ಬೆಳಕೇ
ಒಳಗಿರುವ ಬೆಳಕೆ, ಬೆಳಕೇ!
ತಾರದಿರು ಕಾರಿರುಳನೆದೆಯ ಮಂದಿರಕೆ;
ಆಗು, ನಂದಾದೀಪವಾಗಿ ಬೆಳಗು,
ನನ್ನತನದೆಳಮೊಳಕೆ, ಬೆಳಕೇ!
ಓ ನನ್ನ ಬೆಳಕೇ!
ಒಮ್ಮೊಮ್ಮೆ ಭುಗಿಲೆದ್ದು ನೆಗೆದೆದ್ದು ಬಂದು
ಉನ್ನತದ ಸಿರಿನಾಡ ಸೊಬಗಿದೆಂದು
ತೆರೆದು ತೋರಿದೆ ಎದೆಗೆ; ಬಾಳೊಳೆಲ್ಲ
ಮೇಲುನಾಡಿನ ಕನಸ ಬೆಳೆದೆಯಲ್ಲ!
ಮಿಂಚುತನದೀ ಸಂಚು ಸಾಕು, ಸಾಕು!
ಆಗು, ನಂದಾದೀಪವಾಗಿ ಬೆಳಗು.
ನಂಬಿ ಕುಳಿತೆನು ನಿನ್ನ ದಿನವು, ದಿನವು,
ಹಂಬಲಿಸಿ ಸಣ್ಣಾಗುತಿರಲು ಮನವು;
ಕಿಡಿಯಾಗಿ ಬಗೆತಳದೋಕೆ ಕುಳಿತೆ?
ಇಡಿಯಾಗಿ ದಳ್ಳಿಸಲದೇಕೆ ಮರೆತೆ?
ಹೊನ್ನ ಬಲೆಯನು ಬೀಸಿ ಹೂವು ಹಾಸಿಗೆ ಹಾಸಿ
ಸುಗ್ಗಿಸುಗ್ಗಿಯ ಚೆಲುವುನಲವುಗಳನಣಿಗೊಳಸಿ
ವಿಷಯ ಸುಖದಾಮಿಷವನೆತ್ತೆತ್ತಲೂ ಚೆಲ್ಲಿ
ತುತ್ತುಗೊಳಲೆಂದು ಸೆಳೆಯುವುದಿಂದು ಕತ್ತಲು,
ತತ್ತರಿಸಿ ಬಾಳು ಕೈ ಚಾಚುತಿದೆ ಸುತ್ತಲೂ
ಎತ್ತು ಎತ್ತೆಲೆ ಎತ್ತು ಬೆಳಕಿನ ಪತಾಕೆ,
ಒಳಗಿರುವ ಬೆಳಕೆ, ಬೆಳಕೇ!
ಮನವೆಲ್ಲ ಬೆಳಕಾಗಿ ಹೊಳೆವುದೆಂತು?
ಭಾವ ದೊಳಗೆಲ್ಲ ಜ್ಯೋತಿ ನಲಿವುದೆಂದು?
ಸಿಂಧುವಾಗಲಿ ನಿನ್ನ ದೀಪಬಿಂದು;
ನೀನಲ್ಲದೆನಗಿಲ್ಲ ಅನ್ಯ ಬಂಧು!
ನೇಹವಿದೆ, ಮೋಹವಿದೆ ಕತ್ತಲಿನ ಬಲಕೆ,
ನೀ ಸ್ವಯಂಪ್ರಭ; ಬಾರ ನನ್ನ ಬೆಂಬಲಕೆ;
ಓ ಚೆನ್ನ ಬೆಳಕೇ, ಬೆಳಕೇ!
ಎಲ್ಲ ಬೆಳಕಿನ ಮೊಟ್ಟೆ ನೀನು; ಮರೆವಿನ ಕಟ್ಟೆ
ಯೊಡೆದು ಬಾ, ನಿಡಿದು ಬಾ, ಹರಡಿ ಬಾ, ಹರಿದು ಬಾ,
ಕೊಚ್ಚಿ ಹೋಗಲಿ ಎಲ್ಲ ಕತ್ತಲಿನ ಕೊತ್ತಳ;
ಉಜ್ಜಿ ಹೋಗಲಿ ಜೀವ ತೊಟ್ಟೆಲ್ಲ ಪತ್ತಲ;
ಈ ಬೆಳಕು ಆ ಹಿರಿಯ ಬೆಳಕು ಕಡಲಿನಲಿ
ಬೆರೆಯಲಿ, ಕರಗಲಿ, ಅರಗಲೊಂದಾಗಲಿ;
ಕಾಯುವೆನು ಆ ದಿನವ; ಅಂದು ತನಕ
ಬಿರುಗಾಳಿ ಬೀಸಲಿ, ಗುಡುಗೆದ್ದು ಮೊಳಗಲಿ,
ಮಳೆ ಬಿದ್ದು ಹೊಯ್ಯಲಿ, ಬಾಳೆಲ್ಲ ತೊಯ್ಯಲಿ!
ಆದರೂ ಆರದಿರು ಓ ನನ್ನ ಬೆಳಕೇ!
ಆಗು, ನಂದಾದೀಪವಾಗಿ ಬೆಳಗು,
ಒಳಗಿರುವ ಬೆಳಕೆ, ಬೆಳಕೇ!
ನಂದಾ ದೀಪ
ಎಂ. ಗೋಪಾಲಕೃಷ್ಣ ಅಡಿಗ
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್‌ಗಳು