ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೃದಯ ಹೂವಿನ ಹಂದರ


ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ

ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೊ ಸುಂದರ

ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿ
ಗೊಂದೆ ಭಾರತ ಮಂದಿರ
ಶಾಂತಿ ದಾತನು ಗಾಂಧಿ ತಾತನು
ಎದೆಯ ಬಾನಿನ ಚಂದಿರ

ಜಾತಿ ರೋಗದ ಭೀತಿ ಕಳೆಯುತ
ನೀತಿ ಮಾರ್ಗದಿ ನಡೆವೆವು
ಒಂದೆ ಮಾನವ ಕುಲವು ಎನ್ನುತ
ವಿಶ್ವ ಧರ್ಮವ ಪಡೆವೆವು

ವೈರ ಮತ್ಸರ ಸ್ವಾರ್ಥ ವಂಚನೆ
ಕ್ರಿಮಿಗಳೆಲ್ಲವ ತೊಡೆವೆವು
ದೇಶ ಸೇವೆಗೆ ದೇಹ ಸವೆಸುವ
ದೀಕ್ಷೆ ಇಂದೇ ತೊಡುವೆವು

ನಮ್ಮ ಸುತ್ತಲು ಹೆಣೆದು ಕೊಳ್ಳಲಿ
ಸ್ನೇಹ ಪಾಶದ ಬಂಧನ
ಬೆಳಕು ಬೀರಲಿ ಗಂಧ ಹರಡಲಿ
ಉರಿದು ಪ್ರೇಮದ ಚಂದನ

ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ
ದೇಶವಾಗಲಿ ನಂದನ
ಅಂದು ಪ್ರೇಮದಿ ಎತ್ತಿ ಕೊಳ್ಳಲಿ
ಭೂಮಿ ತನ್ನಯ ಕಂದನ

ಸಾಹಿತ್ಯ: ಶಂ. ಗು. ಬಿರಾದಾರ

Photo: At a school in Hunsur Taluk when our Swami Vivekananda Sevashrama, Mysore conducted eye checkup - Year 2013

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ