ಎಸ್.ಜಿ. ಸಿದ್ಧರಾಮಯ್ಯ
ಎಸ್.ಜಿ. ಸಿದ್ಧರಾಮಯ್ಯ
ಪ್ರೊ. ಎಸ್.ಜಿ. ಸಿದ್ಧರಾಮಯ್ಯನವರು ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ಕನ್ನಡ ಆಡಳಿತಗಾರರಾಗಿ ಹೆಸರಾದವರು.
ಎಸ್.ಜಿ. ಸಿದ್ಧರಾಮಯ್ಯನವರು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ 1946ರ ನವೆಂಬರ್ 19ರಂದು ಜನಿಸಿದರು. ತಂದೆ ಗುರುಭಕ್ತಯ್ಯ. ತಾಯಿ ರೇವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದು ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ನಡೆಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.
ಎಸ್.ಜಿ. ಸಿದ್ಧರಾಮಯ್ಯನವರು ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ, ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿದರು. ತುಮಕೂರು ಸ್ನಾತಕೋತ್ತರ ಕೇಂದ್ರದ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.
ಎಸ್.ಜಿ. ಸಿದ್ಧರಾಮಯ್ಯನವರು ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ ಕಲ್ಪಿಸಿದರು. ವಿದ್ಯಾರ್ಥಿಗಳಲ್ಲಿ ವಾಚನಾಭಿವೃದ್ಧಿಗಾಗಿ ಅನೇಕ ರೀತಿಯ ಕಮ್ಮಟಗಳನ್ನು ನಡೆಸಿದರು. ವನಮಹೋತ್ಸವದಂತಹ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಾವಿರಾರು ಸಸಿಗಳನ್ನು ನೆಡುವ ಜಾಗೃತಿ ವ್ಯವಸ್ಥೆ ಮಾಡಿದರು. ರಾಷ್ಟ್ರೀಯ ಸೇವಾಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯದತ್ತ ಆಸಕ್ತರಾಗಿದ್ದ ಸಿದ್ಧರಾಮಯ್ಯನವರಿಗೆ ಮೊದಲಿನಿಂದಲೂ ನಾಟಕ ರಚನೆಯಲ್ಲಿ ವಿಶೇಷ ಒಲವು. ಕರ್ಣನಂತಹ ದುರಂತ ಪಾತ್ರಗಳಲ್ಲಿ ಅವರಲ್ಲಿ ತಲ್ಲೀನತೆ ಇತ್ತು. ವಿದ್ಯಾರ್ಥಿಯಾಗಿದ್ದಾಗಲೇ ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡಿದ್ದ ಅವರಿಗೆ ಎಚ್.ಜಿ. ಸಣ್ಣಗುಡ್ಡಯ್ಯ ಮುಂತಾದವರ ಮಾರ್ಗದರ್ಶನ ದೊರೆತಿತ್ತು. ‘ಗಾಲ್ ಉಬ್ಬಿನ ಮೇಲೆ’, ‘ಕಾಡುವ ಬೇಲಿ ಹೂ’, ‘ಅವಳೆದೆಯ ಜಂಗಮ’, ‘ಸೊಲ್ಲು ಫಲವಾಗಿ’, ‘ಮರು ಜೇವಣಿ’, ‘ಕರೆಬಳಗ’ ಮುಂತಾದವು ಇವರ ಕಾವ್ಯ ಸಂಕನಗಳು. ಇವರ ಕವಿತೆಗಳ ಸಮಗ್ರ ಸಂಪುಟಗಳು ಪ್ರಕಟಗೊಂಡಿವೆ. ಸಾಲಾವಳಿ, ಕೇಡಿಲ್ಲವಾಗಿ, ಎಡೆಕುಂಟೆ ಗೆಣೆಸಾಲು, ನಿಶ್ಯಬ್ದದ ಜಾಡು, ಅಂಬಿಗರ ಚೌಡಯ್ಯ - ಒಂದು ಅಧ್ಯಯನ, ವಚನ ಸಂಸ್ಕೃತಿ - ಸಾಹಿತ್ಯ ಸಂಗಾತಿ, ಬಿಜ್ಜಳ ನ್ಯಾಯ ಮತ್ತು ಇತರ ಖಂಡ ಕಾವ್ಯಗಳು
ಮುಂತಾದವು ವಿಮರ್ಶಾಕೃತಿಗಳು. ದಂಡೆ, ನೆತ್ತಮನಾಡಿ, ದಾಳ ಮುಂತಾದವು ನಾಟಕಗಳು. ನೆನಪು ದಾಯಾದಿ, ಮಬ್ಬಿನಿಂದ ಇಬ್ಬನಿಗೆ ನೆನಪಿನ ಪುಟಗಳು, ಸಾಂದರ್ಭಿಕ, ಕನ್ನಡ - ಭಾಷೆ ಬದುಕು, ಅಶಾಂತಿ ಪರ್ವ, ದಕ್ಕದ ದಾರಿಯಲ್ಲಿ, ಬಳಿಸಾಲು ಬಳಗ, ಯರೆಬೇವು ಆತ್ಮಕಥನ ಮುಂತಾದವು ಇವರ ಬರಹ ವೈವಿಧ್ಯಗಳಲ್ಲಿ ಸೇರಿವೆ.
ಇವರು ಕುರುಬರ ಮದುವೆಯ ಪದಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ.
ಎಸ್.ಜಿ. ಸಿದ್ಧರಾಮಯ್ಯನವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 1996 ಮತ್ತು 2000ದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಸೊಲ್ಲು ಫಲವಾಗಿ ಕೃತಿಗೆ ಪು.ತಿ.ನ ಕಾವ್ಯ ಪ್ರಶಸ್ತಿ, ಕರೆಬಳಗ ಕೃತಿಗೆ ಜಿ.ಎಸ್.ಎಸ್ ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಎಸ್.ಜಿ. ಸಿದ್ಧರಾಮಯ್ಯ ಅವರು 2016ರಿಂದ 2019ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of writer, professor and administrator Sg Siddaramaiah Sir 🌷🙏🌷

ಕಾಮೆಂಟ್‌ಗಳು