ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೀಪವು ನಿನ್ನದೆ


ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು!
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು!

ಬೆಟ್ಟವು ನಿನ್ನದೆ, ಬಯಲು ನಿನ್ನದೆ,
ಹಬ್ಬಿ ನಗಲಿ ಪ್ರೀತಿ!
ನೆಳಲೋ, ಬಿಸಿಲೋ, ಎಲ್ಲವೂ ನಿನ್ನವೆ ಇರಲಿ ಏಕರೀತಿ!

ಆಗೊಂದು ಸಿಡಿಲು, ಈಗೊಂದು ಮುಗಿಲು, ನಿನಗೆ ಅಲಂಕಾರ,
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ

ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ;
ಆ ಮಹಾಕಾವ್ಯ, ಈ ಭಾವಗೀತೆ ನಿನ್ನ ಪದಧ್ವನಿ.

ಅಲ್ಲೊಂದು ಯುದ್ಧ, ಇಲ್ಲೊಬ್ಬ ಬುದ್ಧ,
ಕೀರ್ತಿ ಇವು ನಿನಗೆ.
ಆ ಮಧ್ಯರಾತ್ರಿ, ಈ ಉದಯಸೂರ್ಯ
ಮೂರ್ತಿ ಇವು ನಿನಗೆ.

ಕ್ಷಾಮ, ತುಷ್ಟಿ, ನಿನ್ನವೆ ಈ ಸೃಷ್ಟಿ
ಕಡೆಗೆ ಎಲ್ಲಾ ಒಂದೆ.
ಹಿಡಿವುದೆಲ್ಲವನು ನಿನ್ನ ತಾಯ್-ದೃಷ್ಟಿ
ನಿನಗೆ ಎಲ್ಲಾ ಒಂದೆ.

ಈ ಸೃಷ್ಟಿಗೆಲ್ಲ ಕರ್ತಾರನಾಗಿ,
ಅಧ್ಯಕ್ಷನಾಗಲೊಲ್ಲೆ!
ಈ ಸೃಷ್ಟಿಗೆಲ್ಲ ಅಧಿಕಾರಿಯಾಗಿ
ಕಣ್ಣಿಲ್ಲವಾದೆ, ಅಲ್ಲೆ!

ಪ್ರಜೆಗಳನು ಕರೆದು ಇದೊ ರಾಜ್ಯವಿಹುದು
ಆಳಬಹುದೆಂದು ನುಡಿದೆ;
ಅರಮನೆಯ ತೊರೆದು ಬಾಗಿಲನು ತೆರೆದು
ತಿರುಗಿನೋಡದೆಯೆ ನಡೆದೆ.

ಸರ್ವಶಕ್ತಿಯೇ ಸರ್ವತ್ಯಾಗದ 
ಗಂಗೆಯಾಗಿ ಹರಿದೆ;
ಮುತ್ತಿನ ಕಿರೀಟ, ಮುಳ್ಳಿನ ಕಿರೀಟ
ಯಾವುದೂ ಇಲ್ಲ ನಡೆದೆ.

ನಿನ್ನಂಥ ರಾಜ ಒಳಗಿದ್ದು ದೂರ;
ಇನ್ನೆಲ್ಲೋ  ನೀನು!
ರಾಜರಹಿತ ರಾಜ್ಯಾಂಗ ಶಾಸನದ
ಪ್ರಾಣಶಕ್ತಿಯೇ ನೀನು!

ಸಾಹಿತ್ಯ: ಕೆ.ಎಸ್. ನರಸಿಂಹಸ್ವಾಮಿ




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ