ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೇನ್ ಆಸ್ಟಿನ್


 ಜೇನ್ ಆಸ್ಟಿನ್ 


ಜೇನ್ ಆಸ್ಟಿನ್ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ್ತಿ. 

ಜೇನ್ ಆಸ್ಟಿನ್ 1775ರ ಡಿಸೆಂಬರ್ 16ರಂದು ಜನಿಸಿದಳು.  ಹ್ಯಾಂಪ್ಷೈರಿನ ಸ್ಟೀವನ್ಟನ್ ಎಂಬ ಹಳ್ಳಿಯ ಪಾದ್ರಿಯ ಎಂಟು ಮಕ್ಕಳ ಪೈಕಿ ಏಳನೆಯವಳು.  ಹೊಂದಿಕೆಯ ಹಿತಕರ ಸಂಸಾರದಲ್ಲಿ ಬೆಳೆದ ಆಕೆ ಆಟ, ಒಗಟೆ, ಓದುಗಳಲ್ಲಿ ನಿರತಳಾಗಿ ಆ ಹಳ್ಳಿಯಲ್ಲೇ 25 ವರ್ಷ ಕಳೆದಳು. ಯಾವ ಉದ್ರೇಕವೂ ಇಲ್ಲದ ಪ್ರಶಾಂತ ಜೀವನ ಸಾಗಿಸಿದ ಆಕೆ ಸಾಹಿತ್ಯಸಂಘಗಳಲ್ಲಾಗಲಿ, ಸಾಹಿತ್ಯ ವಿಷಯಕವಾದ ಪತ್ರವ್ಯವಹಾರಗಳಲ್ಲಾಗಲೀ ಎಂದೂ ಆಸಕ್ತಿ ತೋರಲಿಲ್ಲ.

ಆಸ್ಟಿನ್ನಳ ಬಾಳೂ ಅವಳ ಕಾದಂಬರಿಗಳೂ ಮೇಲುನೋಟಕ್ಕೆ ಒಂದೇ ತರಹ. ಅವು ಘಟನಾಪ್ರಧಾನವಾದುವಲ್ಲ. ಒಳನಾಡಿನ ಊರುಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾದ, ಮಧ್ಯಮವರ್ಗದ ಜನರ ಚಿತ್ರಗಳನ್ನೇ ಆಕೆಯ ಕಾದಂಬರಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಮೃದು ಹೃದಯ, ನಗೆ ಮಾತು, ಸುಸಂಸ್ಕೃತಿಯ ಸಲ್ಲಕ್ಷಣ, ಕಾಲ್ತೊಡಕಾಗಿ ಬಂದ ಸಂಕಟಗಳೆಲ್ಲ ಅಂತಿಮವಾಗಿ ಪರಿಹಾರವಾಗುವುವೆಂದು ನಂಬಿ ನಡೆಯುವ ಜನ. ಪ್ರೇಮಭಂಗ ಮಾನಹರಣಗಳೇ ಮುಂತಾದ ಘಟನೆಗಳು ವಿರಳ. ಬದುಕಿನ ನಿತ್ಯಜಂಜಡ, ನೆರೆಹೊರೆಯ ಮಾತಿನ ಕಲಾಪ-ಇವಕ್ಕೆಲ್ಲ ಹಾಸ್ಯದ ಲೇಪ. ಇದೇ ಆಕೆಯ ಕಾದಂಬರಿಯ ಮುಖ್ಯ ಲಕ್ಷಣವೆಂದು ಹೇಳಬಹುದು. 

ಜೇನ್ ಆಸ್ಟಿನ್ ಕೃತಿಗಳಲ್ಲಿ ಬಾಳಿನ ನಾನಾ ಅನುಭವಗಳ ವಿವೇಚನೆ ಧಾರಾಳವಾಗಿ ಕಾಣಸಿಗುತ್ತದೆ. ಭಾವೋದ್ರೇಕವಿಲ್ಲದ ಸರಳ ಶೈಲಿಯ ಹಿಂದೆ ಬಾಳಿನ ಕಟುಮಧುರತೆಯ ಆವಿರ್ಭಾವವಾಗಿದೆ. ಸಾಧಾರಣ ಜೀವನವನ್ನು ಸಹಾನುಭೂತಿಯ ಕಣ್ಣಿನಿಂದ ನೋಡಿ ಕಲಾತ್ಮಕವಾಗಿ ಚಿತ್ರಿಸಿ ಶ್ರೇಷ್ಠ ಸಾಹಿತ್ಯವನ್ನು ಹೇಗೆ ಸೃಷ್ಟಿಸಬಹುದೆಂಬುದಕ್ಕೆ ಜೇನ್ ಆಸ್ಟಿನ್ನಳ ಕೃತಿಗಳೇ ದೃಷ್ಟಾಂತ. ಮಧ್ಯಮವರ್ಗದ ಸಂಸಾರವನ್ನು ಚಿತ್ರಿಸುವುದರಲ್ಲಿ ಆಕೆಯನ್ನು ಯಾರೂ ಮೀರಿಸಿಲ್ಲ. ಅವಳೇ ಹೇಳಿಕೊಂಡಿರುವ ಹಾಗೆ ಅದು ಎರಡಂಗುಲ ದಂತದ ಕಿರಿಯಗಲದಲ್ಲಿ ಕೆತ್ತಿದ ಕುಸುರಿ ಕೆಲಸ.

ಇಂಗ್ಲಿಷ್ ರಮ್ಯ (ರೊಮ್ಯಾಂಟಿಕ್) ಸಾಹಿತ್ಯದ ಪರ್ವಕಾಲದಲ್ಲಿ ಬಾಳಿದರೂ ರಮ್ಯ ವ್ಯಕ್ತಿತ್ವಾರಾಧನೆಯ ಪಂಥಕ್ಕೂ ಜೇನ್ಳಿಗೂ ಬಹಳ ದೂರ. ರಮ್ಯಸಾಹಿತ್ಯದಲ್ಲಿ ಆಕೆಗೆ ಅಷ್ಟಾಗಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. 18ನೆಯ ಶತಮಾನದ ಸಂಪ್ರದಾಯಗಳನ್ನು ಅವಳು ಸ್ವೀಕರಿಸಿದಳಾದರೂ ಆಕೆ ಅದರಲ್ಲೇ ಭಾವಪರವಶಳಾಗಲಿಲ್ಲ. 1790ರ ದಶಕದ ಮೊದಲ ವರ್ಷಗಳಲ್ಲಿ ರಚಿತವಾದರೂ 20ನೆಯ ಶತಮಾನದ ಎರಡು-ಮೂರನೆಯ ದಶಕಗಳಲ್ಲಿ ಪ್ರಕಟವಾದ ಲವ್ ಅಂಡ್ ಫ್ರೆಂಡ್ಷಿಪ್ ಎಂಬ ಕೃತಿಯ ಎರಡು ಸಂಪುಟಗಳ ತುಂಬ ಅಂದಿನ ಕಾಲದ ಜನಪ್ರಿಯ ಕಾದಂಬರಿಗಳ ಭಾವಾತಿರೇಕದ ಅಣಕವೇ ತುಂಬಿದೆ. ಲೇಡಿ ಸೂಸಾನ್ ಎಂಬುದು ಭಾಗಶಃ 1790ರ ದಶಕದ ನಡುಗಾಲದಲ್ಲಿ ರಚಿತವಾಗಿ 1871ರಲ್ಲಿ ಪ್ರಕಟವಾಯಿತು. ಜೇನ್ ಆಸ್ಟಿನ್ನಳ ಪ್ರಸಿದ್ಧ ಕಾದಂಬರಿಗಳಲ್ಲೊಂದಾದ ಸೆನ್ಸ್ ಅಂಡ್ ಸೆನ್ಸಿಬಿಲಿಟಿ ಎಂಬುದು ಆಕೆಯ ಲೇಖನಜೀವನದ ಆರಂಭಕಾಲದ ಆಶಾಭಂಗದ ಸಂಕೇತವಾಗಿದೆ. 1796ಕ್ಕೆ ಹಿಂದೆಯೇ ಬರೆದು ಮುಗಿಸಿದ್ದ ಈ ಕಾದಂಬರಿ 1797-98ರಲ್ಲಿ ಹೊಸ ರೂಪ ತಳೆಯಿತು. ಆದರೆ ಅದೂ ಪ್ರಕಾಶಕರಿಂದ ತಿರಸ್ಕೃತವಾಯಿತು. 1809-10ರಲ್ಲಿ ಆಕೆ ಈ ಕೃತಿಯನ್ನು ಪರಿಷ್ಕರಿಸಿದಳು. ಮರುವರ್ಷ ಅದು ಪ್ರಕಟವಾಯಿತು. ಈ ಕಾದಂಬರಿಯಲ್ಲೂ ಆಸ್ಟಿನ್ ಮರಣದ ಮರುವರ್ಷ ಪ್ರಕಟವಾದ ನಾರ್ಥಾಂಜರ್ ಅಬೆಯಲ್ಲೂ ಆಗಿನ ಕಾಲದ ರೀತಿನೀತಿಗಳ ಹಾಸ್ಯವೇ ಪ್ರಧಾನವಾಗಿದೆ.

1813ರಲ್ಲಿ ಪ್ರಕಟವಾದ ಪ್ರೈಡ್ ಅಂಡ್ ಪ್ರಿಜುಡಿಸ್ ಎಂಬುದು ಆಸ್ಟಿನ್ನಳ ಅನುಭವದ ಪಕ್ವಫಲವಾಗಿದ್ದು, ಹಾಸ್ಯ ಕಟಕಿಗಳು ಬೆರೆತ ಜೀವನಾನುಕಂಪ ಆ ಕೃತಿಯ ಉದ್ದಕ್ಕೂ ಕಾಣಸಿಗುತ್ತವೆ. ಹಮ್ಮು ಬಿಮ್ಮು ಎಂಬ ಹೆಸರಿನಲ್ಲಿ ಇದರ ಕನ್ನಡ ಅನುವಾದ ಪ್ರಕಟವಾಗಿದೆ.
ತನ್ನ ಕೃತಿಗಳಿಗೆ ಪ್ರಕಟಣೆಯ ಯೋಗ ಪ್ರಾಪ್ತಿಯಾದುದರಿಂದ ಹುರುಪುಗೊಂಡ ಆಸ್ಟಿನ್ ಮುಂದೆಯೂ ಕಾದಂಬರಿಗಳ ರಚನೆಯಲ್ಲಿ ತೊಡಗಿದಳು. ಎಮ್ಮಾ ಎಂಬುದು ಅವಳು ಬದುಕಿದ್ದಾಗಲೇ (1815ರಲ್ಲಿ) ಪ್ರಕಟವಾಯಿತು. ಪರ್ಸುಯೇಷನ್ ಆಕೆ ಸತ್ತ ಮರುವರುಷವೂ ಮ್ಯಾನ್ಸ್ಫಲ್ಡ್ ಪಾರ್ಕ್ ಅದರ ಮರುವರುಷವೂ ಪ್ರಕಟವಾದುವು. ಕೋಲ್ರಿಜ್, ಸದೆ, ಮಕಾಲೆಗಳು ಆಸ್ಟಿನ್ನಳ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ. ಸ್ಕಾಟ್ ಪ್ರಶಂಸಿಸಿದ್ದಾನೆ. ಮಿತವ್ಯಾಪ್ತಿಯ ಅನುಭವದಲ್ಲೇ ಜೀವನದ ಆಳವನ್ನೂ ಗಂಭೀರತೆಯನ್ನೂ ಕಲಾತ್ಮಕವಾಗಿ ಸೃಷ್ಟಿಸಿದ್ದು ಆಸ್ಟಿನ್ನಳ ವೈಶಿಷ್ಟ್ಯ.

ಜೇನ್ ಆಸ್ಟಿನ್ 1817ರ ಜುಲೈ 18ರಂದು ನಿಧನಳಾದಳು.

ಮಾಹಿತಿ ಆಧಾರ: ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ

On the birth anniversary of novelist Jane Austen 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ