ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಧವ ಆಚಾರ್ಯ


 ಉದ್ಯಾವರ ಮಾಧವ ಆಚಾರ್ಯ 🌷🙏🌷



ಪ್ರೊ. ಉದ್ಯಾವರ ಮಾಧವ ಆಚಾರ್ಯರು ಸಾಹಿತಿ ಮತ್ತು ಪ್ರಸಿದ್ಧ ರಂಗಕರ್ಮಿಯಾಗಿ ಹೆಸರಾಗಿದ್ದವರು. 

ಮಾಧವ ಆಚಾರ್ಯರು 1941ರ ಮಾರ್ಚ್‌ 25ರಂದು ಬ್ರಹ್ಮಾವರದ ಉಪ್ಪೂರಿನಲ್ಲಿ ಜನಿಸಿದರು. ಇವರ ತಂದೆ ಲಕ್ಷ್ಮೀನಾರಾಯಣ ಆಚಾರ್ಯ‍ರು ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ 'ರಾಸವಿಲಾಸ'ಎಂಬ ಕೃತಿಯನ್ನು ರಚಿಸಿದ್ದರು. ತಾಯಿ ಲಲಿತಾಲಕ್ಷ್ಮಿ
ಕುಶಲಕಲೆಗಳಲ್ಲಿ ಪರಿಣಿತರಾಗಿದ್ದರು. ಹೀಗೆ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ಮಾಧವ ಆಚಾರ್ಯರು ಯಕ್ಷಗಾನ, ಕೋಲ, ನಾಗಮಂಡಲ,ಢಕ್ಕೆಬಲಿ ಮುಂತಾದ ಆರಾಧ್ಯ ಕಲೆಗಳಿಂದ ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡವರು.

ಮಾಧವ ಆಚಾರ್ಯರು ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದು, ಎಂಜಿಎಂ ಕಾಲೇಜಿನಿಂದ ಬಿ.ಎ ಪದವಿಯನ್ನೂ, ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನೂ ಪಡೆದರು.

ಆಚಾರ್ಯರು ಕುಂದಾಪುರದ ಭಂಡಾರ್ಕರ್ಸ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ಮುಂದೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ಕೆಲಕಾಲ ಕುಂದಾಪುರದ ಬಿ.ಬಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

ಸಾಹಿತ್ಯ ಮತ್ತು ರಂಗ ಸಾಂಸ್ಕೃತಿಕ ಲೋಕದಲ್ಲಿ ನಿರಂತರ ಕ್ರಿಯಾಶೀಲರಾಗಿದ್ದ ಮಾಧವ ಆಚಾರ್ಯರು ಗೀತ ನಾಟಕ, ನೃತ್ಯ ರೂಪಕಗಳು,  ವೈವಿಧ್ಯಪೂರ್ಣ  ಬರಹಗಳು, ಹೀಗೆ ವಿವಿಧ ರೀತಿಗಳಲ್ಲಿ ಪ್ರಸಿದ್ಧರಾಗಿದ್ದರು. 

ಬಾಗಿದ ಮರ, ಭಾಗದೊಡ್ಡಮ್ಮನ ಕಥೆ, 
ಅಪರಾಧ ಸಹಸ್ರಾಣಿ  ಮುಂತಾದವು ಆಚಾರ್ಯರ ಕಥಾಸಂಕಲನಗಳು. ಬೆಳಕಿನೆಡೆಗೆ, ಹಾಡಿ, ನೀಡು ಪಾಥೇಯವನು, ಸೀಳು ಬಿದಿರಿನ ಸಿಳ್ಳು, ರಂಗಪ್ರಬಂಧಗಳು, ನೃತ್ಯ ಪ್ರಬಂಧಗಳು, ಯಕ್ಷಪ್ರಬಂಧಗಳು, ಸಾಹಿತ್ಯ ಸ್ಪಂದನ, ಲಘು ಬಿಗು ಪ್ರಬಂಧಗಳು ಮುಂತಾದವು ಅವರ ಪ್ರಬಂಧ ಸಂಕಲನಗಳು. ರಂಗಸ್ಥಳದ ಕನವರಿಕೆಗಳು, ಹೂ ಮಿಡಿ ಹಾಡು ಅವರ ಕಾವ್ಯ ಸಂಕಲನಗಳು. ಮಾಧವ ಆಚಾರ್ಯರ ನಾಟಕಗಳಲ್ಲಿ ಇದ್ದಕ್ಕಿದ್ದಂತೆ ನಾಟಕ, ಎದೆಯೊಳಗಣ ದೀಪ, ಗೋಡೆ, ಕೃಷ್ಣನ ಸೋಲು, ರಾಣಿ ಅಬ್ಬಕ್ಕ ದೇವಿ, ಗಾಂಧಾರಿ, ರಾಧೆ ಎಂಬ ಗಾಥೆ, ನೆನಪೆಂಬ ನವಿಲುಗರಿ ಮುಂತಾದವು ಸೇರಿವೆ.

ಉದ್ಯಾವರ ಮಾಧವ ಆಚಾರ್ಯರು 'ಸಮೂಹ'  ತಂಡವನ್ನು ರೂಪಿಸಿ ಕಳೆದ ಆರು ದಶಕಗಳಲ್ಲಿ ಸಂಯೋಜಿಸಿ, ನಿರ್ದೇಶಿಸಿ, ನಿರ್ಮಿಸಿದ ರಂಗಪ್ರಯೋಗಗಳು ಹಾಗೂ ರಂಗಭೂಮಿಯ ಅಂಶಗಳನ್ನು ಯಕ್ಷಗಾನದೊಡನೆ ಮೇಳೈಸಿ ಕಲಾತ್ಮಕವಾಗಿ ರೂಪಿಸಿದ ಪ್ರಯತ್ನಗಳು ಅಪಾರ ಮೆಚ್ಚುಗೆ ಗಳಿಸಿದ್ದವು. ಅಂಧಯುಗ, ಬ್ರಹ್ಮಕಪಾಲ, ಅರುಂಧತಿ, ಹಂಸ ದಮಯಂತಿ, ಶಬರಿ, ಅಶ್ವತ್ಥಾಮನ್, ಹೆಬ್ಬೆರಳು, ಸತ್ಯಾಯನ, ಹರಿಶ್ಚಂದ್ರ, ಅಹಲ್ಯೆ, ಶ್ರೀಹರಿಚರಿತೆ, ಹರಿಣಾಭಿಸರಣ, ಕುಚೇಲ ಕೃಷ್ಣ, ಸೀತಾಪಹರಣ, ಚಿತ್ರಾಂಗದೆ, ವೃಂದಾವನ, ಹರಿದಾಸ ವಿಜಯ, ಅವತಾರ ವೈಭವ, ಶ್ರೀ ಮನೋಹರ ಬಿಲ್ಲಹಬ್ಬ, ಆನಂದ ಮುಕುಂದ, ಭಗವದ್ಗೀತಾ ನೃತ್ಯ ವೈಭವ, ನವನೀತ ಲಹರಿ, ಸಾಕ್ಷಾತ್ಕಾರ, ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ, ಅರಗಿನ ಬೆಟ್ಟ, ಋತುಗೀತೆ, ಮುಕ್ತದ್ವಾರ, ಅಶ್ವಮೇಧ, ಮಾದ್ರಿಯ ಚಿತೆ, ಹೊನ್ನಿಯ ಮದುವೆ, ಹಿಡಿಂಬೆ, ಮಹಾಯೋಗಿ, ಮತ್ತೆ ರಾಮನ ಕತೆ, ರುಕ್ಮಿಣೀಶ ವಿಜಯ, ನಾರದ ಕೊರವಂಜಿ, ಕೀಚಕ ವಧೆ ರೂಪಕ, ಉಪನಿಷದುದ್ಯಾನಂ, ವಲ್ಮೀಕ ನಿನಾದ, ತಿರುನೀಲಕಂಠ, ನೆನಪಾದಳು ಶಕುಂತಲೆ, ಕುವರ ಭಸ್ಮಾಸುರ, ಪಾಂಚಾಲಿ, ಭೀಷ್ಮ ಸತ್ಯವ್ರತನಾದದ್ದು, ಅಂಬೆ, ಜ್ವಾಲೆ ಮುಂತಾದ ಅನೇಕ ರಂಗರೂಪಕಗಳ ಮೂಲಕ ಅವರು ನಿರಂತರ ಹೆಸರಾಗಿದ್ದರು.

'ಸಮೂಹ’ ಸಂಸ್ಥೆಯ ಚಟುವಟಿಕೆಗಳ ಮೂಲಕ ಅನೇಕ ಕಲಾವಿದರನ್ನು ಬೆಳೆಸಿದ ಹಿರಿಮೆ ಸಹಾ ಉದ್ಯಾವರ ಮಾಧವ ಆಚಾರ್ಯರದ್ದಾಗಿತ್ತು. ಚಂದ್ರಶೇಖರ ಕೆದ್ಲಾಯ, ಗುರುರಾಜ ಮಾರ್ಪಳ್ಳಿ ಅವರಂಥಹ ಪ್ರಸಿದ್ಧ ಸಂಗೀತ ನಿರ್ದೇಶಕರು ಇವರ ಗರಡಿಯಲ್ಲಿ ಬೆಳೆದವರು. ಇವರ ಪುತ್ರಿ ಹಾಗೂ ಭರತನಾಟ್ಯ ಕಲಾವಿದೆ ಭ್ರಮರಿ ಶಿವಪ್ರಕಾಶ್‌  ಅವರೂ ಸಹಾ ನೃತ್ಯ ರೂಪಕಗಳ ಪ್ರಯೋಗದಲ್ಲಿ ನಿರತರಾಗಿದ್ದಾರೆ.

ಮಂಗಳೂರು ಆಕಾಶವಾಣಿಯಲ್ಲಿ ಅನೇಕಬಾರಿ ಮಾಧವ ಆಚಾರ್ಯರ ಸಣ್ಣ ಕಥೆಗಳು, ಗೀತರೂಪಕಗಳು, ಚಿಂತನಗಳು ಪ್ರಸಾರವಾಗಿದ್ದವು. ಕಿರುತೆರೆಯ 'ಗುಡ್ಡದ ಭೂತ' ಧಾರವಾಹಿಯಲ್ಲಿ ಆಚಾರ್ಯರು ಪಾತ್ರ ನಿರ್ವಹಿಸಿದ್ದರು.

ಉದ್ಯಾವರ ಮಾಧವ ಆಚಾರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಂಗದ ಮೇಲಿನ ಹಲವಾರು ಸಂಘಟನೆಗಳ ಗೌರವಗಳು ಸಂದಿದ್ದವು.

ಮಹಾನ್ ಸಾಧಕರಾದ ಉದ್ಯಾವರ ಮಾಧವ ಆಚಾರ್ಯರು 2020ರ ಡಿಸೆಂಬರ್ 7ರಂದು ನಿಧನರಾದರು. ಕಾಲನ ಚಕ್ರದ ಉರಳುವಿಕೆ ಅನಿವಾರ್ಯ.  ಇಲ್ಲಿ ಹೆಜ್ಜೆ ಮೂಡಿಸಿದ ಉದ್ಯಾವರ ಮಾಧವ ಆಚಾರ್ಯರಂತಹ ಚೈತನ್ಯಗಳೇ ಧನ್ಯ.

Udyavara Madhava Acharya🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ