ವೇಣುಗೋಪಾಲ ಸೊರಬ
ವೇಣುಗೋಪಾಲ ಸೊರಬ
ವೇಣುಗೋಪಾಲ ಸೊರಬ ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರಾಗಿ ಪ್ರಖ್ಯಾತರು.
ವೇಣುಗೋಪಾಲ ಸೊರಬರು 1937ರ ನವೆಂಬರ್ 29ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ರಾಮರಾವ್ ಸೊರಬ. ತಾಯಿ ಸೀತಾಬಾಯಿ. ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾದ ವೇಣುಗೋಪಾಲ ಸೊರಬ ಅವರು ದೊಡ್ಡಕ್ಕ ವೆಂಕಮ್ಮ ಹಾಗೂ ಭಾವನವರಾದ ಶ್ರೀನಿವಾಸಾಚಾರ್ ಅವರುಗಳ ಆರೈಕೆಯಲ್ಲಿ ಬೆಳೆದರು. ಅವರ ಪ್ರಾರಂಭಿಕ ಶಿಕ್ಷಣ ಚಳ್ಳಕೆರೆ ಹಾಗೂ ಹರಿಹರದಲ್ಲಿ ನಡೆಯಿತು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಶಿಕ್ಷಣ ಪಡೆದನಂತರ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಹಾಗೂ ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ವೇಣುಗೋಪಾಲ ಸೊರಬರು 1965ರಲ್ಲಿ ಕನಕಪುರ ರೂರಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇರಿ ಸುಮಾರು 25 ವರ್ಷಗಳ ಸೇವೆ ಸಲ್ಲಿಸಿ, ನಂತರ ಎನ್.ಎಂ.ಕೆ.ಆರ್.ವಿ. ಮಹಿಳಾ ಕಾಲೇಜಿನಲ್ಲಿ ತಮ್ಮ ಜೀವಿತಾವಧಿಯ ಮುಂಚಿನ ಕೆಲವರ್ಷ ಸೇವೆ ಸಲ್ಲಿಸಿದರು. ನಿವೃತ್ತಿ ವಯಸ್ಸು ತಲುಪುವ ಮೊದಲೇ ಅವರು ಈ ಲೋಕದಿಂದ ಹೊರನಡೆದರು.
ಶಾಲಾ ಕಾಲೇಜಿನ ದಿನಗಳಿಂದಲೂ ಕವನ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ವೇಣುಗೋಪಾಲ ಸೊರಬರು 1959ರಲ್ಲಿ ‘ದತ್ತಾವತರಣ’ ಎಂಬ ಕವನ ರಚಿಸಿ ಬೇಂದ್ರೆಯವರಿಂದ ಮೆಚ್ಚುಗೆ ಪಡೆದಿದ್ದರು. ಇವರ ಮೊದಲ ಕವನ ಸಂಕಲನ 'ಮುಸುಕು – ನಸುಕು' ಪ್ರಕಟವಾದದ್ದು 1966ರಲ್ಲಿ. ಸುಮಾರು ಮೂರು ದಶಕಗಳ ಇವರ ಸಾಹಿತ್ಯ ಕೃಷಿಯಲ್ಲಿ ಹನ್ನೆರಡು ಕವಿತಾ ಸಂಕಲನಗಳು, ಐದು ಕಾದಂಬರಿಗಳು, ಒಂದು ಕಥಾ ಸಂಕಲನ, ಒಂದು ಪ್ರಬಂಧ ಸಂಕಲನ, ಮಕ್ಕಳ ಸಾಹಿತ್ಯ ಕೃತಿಗಳೂ ಸೇರಿ ಸುಮಾರು ಇಪ್ಪತ್ತೈದು ಕೃತಿಗಳು ಮೂಡಿಬಂದವು.
ವೇಣುಗೋಪಾಲ ಸೊರಬರ ‘ಧಾರೆ’ ಕವನ ಸಂಕಲನ, ಗಂಡು ಹೆಣ್ಣಿನ ಅಂತರಂಗದ ಸಂಬಂಧಗಳನ್ನು ಅಭಿವ್ಯಕ್ತಿ ಪಡಿಸುತ್ತ, ಹೊಸತನವನ್ನು ತೋರುತ್ತಾ ಸಾಗಿದರೆ, ‘ಪ್ರಮೇಯ’ ಸಂಕಲನ ವಿನೂತನ ರೀತಿಯಲ್ಲಿ ಚಿರಂತನ ಪ್ರೇಮವನ್ನು ನಿರೂಪಿಸುತ್ತದೆ. ‘ಮಾನವಿ’ ಕೂಡಾ ಅವರ ಪ್ರಮುಖ ಕಾವ್ಯ ಕೃತಿಯಾಗಿದ್ದು ಪೂರ್ವ ಪಶ್ಚಿಮಗಳ ವಿವಿಧ ಪಾತ್ರಗಳ ವಿಶಿಷ್ಟ ನೋಟದಿಂದ ಕೂಡಿದೆ. ಪಶ್ಚಿಮದ ಪಾತ್ರಗಳ ಒಳನೋಟಗಳನ್ನು ತೆರೆದಿಡುವ ಒಫಿಲಿಯ, ಮಿರಾಂಡ, ಡೆಸ್ಡಿಮೋನ, ಕ್ಲಿಯೋಪಾತ್ರ ಕಾವ್ಯಚಿತ್ರಣಗಳು ಒಂದು ಬಗೆಯಾದರೆ ಪೂರ್ವದ ಪಾತ್ರಗಳಾದ ಸೀತಾ, ಸಾವಿತ್ರಿ, ದ್ರೌಪದಿ, ಶಕುಂತಲೆ, ಮಹಾದೇವಿಯಕ್ಕ ಮುಂತಾದವರುಗಳ ಮನಸ್ಸಿನಾಳದಲ್ಲಿ ನಡೆಯುವ ತುಮುಲಗಳು ಮತ್ತೊಂದು ತೆರನಾದದ್ದು. ಮಿರಾಂಡ, ಕ್ಲಿಯೋಪಾತ್ರಳ ರೂಪ ಸೌಂದರ್ಯರಾಶಿಯನ್ನು ಚಿತ್ರಿಸುತ್ತಲೇ ಸೀತಾ – ಸಾವಿತ್ರಿಯರು ಪರಂಪರಾನುಗತವಾಗಿ ರೂಢಿಸಿಕೊಂಡಿರುವ ಸಾತ್ವಿಕ ಗುಣಗಳನ್ನೂ ಚಿತ್ರಿಸಿದ್ದಾರೆ. ಮಾಸ್ತಿ, ಕಾರಂತ, ಗೋಕಾಕ, ಕುವೆಂಪು, ಪುತಿನ, ವಿಸೀ, ಕೆಎಸ್ನ ಮೊದಲಾದ ಹಿರಿಯ ಕವಿಗಳ ಜೊತೆಗೆ ಹೊಸ ಪೀಳಿಗೆಯ ಹಲವಾರು ಕವಿಗಳ ವ್ಯಕ್ತಿ ಚಿತ್ರಗಳನ್ನು ಕವನ ರೂಪದಲ್ಲಿ ಸೆರೆಹಿಡಿದು ಪ್ರತಿಬಿಂಬವಾಗಿ ತೋರಿಸಿರುವ ಇವರ ಕವಿತೆಗಳ ಸಂಕಲನ ‘ಬಿಂಬ’. ಇದೊಂದು ವಿಶಿಷ್ಟ ಕೃತಿಯಾಗಿದ್ದು ಆಯಾಯ ವ್ಯಕ್ತಿಗಳು ಇವರ ಮನಸ್ಸಿನ ಮೇಲೆ ಬೀರಿದ ಪ್ರಭಾವವನ್ನು ಚಿತ್ರಿಸಿದ್ದಾರೆ. ಸೊರಬರ ಇತರ ಕವಿತಾ ಸಂಕಲನಗಳಲ್ಲಿ ಜೀವ ಜೀವಂತ, ಲೂಸಿ, ಸವಾಲು, ಸುಳ್ಳು ಬುರುಕಿ, ಹೂ ಹಿಗ್ಗು , ಅನುವಾದ ಸಂಕಲನ ‘ಜನ್ಮ ಜ್ಯೋತಿ’ (ಯಶೋಧರ ಗೋಪಾಲ್ ರಾವ್ ಅವರ ಇಂಗ್ಲಿಷ್ ಕವಿತೆಗಳ ಅನುವಾದ) ಮುಂತಾದವು ಸೇರಿವೆ.
ವೇಣುಗೋಪಾಲ ಸೊರಬರು ಆಕಾಶವಾಣಿಯ ಅಂತಾರಾಷ್ಟ್ರೀಯ ಜಾಲದಲ್ಲಿ ‘ರೆಯ್ನಿ ಸೀಸನ್ ಇನ್ ಕನ್ನಡ ಪೊಯೆಟ್ರಿ’ ಎಂಬ ವಿಷಯದ ಬಗ್ಗೆ ಇಂಗ್ಲಿಷಿನಲ್ಲಿ ಭಾಷಣ ಮಾಡಿ ಹೆಸರು ಗಳಿಸಿದ್ದರು. ಏಷಿಯನ್ ಬಯೋಗ್ರಾಫಿಕಲ್ ಸೊಸೈಟಿಯ ವಾರ್ಷಿಕ ಗ್ರಂಥದಲ್ಲೂ ಇವರ ಹೆಸರು ಸೇರ್ಪಡೆಯಾಗಿತ್ತು. ಅವರು ಐ.ಸಿ.ಸಿ.ಆರ್. ಹೊರತಂದ ‘ಇಂಡಿಯನ್ ಪೊಯೆಟ್ರಿ ಟುಡೇ’ ಪುಸ್ತಕದಲ್ಲಿ ಕನ್ನಡ ಕವಿತೆಗಳನ್ನು ಇಂಗ್ಲಿಷ್ಗೆ ಭಾಷಾಂತರಿಸಿ ಕನ್ನಡೇತರರೂ ಕನ್ನಡ ಕವಿತೆಗಳನ್ನು ಗಮನಿಸುವಂತೆ ಮಾಡಿದ್ದರು.
ವೇಣುಗೋಪಾಲ ಸೊರಬರು ಆಗಾಗ್ಗೆ ಹಲವಾರು ಕಥೆ, ಪ್ರಬಂಧಗಳನ್ನು ರಚಿಸಿದ್ದರು. ‘ಉತ್ಸವ’ ಕಥಾ ಸಂಕಲನದಲ್ಲಿ ಹನ್ನೆರಡು ಕತೆಗಳಿವೆ. ಅವರು ಸುತ್ತು ಬಳಸು ಎಂಬ ಎರಡು ನೀಳ್ಗತೆಗಳನ್ನೂ ಪ್ರಕಟಿಸಿದ್ದರು. ಇವುಗಳು ವಸ್ತುವಿನ ಆಯ್ಕೆ, ನಿರೂಪಣಾ ತಂತ್ರ, ಶೈಲಿ ಇವುಗಳಿಂದ ಪ್ರಿಯವೆನಿಸುತ್ತವೆ.
ಸೊರಬರು ಕನಕಪುರದ ಕಾಲೇಜಿನಲ್ಲಿ ಸುಮಾರು ವರ್ಷಗಳ ಕಾಲ ಅಧ್ಯಾಪನದಲ್ಲಿ ತೊಡಗಿದ್ದಷ್ಟೇ ಅಲ್ಲದೇ ಕನಕಪುರ ತಾಲ್ಲೂಕಿನ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸಿ ತಾಲ್ಲೂಕಿನ ವಿಸ್ತೃತ ಮಾಹಿತಿ ಒದಗಿಸುವ ‘ಕನಕಪುರ ತಾಲ್ಲೂಕು ದರ್ಶನ’ ಕೃತಿ ರಚಿಸಿದರು. ಬಾಳಿನ ತಿರುಳನ್ನು, ಹಿರಿತನದ ಅನುಭವೋಕ್ತಿಗಳನ್ನು ಪದ ಪ್ರಯೋಗಕ್ಕೆ ಒಳಪಡಿಸಿ ಪ್ರತ್ಯುತ್ಪನ್ನತೆಗಳನ್ನು ಸ್ಫೋಟಿಸುವ ಇವರ ಕೃತಿ ‘ಸಮಕಾಲೀನ ಪಡೆ ನುಡಿ’. ಈ ಕೃತಿಯಲ್ಲಿ ಬಳಸಿರುವ ಭಾಷೆಗೆ ಮಾಂತ್ರಿಕತೆಯಿದೆ, ವಿಶೇಷ ಅರ್ಥಗಳಿವೆ.
ವೇಣುಗೋಪಾಲ ಸೊರಬರು ಐದು ಕಾದಂಬರಿಗಳನ್ನು ರಚಿಸಿದ್ದು, ಅವುಗಳಲ್ಲಿ ‘ಬಯಲಾಗದ ಜನ’ ಮೊದಲ ಕಾದಂಬರಿ. ಬದುಕು ಮತ್ತು ಕಲೆಯ ಅವಿಚ್ಛಿನ್ನ ಸಂಬಂಧವನ್ನು ನಿರೂಪಿಸುವ ಕೃತಿ ‘ಸರೀಕರು’. ಗಂಡು ಹೆಣ್ಣಿನ ಸ್ನೇಹ – ಪ್ರೀತಿಗಳ ದ್ವಂದವನ್ನು ಒರೆಹಚ್ಚುವುದು ‘ಅನಾಥ ಪ್ರಭು’. ಪ್ರಸಂಗ ಮತ್ತು ಸೋಲುಗಳೇ ಇಲ್ಲ ಇವರ ಇತರ ಎರಡು ಕಾದಂಬರಿಗಳು.
ವೇಣುಗೋಪಾಲ ಸೊರಬರು ಇಂಗ್ಲಿಷಿನಲ್ಲಿ ‘ಟೂ ಚಿಲ್ಡ್ರನ್ ಅಂಡ್ ಸಿಂಗಿಂಗ್ ಬರ್ಡ್’, ‘ಆನ್ ಆಂಥಾಲಜಿ ಆಫ್ ಕನ್ನಡ ಪೊಯೆಮ್ಸ್’ , 'ಹಾರ್ಡ್ ಟೈಮ್’ (ಸುಮತೀಂದ್ರ ನಾಡಿಗರೊಡನೆ ಅನುವಾದ), ಹೇಮಲತಾ ಜಾನ್ ಅವರೊಡನೆ ‘ಪಯನೀರ್ ರೈಟರ್ಸ್ ಆಫ್ ಸೌತ್ ಇಂಡಿಯಾ’ (ಸಂಪಾದಿತ) ಮುಂತಾದವುಗಳ ಜೊತೆಗೆ ಮಕ್ಕಳಿಗಾಗಿ ನವಿಲು ತೋಟ (ಅನಿತಾ ದೇಸಾಯಿಯವರ ಪೀಕಾಕ್ ಗಾರ್ಡನ್ ಅನುವಾದ) ಮತ್ತು ತುಂಗಭದ್ರ ಎಂಬ ಕೃತಿಗಳನ್ನು ರಚಿಸಿದ್ದರು.
ವೇಣುಗೋಪಾಲ ಸೊರಬರ ‘ಕಪ್ಪಿ’ ನಾಟಕಕ್ಕೆ ರಾಜ್ಯ ಮಟ್ಟದ ಉಮೇಶ ರುದ್ರ ಪಾರಿತೋಷಕ (ಬಹುಮಾನ) ಮತ್ತು ‘ಮಾನವಿ’ ಕವನ ಸಂಕಲನಕ್ಕೆ ಆರ್ಯಭಟ ಸಾಹಿತ್ಯ ಪ್ರಶಸ್ತಿ ಸಂದಿದ್ದವು.
ವೇಣುಗೋಪಾಲ ಸೊರಬರು ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಸಂಸ್ಥೆ ಮತ್ತು ಕಡಮತ್ ಲಕ್ಷದ್ವೀಪ ಸಾಹಿತ್ಯ ಕಲಾ ಅಕಾಡಮಿಯ ಸಹಯೋಗದಲ್ಲಿ ನಡೆದ ಬರಹಗಾರರ ಕೂಟಕ್ಕೆ ಆಹ್ವಾನಿತರಾಗಿ ಲಕ್ಷದ್ವೀಪಕ್ಕೆ ಹೋಗಿ ಬಂದ ನಂತರ, ಕುಟುಂಬದವರೊಂದಿಗೆ ಕನ್ಯಾಕುಮಾರಿ ಪ್ರವಾಸ ಹೋಗಿ ಹಿಂದಿರುಗುವಾಗ ದಾರಿಯಲ್ಲೇ ಅಸ್ವಸ್ಥರಾಗಿ 1995ರ ಮಾರ್ಚ್ 29ರಂದು ಈ ಲೋಕವನ್ನಗಲಿದರು.
On the birth anniversary of great poet Venugopala Soraba
ಕಾಮೆಂಟ್ಗಳು