ಪಿ. ಆರ್. ಆಚಾರ್ಯ
ಪಿ. ಆರ್. ಆಚಾರ್ಯ
ಪಿ.ಆರ್.ಆಚಾರ‍್ಯ ಚಿತ್ರಕಲಾವಿದ, ಸಾಹಿತಿ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯಾಗಿ ಹೆಸರಾದವರು. ಕಲಾಲೋಕದಲ್ಲಿ ಪ್ರಸಿದ್ಧಿಯೊಡನೆ 'ಆರ್ಯ' ಎಂಬ ಹೆಸರಿನಿಂದ ಅನೇಕ ರೀತಿಯ ಬರಹಗಳನ್ನು ಮಾಡಿದರು.
ಪಿ. ಆರ್. ಆಚಾರ‍್ಯ 1945ರ ಡಿಸೆಂಬರ್ 7ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಪಿ. ವಿಠಲಾಚಾರ‍್ಯ. ತಾಯಿ ರುಕ್ಮಿಣಿ. ಪ್ರಾರಂಭಿಕ ಶಿಕ್ಷಣ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ನಡೆಯಿತು. ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಸಂಸ್ಕೃತ ಎಂ.ಎ. ಪದವಿ ಪಡೆದರು. ಹಿಂದಿ ಭಾಷೆಯಲ್ಲಿ ರತ್ನ ಪರೀಕ್ಷೆ ಉತ್ತೀರ್ಣತೆ ಗಳಿಸಿದರು.
ಪಿ. ಆರ್. ಆಚಾರ್ಯರು ಎಸ್.ಎಸ್.ಎಲ್.ಸಿ. ಪಾಸಾಗುತ್ತಿದ್ದಂತೆ ಜೀವನದ ಸಾರ್ಥಕ್ಯದ ಹುಡುಕಾಟದಲ್ಲಿ ಆಯ್ದುಕೊಂಡದ್ದು ಉಡುಪಿಯ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಸ್ವಾಮೀಜಿ ಪಟ್ಟವನ್ನು. ಜಡ್ಡು ಕಟ್ಟಿದ ಸಂಪ್ರದಾಯವಿದು ಎಂಬ ಭಾವ ಮೂಡಿ ಪೀಠ ತ್ಯಾಗ ಮಾಡಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾದರು.
ಪಿ. ಆರ್. ಆಚಾರ್ಯ ಅವರಿಗೆ ಚಿತ್ರಕಲೆ ಮತ್ತು ಸಾಹಿತ್ಯ ಪ್ರೀತಿಯ ಪ್ರಕಾರಗಳಾಗಿದ್ದವು. ಗುರುವಿಲ್ಲದೆ ಗೆರೆ ಎಳೆದು ಚಿತ್ರಕಲೆಯನ್ನು ಸಾಧಿಸಿದರು. ಮನೋಹರ ಗ್ರಂಥಮಾಲೆಯ ಹಲವಾರು ಕೃತಿಗಳ ರಕ್ಷಾಪುಟಗಳಿಗೆ ಕಲಾ ರಚನೆ ಮಾಡಿದರು.
ಧಾರವಾಡವನ್ನು ತಮ್ಮ ಕರ್ಮಭೂಮಿಯಾಗಿ ಮಾಡಿಕೊಂಡ ಆಚಾರ್ಯ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ಮಂಗಳೂರು, ಬೆಂಗಳೂರು, ಮುಂಬಯಿ, ಜರ್ಮನಿ, ಇಟಲಿ, ಪ್ಯಾರಿಸ್, ನೆದರ್ ಲ್ಯಾಂಡ್ ಮತ್ತು ಫಿನ್ಲೆಂಡ್‌ಗಳಲ್ಲಿ ಅನೇಕ ಬಾರಿ ನಡೆದವು. ಅವರು ಇತರರೊಡನೆಯೂ ಮುಂಬಯಿ, ಜರ್ಮನಿ, ಬೆಂಗಳೂರಿನಲ್ಲಿ ಹಲವಾರು ಬಾರಿ ಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡರು.
ಪಿ. ಆರ್. ಆಚಾರ್ಯ ಕಲೆಯ ಜೊತೆಗೆ ಸಾಹಿತ್ಯ ರಚನೆಯಲ್ಲೂ ಸಕ್ರಿಯರಾಗಿದ್ದರು. ದ್ರಷ್ಟ್ರ, ದೇಶಿ ಪರದೇಶಿ ಕಥೆಗಳು, ಹೈಬ್ರಿಡ್ ಕಥೆಗಳು, ಕರುಣೆ ಏಕಾಂತ ಇವರ ಕಥಾಸಂಕಲನಗಳು. 'ಗುರು' ಇವರ ಕಾದಂಬರಿ. ಕಾವ್ಯ ಸಂಕಲನಗಳಲ್ಲಿ ಮನುಷ್ಯ, “Oh Master and other Poems” ಸೇರಿವೆ. ಮಕ್ಕಳ ಸಾಹಿತ್ಯದಲ್ಲಿ ಕೊಕ್ಕರೆ ತಾತ, ಮೋಡರಾಜ, ಕುರಿ ಕೊಂದ ಕುಮಾರ, ಮಳೆ ಬಂತು ಮಳೆ ಮುಂತಾದವು ಇವೆ. ನಾಟಕಗಳಲ್ಲಿ ಭ್ರೂಣ, ಪಾತಾಳ ಗರಡಿ, ಯಜ್ಞ, ಬಯಲು ಆಲಯದೊಳಗೇ, ಇಲ್ಲದಿದ್ದವರು ಮುಂತಾದವು ಸೇರಿವೆ.
ಪಿ. ಆರ್. ಆಚಾರ್ಯ ಹಲವಾರು ಸಾಕ್ಷ್ಯ ಚಿತ್ರಗಳನ್ನು ತಯಾರಿಸಿದ್ದರು. ಇವರಿಗೆ 'ಕಿತಾಪತಿ' ಚಲನಚಿತ್ರ ನಿರ್ದೇಶನಕ್ಕೆ ಪ್ರಶಸ್ತಿ ಸಂದಿತ್ತು.
ಪಿ. ಆರ್. ಆಚಾರ್ಯ ಅವರಿಗೆ ಅನೇಕ ಸಂಘ ಸಂಸ್ಥೆಗಳ ಒಡನಾಟವಿತ್ತು. ಕಲಾ ಮಂಡಲದ ಅಧ್ಯಕ್ಷರಾಗಿ, ವಿದ್ಯಾ ಮೆಡಿಕಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಪಿ. ಆರ್. ಆಚಾರ್ಯ ಅವರಿಗೆ ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಜಿ.ಎಸ್.ಶೆಣೈ ಪ್ರಶಸ್ತಿ ಮುಂತಾದ ಗೌರವಗಳು ಸಂದವು. ಇವರಿಗೆ ಹಿತೈಷಿಗಳು ಅರ್ಪಿಸಿದ ಷಷ್ಟಬ್ದಿ ಗ್ರಂಥ ‘ಆರ್ಯಾವರ್ತ.’
ಪಿ. ಆರ್. ಆಚಾರ್ಯರು 2016ರ ಆಗಸ್ಟ್ 19ರಂದು ಈ ಲೋಕವನ್ನಗಲಿದರು.
On the birth anniversary of artiste and writer P. R. Acharya
ಕಾಮೆಂಟ್‌ಗಳು