ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣಕುಮಾರ ಕಲ್ಲೂರ


 ಕೃಷ್ಣಕುಮಾರ ಕಲ್ಲೂರ


ಕಳೆದ ಶತಮಾನದಲ್ಲಿ ಕನ್ನಡ ನಾಡಿನ ಮಹಾನ್ ವ್ಯಕ್ತಿಗಳಲೊಬ್ಬರೆನಿಸಿದ್ದ ಕೃಷ್ಣಕುಮಾರ ಕಲ್ಲೂರ ಉತ್ಕಟ ಕನ್ನಡಾಭಿಮಾನಿ, ಗಾಂಧಿವಾದಿ, ಸಾಹಿತಿ ಮತ್ತು ರಂಗಕರ್ಮಿ. 

ಕೃಷ್ಣಕುಮಾರ ಕಲ್ಲೂರ ಈಗಿನ ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಕಲ್ಲೂರಿನಲ್ಲಿ 1909ರ ಡಿಸೆಂಬರ್ 21ರಂದು ಜನಿಸಿದರು. ತಂದೆ ಅನಂತರಾವ್.  ತಾಯಿ ರಾಧಾಬಾಯಿ. ಎಂಟನೆಯ ಮಗನಾದ್ದರಿಂದ ಕೃಷ್ಣನೆಂದೇ ನಾಮಕಾರಣ ಮಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದರಿಂದ ಸಹಜವಾಗೇ ಬಾಲ್ಯದಿಂದಲೇ ಅಸಹಕಾರ ಚಳವಳಿ, ಏಕೀಕರಣ, ಹುಯಿಲಗೋಳ ನಾರಾಯಣ ರಾಯರ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’ ಮುಂತಾದವುಗಳ ಪ್ರಭಾವಕ್ಕೆ ಒಳಗಾಗಿದ್ದರು. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ನಡೆಯಿತು. 

ಕೃಷ್ಣಕುಮಾರ ಕಲ್ಲೂರ ಧಾರವಾಡಕ್ಕೆ ಬಂದು ಒಂದೆರಡು ವರ್ಷಕಾಲ ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ದುಡಿದರು. ನಂತರ ಕೊಲ್ಕತ್ತಾದ ಶಾಂತಿನಿಕೇತನಕ್ಕೆ ತೆರಳಿ ‘ವಿಶ್ವಭಾರತಿ’ ಪದವಿ ಪಡೆದು ಬಂದು,  1932ರಲ್ಲಿ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ನಂತರ ಪುಣೆಯ ಫರ್ಗುಸನ್ ಕಾಲೇಜು ಸೇರಿ ಎಂ.ಎ (ಸಮಾಜಶಾಸ್ತ್ರ) ಪದವೀಧರರೆನಿಸಿದರು. ಸ್ನಾತಕ ಪದವಿ ಪಡೆದ ನಂತರ ಗುಜರಾತಿನ ಪಾಡ್ರಾ ಹಾಗೂ ಬರೋಡದಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅದು ಸರಿ ಹೊಂದದೆ 1937ರಲ್ಲಿ ಮುಂಬಯಿಗೆ ಬಂದು ಆರ್.ಎಚ್. ಫಾಬಕ್ ತಾಂತ್ರಿಕ ಸಂಸ್ಥೆಯ ಪ್ರಾಚಾರ್ಯರಾಗಿ ನಿವೃತ್ತರಾಗುವವರೆಗೂ ದುಡಿದರು. 

ಕೃಷ್ಣಕುಮಾರ ಕಲ್ಲೂರ ಧಾರವಾಡದಲ್ಲಿದ್ದಾಗಲೇ ಬೇಂದ್ರೆಯವರು ಸ್ಥಾಪಿಸಿದ್ದ ಗೆಳೆಯರ ಗುಂಪಿನ ಸದಸ್ಯರೆನಿಸಿದ್ದರು. ಈ ಗುಂಪಿನ ಗೋಕಾಕ್, ರಂ.ಶ್ರೀ. ಮುಗಳಿ, ಜಿ.ಬಿ.ಜೋಶಿ ಮುಂತಾದವರುಗಳ ಪ್ರಭಾವಕ್ಕೊಳಗಾಗಿ ಕಥೆ, ಕವಿತೆಗಳನ್ನು ಆಲೂರು ವೆಂಕಟರಾಯರ ‘ಜಯ ಕರ್ನಾಟಕ’ ಪತ್ರಿಕೆಗೆ ಬರೆಯಲು ಪ್ರಾರಂಭಿಸಿದರು. ಹಲವಾರು ಕಥೆಗಳು ಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರ ಈ ಕಥೆಗಳೆಲ್ಲವೂ ‘ಬಿಸಿಲುಗುದುರೆ’ ಮತ್ತು ‘ಜೀವನ’ ಎಂಬ ಸಂಗ್ರಹಗಳಲ್ಲಿ ಸೇರಿದವು. ಇವರ ಕಥೆಗಳಲ್ಲಿ ಗೆಳೆತನ ಹಾಗೂ ಆದರ್ಶಪ್ರಿಯತೆಗಳು ವೈಚಾರಿಕವಾಗಿ ಬಂದಿವೆ. ಜೀವನ ಎಂಬ ಕಥೆಯಲ್ಲಿನ ರಮಾಬಾಯಿಯ ಪಾತ್ರಸೃಷ್ಟಿ ಅದ್ಭುತವಾದುದು ಎಂದು ಕನ್ನಡ ವಿದ್ವತ್ಲೋಕ ಶ್ಲಾಘಿಸಿದೆ. ಇವರು ಹೊರತಂದ ಪ್ರಥಮ ಕವನ ಸಂಕಲನ ‘ಜಯಕರ್ನಾಟಕ ಸಮರ್ಪಣ ಗೀತೆಗಳು’. ಇವರು ರಚಿಸಿ ಪ್ರಕಟಿಸಿದ ಖಂಡ ಕಾವ್ಯ ‘ಮಧುರ ಗಂಗೋತ್ರಿ’.  

ಕೃಷ್ಣಕುಮಾರ ಕಲ್ಲೂರ ಅವರು ಧಾರವಾಡದಲ್ಲಿ ವಾಸ್ತವ್ಯ ಹೂಡಿದ ನಂತರ ನಾಟಕ ತಂಡಗಳೊಡನೆ ಸಖ್ಯ ಬೆಳೆದಂತೆ ತಿರುಕರ ಪಿಡುಗ, ಮಿಂಚಿನ ಹುಡಿ, ಹಾಳ್‌ಗಂಡು, ಮಿಸ್ ಚಾರುಗಾತ್ರಿ, ರಾಯರ ಮದುವೆ ಮುಂತಾದ ನಾಟಕಗಳನ್ನು ಬರೆದುದಷ್ಟೇ ಅಲ್ಲದೆ ನಟರಾಗಿಯೂ ರಂಗ ರೂಪದಲ್ಲಿ ಪಾಲ್ಗೊಂಡರು. ಇವರ ಮತ್ತೊಂದು ಪ್ರಖ್ಯಾತ ನಾಟಕವೆಂದರೆ ‘ತಿರುಗುಪ್ಪ’ ಅಥವಾ ‘ಜಾಗೃತ ರಾಷ್ಟ್ರ’. ಇದು ಐರಿಷ್ ನಾಟಕವೊಂದರ ಪ್ರೇರಣೆಯಾದರೂ ಪಾತ್ರವರ್ಗವೆಲ್ಲವೂ ಕನ್ನಡೀಕರಣಗೊಂಡಿದ್ದು ಈ ನೆಲದ ಸ್ವತಂತ್ರ ನಾಟಕವೆನ್ನುವಂತಿದೆ. ಗುಬ್ಬಿ ಸಂಸಾರ ಅವರ ಮತ್ತೊಂದು ಹೆಸರಾಂತ ಕೃತಿ.  ಉತ್ಕಟ ಕನ್ನಡಾಭಿಮಾನಿಯಾಗಿದ್ದ ಕಲ್ಲೂರರು ಕನ್ನಡ ನಾಡಿನ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಶ್ರಮಿಸಿದರು. 

ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಬರೆದ ಕೃಷ್ಣಕುಮಾರ ಕಲ್ಲೂರ ಅವರ  ಕೃತಿ ‘ಜಾಗೃತ ರಾಷ್ಟ್ರ’ ನಾಟಕಕ್ಕೆ 1955ರಲ್ಲಿ ಆಗಿನ ಮುಂಬೈ ಸರಕಾರ ಪ್ರಥಮ ಬಹುಮಾನ ನೀಡಿತ್ತು.

ಕೃಷ್ಣಕುಮಾರ ಕಲ್ಲೂರ 1982ರಲ್ಲಿ ಈ ಲೋಕವನ್ನಗಲಿದರು. 

Photo courtesy: www.Kamat.com

Scholar and writer Krishnakumar Kallur

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ