ಟೀಪೂ ಸುಲ್ತಾನ್
ಟೀಪೂ ಸುಲ್ತಾನ್
ಟೀಪೂ ಸುಲ್ತಾನ್ ಮೈಸೂರಿನ ಸುಲ್ತಾನನಾಗಿದ್ದವ.
ಟೀಪೂ ಸುಲ್ತಾನ್ 1753ರ ನವೆಂಬರ್ 20ರಂದು ದೇವನಹಳ್ಳಿಯಲ್ಲಿ ಜನಿಸಿದ. ತಂದೆ ಹೈದರ್ ಅಲೀ. ತಾಯಿ ಫಾತಿಮಾ ಬೇಗಮ್. ಬಹುಕಾಲ ಮಕ್ಕಳಿಲ್ಲದ ಇವರು ಹಜರತ್ ಟೀಪೂ ಮಸ್ತಾನ್ ಎಂಬ ಮುಸ್ಲಿಂ ಸಂತನ ಸೇವೆ ಮಾಡಿ ಇವನನ್ನು ಪಡೆದರೆಂದೂ ಆದ್ದರಿಂದ ಇವನಿಗೆ ಅಬುಲ್ ಪಹತ್ ಟೀಪೂ ಸಾಹಿಬ್ ಎಂದೇ ನಾಮಕರಣ ಮಾಡಿದರೆಂದೂ ಹೇಳಲಾಗಿದೆ. ತಂದೆ ಹೈದರ್ ಅಲೀ ಅನಕ್ಷರಸ್ಥನಾಗಿದ್ದರೂ ಮಗನಿಗೆ ಸೂಕ್ತವಾದ ಶಿಕ್ಷಣ ಕೊಡಿಸಿದ. ಟೀಪೂವಿಗೆ ಅರಬ್ಬಿ, ಪಾರ್ಸಿ, ಉರ್ದು, ಕನ್ನಡ ಭಾಷೆಗಳ ಪರಿಚಯವಿತ್ತು. ಕುದುರೆ ಸವಾರಿ ಮತ್ತು ಸಮರ ವಿದ್ಯೆಯಲ್ಲೂ ಇವನು ನಿಷ್ಣಾತನಾದ.
ಟೀಪೂ ಹದಿನೈದನೆಯ ವಯಸ್ಸಿನಿಂದಲೇ ತಂದೆಯೊಂದಿಗೆ ಅನೇಕ ಯುದ್ಧಗಳಲ್ಲಿ ಭಾಗವಹಿಸತೊಡಗಿದ. ಇಂಗ್ಲಿಷರೊಡನೆ ನಡೆದ ಒಂದನೆಯ ಮೈಸೂರು ಯುದ್ಧದಲ್ಲೂ (1767-69) ಮರಾಠರೊಡನೆ ನಡೆದ ಯುದ್ಧದಲ್ಲೂ (1769-72) ಭಾಗವಹಿಸಿ ತನ್ನ ಸಾಮರ್ಥ್ಯವನ್ನು ತೋರಿಸಿದ. 1780ರಲ್ಲಿ ಆರಂಭವಾದ ಎರಡನೆಯ ಆಂಗ್ಲ-ಮೈಸೂರು ಯುದ್ಧದಲ್ಲಿ ಬೇಲಿಯನ್ನು ಪರಾಭವಗೊಳಿಸುವುದರಲ್ಲಿ ತಂದೆಗೆ ಸಹಾಯ ನೀಡಿದ. 1782ರಲ್ಲಿ ತಂಜಾವೂರಿನಲ್ಲಿ ನಡೆದ ಕದನದಲ್ಲಿ ಬ್ರೇತ್‍ವೇಟ್ ಇವನಿಂದ ಭಾರಿ ಸೋಲನ್ನನುಭವಿಸಬೇಕಾಯಿತು. ಮಲಬಾರ್ ಪ್ರದೇಶದ ಮೇಲೆ ಇಂಗ್ಲಿಷರು ಆಕ್ರಮಣ ನಡೆಸಿದ್ದರಿಂದ ಇವನು ಅನಂತರ ಅಲ್ಲಿಗೆ ಹೋಗಬೇಕಾಯಿತು. ಅಲ್ಲಿ ಇವನು ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ, ಹೈದರ್ ತೀರಿಕೊಂಡನೆಂಬ (ಡಿಸೆಂಬರ್ 7, 1782) ಸುದ್ದಿ ತಲುಪಿತು. ಪೆನ್ನಾರ್ ನದಿಯ ದಂಡೆಯಲ್ಲಿದ್ದ ಹೈದರನ ಶಿಬಿರಕ್ಕೆ ಇವನು ಕೂಡಲೇ ಪ್ರಯಾಣ ಮಾಡಿ ಅಲ್ಲಿಯ ಸೂತ್ರಗಳನ್ನು ವಹಿಸಿಕೊಂಡ. ಇವನಿಗೆ 88,000 ಸೈನಿಕರಿದ್ದ ಸೈನ್ಯವನ್ನೂ ಮೂರು ಕೋಟಿ ರೂಪಾಯಿಗಳ ಖಜಾನೆಯನ್ನೂ ಹೈದರನ ಆಪ್ತನಾಗಿದ್ದ ಪೂರ್ಣಯ್ಯ ಒಪ್ಪಿಸಿ, ಹೈದರನ ಅಂತಿಮ ಸಂದೇಶವನ್ನು ತಿಳಿಸಿ, ಇವನಿಗೆ ಸರ್ವಾಧಿಕಾರಿಯ ಪಟ್ಟಗಟ್ಟಿದ. ಟೀಪೂ ಇಂಗ್ಲಿಷರೊಡನೆ ಯುದ್ಧವನ್ನು ಮುಂದುವರಿಸಿದ. ಜನರಲ್ ಸ್ಟೂಯರ್ಟನ ಸೇನೆ ಮುಂದುವರಿಯುತ್ತಿದ್ದ ಸುದ್ದಿಯನ್ನು ತಿಳಿದು ಅವನ ಮೇಲೆ ಕದನ ನಡೆಸಿ ಅವನನ್ನು ವಂಡಿವಾಷ್ ಬಳಿ ಸೋಲಿಸಿದ. ಈ ಕದನವನ್ನು ಮುಂದುವರಿಸಲಾಗಲಿಲ್ಲ. ಪಶ್ಚಿಮ ಕರಾವಳಿಯಲ್ಲಿ ಇಂಗ್ಲಿಷರು ಆಕ್ರಮಣ ಮುಂದುವರಿಸುತ್ತಿದ್ದ ಸುದ್ಧಿ ತಿಳಿದು ಅಲ್ಲಿಗೆ ಹೋಗಿ ಹಲವು ಪ್ರದೇಶಗಳನ್ನು ಮತ್ತೆ ಗೆದ್ದು ಇಂಗ್ಲಿಷರ ವಶದಲ್ಲಿದ್ದ ಮಂಗಳೂರು ಬಂದರನ್ನು ಬಿಡಿಸಿಕೊಂಡ. ಕೊನೆಗೆ ಇಂಗ್ಲಿಷರೂ ಟೀಪುವೂ ಪರಸ್ಪರ ಹಿಡಿದುಕೊಂಡಿದ್ದ ಪ್ರದೇಶಗಳನ್ನು ಹಿಂದಿರುಗಿಸತಕ್ಕದ್ದೆಂದು 1784ರ ಮಾರ್ಚ್ 11 ಎಂದು ಒಪ್ಪಂದವಾಯಿತು.
ಟೀಪೂ ಅಧಿಕಾರಕ್ಕೆ ಬಂದಕೂಡಲೇ ತನ್ನದು ದೈವದತ್ತ ಸರ್ಕಾರ ಎಂದು ಘೋಷಿಸಿ, ಬಾದಷಹನೆಂಬ ಬಿರುದು ತಳೆದು, ಮೈಸೂರು ದೊರೆಗಳಿಗೆ ಮೀಸಲಾಗಿದ್ದ 21 ತೋಪುಗಳ ಮರ್ಯಾದೆಯನ್ನೂ ನಜರನ್ನೂ ಸ್ವೀಕರಿಸಿದ. ತಾನು ಸ್ವತಂತ್ರ ಸುಲ್ತಾನನೆಂದು ಸಾರಿಕೊಂಡ. ಇದನ್ನು ವಿರೋಧಿಸಿ ಪಿತೂರಿ ಮಾಡಿದ ಅಂಚೆ ಶಾಮಯ್ಯನನ್ನೂ ಅನಂತರ ತೋಷಿಖಾನೆ ಕೃಷ್ಣರಾಯನನ್ನೂ ಕೊಲ್ಲಿಸಿದ. ತಿರುಮಲರಾಯ ಬಂಧುಗಳ ಮೂಲಕ ಮಹಾರಾಣಿ ಲಕ್ಷ್ಮಮ್ಮಣ್ಣಿ ಇಂಗ್ಲಿಷರೊಡನೆ ಸಂಧಾನ ನಡೆಸುತ್ತಿರುವಳೆಂದು ಕೇಳಿ ಮೈಸೂರು ಅರಮನೆಯಲ್ಲಿ ಇದ್ದ ರಾಣಿಯನ್ನೂ ರಾಜಕುಮಾರ ಕೃಷ್ಣರಾಜನನ್ನೂ ಶ್ರೀರಂಗಪಟ್ಟಣದಲ್ಲಿ ಇರಿಸಿದ.
ಟೀಪೂ ಇಂಗ್ಲಿಷರೊಡನೆ ಯುದ್ಧ ನಡೆಸಬೇಕಾಗಿ ಬಂದಿದ್ದ ಪರಿಸ್ಥಿತಿಯ ದುರುಪಯೋಗವನ್ನು ಪಡೆದುಕೊಂಡ ಅನೇಕ ಪಾಳೆಯಗಾರರು ಸ್ವತಂತ್ರರಾಗಲು ಪ್ರಯತ್ನ ನಡೆಸಿದರು. ಟೀಪೂ ಅವರನ್ನು ಹತ್ತಿಕ್ಕುವುದು ಅವಶ್ಯವಾಯಿತು. ಮಂಜರಾಬಾದಿನ ಬಳಿಯ ಬಲಮ್ ರಾಜನನ್ನೂ ಕೊಡಗಿನಲ್ಲಿ ಎದ್ದಿದ್ದ ಪ್ರತಿಭಟನೆಯನ್ನೂ ಅಡಗಿಸುವುದು ಕಷ್ಟವಾಗಲಿಲ್ಲ. ಆದರೆ ಕಪ್ಪ ಕೊಡದಿದ್ದ ನರಗುಂದದ ದೇಸಾಯಿಯನ್ನು ಮಣಿಸುವುದಕ್ಕೆ ಯತ್ನಿಸಿದಾಗ ಅವನಿಗೆ ಬೆಂಬಲವಾಗಿದ್ದ ಮರಾಠರನ್ನು ಕೆಣಕಿದಂತಾಯಿತು. ಮರಾಠರಿಂದ ಹೈದರ್ ಗೆದ್ದುಕೊಂಡಿದ್ದ ಕೃಷ್ಣಾನದಿಯ ದಕ್ಷಿಣದ ಭಾಗವನ್ನು ಮತ್ತೆ ವಶಪಡಿಸಿಕೊಳ್ಳಲು ಸಮಯ ಕಾಯುತ್ತಿದ್ದ ನಾನಾ ಫಡ್ನವೀಸ್ ಹೈದರಾಬಾದಿನ ನಿಜಾಮನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಂಡ. ಇವರ ಸೈನ್ಯಗಳು 1786ರ ಮೇ 1ರಂದು ಬಾದಾಮಿ ಮತ್ತು ಇತರ ಗಡಿಪ್ರದೇಶಗಳನ್ನು ಆಕ್ರಮಿಸಿದುವು. ಟೀಪೂ ಸುಲ್ತಾನ ಕೂಡಲೇ ಭಾರಿ ಸೇನೆಯೊಂದಿಗೆ ಅತ್ತ ಸಾಗಿ ಆದೋನಿಯನ್ನು ಆಕ್ರಮಿಸಿಕೊಂಡು ತುಂಗಭದ್ರೆಯನ್ನು ದಾಟಿ ಮುಂದುವರಿದ. ಒಂಬತ್ತು ತಿಂಗಳುಗಳ ಕಾಲ ನಡೆಸಿದ ಕದನದಲ್ಲಿ ಇವನದೇ ಮೇಲುಗೈ ಆಗಿತ್ತು. ಆದರೆ ಮಂಗಳೂರು ಕೌಲಿನಿಂದ ತಮಗೆ ಅವಮಾನವಾಯಿತೆಂದು ಭಾವಿಸಿದ್ದ ಇಂಗ್ಲಿಷರು ಟೀಪುವಿನೊಂದಿಗೆ ಯುದ್ಧಕ್ಕಾಗಿ ಕಾಲುಕೆರೆಯುತ್ತಿದ್ದರು. ಈ ಸಮಯದಲ್ಲಿ ಮರಾಠರೊಂದಿಗೂ ನಿಜಾಮನೊಂದಿಗೂ ವಿರಸ ಬೆಳೆಸುವುದು ತರವಲ್ಲವೆಂದು ಟೀಪೂ ಭಾವಿಸಿದ. ಇಂಗ್ಲಿಷರನ್ನು ಸೋಲಿಸಿ ಓಡಿಸಲು ತಾವೆಲ್ಲ ಒಗ್ಗಟ್ಟಿನಿಂದ ಇರಬೇಕೆಂಬ ಉದ್ದೇಶದಿಂದ ಇವನು ಅವರೊಂದಿಗೆ ಒಪ್ಪಂದ ಮಾಡಿಕೊಂಡು ನರಗುಂದ, ಕಿತ್ತೂರು ಮತ್ತು ಬಾದಾಮಿಯನ್ನು ಒಪ್ಪಿಸಿದ. ಆದರೆ ಟೀಪುವಿನ ಬಲವನ್ನು ಮುರಿಯಬೇಕೆಂದು ಇಂಗ್ಲಿಷರು ಹೊಂಚು ಕಾಯುತ್ತಲೇ ಇದ್ದರು. ಇಂಗ್ಲಿಷರ ಮಿತ್ರನಾಗಿದ್ದ ತಿರುವಾಂಕೂರು ರಾಜನ ಮೇಲೆ ಟೀಪೂ ಆಕ್ರಮಣ ನಡೆಸಿದಾಗ, ಇವನ ಮೇಲೆ ಯುದ್ಧ ಮಾಡಲು ಇಂಗ್ಲಿಷರಿಗೆ ಒಂದು ನೆವ ದೊರಕಿದಂತಾಯಿತು. ಟೀಪುವಿನ ವಿರುದ್ಧ ಅವರು ಮರಾಠರನ್ನೂ ನಿಜಾಮನನ್ನೂ ಎತ್ತಿಕಟ್ಟಿದರು. ಟೀಪೂ ತಮ್ಮೆಲ್ಲರಿಗೂ ಮಹಾ ಅಪಾಯಕಾರಿ ಶತ್ರು. ಎಂದು ಅವರಿಗೆ ಬೋಧಿಸಿದರು. ಗವರ್ನರ್-ಜನರಲ್ ಕಾರ್ನ್‍ವಾಲಿಸನ ಕುತಂತ್ರವನ್ನು ಬೇಹುಗಾರರಿಂದ ಅರಿತುಕೊಂಡ ಟೀಪೂ ಸಾಹೇಬ ಮರಾಠರ ಬಳಿಗೂ ನಿಜಾಮನ ಆಸ್ಥಾನಕ್ಕೂ ತನ್ನವರನ್ನು ಕಳಿಸಿ, ಅವರ ತಂತ್ರವನ್ನು ಮುರಿಯಲು ಯತ್ನಿಸಿದ. ಆದರೆ ಇವನ ಪ್ರಯತ್ನ ಫಲಿಸಲಿಲ್ಲ.
ಇಂಗ್ಲಿಷರ ಕಡೆಗೆ ಮರಾಠರೂ ನಿಜಾಮನೂ ಸೇರಿದಾಗ ಅವರ ಎದುರು ಟೀಪುವಿನ ಬಲ ಕಡಿಮೆಯಾಯಿತು.
ಲಾರ್ಡ್ ಕಾರ್ನ್‍ವಾಲಿಸ್ ಮರಾಠರ ಹಾಗೂ ನಿಜಾಮನ ಸೈನ್ಯ ಸಹಾಯದೊಡನೆ ಹೊರಟು ಬೆಂಗಳೂರಿನ ಮೇಲೆ ದಾಳಿಯಿಟ್ಟು ಅದನ್ನು 1791ರಲ್ಲಿ ವಶಪಡಿಸಿಕೊಂಡ. ಮುಂದೆ ಕಾರ್ನ್‍ವಾಲಿಸ್ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದ. ಟೀಪೂ ಬೇರೆ ದಾರಿಯಿಲ್ಲದೆ ತನ್ನ ಸರ್ವನಾಶವನ್ನು ತಪ್ಪಿಸಿಕೊಳ್ಳಲು ಇಂಗ್ಲಿಷರೊಡನೆ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಒಪ್ಪಂದದ ಷರತ್ತುಗಳಂತೆ ಸುಲ್ತಾನ ತನ್ನ ರಾಜ್ಯದ ಅರ್ಧಭಾಗವನ್ನು ಶತ್ರುಗಳಿಗೆ ಬಿಟ್ಟುಕೊಡಬೇಕಾಯಿತು. ಯುದ್ಧದ ವೆಚ್ಚಕ್ಕೆಂದು ಮೂರು ಕೋಟಿ ಮೂವತ್ತು ಲಕ್ಷ ರೂಪಾಯಿಗಳ ದಂಡ ತೆರಬೇಕಾಯಿತು. ಇದು ಪಾವತಿಯಾಗುವವರೆಗೆ ತನ್ನ ಇಬ್ಬರು ಮಕ್ಕಳಾದ ಅಬ್ದುಲ್ ಮಲ್ಲಿಕ್ ಮತ್ತು ಮೊಹದೀನ್‍ರನ್ನು ಇಂಗ್ಲಿಷರಲ್ಲಿ ಒತ್ತೆ ಇಡಬೇಕಾಯಿತು. ಮೈಸೂರು ಹುಲಿ ಎನಿಸಿದ್ದ ಟೀಪೂ ಸುಲ್ತಾನನಿಗೆ ಇದು ತೊಡೆಯಾಲಾಗದ ಅಪಮಾನವೆನಿಸಿತು. ಮಕ್ಕಳನ್ನು ಶತ್ರುಗಳಿಂದ ಬಿಡಿಸಿಕೊಂಡ ಮೇಲೆ ಇಂಗ್ಲಿಷರನ್ನು ಭಾರತದ ನೆಲದಿಂದ ಓಡಿಸಲು ಸಂಕಲ್ಪ ಮಾಡಿದ. ತನ್ನ ಈ ಕಾರ್ಯದಲ್ಲಿ ನೆರವಾಗಲು ಅನೇಕ ದೇಶೀಯ ಅರಸರೊಡನೆ ಪತ್ರವ್ಯವಹಾರ ಬೆಳೆಸಿದ. ಆಫ್ಘಾನಿಸ್ಥಾನದ ಜಮಾನ್ ಷಾ ಬಳಿಗೂ ಫ್ರಾನ್ಸಿನ ನೆಪೋಲಿಯನನ ಬಳಿಗೂ ರಾಯಭಾರಿಗಳನ್ನು ಕಳುಹಿಸಿ ಅವರ ನೆರವನ್ನು ಯಾಚಿಸಿದ. ಶ್ರೀರಂಗಪಟ್ಟಣದಲ್ಲಿ ಮಾರಿಷಸ್ ದ್ವೀಪದಿಂದ ಬಂದ ಫ್ರೆಂಚರ ನೆರವಿನಿಂದ ಜಾಕೊಬಿನ್ ಕ್ಲಬ್ ಸ್ಥಾಪಿಸಿ. ನೆಪೋಲಿಯನ್ ಟೀಪೂಸುಲ್ತಾನನಿಗೆ ನೆರವಾಗಲು ತನ್ನ ಸೈನ್ಯದೊಡನೆ ಹೊರಟು ಬರುವುದಾಗಿ ಆಶ್ವಾಸನವಿತ್ತು ನೈಲ್ ನದಿಯ ಯುದ್ಧಕ್ಕೆ ಮೊದಲು ಒಂದು ಪತ್ರವನ್ನೂ ಬರೆದಿದ್ದ. ಆದರೆ ನೈಲ್ ನದಿಯ ಯುದ್ಧದಲ್ಲಿ ನೆಪೋಲಿಯನ್ ನೆಲ್ಸನನಿಗೆ ಸೋತು ಹಿಮ್ಮೆಟ್ಟಬೇಕಾಯಿತು. ಫ್ರೆಂಚರ ನೆರವಿನಿಂದ ಇಂಗ್ಲಿಷರನ್ನು ಭಾರತದಿಂದ ಅಟ್ಟುವ ಟೀಪೂ ಸುಲ್ತಾನನ ಕನಸು ಕನಸಾಗಿಯೇ ಉಳಿಯಿತು.
ಇಂಗ್ಲಿಷರ ಆಶ್ರಿತನಾಗಿರಲು ಒಪ್ಪದ ಟೀಪುವಿನ ಮೇಲೆ ಯುದ್ಧ ಮಾಡಲು ಲಾರ್ಡ್ ವೆಲೆಸ್ಲಿ ತೀರ್ಮಾನಿಸಿ, ಮೈಸೂರಿನ ಮೇಲೆದಂಡೆತ್ತಿ ಹೋಗಲು ಜನರಲ್ ಹ್ಯಾರಿಸನಿಗೆ ಆಜ್ಞೆ ನೀಡಿದ. ಮರಾಠರೂ ನಿಜಾಮನೂ ಇಂಗ್ಲಿಷರಿಗೆ ನೆರವಾದರು. ಸಿದ್ಧೇಶ್ವರ, ಮಳವಳ್ಳಿಯ ಬಳಿಯ ಕದನಗಳಲ್ಲಿ ಟೀಪೂವಿಗೆ ಸೋಲಾಯಿತು. ಇಂಗ್ಲಿಷರು ಶ್ರೀರಂಗಪಟ್ಟಣದ ಕೋಟೆಗೆ ಮುತ್ತಿಗೆ ಹಾಕಿದರು. ಪೂರ್ವದಿಕ್ಕಿನಿಂದ ಅದನ್ನು ಪ್ರವೇಶಿಸಿದರು. ಈ ಸುದ್ಧಿಯನ್ನು ಕೇಳಿದಾಗ, ಮಧ್ಯಾಹ್ನದ ಊಟಕ್ಕೆ ಕುಳಿತಿದ್ದ ಟೀಪೂ ಸುಲ್ತಾನ ನಡುವೆಯೇ ಎದ್ದು ಕೋಟೆಯ ರಕ್ಷಣೆಗೆ ಧಾವಿಸಿದ. ಅವನು ತನ್ನ ಸೈನಿಕರನ್ನು ಹುರಿದುಂಬಿಸುತ್ತ. ಕತ್ತಿ ಹಿರಿದು ಹೋರಾಡುತ್ತಲೇ ಶತ್ರುಗಳ ಗುಂಡಿಗೆ ಬಲಿಯಾಗಿ ನೆಲಕ್ಕುರುಳಿದ (1799ರ ಮೇ 4). ಸಾಮಾನ್ಯ ಸೈನಿಕರಂತೆ ಹೋರಾಡಿ ಮಡಿದ ಸುಲ್ತಾನನ ಪಾರ್ಥಿವ ದೇಹವನ್ನು ಹುಡುಕಿ ತೆಗೆಯುವುದೇ ಇಂಗ್ಲಿಷ್ ಸೈನಿಕರಿಗೆ ಕಷ್ಟವಾಯಿತು.
ಟೀಪೂ ಮರಣವನ್ನು ಅಪ್ಪಿದ ಅನಂತರ ಇವನ ರಾಜ್ಯದ ಒಂದು ಭಾಗವನ್ನು ಇಂಗ್ಲಿಷರೂ ಮರಾಠರೂ ನಿಜಾಮನೂ ತಮ್ಮಲ್ಲೇ ಹಂಚಿಕೊಂಡು ಉಳಿದ ಭಾಗವನ್ನು ಮೈಸೂರು ಅರಸು ಮನೆತನದವರಿಗೆ ಕೊಟ್ಟರು.
On the birth anniversary of Tippu Sultan
Great blog and great reads sir!
ಪ್ರತ್ಯುತ್ತರಅಳಿಸಿYelladaru iru yentadaru iru endendigu nee kannadavagiru!