ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರದ್ವಾಜ


 ಡಿ. ಕೆ. ಭಾರದ್ವಾಜ

ನಮ್ಮನೇಲಿ ಬಹಳ ಹಿಂದಿನಿಂದ ಉಪಯೋಗದಲ್ಲಿರುವ ಒಂದು ಭಾರದ್ವಾಜ ಶಬ್ದಕೋಶವಿದೆ.  ಡಿ. ಕೆ. ಭಾರದ್ವಾಜ ಅಂದರೆ ನನಗೆ ಗೊತ್ತಿದ್ದು ಅಷ್ಟೇ.  ಆದರೆ ಆ ವ್ಯಕ್ತಿ  ಅಷ್ಟೊಂದು ವೈವಿಧ್ಯಪೂರ್ಣ ಸಾಧಕರು ಎಂದು ತಿಳಿದು ಅಚ್ಚರಿಯಾಯ್ತು.

ಭಾರದ್ವಾಜ ದತ್ತಾತ್ರೇಯ ಕೃಷ್ಣ ಅವರು ಭಾರತ ಸ್ವಾತಂತ್ರ್ಯ ಚಳವಳಿ, ಕನ್ನಡ ನುಡಿ ಸೇವೆ, ಕರ್ನಾಟಕ ಏಕೀಕರಣ, ಹಿಂದೀ ಭಾಷಾ ಪ್ರಸಾರ, ಪ್ರಗತಿಪರ ಸಾಹಿತ್ಯ ರಚನೆ, ಆಯುರ್ವೇದ ಪ್ರಸಾರ, ಪತ್ರಿಕೋದ್ಯಮ, ರಂಗಭೂಮಿ, ಇತಿಹಾಸ ಸಂಶೋಧನೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ದುಡಿದ ಮಹನೀಯರು. 

ಭಾರದ್ವಾಜ ಅವರು 1891ರ ಡಿಸೆಂಬರ್ 29ರಂದು ಜನಿಸಿದರು. ಇವರ ಪೂರ್ವಿಕರ ಸ್ಥಳ ಧಾರವಾಡದ ಕುಂದಗೋಳ. ತಂದೆ ಕೃಷ್ಣರಾಯರು ಆಗಿನ ಮೈಸೂರು ಕಂದಾಯ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. ಹುಟ್ಟಿದ್ದು ಬೆಂಗಳೂರಿನ ಹೊಸಕೋಟೆಯಲ್ಲಿ. ಬಾಲ್ಯದಿಂದ ಅತ್ಯಂತ ಮೇಧಾವಿಯಾಗಿದ್ದ ಇವರು ಮಾತೃಭಾಷೆ ಮರಾಠಿಯೊಂದಿಗೆ ಕನ್ನಡ ತೆಲುಗು ಭಾಷೆಗಳನ್ನೂ ಕಲಿತರು. ಕಾಲಕ್ರಮದಲ್ಲಿ ಹಿಂದಿ, ಬಂಗಾಳಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯ ಗಳಿಸಿದರು. 

ಭಾರದ್ವಾಜ ಅವರು ಆನಿಬೆಸೆಂಟರೊಂದಿಗೆ ಇತಿಹಾಸ ಸಂಶೋಧನ ಕಾರ್ಯದಲ್ಲಿ ನಿರತರಾಗಿದ್ದ ಕಾಲದಲ್ಲಿ ಮಹಾತ್ಮಗಾಂಧಿಯವರ ಸ್ವರಾಜ್ಯ ಚಳವಳಿ ಆಂದೋಳನಕ್ಕೆ ಓಗೊಟ್ಟರು. ಅಂದಿನ ಅನೇಕ ಮಂದಿ ರಾಜಕೀಯ ಧುರೀಣರೊಂದಿಗೆ ಇವರೂ ಸೆರೆಮನೆವಾಸ ಕಂಡರು. ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿ ದುಡಿದರು. ಆ ಸಂದರ್ಭದಲ್ಲಿ ನಡೆದ ಪ್ರಥಮ ಆಯುರ್ವೇದ ಸಮ್ಮೇಳನದಲ್ಲೂ ಇವರದು ಸಕ್ರಿಯ ಪಾತ್ರವಾಗಿತ್ತು.

ಮುಂದೆ  ಭಾರದ್ವಾಜ ಅವರು ಬೆಂಗಳೂರಿಗೆ ಬಂದು ನಾಟಕ, ನಾಟ್ಯ ಕಲೆಗೆ ಮೀಸಲಾದ ಮೊತ್ತಮೊದಲ ಮಾಸಪತ್ರಿಕೆ ರಂಗಭೂಮಿಯ ಸಂಪಾದಕರಾದರು. ಮಕ್ಕಳಿಗಾಗಿ ಮಕ್ಕಳ ಪುಸ್ತಕ ಎಂಬ ಮಾಸಪತ್ರಿಕೆಗೆ ಜನ್ಮವಿತ್ತರು. ತುಂಗಭದ್ರಾ ಪ್ರೇಮಾಯತನಾಶ್ರಮದ ಪಂಡಿತ ತಾರಾನಾಥರ ಪಟ್ಟಶಿಷ್ಯರಾಗಿ ಆಯುರ್ವೇದ ಚಿಕಿತ್ಸಾಲಯ ಸ್ಥಾಪಿಸಿ ಸುಮಾರು ಇಪ್ಪತ್ತು ವರ್ಷಕಾಲ ಸೇವೆ ಸಲ್ಲಿಸಿದರು. ಇವರ ಬಳಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಿ ಪ್ರವೀಣರಾದ ಅನೇಕ ಮಂದಿ ಗ್ರಾಮಾಂತರಗಳಲ್ಲಿ  ಸೇವೆ ಸಲ್ಲಿಸುತ್ತಿದ್ದರು. ಶ್ವೇತಕುಷ್ಠರೋಗಕ್ಕೆ ಪರಿಣಾಮಕಾರಿ ಔಷಧವನ್ನು ಕಂಡುಹಿಡಿದ ಇವರು ವೈದ್ಯಭಾನು, ವೈದ್ಯಗುರು ಎಂಬ ಬಿರುದುಗಳಿಗೆ ಪಾತ್ರರಾದರು. 

ಸರ್ಕಾರಿ ನೌಕರಿಗೆ ಕರೆಬಂದರೂ ಅದನ್ನು ನಿರಾಕರಿಸಿ ಲೇಖನಿಯನ್ನೇ ಅವಲಂಬಿಸಿ ಸ್ವತಂತ್ರ ಮನೋವೃತ್ತಿಯಿಂದ ಜೀವಿಸಲು ದೀಕ್ಷೆಗೊಂಡ ಮನೋಧರ್ಮ ಭಾರದ್ವಾಜರದು. ತುಂಗಭದ್ರಾ ಪ್ರೇಮ ವಿದ್ಯಾಪೀಠದ ಗೌರವ ಕುಲಸಚಿವರಾಗಿಯೂ, ದೆಹಲಿಯ ಅಖಿಲ ಭಾರತ ಆಯುರ್ವೇದ ವಿದ್ಯಾಪೀಠದ ಪ್ರಾಧ್ಯಾಪಕರಾಗಿಯೂ,  ಕಲ್ಕತ್ತದ ಅಖಿಲಭಾರತ ಆಯುರ್ವೇದಿಕ್ ಕಾಂಗ್ರೆಸ್ಸಿನ ಪ್ರಾಂತೀಯ ಕಾರ್ಯದರ್ಶಿಯಾಗಿಯೂ, ಬನಾರಸ್ಸಿನ ಶ್ರೀ ಭಾರತ ಧರ್ಮ ಮಹಾಮಂಡಲದ ಸ್ಥಳೀಯ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಭಾರದ್ವಾಜರು ಒಬ್ಬ ವ್ಯಕ್ತಿಯಾಗಿರಲಿಲ್ಲ ಒಂದು ಸಂಸ್ಥೆಯಾಗಿದ್ದರು.

ಭಾರದ್ವಾಜರು ರಚಿಸಿರುವ ಗ್ರಂಥಗಳಲ್ಲಿ ಆಯುರ್ವೇದ ಚಿಕಿತ್ಸಾಸಾರ, ಆಹಾರವಿಜ್ಞಾನ, ದಾಂಪತ್ಯ ವಿಜ್ಞಾನ, ಸಂತಾನ ವಿಜ್ಞಾನ, ಬ್ರಹ್ಮಚರ್ಯೆಯೋ ಕಾಮ ನಿಂದನೆಯೋ, ಹಿಂದೀ ಭಾಷಾಸಾರ, ಹಿಂದೀ-ಕನ್ನಡ ಸ್ವಯಂ ಬೋಧಿನಿ, ಸ್ವರಾಜ್ಯ ವಿಶ್ವಕೋಶ, ಕರ್ನಾಟಕದ ಕೈಪಿಡಿ, ಇಂಗ್ಲಿಷ್-ಕನ್ನಡ ನಿಘಂಟು ಇವು ಮುಖ್ಯವಾದುವು. ಅಲ್ಲದೆ ಭೀಷ್ಮಾ, ಸೀತಾದೇವಿ ಎಂಬ ಬಂಗಾಳಿ ನಾಟಕಗಳನ್ನೂ ಮಹಾತ್ಮಗಾಂಧಿಯವರ ಕೆಲವು ಪುಸ್ತಕಗಳನ್ನೂ ತುಳಸೀದಾಸರ ರಾಮಾಯಣವನ್ನೂ ಕನ್ನಡಕ್ಕೆ ಅನುವಾದಿಸಿದ್ದರು.

ನಾಟಕ, ಕಲೆ, ಸಂಗೀತ, ಸಾಹಿತ್ಯ, ವೈದ್ಯಕೀಯ ಎಲ್ಲದರಲ್ಲೂ ಪರಿಣತರಾಗಿದ್ದ ಭಾರದ್ವಾಜರು 1953ರ ಫೆಬ್ರವರಿ 22ರಂದು ಈ ಲೋಕವನ್ನಗಲಿದರು.

On the birth anniversary of Great multifaceted personality of last century D. K. Bharadwaj 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ