ಡಾ. ಡಿ. ಎಸ್. ಶಿವಪ್ಪ
ಡಾ. ಡಿ. ಎಸ್. ಶಿವಪ್ಪ
ವೃತ್ತಿಯಲ್ಲಿ ವೈದ್ಯರಾದ ಡಾ. ಡಿ. ಎಸ್. ಶಿಪಪ್ಪನವರು ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಮತ್ತು ಶಬ್ದಭಂಡಾರಕ್ಕೆ ನೀಡಿರುವ ಕೊಡುಗೆ ಮಹತ್ವದ್ದು. ಅವರು ವೈದ್ಯಶಾಸ್ತ್ರವನ್ನು ಕನ್ನಡದಲ್ಲಿ ಬೋಧಿಸುವುದು ಅಸಾಧ್ಯವೆನ್ನುತ್ತಿದ್ದುದನ್ನು ಸವಾಲಾಗಿ ಸ್ವೀಕರಿಸಿ, ಕನ್ನಡದಲ್ಲಿ ಬೋಧಿಸಿದ್ದೇ ಅಲ್ಲದೆ ಕೃತಿ ರಚಿಸಿ ಸಾಧನೆ ಮಾಡಿದರು.
ಶಿವಪ್ಪನವರು ದೊಡ್ಡಬಳ್ಳಾಪುರದಲ್ಲಿ 1916ರ ಅಕ್ಟೋಬರ್ 6ರಂದು ಜನಿಸಿದರು. ತಂದೆ ಡಿ.ಎಸ್. ಸುಬ್ಬರಾಯಪ್ಪ. ತಾಯಿ ಚೌಡಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ 1943ರಲ್ಲಿ ವೈದ್ಯ ಪದವಿ ಪಡೆದ ನಂತರ ದೆಹಲಿಯ ಅಖಿಲ ಭಾರತ ವೈದ್ಯಕೀಯ ಕಾಲೇಜಿನಿಂದ ಔಷಧಿ ಶಾಸ್ತ್ರದಲ್ಲಿ 1962ರಲ್ಲಿ ಎಂ.ಡಿ ಪದವಿ ಪಡೆದರು.
ಡಾ. ಶಿವಪ್ಪನವರು ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಮಂಡ್ಯ ಮುಂತಾದೆಡೆಗಳ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಸಮುದಾಯ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ಹೊಂದಿದ್ದ ಶಿವಪ್ಪನವರು ರೋಗ ಲಕ್ಷಣಗಳನ್ನು ಅರಿಯುವ ಬಗೆ, ಅದರ ಸ್ವರೂಪ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಮುಂತಾದವುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಕನ್ನಡದಲ್ಲಿ ಬರವಣಿಗೆಯನ್ನು ಪ್ರಾರಂಭಿಸಿ ಬರೆದ ಮೊದಲ ಲೇಖನ 1965ರಲ್ಲಿ ಸುಧಾವಾರ ಪತ್ರಿಕೆಯಲ್ಲಿ ಪ್ರಕಟವಾಯಿತು. ಶಿವಪ್ಪನವರು ಸುಮಾರು ಮೂವತ್ತು ವರ್ಷಗಳ ಕಾಲ ನಾಡಿನ ಪ್ರಖ್ಯಾತ ಕನ್ನಡ ಪತ್ರಿಕೆಗಳಿಗೆಲ್ಲಾ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಲೇಖನಗಳನ್ನು ಬರೆದರು.
ಶಿವಪ್ಪನವರು ಬರವಣಿಗೆ ಪ್ರಾರಂಭಿಸಿದ ನಂತರ ತಾವು ಕಂಡ ಸಮಸ್ಯೆಗಳ ನಿವಾರಣೆಗೆ ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್, ಜರ್ಮನ್, ಇಟಲಿ ಮುಂತಾದ ಭಾಷೆಗಳ ಪದಗಳಿಗೆ ಕನ್ನಡದಲ್ಲಿ ಸಮಾನಾಂತರ ಪದಗಳನ್ನು ಸೃಷ್ಟಿಸಿ ಲೇಖನಗಳನ್ನು ಬರೆಯತೊಡಗಿದರು. ಔಷಧಿಗಳಿಗೆ ಸಂಬಂಧಿಸಿದಂತೆ ಬಳಕೆಯಲ್ಲಿದ್ದ ಗ್ರಾಮ್ಯ ಪದಗಳನ್ನೇ ಬಳಸಿ ಕೆಲವೇಳೆ ಹೊಸ ಪದಗಳನ್ನು ಸೃಷ್ಟಿಸಿ, ಕೆಲವಕ್ಕೆ ಹೊಸರೂಪ ಕೊಟ್ಟು ರಚಿಸತೊಡಗಿದರು. ಹೀಗೆ ಇವರ ಇಪ್ಪತ್ತೈದು ವರ್ಷಗಳ ಪರಿಶ್ರಮದ ಫಲವಾಗಿ ರಚಿತಗೊಂಡ ಕೃತಿ ‘ವೈದ್ಯಕ ಪದಗಳ ಹುಟ್ಟು ರಚನೆ’. ಈ ಕೃತಿ ಮೊದಲ ಮುದ್ರಣವಾಗಿ ಪ್ರಕಟಗೊಂಡುದು 1973ರಲ್ಲಿ. ನಿರಂತರ ಬೇಡಿಕೆ ಹೊಂದಿದ್ದ ಈ ಕೃತಿ ಹಲವಾರು ಮುದ್ರಣಗಳನ್ನು ಕಂಡಿತು. ಸುಮಾರು 500 ಪುಟಗಳ ಈ ಗ್ರಂಥವು ಮೊದಲ ಭಾಗದಲ್ಲಿ ವೈದ್ಯಕ ಪದಗಳ ಹೆಚ್ಚಳಿಕೆ, ವೈದ್ಯಕ ಪದಗಳ ಮೂಲಗಳು, ಹಳಗಾಲದ ಭಾವನೆಗಳ ಉಳಿಕೆ, ವ್ಯುತ್ಪತ್ತಿಯ ಸೂತ್ರಗಳು, ಪದಗಳ ರಚನೆ ಸೂತ್ರಗಳು, ಸಾಮಾನ್ಯ ವೈದ್ಯಕ ಪದಗಳು ಮುಂತಾದ ಅಧ್ಯಾಯಗಳಿಂದ ಕೂಡಿದ್ದರೆ ಎರಡು ಮತ್ತು ಮೂರನೆಯ ಭಾಗದಲ್ಲಿ ಪದಗಳ ವರ್ಗೀಕರಣ, ಪದಗಳ ರಚನೆಗನ್ನಡಿಯಿಂದ ಕೂಡಿದೆ. ಹಲವಾರು ಮಂದಿ ವಿದ್ವಾಂಸರು ಒಂದೆಡೆ ಕುಳಿತು ಮಾಹಿತಿಯನ್ನು ಕ್ರೋಢೀಕರಿಸಿ ಮಾಡಬಹುದಾದ ಕೆಲಸವನ್ನು ಶಿವಪ್ಪನವರು ಏಕಾಂಗಿಯಾಗಿ ಸಾಧಿಸಿದರು.
ಶಿವಪ್ಪನವರ ಮತ್ತೊಂದು ಮಹತ್ವದ ಕೃತಿ ಎಂದರೆ ‘ಗುಂಡಿಗೆ ರೋಗದ ಕೈಪಿಡಿ’. ಇದರಲ್ಲಿ ಹೃದಯ ಸಂಬಂಧಿ ಖಾಯಿಲೆಗಳ ಮುನ್ನೆಚ್ಚರಿಕೆ ಕ್ರಮ ಮುಂತಾದವುಗಳನ್ನು ಅತಿ ಸರಳವಾಗಿ ವಿವರಿಸಿದ್ದಾರೆ.
ಶಿವಪ್ಪನವರು ವೈದ್ಯಕೀಯ ಪದಗಳ ನಿಘಂಟು ರಚನೆಯ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ರಚನೆ, ಇಂಗ್ಲಿಷ್ – ಕನ್ನಡ ನಿಘಂಟು ಪರಿಷ್ಕರಣೆ, ನಿರಂಜನರ ಸಂಪಾದಕತ್ವದ ಜ್ಞಾನಗಂಗ್ರೋತ್ರಿಯ ಸಂಪುಟಗಳು, ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶ ಮುಂತಾದ ಬೃಹತ್ ಯೋಜನೆಗಳಿಗೂ ಸಹಕಾರ ನೀಡಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಕಟಣೆಗಳಾದ ಆರೋಗ್ಯಮಾಲೆಯ ಅಡಿಯಲ್ಲಿ ಹದಿನಾರು ಪುಸ್ತಕಗಳನ್ನು ಸಂಪಾದಿಸಿದ್ದರು. ಡಾ. ಶಿವಪ್ಪನವರ ಭಾಷಾ ಸಾಮರ್ಥ್ಯ, ವ್ಯಾಪಕ ಅಧ್ಯಯನ, ಕನ್ನಡದ ಬಗ್ಗೆ ಇದ್ದ ಒಲವುಗಳನ್ನು ಪ್ರತಿಬಿಂಬಿಸುವ ಕೃತಿ ‘ನುಡಿ – ಕಿಡಿ’. 825 ಪುಟಗಳ ಈ ಬೃಹತ್ ಸಂಪುಟವು 11,500 ಪದಗಳಿಂದ ಕೂಡಿದೆ. ಇಂಗ್ಲಿಷ್‌ನ ರೀಡರ್ಸ್ ಡೈಜೆಸ್ಟ್‌ನಲ್ಲಿ ಬರುವ ಕೋಟಬಲ್ ಕೋಟ್ಸ್ ನಂತಹ ಚತುರೋಕ್ತಿ, ಚುಟುಕಗಳು, ಆಂಬ್ರೋಸ್ ಬಿಯರ್ಸ್‌ನ ಡೆವಿಲ್ಸ್ ಡಿಕ್ಷನರಿ ಮುಂತಾದ ಹಲವಾರು ಇಂಗ್ಲಿಷ್ ಪುಸ್ತಕಗಳಿಂದ ಮೂರು ದಶಕಗಳಿಗೂ ಹೆಚ್ಚುಕಾಲದಿಂದ ಸಂಗ್ರಹಿಸಿದ್ದು, ಕನ್ನಡ ಜಾಯಮಾನಕ್ಕೆ ಹೊಂದುವಂತೆ ಅನುವಾದಿಸಿ, ವಿಷಯಾನುಕ್ರಮವಾಗಿ ವರ್ಗೀಕರಿಸಿ ರಚಿಸಿದ ಕೃತಿಯಿದು. ಉದಾ: (೧) ಅಂಗಿ – ಸವೆದೂ ಸವೆದೂ ಅರ್ಧವಾದಾಗ ಹೆಂಡತಿ ಆಗುತ್ತದೆ. ೨. ಅಂತಃಪುರ – ಗಂಡನನ್ನು ಹಂಚಿಕೊಳ್ಳುವ ಹೆಂಡತಿಯರ ತಂಡ. ೩. ಅಂತರಾತ್ಮ – ಒಂದು ಸಾವಿರ ಸಾಕ್ಷಿಗಳಿಗೆ ಸಮ. ಇಂತಹ ಒಂದು ಅನರ್ಥ, ಅನ್ಯರ್ಥ, ವಿಡಂಬನೆಯಾರ್ಥದ ಪದಗಳಿಂದ ಕೂಡಿದ ಕೋಶ ಇದಾಗಿದೆ. ಇವರ ಮತ್ತೊಂದು ಮಹೋನ್ನತ ಕೃತಿ ಎಂದರೆ ‘ಲಿವಿಂಗ್‌ಥಿಂಗ್ಸ್’ ಆಂಗ್ಲ ಕೃತಿಯ ಅನುವಾದ ‘ಜೀವಂತ ಭೂಮಿ’. ಮತ್ತೊಂದು ಅನುವಾದಿತ ಕೃತಿ ‘ಜೀವಂತ ವಸ್ತುಗಳ ಹುಟ್ಟುಗುಣ’.
ಚಿತ್ರಕಲೆ, ಛಾಯಾಗ್ರಹಣದಲ್ಲೂ ಆಸಕ್ತರಾಗಿದ್ದ ಶಿವಪ್ಪನವರು ತಮ್ಮ ಪುಸ್ತಕಗಳಿಗೆ ತಾವೇ ಚಿತ್ರರಚಿಸಿದ್ದಾರೆ.
ಹೀಗೆ ವೈದ್ಯಶಾಸ್ತ್ರವನ್ನು ಜನಸಾಮಾನ್ಯರಿಗೂ ತಲುಪಿಸುವಲ್ಲಿ ಶ್ರಮವಹಿಸಿದ ಡಾ. ಶಿವಪ್ಪನವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯಲ್ಲದೆ ಅನೇಕ ಪ್ರಶಸ್ತಿಗಳು ಸಂದಿದ್ದವು.
ಡಾ. ಶಿವಪ್ಪನವರು 1996ರ ಸೆಪ್ಟೆಂಬರ್ 9ರಂದು ಈ ಲೋಕವನ್ನಗಲಿದರು.
On the birth anniversary of writer and Doctor Dr. D. S. Shivappa
ಕಾಮೆಂಟ್‌ಗಳು