ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಧವಿ ಭಟ್


 ಮಾಧವಿ ಭಟ್

ನಮ್ಮ ಆತ್ಮೀಯರಾದ ಮಾಧವಿ ಭಟ್ ಯುವ ಪೀಳಿಗೆಯ ಸುಮಧುರ ಇನಿಧ್ವನಿ. 

ಅಕ್ಟೋಬರ್ 2 ಮಾಧವಿ ಅವರ ಜನ್ಮದಿನ. ಅವರು ಬೆಳೆದದ್ದು, ಓದಿದ್ದು ಶಿವಮೊಗ್ಗದಲ್ಲಿ. ಬಿ. ಕಾಂ ಪದವಿವರೆಗೆ ಶಿವಮೊಗ್ಗದಲ್ಲಿ ಓದಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಕಾಂ ಪದವಿ ಪಡೆದ ಮಾಧವಿ ಅಕ್ಕರೆಯಿಂದ ಒಂದಷ್ಟು ಸಂಗೀತ ಕಲಿಕೆಯನ್ನೂ ಮಾಡಿದ್ದಾರೆ. 

ಶಿವಮೊಗ್ಗದಲ್ಲಿ ಮತ್ತು ವಿವಾಹದನಂತರ ಬೆಂಗಳೂರಿನ ಕಾರ್ಪೊರೇಟ್ ವಲಯದ ಕೆಲ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಮಾಧವಿ ಭಟ್ ಸ್ವಭಾವತಃ ಸಾಹಿತ್ಯ ಮತ್ತು ಸಂಸ್ಕೃತಿಗಳ ಆಸಕ್ತರು.  ಹೀಗಾಗಿ ರೇಡಿಯೋದಲ್ಲಿ ಉದ್ಘೋಷಕಿಯಾಗಿ ಮತ್ತು ಮ್ಯೂಸಿಕ್ ಜಾಕಿಯಾಗಿ, ಕಾರ್ಯಕ್ರಮ ನಿರೂಪಕಿಯಾಗಿ ಹೀಗೆ ಸ್ವತಂತ್ರವಾಗಿ 
ಸೇವೆ ಸಲ್ಲಿಸುವ ಅವಕಾಶಗಳು ಅರಸಿ ಬಂದಾಗ ಅಕ್ಕರೆಯಿಂದ ಅವನ್ನು ಮಾಡುತ್ತಾ  ಸಂತಸದಿಂದ ಮುಂದೆ ಸಾಗುತ್ತಿದ್ದಾರೆ.

ಮಾಧವಿ ಭಟ್ ಅವರು ಹಲವಾರು ಸಂಘ ಸಂಸ್ಥೆಗಳ ಸಮಾರಂಭಗಳಿಗೆ ತಮ್ಮ ನಿರೂಪಣೆಯಿಂದ ಕಳೆ ತಂದಿದ್ದಾರೆ. ಟಿ.ವಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನೆಲ್ ವಿಚಾರ ವಿನಿಮಯಗಳಲ್ಲಿ ಭಾಗವಹಿಸಿದ್ದಾರೆ. ಹಲವು ಸಲ ಝಿ ಕನ್ನಡ ಟಿವಿಯ  ಒಗ್ಗರಣೆ ಡಬ್ಬೀಗೆ ಹೋಗಿ ಮಿಲ್ಲೆಟ್ ಅಡುಗೆ ಮಾಡಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಹಲವು ವಿಚಾರಗಳಲ್ಲಿ ಇವರ ಬರಹಗಳು ಮೂಡಿಬರುತ್ತಿವೆ.

ಸದಾ ನಗೆಮೊಗದ ಉತ್ಸಾಹದ ಚಿಲುಮೆಯಾಗಿ ಕಲಿಯುತ್ತಾ, ನಲಿಯತ್ತ, ತಮ್ಮ ಕಾಯಕವನ್ನು ಮತ್ತು ಬದುಕನ್ನು ಆಪ್ತವಾಗಿ ಸಾಗಿಸುತ್ತಾ ನಡೆದಿರುವ ಅಕ್ಕರೆಯ ಆತ್ಮೀಯ ಮಾಧವಿ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Madhvi Bhat

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ