ಎಂ. ನರೇಂದ್ರಬಾಬು
ಎಂ. ನರೇಂದ್ರಬಾಬು
ಚಿತ್ರಸಾಹಿತಿಗಳಾಗಿ ಎಂ. ನರೇಂದ್ರಬಾಬು ಹೆಸರಾಗಿದ್ದವರು.
ನರೇಂದ್ರಬಾಬು 1926ರ ಆಗಸ್ಟ್ 15ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅರಮನೆಯ ಭಕ್ಷಿಗಳಾಗಿದ್ದ ಕಾಶೀಪತಯ್ಯನವರು, ತಾಯಿ ಮರಮ್ಮಣ್ಣಿಯವರು. ಮೈಸೂರು ಶಾರದಾ ವಿಲಾಸ್ ಹೈಸ್ಕೂಲು ಓದುತ್ತಿದ್ದಾಗಲೇ ಸಾಹಿತ್ಯ ರಚನೆಯ ಹವ್ಯಾಸ ಮೂಡಿತು. ಶಾಲೆಯ ಪತ್ರಿಕೆ ‘ಗರಿಕೆ’ಯಲ್ಲಿ ಇವರ ಕಥೆ, ಕವನ, ಪ್ರಕಟಗೊಳ್ಳುತ್ತಿತ್ತು.
ಎಸ್.ಎಸ್.ಎಲ್.ಸಿ.ಯ ನಂತರ ಇಂಟರ್ ಮೀಡಿಯೆಟ್‌ಗೆ ಮೈಸೂರಿನ ಯುವರಾಜ ಕಾಲೇಜಿಗೆ ಸೇರಿದಾಗ ಡಿ.ಎಲ್. ನರಸಿಂಹಾಚಾರ‍್ಯರು ಇವರ ನೇರ ಗುರುಗಳಾದರೆ, ಎಂ.ವಿ. ಸೀತಾರಾಮಯ್ಯ, ಎ.ಆರ್. ಕೃಷ್ಣಶಾಸ್ತ್ರಿಗಳು ಪರೋಕ್ಷವಾಗಿ ಸಾಹಿತ್ಯಕ್ಕೆ ಇಂಬುಕೊಟ್ಟರು. ತರಗತಿಯಲ್ಲಿ ಡಿ.ಎಲ್.ಎನ್.ರವರು ‘ರೈಲ್ವೆ ಪ್ರಯಾಣ’ ಕುರಿತು ಪ್ರಬಂಧ ಬರೆಸಿದರು. ಇದು ಉಪಾಧ್ಯಾಯರ ಮೆಚ್ಚುಗೆ ಪಡೆದು ವಿ.ಸೀ.ಯವರು ಸಂಪಾದಕರಾಗಿದ್ದ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಗೊಂಡಿತು. ಇತ್ತ ನಾಟಕ, ಹಾಡುಗಾರಿಕೆಗಳತ್ತ ಮನಸ್ಸು ಒಲಿಯಿತು. ಇವರು ರಚಿಸಿದ ‘ರಾಘಣ್ಣನ ರಥ’ ಪ್ರಸಿದ್ಧಿ ಪಡೆದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಲವಾರು ಬಾರಿ ಪ್ರದರ್ಶನಗೊಂಡಿತು.
ನರೇಂದ್ರಬಾಬು ಅವರು ಸ್ನೇಹಿತರ ಒತ್ತಾಯಕ್ಕೆ ಕಟ್ಟು ಬಿದ್ದು ಬರೆದ ನೀಳ್ಗವನ ‘ಚಿರದುಃಖಿ’. 1945ಲ್ಲಿ ಇದಕ್ಕೆ ಬಿ.ಎಂ.ಶ್ರೀ.ಯವರ ಚಿನ್ನದ ಪದಕ ಸಂದಿತು. 1948ರಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದ ‘ಶ್ರೀಕಂಠಿಕೆ’ಯಲ್ಲೂ ಈ ಕವನ ಸೇರ‍್ಪಡೆಯಾಯಿತು. ಮುಂದೆ ನರೇಂದ್ರಬಾಬು ಅವರಿಗೆ ವಿಸೀ, ಅನಕೃ, ತರಾಸು ಮುಂತಾದವರ ಒಡನಾಟದಿಂದ ಸಾಹಿತಿಯಾಗುವ ಅಭಿಲಾಷೆ ಮೂಡಿತು.
1949ರಲ್ಲಿ 'ಭಾರತಿ' ಚಲನಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಹಾಗೂ 13 ಹಾಡುಗಳನ್ನು ರಚಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ನರೇಂದ್ರಬಾಬು, ಡಿ.ಶಂಕರಸಿಂಗ್ ಅವರ ಮಹಾತ್ಮ ಸಂಸ್ಥೆಯ ಬಹಳಷ್ಟು ಚಿತ್ರಗಳಿಗೆ ಸಾಹಿತ್ಯ ರಚಿಸಿದರು. ರಾಜಕುಮಾರ್ ಅಭಿನಯದ ಸರ್ವಜ್ಞಮೂರ್ತಿ ಚಿತ್ರವನ್ನು ನಿರ್ಮಿಸಿದರು. ಸಂಧ್ಯಾರಾಗ, ಎಡಕಲ್ಲು ಗುಡ್ಡದ ಮೇಲೆ, ಪ್ರೊಫೆಸರ್ ಹುಚ್ಚೂರಾಯ, ಭಾಗ್ಯಜ್ಯೋತಿ, ಅತ್ತೆಗೆ ತಕ್ಕ ಸೊಸೆ, ದೇವರದುಡ್ಡು ಮುಂತಾದ 80ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ರಚಿಸಿದರು.
ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ (ಸರ್ವಜ್ಞಮೂರ್ತಿ), ಎಲ್ಲ ಸ್ವಾರಸ್ಯ ಇಲ್ಲೇ ಇದೆ (ಕಾಣದಕೈ), ಈ ಜೀವನ ಬೇವು ಬೆಲ್ಲ (ಮನಸಿದ್ದರೆಮಾರ್ಗ), ಜಾಣೆಯಾಗಿರು ನನ್ನ ಮಲ್ಲಿಗೆ (ಧರ್ಮದಾರಿತಪ್ಪಿತು) ಮುಂತಾದ ಸತ್ವಪೂರ್ಣ ಗೀತೆಗಳು ಸೇರಿದಂತೆ ನರೇಂದ್ರಬಾಬು ನೂರಾರು ಚಿತ್ರಗೀತೆಗಳನ್ನು ರಚಿಸಿದ್ದರು.
ನರೇಂದ್ರಬಾಬು ಅವರು ನಾಲ್ಕನೆಯಮನೆ, ಸ್ವಯಾರ್ಜಿತ, ಚಿತ್ರಬವಣೆ, ಸತ್ಯಭಾಮ, ಹಕ್ಕಿಗಿಟ್ಟ ಗುರಿ, ಹಾವಾಡಿಗ, ಕುಡಿನೋಟ ಮುಂತಾದ ಕಾದಂಬರಿಗಳನ್ನೂ ಹಾಗೂ ಹಲವು ಸಣ್ಣ ಕಥೆಗಳನ್ನೊಳಗೊಂಡ 'ಸಂಪಿಗೆ' ಕಥಾಸಂಕಲನವನ್ನೂ ಪ್ರಕಟಿಸಿದ್ದರು.
ನರೇಂದ್ರಬಾಬು 1999ರ ಅಕ್ಟೋಬರ್ 17ರಂದು ನಿಧನರಾದರು.
On the birth anniversary of lyricist M. Narendra Babu
ಕಾಮೆಂಟ್‌ಗಳು