ಉಷಾ ನವರತ್ನರಾಂ
ಉಷಾ ನವರತ್ನರಾಂ
ಉಷಾ ನವರತ್ನರಾಂ ಕನ್ನಡದ ಜನಪ್ರಿಯ ಲೇಖಕಿ.
ಉಷಾ 1939ರ ನವೆಂಬರ 23ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಶಾಂತಮ್ಮ; ತಂದೆ ಎಂ.ವಿ.ಸುಬ್ಬರಾವ್. ಖ್ಯಾತ ಸಾಹಿತಿ ನವರತ್ನ ರಾಮ್ ಉಷಾ ಅವರ ಪತಿ.
ಉಷಾ ನವರತ್ನರಾಂ ವೃತ್ತಿಯಲ್ಲಿ ಅಧ್ಯಾಪಕರಾಗಿ ಸುಮಾರು 3 ದಶಕಗಳ ಕಾಲ ಶಿಕ್ಷಕರಾಗಿ ಹುದ್ದೆ ನಿರ್ವಹಿಸಿದ್ದರು. ಅವರು ಕಾದಂಬರಿಗಾರ್ತಿ, ಕಥೆಗಾರ್ತಿ ಮತ್ತು ಅಂಕಣಗಾರ್ತಿಯೂ ಆಗಿದ್ದರು. ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಗಂಭೀರ ಸಾಹಿತ್ಯದ ಅಧ್ಯಯನಾಸಕ್ತರ ಪ್ರಪಂಚದಾಚೆಗೆ ಜನಸಾಮಾನ್ಯ ಓದುಗರೆಂದು ಗುರುತಿಸಲ್ಪಡುವ ವಿಸ್ತೃತವಾದ ಒಂದು ಓದುಗ ಜಗತ್ತೇ ಇದೆ.
ಮೊದಲನೇ ರೀತಿಯ ಓದುಗರಿಗಾಗಿ ಸಾಹಿತ್ಯವನ್ನು ಸೃಜಿಸುವ ಬರಹಗಾರರಿಗೆ ಓದುಗರನ್ನು ಸೃಷ್ಠಿಸಿಕೊಳ್ಳುವಲ್ಲಿ ಅತಿ ದೊಡ್ಡ ಸವಾಲುಗಳು ಎದುರಾಗುತ್ತವೆ. ಇತ್ತೀಚಿಗೆ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಓದುತ್ತಿದ್ದೆ. ಅದರ ಮುನ್ನುಡಿಯಲ್ಲಿ ಡಾ.ಶಿವರಾಮಕಾರಂತರು 1994ರ ವರ್ಷದಲ್ಲಿ ಬರೆದದ್ದು ಹೀಗೆ: “ಇಂದೂ ಕೂಡ ಬರಹಗಾರ ತನ್ನ ಬದುಕನ್ನು ತನ್ನ ಪುಸ್ತಕಗಳ ಪ್ರಕಟಣೆಯಿಂದ ನಡೆಸಲು ಸಾಧ್ಯವಿಲ್ಲವಾಗಿದೆ”. ಅಂದಿನ ದಿನದಲ್ಲಿ 90 ವಯಸ್ಸಿನ ಆಯುಷ್ಯ ದಾಟಿದ್ದರೂ ಕಾರಂತರಂತಹ ಕನ್ನಡ ಸಾಹಿತ್ಯದ ಪ್ರಧಾನ ಲೇಖಕರು ಕೂಡ ಬರವಣಿಗೆಗಾರನ ಬವಣೆಗಳನ್ನು ನಿರಂತರವಾಗಿ ಅನುಭವಿಸಿದ್ದರು.
ಇನ್ನು ಎರಡನೆಯ ರೀತಿಯ ಸಾಮಾನ್ಯ ಹೃದಯಗಳನ್ನು ತಟ್ಟುವ ಸೃಜನಕಾರರು ಆ ಹಂತ ತಲುಪುವ ರೀತಿ ಅಸಾಮಾನ್ಯವಾದುದು. ಸಿನಿಮಾಗಳಲ್ಲಿ ಜನಪ್ರಿಯ ಸ್ಥಾನ ಪಡೆವ ನಟ ನಟಿಯಂತಹ ಅಭಿಮಾನಗಳನ್ನು ಸೃಷ್ಟಿಸಿಕೊಳ್ಳುವ ಅಸಾಮಾನ್ಯ ಸಾಮರ್ಥ್ಯ ಉಳ್ಳವರು ಈ ಬರಹಗಾರರು. ಇಂತಹ ಪ್ರಮುಖ ಸಾಧಕರಲ್ಲಿ ನಿಸ್ಸಂಶಯವಾಗಿ ಸೇರುವ ಪ್ರಮುಖ ಹೆಸರು ಉಷಾ ನವರತ್ನರಾಂ ಅವರದು.
ಅಂದಿನ ದಿನಗಳಲ್ಲಿ ಉಷಾ ನವರತ್ನರಾಂ ಅಂತಹ ಬರಹಗಾರರ ಧಾರಾವಾಹಿ ಕಥೆಗಳಿಗಾಗಿ ಸುಧಾ, ಪ್ರಜಾಮತ, ಕರ್ಮವೀರ, ತರಂಗ ಮುಂತಾದ ವಾರ ಪತ್ರಿಕೆಗಳಿಗೆ ಕಾದು ಕೂರುತ್ತಿದ್ದ ಯುವ ಮತ್ತು ಹಿರಿಯ ಜನಾಂಗವನ್ನು ಕಾಣುವುದು ಸರ್ವೇ ಸಾಮಾನ್ಯವಾಗಿತ್ತು. ಹೆಣ್ಣು ಮಕ್ಕಳು ಕಥೆಗಳಲ್ಲಿ ಬರುವ ಭಾವುಕ ಅಂಶಗಳನ್ನು ಚರ್ಚಿಸಿ ಮೆಲ್ಲ ತೊಡಗಿದರೆ, ಗಂಡು ಹುಡುಗರು ಆ ಕಥೆಗಳಲ್ಲಿನ ಪಾತ್ರಗಳಲ್ಲಿ ತಮ್ಮನ್ನೇ ನಾಯಕನನ್ನಾಗಿಸಿಕೊಂಡು ಹಿಗ್ಗುವವರಾಗಿದ್ದರು. ಮುಂದೆ ಈ ಜನಪ್ರಿಯತೆ, ಮಾಸಪತ್ರಿಕೆಗಳಿಗೂ ಹಬ್ಬಿದುದಲ್ಲದೆ ಇಂತಹ ಕಥೆಗಳಿಗಾಗಿಯೇ ‘ರಾಗಸಂಗಮ’, ‘ಹಂಸರಾಗ’, ದಂತಹ ಹಲವಾರು ಹೊಸ ತರಹದ ಪತ್ರಿಕೋದ್ಯಮಗಳು ತಲೆ ಎತ್ತಿದ್ದವು. ಇಂತಹ ಹಲವು ಪತ್ರಿಕೆಗಳಲ್ಲಿ ಒಂದು ಉಷಾ ನವರತ್ನರಾಂ ಅವರ ಕಥೆಗಳಿಗಾಗಿಯೇ ಪ್ರತ್ಯೇಕವಾಗಿ ಬಳಕೆಗೆ ಬಂದದ್ದು ಕೂಡ ನೆನಪಿದೆ.
ಹಾಗೆ ನೋಡಿದರೆ, ಇಂತಹ ಕಥೆಗಳ ಪರಂಪರೆ ಅ.ನ. ಕೃಷ್ಣರಾಯ, ಕೃಷ್ಣಮೂರ್ತಿ ಪುರಾಣಿಕ, ತ್ರಿವೇಣಿ, ವಾಣಿ, ಎಂ.ಕೆ ಇಂದಿರಾ ಮುಂತಾದ ಹಿಂದಿನ ತಲೆಮಾರಿನಲ್ಲೂ ಮೂಡಿಬಂದ ಹಲವು ಹಾದಿಗಳನ್ನು ಗುರುತಿಸಬಹುದು. ಆದರೆ, ಅ ಲೇಖಕರ ಕೃತಿಗಳ ಸಂಖ್ಯೆ ಉಷಾ ನವರತ್ನರಾಂ, ಸಾಯಿಸುತೆ, ರಾಧಾದೇವಿ ಮುಂತಾದ ಲೇಖಕಿಯರ ಪುಸ್ತಕಗಳ ಸಂಖ್ಯೆಯಷ್ಟು ತೀವ್ರ ಗತಿಯಲ್ಲಿ ಇರುತ್ತಿರಲಿಲ್ಲ.
ಕನ್ನಡ ಚಿತ್ರರಂಗ ಪ್ರವರ್ಧಮಾನಕ್ಕೆ ಬಂದು ಹಲವು ನಿರ್ದೇಶಕರು ಕಾದಂಬರಿ ಆಧಾರಿತ ಚಲನಚಿತ್ರಗಳಲ್ಲಿ ಜನರ ಒಲವನ್ನು ಕಂಡುಕೊಂಡ ಹಿನ್ನಲೆಯಲ್ಲಿ ಉಷಾ ನವರತ್ನರಾಂ ಅವರ ಕೃತಿಗಳೂ ಚಲನಚಿತ್ರ ನಿರ್ದೇಶಕರನ್ನು ಆಕರ್ಷಿಸಿದವು. ಈ ನಿಟ್ಟಿನಲ್ಲಿ ಉಷಾ ನವರತ್ನರಾಂ ಅವರ ‘ಹೊಂಬಿಸಿಲು’ ಕೃತಿ ಗೀತಪ್ರಿಯ ಅವರ ನಿರ್ದೇಶನದಲ್ಲಿ ಮೂಡಿ ಬಂದು ಅಪಾರ ಯಶಸ್ಸನ್ನು ಗಳಿಸಿದ್ದಲ್ಲದೆ ಆ ಚಿತ್ರಕ್ಕೆ ರಾಜ್ಯ ಪ್ರಶಸ್ತಿಗಳ ಸುರಿಮಳೆಯನ್ನೇ ಹರಿಸಿತು. ಆ ಚಿತ್ರ ವಿಷ್ಣುವರ್ಧನ್ ಮತ್ತು ಆರತಿ ಅವರ ಚಿತ್ರಜೀವನದ ಪ್ರಮುಖ ಚಿತ್ರ ಎಂದು ಕೂಡ ಚಲನಚಿತ್ರ ಪಂಡಿತರು ಮತ್ತು ಅಭಿಮಾನಿಗಳು ಗುರುತಿಸಿದ್ದಾರೆ. ಮುಂದೆ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರು ಉಷಾ ನವರತ್ನರಾಂ ಅವರ ‘ಬಂಧನ’ ಕಥೆಯನ್ನು ವಿಷ್ಣುವರ್ಧನ್ – ಸುಹಾಸಿನಿ ಅವರ ಜೋಡಿಯಲ್ಲಿ ಚಲನಚಿತ್ರವಾಗಿಸಿದಾಗ ಆ ಚಿತ್ರ ಚಲನಚಿತ್ರರಂಗದ ಗಳಿಕೆಗಳಲ್ಲಿ ಮತ್ತು ಜನಪ್ರಿಯತೆಗಳಲ್ಲಿ ಇನ್ನಿಲ್ಲದಂತಹ ಅದ್ಭುತ ಸಾಧನೆಗಳನ್ನು ಮಾಡಿತು. ಅವರ ‘ನಾಳೆಯು ಬರಲಿ’ ‘ಪ್ರೀತಿಸಿ ನೋಡು’, ‘ಸಮರ್ಪಣೆ’ ಕಥೆಗಳು ಕೂಡ ಚಲನಚಿತ್ರಗಳಾದವು. ಹೀಗೆ ಉಷಾ ನವರತ್ನರಾಂ ಅವರು ಕನ್ನಡ ಚಿತ್ರರಂಗ ಪ್ರಮುಖವಾಗಿ ಗುರುತಿಸಲ್ಪಡುವ ಬರಹಗಾರ್ತಿ ಆಗಿದ್ದರು.
ಹಲವು ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಗೊಂಡದ್ದು ಮತ್ತು ಕಥೆ ಪುಸ್ತಕಗಳ ರೂಪಗಳಲ್ಲಿ ಮೂಡಿದ ಕಥೆಗಳಲ್ಲದೆ ಉಷಾ ನವರತ್ನರಾಂ ‘ಅಭಿನಯ’, ‘ಕತೆ ಹೇಳುವೆ’, ‘ಕೇಳು ನನ್ನ ಕಥೆಯಾ’ ಎಂಬ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದರು. ಅವರ ಜನಪ್ರಿಯ ಕಾದಂಬರಿಗಳ ಸಂಖ್ಯೆಯೇ 50ಕ್ಕೂ ಹೆಚ್ಚು ಸಂಖ್ಯೆಯಲ್ಲಿವೆ.
ಕರ್ನಾಟಕ ರಾಜ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದ ‘ಮನುಶ್ರೀ’ ಪ್ರಶಸ್ತಿ ಮುಂತಾದ ಹಲವು ಗೌರವಗಳು ಉಷಾ ನವರತ್ನರಾಂ ಅವರಿಗೆ ಸಂದಿದ್ದವು.
ಉಷಾ ನವರತ್ನ ರಾಮ್ 2000 ವರ್ಷದ ಅಕ್ಟೋಬರ 1ರಂದು ನಿಧನರಾದರು.
On the birth anniversary of popular novelist Late Usha Navaratnaram
ಉಷಾ ಕಾದಂಬರಿಗಳು ಎಲ್ಲಿ ಸಿಗುತ್ತವೆ
ಪ್ರತ್ಯುತ್ತರಅಳಿಸಿಉಷಾ ನವರತ್ನರಾಮ ಅವರ ಕಾದಂಬರಿಗಳು ನ್ನು ಏಷ್ಟು ಸಲ ಬೇಕಾದರೂ ಓದಬಹುದು ಏಲ್ಲಿ ಸಿಗುತ್ತಿಲ್ಲ ಆದ್ದರಿಂದ ನೀವು ನಮಗೆ ಸಹಾಯ ಮಾಡಿ
ಪ್ರತ್ಯುತ್ತರಅಳಿಸಿ