಯಾಸ್ ಮೋಸ್ಟ್ ಡಿಸೈರಬಲ್' ಕಾರ್ಯಕ್ರಮ ನಿರ್ವಹಿಸಿದರು. 

ಸಿಮಿ ಗರೆವಾಲ್ ತಮ್ಮದೆ ಆದ ವೆಬ್‌ಸೈಟ್,  ಯೂಟ್ಯೂಬ್‌ನಲ್ಲಿ ಚಾನೆಲ್ ಅನ್ನು ಹೊಂದಿದ್ದು ತಮ್ಮ ಎಲ್ಲ ನಿರ್ಮಾಣಗಳು ಮತ್ತು ಮತ್ತು ಸಾಕ್ಷ್ಯಚಿತ್ರಗಳನ್ನು ಒಂದೆಡೆ ಕ್ರೋಡೀಕರಿಸಿದ್ದಾರೆ. ಈ ಚಾನಲ್ 40 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆಯಂತೆ.

ಸಿಮಿ ಗರೆವಾಲ್ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು, ಆಸ್ಟ್ರೇಲಿಯಾದ ಪಟರ್ಸ್ ಪ್ರಶಸ್ತಿ ಮತ್ತು ಐಟಿಎ ಪ್ರಶಸ್ತಿಯನ್ನು ಒಳಗೊಂಡಂತೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. 

On the birthday of actress and Talk show hostess Simi Garewal


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ