ಹೂವು. ಬಳ್ಳಿಗೆ ದೀಪ
ಹೂವು ಬಳ್ಳಿಗೆ ದೀಪ
ಹಸಿರು ಬಯಲಿಗೆ ದೀಪ
ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ !
ಮುತ್ತು ಕಡಲಿಗೆ ದೀಪ
ಹಕ್ಕಿ ಗಾಳಿಗೆ ದೀಪ
ಗ್ರಹತಾರೆಗಳ ದೀಪ ಬಾನಿನಲ್ಲಿ.
ಬಲ್ಮೆ ತೋಳಿಗೆ ದೀಪ
ದುಡಿಮೆ ಬೆವರಿನ ದೀಪ
ಸಹನೆ ಅನುಭವ ದೀಪ ಬದುಕಿನಲ್ಲಿ !
ಮುನಿಸು ಒಲವಿಗೆ ದೀಪ
ಉಣಿಸು ಒಡಲಿಗೆ ದೀಪ
ಕರುಣೆ ನಂದಾ ದೀಪ ಲೋಕದಲ್ಲಿ
ತೋರಣನ ತಳಿರಲ್ಲಿ
ಹೊಸಿಲ ಹಣತೆಗಳಲ್ಲಿ
ಬಾಣಬಿರುಸುಗಳಲ್ಲಿ ನಲಿವು ಮೂಡಿ !
ಕತ್ತಲೆಯ ಪುಟಗಳಲಿ
ಬೆಳಕಿನಕ್ಷತ್ರಗಳಲಿ
ದೀಪಗಳ ಸಂದೇಶ ಥಳಿಥಳಿಸಲಿ.
ಬೆಳಕಿನಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಲ್ಲಿ ಕೇಳಿಬರಲಿ !
ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ.
ದೀಪಾವಳಿ: ಕೆ.ಎಸ್. ನರಸಿಂಹಸ್ವಾಮಿ
ಕಾಮೆಂಟ್ಗಳು