ಸೋಮಣ್ಣ
ಎಚ್.ಜಿ. ಸೋಮಶೇಖರ ರಾವ್
ಎಚ್.ಜಿ. ಸೋಮಶೇಖರ ರಾವ್ ಮಹಾನ್ ಕಲಾವಿದರಾಗಿ ನಮ್ಮೊಡನಿದ್ದವರು.
ಅಪ್ತವಲಯದಲ್ಲಿ ಸೋಮಣ್ಣ ಎಂದೇ ಕರೆಯಲ್ಪಡುತ್ತಿದ್ದ ಸೋಮಶೇಖರ ರಾವ್ ಅವರು ಹವ್ಯಾಸಿ ರಂಗಭೂಮಿಯಲ್ಲಿ ಗಣ್ಯ ಹೆಸರಾಗಿದ್ದರು. ಸಿನಿಮಾ, ಸಾಹಿತ್ಯ, ಕಿರುತೆರೆ ಧಾರಾವಾಹಿ, ಸಂವಹನ, ಮಾನವ ಸಂಪನ್ಮೂಲ ಅಭಿವೃದ್ಧಿ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಅವರ ಆಸಕ್ತಿಗಳು ವ್ಯಾಪಿಸಿದ್ದವು.
ಸೋಮಶೇಖರ್ ಕಲಾವಿದನಾಗಿ ನನ್ನನ್ನು ಅಪಾರವಾಗಿ ಕಾಡಿದ ವ್ಯಕ್ತಿ. 'ಮಿಥಿಲೆಯ ಸೀತೆಯರು' ಚಿತ್ರದಲ್ಲಿ 'ಈ ಸಂಜೆ ನಮ್ಮ ಭಾವನು ಬರುವನು ಅಕ್ಕಾ' ಅಂತ ಮನೆಯ ಹೆಣ್ಣುಮಕ್ಕಳು ಸಂಭ್ರಮಿಸಿ ನಾವೂ ಪ್ರೇಕ್ಷಕರಾಗಿ ಆ ಸಂಭ್ರಮದಲ್ಲಿ ಮುಳುಗಿರುವಾಗಲೇ, ಸಂಜೆ ಮಗಳು ಗೀತಳನ್ನು ಮದುವೆ ಆಗುವ ವಿಚಾರ ಮಾತಾನಾಡಲು ಬಂದ ವರ ವಿಷ್ಣುವರ್ಧನರಿಗೆ ನಿಷ್ಠುರವಾಗಿ ನಡೆದುಕೊಳ್ಳುವ ಬೇಜವಾಬ್ಧಾರಿಯುತ ಸ್ವಾರ್ಥಿ ಅಪ್ಪನಾಗಿ, ಸೋಮಶೇಖರ್ ಅವರ ಪಾತ್ರ ನಿರ್ವಹಣೆ ಮರೆಯಲಾಗದ್ದು. ಆ ಕ್ರೌರ್ಯ ನನ್ನನ್ನು ಇಂದಿನ ದಿನಗಳಲ್ಲೂ ಹೀಗೇಕೆ ಈ ವಿಶ್ವ ಎಂದು ಕಾಡುತ್ತದೆ!
ಸೋಮಶೇಖರ್ ಪಾತ್ರ ನಿರ್ವಹಣೆಯೇ ಹಾಗೆ. ‘ಹೃದಯ ಸಂಗಮ’ ಚಿತ್ರದಲ್ಲಿ ನಾಯಕನಟ ರಾಜ್‌ಕುಮಾರ್ ಅವರಿಗೆ ರೈಲ್ವೆ ಅಪಘಾತದಲ್ಲಿ ಮಿದುಳಿಗೆ ಪೆಟ್ಟಾಗಿ ಮರೆವಿನ ರೋಗಕ್ಕೆ ಒಳಗಾದ ಸನ್ನಿವೇಶವಿದೆ. ಅಪಘಾತವಾಗಿ ಮಲಗಿರುವ ನಾಯಕನಿಗೆ ವೈದ್ಯರಾಗಿ ಚಿಕಿತ್ಸೆ ನಡೆಸುವ ಸೋಮಣ್ಣನವರನ್ನು ಮೊದಲ ಬಾರಿಗೆ ಭೇಟಿಯಾದ ಡಾ.ರಾಜಕುಮಾರ್ ಅವರು ಶೂಟಿಂಗ್ ಮುಗಿದ ಬಳಿಕ ಅವರನ್ನು “ನೀವು ವೃತ್ತಿಯಲ್ಲಿ ಡಾಕ್ಟರಾ?" ಎಂದು ಕೇಳಿದರಂತೆ. ಸೋಮಣ್ಣನ ಅಭಿನಯಶಕ್ತಿಗೆ ಇದೊಂದು ದೊಡ್ಡ ಗೌರವ ಎಂದರೆ ತಪ್ಪಾಗಲಾರದು. ಆಗ ಅವರು ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದರು.
ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಂತದವರೆಗೆ ಏರಿದ ನಿಷ್ಠಾವಂತ ಉದ್ಯೋಗಿಯಾಗಿದ್ದಾಗಲೇ ಅಸಂಖ್ಯಾತ ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸುತ್ತಾ ಅಪಾರ ರಂಗಾಸಕ್ತಿ ಉಳಿಸಿ ಬೆಳೆಸಿಕೊಂಡವರು ಸೋಮಣ್ಣ.
ಹರಿಹರ ಗುಂಡೂರಾವ್ ಸೋಮಶೇಖರ ರಾವ್ 1934ರ ಡಿಸೆಂಬರ್ 3ರಂದು ಜನಿಸಿದರು. ಅವರ ತಾತ (ತಾಯಿಯ ತಂದೆ) ಸ್ವಪ್ರಯತ್ನದಿಂದ ಚಿತ್ರದುರ್ಗದಲ್ಲಿ ಬಹಳ ಪ್ರಸಿದ್ಧರೂ ಶ್ರೀಮಂತರೂ ಆಗಿದ್ದ ವಕೀಲ ಕೃಷ್ಣರಾಯರು. ಮುಂದೆ ಅನಾರೋಗ್ಯದಿಂದ ಅವರ ಶ್ರೀಮಂತಿಕೆಯೂ ಇಳಿಮುಖಗೊಂಡಿತಂತೆ. ತಂದೆ ಗುಂಡೂರಾಯರು ವಕೀಲರು. ಆದರೆ, ಸ್ವಾತಂತ್ರ್ಯ ಹೋರಾಟದ ಆದರ್ಶದ ಹಿಂದೆ ಬಿದ್ದು ಕುಟುಂಬ ಸದಾ ಬಡತನದಲ್ಲೇ ಇತ್ತು. ಹೀಗಾಗಿ ಸೋಮಶೇಖರ ರಾವ್ ವಿದ್ಯಾರ್ಥಿ ದೆಸೆಯಲ್ಲಿ ಬಹು ಬಡತನದಿಂದ ಓದಿದರು. ಆದರೆ ಎಲ್ಲರೊಂದಿಗೆ ಸ್ನೇಹ ಸಂಪಾದಿಸಿ ನಾಟಕ, ಸಾಹಿತ್ಯ, ಸಂಗೀತಗಳ ಕುರಿತಾದ ಆಸಕ್ತಿಗಳಲ್ಲಿ ತೊಡಗಿಕೊಂಡ ಅವರು ನಿರಂತರ ಕ್ರಿಯಾಶಾಲಿಯಾಗಿದ್ದರು. ದತ್ತಣ್ಣ ಎಂದು ಖ್ಯಾತರಾದ ಮಹಾನ್ ಕಲಾವಿದ ಎಚ್. ಜಿ. ದತ್ತಾತ್ರೇಯ ಇವರ ಸಹೋದರ.
ಸೋಮಶೇಖರ ರಾವ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ 1950ರ ದಶಕದಲ್ಲಿ ಬಿ.ಎ.ಅನರ್ಸ್ ಮತ್ತು ಎಂ.ಎ. ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್ ಪಡೆದ ಪ್ರತಿಭಾವಂತರು.
ಮೈಸೂರಿನ ಮಹಾರಾಜಾ ಕಾಲೇಜಿನ ಸಾಂಸ್ಕೃತಿಕ ಸಂಪತ್ತನ್ನು ಬೆಳೆಸಿದ ಪ್ರಸಿದ್ಧ ಕಲಾವಿದರಲ್ಲಿ ಸೋಮಶೇಖರ ರಾವ್ ಕೂಡ ಒಬ್ಬರು. ಸೋಮಶೇಖರ ರಾವ್ 300ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು. ಅವುಗಳ ಸಾವಿರಕ್ಕೂ ಮೀರಿದ ಮರುಪ್ರದರ್ಶನಗಳಲ್ಲಿ ನಟಿಸಿದ್ದರು. 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು. ಪಿ.ಲಂಕೇಶರ ‘ನನ್ನ ತಂಗಿಗೊಂದು ಗಂಡು ಕೊಡಿ’ ಮೊದಲ ಪ್ರದರ್ಶನದ ನಿರ್ದೇಶಕರೂ ಅವರೇ. ಸೋಮಶೇಖರ ರಾವ್ ರಂಗಭೂಮಿ ನಿರ್ದೇಶಕರಾದ ಬಿ.ವಿ.ಕಾರಂತ, ಪ್ರಸನ್ನ ಮೊದಲಾದವರ ನಾಟಕಗಳಲ್ಲಿ ತಾವು ಅಭಿನಯಿಸಿದ್ದು, ಗಿರೀಶ್ ಕಾರ್ನಾಡ್ ಮೊದಲಾದವರ ಜೊತೆ ಒಡನಾಡಿದ್ದು, ಸಿ.ಜಿ.ಕೃಷ್ಣಸ್ವಾಮಿಯವರ ಜೊತೆ ಕೆಲಸ ಮಾಡಿದ್ದು ಎಲ್ಲವನ್ನೂ ಅತ್ಯಂತ ಪ್ರೀತಿಯಿಂದಲೂ, ಕೃತಜ್ಞತೆಯಿಂದಲೂ ನೆನಪಿಸಿಕೊಳ್ಳುತ್ತಿದ್ದರು. ಸಿನಿಮಾ ನಟರಾಗಿ ‘ಸಂಪತ್’ ಎಂದೇ ಪ್ರಖ್ಯಾತರಾಗಿದ್ದ ಚೆಲುವೈಯ್ಯಂಗಾರ್ ಅವರನ್ನು ಸೋಮಶೇಖರ ರಾವ್ ತಮ್ಮ ಅಭಿನಯ ಕಲೆಯ ಗುರುವೆಂದೇ ನೆನೆಯುತ್ತಿದ್ದರು. "ಸಂಪತ್ ಅವರ ಒಂದೊಂದು ದಿನದ ತಾಲೀಮು ಕೂಡ ಅಭಿನಯದ ಬಗ್ಗೆ ಗ್ರಂಥ ಓದಿದಂತೆ" ಎಂಬುದು ಸೋಮಣ್ಣನವರ ಅಭಿಪ್ರಾಯವಾಗಿತ್ತು.
ಸೋಮಶೇಖರ ರಾವ್ ಕೆಲಸಕ್ಕೆ ಸೇರುವ ಮೊದಲು ಮೈಸೂರು ಮೆಲೋಡಿ ಮೇಕರ‍್ಸ್ ಎಂಬ ತಂಡವನ್ನು ಪ್ರಸಿದ್ಧ ಸಂಗೀತಗಾರ ಮೈಸೂರು ಅನಂತಸ್ವಾಮಿ ಅವರೊಡನೆ ಸೇರಿ ಕಟ್ಟಿ ಅದರ ಆದಾಯದಿಂದಲೇ, ಕೆಲಸ ಸಿಗುವವರೆಗೆ ಜೀವಿಸಿದರು. ಮೈಸೂರು ಅನಂತ ಸ್ವಾಮಿ ಅವರ ಪರಮ ಆಪ್ತರಾಗಿದ್ದರು.
ಮಿಥಿಲೆಯ ಸೀತೆಯರು ಅಲ್ಲದೆ ಕಲಾತ್ಮಕ ಚಿತ್ರಗಳಾದ ಸಾವಿತ್ರಿ, ಆಕ್ಸಿಡೆಂಟ್, ಗೀಜಗನಗೂಡು, ಹರಕೆಯ ಕುರಿ ಮುಂತಾದ 51 ಸಿನಿಮಾಗಳಲ್ಲಿ ಸೋಮಣ್ಣವರು ನಟಿಸಿದ್ದರು. ಅವರು ನಟಿಸಿದ ಕೆಲವು ಸಿನಿಮಾಗಳು ರಾಷ್ಟ್ರಪ್ರಶಸ್ತಿ ಪಡೆದಿವೆ. ಹರಕೆಯ ಕುರಿ ಚಿತ್ರದ ಅಭಿನಯಕ್ಕೆ ಅವರಿಗೆ ಕರ್ನಾಟಕ ರಾಜ್ಯದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಸಂದಿತು. ಅವರು ಹಲವಾರು ದೂರದರ್ಶನದ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.
‘ಭ್ರಮಣ’ ಹಾಗೂ ‘ರಾಣಿಯರ ಕಥೆ’ ಎಂಬ ಎರಡು ಕಾದಂಬರಿಗಳೂ ಸೇರಿ ಸೋಮಶೇಖರ ರಾವ್ ಸುಮಾರು 25 ಪುಸ್ತಕಗಳನ್ನು ಪ್ರಕಟಿಸಿದ್ದರು. ತಮ್ಮ ಆತ್ಮಚರಿತ್ರೆ ರೂಪವಾದ ‘ಸೋಮಣ್ಣನ ಸ್ಟಾಕ್‌ನಿಂದ’ ಕೃತಿಯನ್ನು ಅವರು ಹಾಸ್ಯಲೇಪಿತ ವಿಚಾರಪೂರಿತ ಬರಹಗಳು ಎಂದು ಕರೆದಿದ್ದಾರೆ. ಇದೇ ಅವರ ಬದುಕಿನ ರೀತಿಯೂ ಆಗಿತ್ತು. ತುಸು ಹಾಸ್ಯದ ಮೆರುಗಿನಲ್ಲಿ ಗಂಭೀರವಾದ ವಿಚಾರಗಳನ್ನು ಅಭಿವ್ಯಕ್ತಿಸುತ್ತಿದ್ದದು ಅವರ ಬದುಕಿನ ರೀತಿ. ಸೋಮಣ್ಣನವರ ಬರಹ ಎಷ್ಟು ಸೊಗಸಿನದೆಂದರೆ ವಿದ್ವಾಂಸರಾದ ಡಾ.ಕೆ.ವಿ.ತಿರುಮಲೇಶರು ಸೋಮಣ್ಣನ ಸ್ಟಾಕ್ ಬಗ್ಗೆ ಮಾತನಾಡುತ್ತಾ "ಇವರ ಕನ್ನಡ ಶೈಲಿ ಎಷ್ಟೊಂದು ಪ್ರಬುದ್ಧವಾಗಿದೆಯೆಂದರೆ ಇಡೀ ಪುಸ್ತಕವನ್ನು ಪಠ್ಯವಾಗಿ ಇರಿಸಿದರೆ ಒಳ್ಳೆಯದೆಂದು ನನಗೆ ಅನಿಸುತ್ತದೆ" ಎಂದಿದ್ದಾರೆ.
ಸೋಮಶೇಖರ ರಾಯರ 'ಸಂವಹನ ಕಲೆ’ ಎಂಬ ಪುಸ್ತಕವು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಅವರು ದೀರ್ಘಕಾಲ ಕೆಲಸಮಾಡಿದ್ದರು. ನಾಯಕತ್ವ ಗುಣಾಭಿವೃದ್ಧಿ ಕಲೆಯಲ್ಲಿ ಅವರು ನುರಿತ ಅಧ್ಯಾಪಕರಾಗಿದ್ದರು. ‘ಅಭಿನಯ ತರಂಗ’ ರಂಗಶಾಲೆಯ ಅಧ್ಯಾಪಕರಾಗಿ, ಅಧ್ಯಕ್ಷರಾಗಿ ಪ್ರಾಂಶುಪಾಲರಾಗಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಸೋಮಶೇಖರ ರಾಯರಿಗೆ 2016ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.
ಕಾಲ ಎಂತಹವರನ್ನೂ ಒಯ್ದುಬಿಡುತ್ತದೆ. ಸೋಮಶೇಖರ ರಾವ್ ಅವರನ್ನು ನಾವು ಎಲ್ಲೋ ಸಣ್ಣ ಇಣುಕುಗಳಲ್ಲಿ ಮಾತ್ರಾ ಕಂಡಿದ್ದೆವು. 2020ರ ನವೆಂಬರ್ 3ರಂದು ಅವರು ಹೋಗಿಬಿಟ್ಟರು ಎಂದಾಗ ಕೂಡಾ ಅವರ ಅಗಾಧತೆಯ ಕುರಿತು ಎಲ್ಲೋ ಈ ಲೋಕ ಕಂಡುಕೊಂಡಂತಿಲ್ಲ ಅನಿಸಿತು. ಕಾಲನಿಂದ ಮತ್ತು ಕಾಲ ಕರೆದೊಯ್ದುಬಿಟ್ಟವರಿಂದ ನಾವು ಕಲಿಯುವುದಕ್ಕೆ ಹಲವು ಜನ್ಮಗಳೂ ಸಾಲುವುದಿಲ್ಲವೇನೋ!. ಸೋಮಶೇಖರ ರಾಯರೆಂಬ ಭವ್ಯವಾಗಿ ಬಾಳಿದ ಚೇತನಕ್ಕೊಂದು ಗೌರವಯುತ ನಮನ.
On Remembrance Day of great actor H. G. Somashekhar Rao 🌷🙏🌷
ಕಾಮೆಂಟ್‌ಗಳು