ಆಶಾ ಪರೇಖ್
ಆಶಾ ಪರೇಖ್
ಆಶಾ ಪರೇಖ್ ಹಿಂದೀ ಚಿತ್ರರಂಗದ ಪ್ರಖ್ಯಾತ ನಟಿ.
ಆಶಾ ಪರೇಖ್ 1942ರ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ಜನಿಸಿದರು. ಚಿಕ್ಕಂದಿನಲ್ಲೇ ಅವರಿಗೆ ನೃತ್ಯದ ತರಬೇತಿ ದೊರಕಿತು. ಶಾಲೆಯ ಕಾರ್ಯಕ್ರಮವೊಂದರಲ್ಲಿ ಆಶಾ ನೃತ್ಯ ಕಾರ್ಯಕ್ರಮ ನೀಡುತ್ತಿದ್ದಾಗ, ನಿರ್ದೇಶಕ ಬಿಮಲ್ ರಾಯ್ ಕಣ್ಣಿಗೆ ಬಿದ್ದ ಅವರು 'ಬಾಪ್ ಬೇಟಿ’ (1954) ಚಿತ್ರದಲ್ಲಿ ಬಾಲನಟಿಯಾದರು. ಮುಂದೆ ವಿದ್ಯಾಭ್ಯಾಸದ ಜೊತೆಗೆ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದರು.
ಖ್ಯಾತ ನಿರ್ದೇಶಕ ವಿಜಯ್ ಭಟ್ ತಮ್ಮ 'ಗೂಂಜ್ ಉಠಿ ಶೆಹನಾಯ್’ ಚಿತ್ರದ ನಾಯಕಿ ಪಾತ್ರಕ್ಕೆ ಆಶಾರನ್ನು ಆಯ್ಕೆ ಮಾಡಿದರು. ಆಗಿನ್ನೂ ಆಶಾಗೆ ಹದಿನಾರರ ಹರೆಯ. ಆಶಾ ಪರೇಖ್ ಸ್ಟಾರ್ ನಾಯಕಿಯಲ್ಲ ಎಂಬ ಕಾರಣದಿಂದ ಚಿತ್ರದ ನಿರ್ಮಾಪಕರು ಆಕೆಯನ್ನು ಬೇಡವೆಂದರು. ಇದರಿಂದ ನಿರಾಶರಾದ ಆಶಾ ಒಂದಷ್ಟು ಸಮಯ ಸಿನಿಮಾದಿಂದ ದೂರವುಳಿದು, ತಮ್ಮ ನೆಚ್ಚಿನ ಹವ್ಯಾಸವಾದ ನೃತ್ಯದಲ್ಲಿ ತೊಡಗಿಕೊಂಡಿದ್ದರು.
1959ರಲ್ಲಿ ಆಶಾ ಶಮ್ಮಿ ಕಪೂರ್ ಜೊತೆಗೆ `ದಿಲ್ ದೇಕೆ ದೇಖೋ’ ಚಿತ್ರದಲ್ಲಿ ನಟಿಸಿದರು. ಆ ಚಿತ್ರ ಬಾಕ್ಸ್ ಆಫೀಸಲ್ಲಿ ಅಪಾರ ಗೆಲುವು ಸಾಧಿಸಿತು. ಈ ಚಿತ್ರದ ನಂತರ ಆಶಾ ಹಿಂದಿರುಗಿ ನೋಡಲಿಲ್ಲ. 'ಜಬ್ ಪ್ಯಾರ್ ಕಿಸೀ ಸೆ ಹೋತಾ ಹೈ’, 'ಫಿರ್ ವೊಹಿ ದಿಲ್ ಲಾಯಾ ಹೂ’, `ಜಿದ್ದಿ’, `ಮೇರೆ ಸನಂ’, 'ತೀಸ್ರಿ ಮಂಜಿಲ್’ ಸೇರಿದಂತೆ ಅನೇಕ ಯಶಸ್ವೀ ಚಿತ್ರಗಳಲ್ಲಿ ಆಶಾ ನಟಿಸಿದರು.
ಮನೋಜ್ ಕುಮಾರ್ ಜೊತೆಗಿನ 'ದೋ ಬದನ್’ (1966) ಚಿತ್ರದೊಂದಿಗೆ ಆಶಾ ಗಂಭೀರ ಪಾತ್ರಗಳತ್ತ ಹೊರಳಿದರು. ಮುಂದೆ 'ಕನ್ಯಾದಾನ್’, 'ಚಿರಾಗ್’, 'ಪಗ್ಲಾ ಕಹೀ ಕಾ’, 'ಕಟೀ ಪಂತಗ್’, 'ಮೇ ತುಲ್ಸಿ ತೇರೇ ಆಂಗನ್ ಕಿ’ ಮುಂತಾದ ಅನೇಕ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದರು. 1971 ವರ್ಷದಲ್ಲಿ ತೆರೆಕಂಡ ಅವರ `ಕಟಿ ಪಂತಗ್’, `ಆನ್ ಮಿಲೋ ಸಜ್ನಾ’, `ಮೇರಾ ಗಾವೋ ಮೇರಾ ದೇಶ್’, `ಕಾರವಾನ್’ ಚಿತ್ರಗಳು ಸೂಪರ್ ಹಿಟ್ ಎನಿಸಿದವು. 'ಕಟಿ ಪತಂಗ್’ ಚಿತ್ರದ ಉತ್ತಮ ಅಭಿನಯಕ್ಕಾಗಿ ಅವರು ಫಿಲಂಫೇರ್ ಪುರಸ್ಕಾರಕ್ಕೂ ಪ್ರಾಪ್ತರಾದರು.
ನಟನೆಯ ಜೊತೆಗೆ ಚಿತ್ರ ವಿತರಣೆಯಲ್ಲೂ ಆಶಾಗೆ ಯಶಸ್ಸು ಸಿಕ್ಕಿತ್ತು. ಸುಮಾರು ಎರಡು ದಶಕಗಳ ಕಾಲ ಅವರು ಚಿತ್ರ ವಿತರಣೆಯಲ್ಲಿ ತೊಡಗಿಕೊಂಡಿದ್ದರು. ಅವರು ಕನ್ನಡದ 'ಶರವೇಗದ ಸರದಾರ' ಎಂಬ ಚಿತ್ರದಲ್ಲೂ ನಟಿಸಿದ್ದರು.
ಆಶಾ ಪರೇಖ್ ಸಮಾಜ ಸೇವೆಯಲ್ಲೂ ಹೆಸರಾಗಿದ್ದಾರೆ. ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ನೃತ್ಯ ಪ್ರದರ್ಶನಕ್ಕೆಂದು ಆಶಾ ವಿದೇಶಕ್ಕೆ ತೆರಳಿದ್ದರು.
ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಆಶಾ 'ಕಲಾ ಭವನ್’ ಎಂಬ ನೃತ್ಯ ಅಕಾಡೆಮಿ ಸ್ಥಾಪಿಸಿದ್ದಾರೆ. ಇಲ್ಲಿ ವಿವಿಧ ಪ್ರಕಾರಗಳ ನೃತ್ಯಗಳನ್ನು ಕಲಿಸಲಾಗುತ್ತಿದೆ. 1995ರಲ್ಲಿ ನಟನೆಯಿಂದ ದೂರ ಉಳಿದ ಆಶಾ ಅವರು ಕಿರು ತೆರೆಯ ಧಾರಾವಾಹಿಗಳ ನಿರ್ದೇಶನ ಮತ್ತು ನಿರ್ಮಾಣ ಕಾರ್ಯದಲ್ಲಿ ನಿರತರಾದರು.
ಆಶಾ ಅವರಿಗೆ ಚಲನಚಿತ್ರಲೋಕದ ಶ್ರೇಷ್ಠತೆಯ ದ್ಯೋತಕವದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಶ್ರೀ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ. 2017ರಲ್ಲಿ ಖಾಲಿದ್ ಮೊಹಮದ್ ಅವರಿಂದ ರಚಿತವಾದ ಆಶಾ ಪರೇಖ್ ಅವರ ಆತ್ಮಕತೆ ‘ದಿ ಹಿಟ್ ಗರ್ಲ್’ ಪ್ರಕಟಗೊಂಡಿದೆ.
On the birth anniversary of actress Asha Paresh
ಕಾಮೆಂಟ್‌ಗಳು