ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆಳಗು ಬಾ



ಬೆಳಗು ಬಾ ಹಣತೆಯನು
ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ ಶುಭ ಘಳಿಗೆಯಲ್ಲಿ
ಬೆಳಗು ಬಾ ಓ ಗೆಳತಿ
ನಿನ್ನ ಒಲವಿನ ಪ್ರಣತಿ
ಶತಮಾನಗಳ ತಿಮಿರ ಮುಸುಕಿದೀಮಂದಿರದ
ಎದೆಯಾಳದಲ್ಲಿ

ಬೆಳಗು ಬಾ ದೀವಿಗೆಯ
ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ ಶುಭ ಲಗ್ನದಲ್ಲಿ
ಎದೆಯ ಕಸವನು ಗುಡಿಸಿ
ರಂಗವಲ್ಲಿಯನ್ನಿರಿಸಿ
ಸಿಂಗರಿಸು ನನ್ನೆದೆಯ ನಿನ್ನ ಪ್ರೇಮದ ಅಮೃತ
ಸಂಪತ್ತಿನಲಿ

ಬೆಳಗು ಬಾ ಜ್ಯೋತಿಯನು
ಎದೆಯ ಮಂದಿರದಲ್ಲಿ
ಜಗಕೆ ಬೆಳಕಾಗುವೀ ಶುಭ ಘಳಿಗೆಯಲ್ಲಿ
ಇನಿತು ದಿನ ಜಡ ನಾನು
ಬಂದ ಚೇತನ ನೀನು
ನಿನ್ನ ಶಕ್ತಿಯ ಬಲದಿ ವ್ಯಕ್ತಿಯಾದೆನು ನಾನು
ಈ ಲೋಕದಲ್ಲಿ

ಬೆಳಗು ಬಾ ಹಣತೆಯನು
ನನ್ನೆದೆಯ ಗುಡಿಯಲ್ಲಿ
ಚಿರಕಾಲ ಪ್ರಜ್ವಲಿಸಿ ಬೆಳಗುವಂತೆ;
ನೀನು ಬಂದುದರಿಂದ
ನನ್ನೆದಯ ಆನಂದ
ನರ್ತಿಸುತ ಶೋಭಿಸಿದೆ, ಮಳೆಬಂದ ಮರುದಿನದ
ಮುಂಬೆಳಗಿನಂತೆ.

ಸಾಹಿತ್ಯ:  ಜಿ. ಎಸ್. ಶಿವರುದ್ರಪ್ಪ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ