ಗಿರಿಧರ
ಗೋವರ್ಧನಗಿರಿಧರ ಗೋಪಾಲ
ನನಗೆ ಶ್ರೀಕೃಷ್ಣನ ಗೋವರ್ಧನ ಬೆಟ್ಟದ ಕುರಿತಾದ ಕಥೆ ಇಷ್ಟವಾದದ್ದು. ಬದುಕನ್ನು ಗೌರವಿಸಬೇಕು, ನಾವು ನಮಗೆ ಏನು ಮುಖ್ಯವೋ ಅದನ್ನು ಗುರುತಿಸಿಕೊಂಡು ನಮ್ಮ ಆಚರಣೆಗಳಿಗೆ ಹೊಸ ಅರ್ಥ ಕಂಡುಕೊಳ್ಳಬೇಕು ಎಂಬುದರ ಹೊಳಹು ನನಗಿಲ್ಲಿ ಕಾಣುತ್ತದೆ.
ಶ್ರೀಕೃಷ್ಣನ ಕಾಲದಲ್ಲೂ ಹಲವು ಸಂಭ್ರಮಾಚಾರಣೆಗಳಿದ್ದವು. ಬಾಲಕ ಕೃಷ್ಣನಿಗೋ ಬದುಕೇ ಸಂಭ್ರಮ. ಕೃಷ್ಣನೆಂದರೆ ಆಕರ್ಷಣೆ. ಕಾರಣ ಆತನಲ್ಲಿ ಸಂತಸ ಸೌಂದರ್ಯ ಮತ್ತು ಸಹಜತೆಯ ಪ್ರೇಮ ಸದಾ ಜಾಗೃತವಾಗಿತ್ತು. ಕಷ್ಟಗಳು ಆತನನ್ನು ಹೆದರಿಸಲಿಲ್ಲ. ಹಾಗಾಗಿ ಕಷ್ಟಬರುತ್ತದೆ ಎಂದು ಬದುಕಿನಲ್ಲಿ ಅರ್ಥಹೀನತೆಗೇ ಅಂಟಿಕೊಳ್ಳುವುದನ್ನು ಆತ ಒಪ್ಪಿಕೊಳ್ಳಲಿಲ್ಲ. ತನ್ನ ಉತ್ಸಾಹ ಮತ್ತು ಚಿಂತನೆಯತ್ತ ತನ್ನ ಸಮುದಾಯವನ್ನೂ ಆಕರ್ಷಿಸಿದ.
ಅಂದಿನ ಜನ ಇಂದ್ರನೆಂಬ ದೇವರಿಗೆ ಹೆದರಿಕಯಿಂದ ಇಂದ್ರಪೂಜೆ ರೂಢಿಮಾಡಿಕೊಂಡಿದ್ದರು. ಕೃಷ್ಣನಿಗೆ ಹೆದರಿಕೆಯ ಮನೋಭಾವದ ಪೂಜೆ ಸರಿಯೆನಿಸಲಿಲ್ಲ. ನಮ್ಮ ಊರಿಗೆ ಇಷ್ಟು ಸೌಂದರ್ಯ ನೀಡಿರುವ ಗೋವರ್ಧನ ಗಿರಿ ಎಷ್ಟು ಸೌಂದರ್ಯಯುತ. ನಮಗೆ ಚಳಿ ಗಾಳಿಗೆ ಇಲ್ಲಿ ರಕ್ಷಣೆಯಿದೆ. ಸಸ್ಯ ಸಂಪತ್ತು ಇದರಿಂದ ಕಂಗೊಳಿಸುತ್ತದೆ. ಗೋಪಾಲಕರಾದ ನಮಗೆ ಬದುಕಿಗೆ ಆಸರೆಯಾಗಿರುವುದು ಗೋವುಗಳು. ನಾವು ಗೋವರ್ಧನ ಗಿರಿಯನ್ನು ಏಕೆ ಅಭಿಮಾನಿಸುವುದಿಲ್ಲ. ನಮ್ಮ ಬದುಕಿನ ಆಸರೆಯಾಗಿರುವ ಗೋವುಗಳನ್ನೇಕೆ ಪ್ರೀತಿಸುವುದಿಲ್ಲ, ಈ ಇಂದ್ರಪೂಜೆ ಯಾಕೆ ಮಾಡಬೇಕು, ಮೊದಲು ನಮ್ಮ ಗೋವರ್ಧನ ಗಿರಿ ಮತ್ತು ಗೋವುಗಳ ಸಂಭ್ರಮಾಚರಣೆ ಮಾಡೋಣ ಎಂಬ ಚಿಂತನೆ ಜನಮನದಲ್ಲಿ ತಂದ.
ಹೀಗಾದಾಗಲೇ ಜಡಿಮಳೆ ಸುರಿಯಬೇಕೆ. ಇಂದ್ರನಿಗೆ ಕೋಪ ಬಂದಿರಬೇಕು ಅದಕ್ಕೇ ಹೀಗಾಗಿರಬೇಕು ಎಂದು ಅಳುಕಿತು ಜನಮನ. ಈ ತುಂಟ ಹುಡುಗನ ಮಾತು ಕೇಳಿ ಕೆಟ್ವಿ ಎಂದವರಿಗೆ ಕಡಿಮೆ ಇರಲಿಲ್ಲ.
ಕೃಷ್ಣ ಅಳುಕಲಿಲ್ಲ. ಮಳೆ ಬಂದಿದೆ ಅಂತ ಹೆದರೋಕ್ಕಾಗುತ್ಯೆ. ಬನ್ನಿ ಗೋವರ್ಧನ ಗಿರಿ ಕೆಳಗೆ ಆಶ್ರಯಪಡೆಯೋಣ ಅಂದ. ಆತನೇ ಮುಂದೆ ನಿಂತು ಬೆಟ್ಟದ ತಂಗುದಾಣಗಳಿಗೆ ವಿಸ್ತಾರ ರೂಪಿಸತೊಡಗಿದ. ಜನ ತಾವೂ ಉತ್ಸಾಹದಿಂದ ಈ ಶ್ರಮವನ್ನೇ ಖುಷಿಯಿಂದ ಮಾಡತೊಡಗಿದರು. ಅಲ್ಲೇ ಹಾಡಿ ನಲಿದರು. ಈ ಸಂಭ್ರಮವಲ್ಲವೇ ನಿಜವಾದ ಪೂಜೆ ಎಂಬ ಅರಿವು ಗಳಿಸಿದರು.
ಸಂತಸ ಸೌಂದರ್ಯ ಪ್ರೇಮಗಳುಳ್ಳ ಸಂಭ್ರಮಿತ ಮನಗಳಿಗೆ ಯಾವುದೂ ಅಸಾಧ್ಯವಲ್ಲ ಎಂದು ತನ್ನ ಸಮುದಾಯಕ್ಕೆ ಕೃಷ್ಣ ತಿಳಿಸಿಕೊಟ್ಟಿದ್ದ. ಆತನ ಗೋಕುಲ ನಿರ್ಗಮನದವರೆಗೂ ಅವರೆಲ್ಲರಿಗೂ ತಮದು ನಂದಗೋಕುಲ ಎಂಬ ಅರಿವು ಮೂಡಿಸಿ ಎಲ್ಲರ ಕಣ್ಮಣಿಯೇ ಆಗಿದ್ದ.
ಇದು ನನಗನ್ನಿಸಿದ್ದು. ನನಗೆ ಕಥೆ ಮುಖ್ಯವಲ್ಲ ಕಥೆಯ ಅಂತರಾಳದೆಡೆಗೆ ನನ್ನ ಸೆಳೆತ.
Giridhara Gopala
ಕಾಮೆಂಟ್‌ಗಳು