ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಕ್ಷ್ಮೀ ಜಿ ಪ್ರಸಾದ್


 ಲಕ್ಷ್ಮೀ ಜಿ ಪ್ರಸಾದ್ 


ಡಾ.  ಲಕ್ಷ್ಮೀ ಜಿ ಪ್ರಸಾದ್  ಅವರು ಕಾಲೇಜು ಶಿಕ್ಷಕರು ಮತ್ತು ಕನ್ನಡ - ತುಳು ಭಾಷೆಗಳಲ್ಲಿನ ಬರಹಗಾರ್ತಿ.

ಅಕ್ಟೋಬರ್ 29,  ಲಕ್ಮೀ ಅವರ ಜನ್ಮದಿನ.  ಮೂಲತಃ ಇವರು ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರು. ತಂದೆ ನಾರಾಯಣ ಭಟ್. ತಾಯಿ ಸರಸ್ವತಿ. ಪ್ರತಿಭಾನ್ವಿತ ವಿದ್ಯಾರ್ಥಿನಿ ಆಗಿದ್ದ ಲಕ್ಷ್ಮೀ ಅವರು ಉಜಿರೆಯ ಎಸ್‍ಡಿಎಮ್ ಕಾಲೇಜಿನಿಂದ ಬಿ.ಎಸ್‍ಸಿ ಓದಿದರು.  ಬಿ.ಎಸ್‍ಸಿ ಎರಡನೇ ವರ್ಷದಲ್ಲಿರುವಾಗಲೇ ಗೋವಿಂದ ಪ್ರಸಾದ್ ಅವರೊಡನೆ ವಿವಾಹವಾಯಿತು.  ಪತಿಯ ಪ್ರೋತ್ಸಾಹದಿಂದ 1996ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಎರಡು ಚಿನ್ನದ ಪದಕಗಳೊಡನೆ ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಸಂಸ್ಕತ ಎಂ.ಎ. ಪದವಿ ಗಳಿಸಿದರು. ಮುಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ  ನಾಲ್ಕನೇ ರ್‍ಯಾಂಕ್ ಸಾಧನೆಯಲ್ಲಿ ಕನ್ನಡ ಎಂ.ಎ. ಪದವಿ ಗಳಿಸಿದರು. ಜೊತೆಗೆ ಹಿಂದಿ ಎಂ.ಎ.  ಪದವಿಯನ್ನೂ ಸಾಧಿಸಿದರು. 'ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ' ಪ್ರಬಂಧ ಮಂಡಿಸಿ ಎಂ.ಫಿಲ್ ಗಳಿಸಿದರು. 'ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ' ಸಂಶೋಧನಾತ್ಮಕ ಮಹಾಪ್ರಬಂಧಕ್ಕಾಗಿ ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದರಲ್ಲದೆ, ಕುಪ್ಪಂನ ದ್ರಾವಿಡ ವಿಶ್ವ ವಿದ್ಯಾಲಯದಿಂದ ‘ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ’ ಮಹಾಪ್ರಬಂಧಕ್ಕಾಗಿ ಎರಡನೇ ಪಿಎಚ್.ಡಿ ಗಳಿಸಿದರು.  ಇದಲ್ಲದೆ 'ಕನ್ನಡ ಶಾಸನ ಮತ್ತು ಲಿಪಿ  ಶಾಸ್ತ್ರ ಡಿಪ್ಲೋಮಾ'  ಪದವಿಯನ್ನು ಪ್ರಥಮ ರ‍್ಯಾಂಕ್ ಸಾಧನೆಯೊಂದಿಗೆ ಗಳಿಸಿದ್ದಾರೆ. ಲಕ್ಷ್ಮೀ ಅವರು ಬೆಂಗಳೂರಿನ ಕಾಲೇಜೊಂದರಲ್ಲಿ ಅಧ್ಯಾಪನ ವೃತ್ತಿ ನಡೆಸುತ್ತಿದ್ದಾರೆ.

ಲಕ್ಷ್ಮೀ ಪ್ರಸಾದ್ ಅವರ ಪ್ರಕಟಿತ ಕೃತಿಗಳಲ್ಲಿ ತುಂಡು ಭೂತಗಳು-ಒಂದು ಅಧ್ಯಯನ, ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು , ಬೆಳಕಿನೆಡೆಗೆ, ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು, ತುಳು ಜನಪದ ಕವಿತೆಗಳು,  ಪಾಡ್ದನ ಸಂಪುಟ, ಕಂಬಳ ಕೋರಿ ನೇಮ, ತುಳು ನಾಡಿನ ಅಪೂರ್ವ ಭೂತಗಳು, ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು, ದೈವಿಕ ಕಂಬಳ ಕೋಣ, ಅರಿವಿನಂಗಳದ ಸುತ್ತ, ಮನೆಯಂಗಳದಿ ಹೂ,  ನಾಗ ಬ್ರಹ್ಮ ಮತ್ತು ಕಂಬಳ  –ಒಂದು ವಿಶ್ಲೇಷಣಾತ್ಮಕ ಅಧ್ಯಯನ, ಭೂತಗಳ ಅದ್ಭುತ ಜಗತ್ತು, ಶಾರದಾ ಜಿ ಬಂಗೇರರ ಮೌಖಿಕ ಜಾನಪದ, ಬಂಗಲೆ ಗುಡ್ಡ ಸಣ್ಣಕ್ಕನ ಮೌಖಿಕ ಜಾನಪದ, ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು,  ಶಿಕ್ಷಣ ಲೋಕ,  ಕರಾವಳಿಯ ಸಾವಿರದೊಂದು ದೈವಗಳು,  ಬಸ್ತರ್ ಜಾನಪದ ಸೇರಿವೆ. ಕನ್ನಡದ ಸುಪ್ರಸಿದ್ಧ ನಿಯತಕಾಲಿಕಗಳಲ್ಲಿ ಇವರ ಅಂಕಣಗಳು ಮತ್ತು ಬಹುಮುಖಿ ಬರಹಗಳು ಪ್ರಕಟಗೊಳ್ಳುತ್ತಿವೆ.

ಲಕ್ಷ್ಮೀ ಪ್ರಸಾದ್ ಅವರಿಗೆ ಶಿಕ್ಷಣ, ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆಗಳಿಗಾಗಿ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಗೌರವಗಳು ಸಂದಿವೆ.

ಲಕ್ಷ್ಮೀ ಜಿ ಪ್ರಸಾದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday V Lakshmi 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ