ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೊಲಬಕ್ಕನವರ


 ಟಿ. ಬಿ. ಸೊಲಬಕ್ಕನವರ


ಟಿ. ಬಿ. ಸೊಲಬಕ್ಕನವರ  ಅವರು ಕಲಾವಿದರಾಗಿ, ಕರ್ನಾಟಕ ಬಯಲಾಟ ಅಕಾಡಮಿ ಅಧ್ಯಕ್ಷರಾಗಿ, ಗೊಟಗೋಡಿ ಉತ್ಸವ ರಾಕ್‌ ಗಾರ್ಡನ್ ನಿರ್ಮಾಣಕ್ಕೆ ಕಾರಣಕರ್ತರಾಗಿ ಪ್ರಸಿದ್ಧರಾಗಿದ್ದವರು.‍ ಇಂದು ಅವರ ಸಂಸ್ಮರಣ ದಿನ.

ಸೊಲಬಕ್ಕನವರ ಅವರು 1947ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹುಲಸೋಗಿ ಗ್ರಾಮದಲ್ಲಿ ಜನಿಸಿದರು.  ಅಂದಿನ ಅವಿಭಜಿತ ಧಾರವಾಡ ಜಿಲ್ಲೆಯ ಡಿ.ವಿ. ಹಾಲಭಾವಿ ಕಲಾ ಶಾಲೆಯಲ್ಲಿ ಕಲಾಶಿಕ್ಷಣ ಪಡೆದರು.  ದಾವಣಗೆರೆಯಲ್ಲಿ ಡಿಪ್ಲೊಮೊ ಇನ್ ಫೈನ್ ಆರ್ಟ್ಸ್ ಮಾಡಿದರು.  

ಸೊಲಬಕ್ಕನವರ ಅವರು ಕೆಲಕಾಲ ಚಲನಚಿತ್ರಗಳಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ  ಕೆಲಸ ಮಾಡಿದರು. ಕೆಲಕಾಲ ಜ್ಞಾನಗಂಗೋತ್ರಿಗೆ ಕೆಲಸಮಾಡಿ, ಪ್ರಜಾಮತದಲ್ಲಿ ಪ್ರಧಾನ ಪುಟ ವಿನ್ಯಾಸಕರಾಗಿಯೂ ಕಾರ್ಯನಿರ್ವಹಿಸಿದ್ದರು. 1972ರಿಂದ 1990ರವರೆಗೆ ದಾವಣಗೆರೆಯ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು.  2019ರಲ್ಲಿ ಬಯಲಾಟ ಅಕಾಡಮಿ ಅಧ್ಯಕ್ಷರಾದರು.

ಸೊಲಬಕ್ಕನವರ ಅವರು ದಾವಣಗೆರೆ ಸಮುದಾಯ ಮತ್ತು ರಾಜ್ಯ ಕೇಂದ್ರ ಸಮುದಾಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದವರು.
ದೇಶದಲ್ಲೇ ಪ್ರಥಮ ಎನ್ನಿಸಿಕೊಳ್ಳುವ ಅಣುಸಮರ ವಿರುದ್ಧದ  ಜಾಥಾದಲ್ಲಿ 120 ಅಡಿ ಉದ್ದದ ಆರು ಅಡಿ ಅಗಲದ ಕ್ಯಾನ್‌ವಾಸ್ ನಲ್ಲಿ ಅಣುಶಕ್ತಿಯ ಪ್ರಕೋಪಗಳನ್ನು, ಅಣುಯುದ್ದ ನಡೆದರೆ ದೇಶ ದೇಶದ ಗಡಿಗಳನ್ನು ದಾಟಿ ಅದು ಮನುಕುಲದ ಮೇಲೆ ಮಾಡುವ ಊಹೆಗೂ ನಿಲುಕದ ದುಷ್ಪರಿಣಾಮದ ವರ್ಣಚಿತ್ರವನ್ನು ತಮ್ಮ ಉತ್ಸಾಹಿ ತಂಡದೊಂದಿಗೆ ತಯಾರಿಸಿ ಕೊಟ್ಟ ಶ್ರೇಷ್ಠ ಕಲಾವಿದರಿವರು. 
ದಾವಣಗೆರೆ ಕಲಾಶಾಲೆಯ ಮತ್ತೊಬ್ಬ ವರ್ಣಚಿತ್ರ ಕಲಾವಿದ ಕರಿರಾಜು ಮತ್ತು ಕಲಾಶಾಲೆಯ ವಿದ್ಯಾರ್ಥಿಗಳು ಸೊಲಬಕ್ಕನವರ ಅವರ ಮುಂದಾಳತ್ವದಲ್ಲಿ ತಯಾರಿಸಿದ ಈ  ವರ್ಣಚಿತ್ರ ಮೊದಲಿಗೆ ಇಡೀ ರಾಜ್ಯದಲ್ಲಿ, ದೇಶದ ಎಲ್ಲ ಪ್ರಮುಖ ಕೇಂದ್ರಗಳಲ್ಲಿ ಮತ್ತು ಜಪಾನ್ ದೇಶದಲ್ಲೂ ಪ್ರದರ್ಶನಗೊಂಡು ಸೊಲಬಕ್ಕನವರ ಅವರ ಮ್ಯೂಸಿಯಂ ಅನ್ನು ಸೇರಿತು.

ಸಣ್ಣಾಟ, ದೊಡ್ಡಾಟ ಕಲಾಪ್ರಾಕಾರಗಳಲ್ಲೂ ಸೊಲಬಕ್ಕನವರ ಅವರು ತಮ್ಮನ್ನು ಗುರುತಿಸಿಕೊಂಡಿದ್ದರು. ಆ ಪ್ರಕಾರಗಳ ಆಳವಾದ ಅಧ್ಯಯನ ಮತ್ತು ಪ್ರದರ್ಶನಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು, ಪ್ರದರ್ಶನಗಳ ಸಂಘಟನೆಯನ್ನು ದಾವಣಗೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳ ಸುತ್ತಮುತ್ತ ಆಯೋಜಿಸಿದ್ದರು.

ಬಾಗಲಕೋಟೆ ಜಿಲ್ಲೆ ಮುಳುಗಡೆಯಾಗಿ, ನವ ಬಾಗಲಕೋಟೆ ಉದಯವಾದಾಗ, ಅಲ್ಲಿನ ವಿನ್ಯಾಸದಲ್ಲೂ ಸೊಲಬಕ್ಕನವರ ಅವರ ಶ್ರಮ ಮತ್ತು ಕ್ರಿಯಾಶೀಲ ಕೊಡುಗೆ ಇತ್ತು. ಜಾನಪದ ಅಕಾಡಮಿ ಸದಸ್ಯರಾಗಿ ಸಹ ಅವರು ಕಾರ್ಯನಿರ್ವಹಿಸಿದ್ದರು. 

ಬೆಂಗಳೂರಿನ ಜಕ್ಕೂರಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನಿರ್ಮಿಸಲಾದ ಮಾದರಿ ಗ್ರಾಮದ ಪರಿಕಲ್ಪನೆಯನ್ನು ಸೊಲಬಕ್ಕನವರ ಅವರೇ ಸಾಕಾರಗೊಳಿಸಿದ್ದು, ಮುಖ್ಯಮಂತ್ರಿಗಳು ಈ ಕಾರ್ಯಕ್ಕೆ ಚಾಲನೆ ನೀಡಿದ್ದರು. 

ಸೊಲಬಕ್ಕನವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ವಿಜ್ಞಾನ ಪ್ರಶಸ್ತಿ, ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮುಂತಾದ ಗೌರವಗಳು ಸಂದಿದ್ದವು. 

ಸೊಲಬಕ್ಕನವರ ಅವರು 2020ರ ನವೆಂಬರ್ 19ರಂದು ನಿಧನರಾದರು.

On Remembrance Day of Dr. T. B. Solabakkanavar 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ