ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೇಶವಮೂರ್ತಿ


 ಎಚ್. ಎಲ್. ಕೇಶವಮೂರ್ತಿ


ಎಚ್. ಎಲ್. ಕೇಶವಮೂರ್ತಿ ಹಾಸ್ಯ ಸಾಹಿತಿಗಳಾಗಿ, ತಾಂತ್ರಿಕ ಪ್ರಾಧ್ಯಾಪಕರಾಗಿ ಮತ್ತು ಪತ್ರಕರ್ತರಾಗಿ ಹೆಸರಾಗಿದ್ದವರು.

ಕೇಶವಮೂರ್ತಿಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯಲ್ಲಿ 1939ರ ಡಿಸೆಂಬರ್ 28ರಂದು ಜನಿಸಿದರು. ತಂದೆ ಎಚ್.ಎಂ. ಲಿಂಗೇಗೌಡ, ತಾಯಿ ಚೆನ್ನಮ್ಮ. ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ ಬೆಳ್ಳೂರು, ನಾಗಮಂಗಲ, ಮೇಲುಕೋಟೆಯಲ್ಲಿ ನಡೆಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ ಪದವಿ, ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಮತ್ತು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಎಂ.ಇ. ಪದವಿಗಳನ್ನು ಪಡೆದರು. 

ಕೇಶವಮೂರ್ತಿ ಅವರು ಮಂಡ್ಯದ ಪಿ.ಇ.ಎಸ್. ಇಂಜಿನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.  

ಕೇಶವಮೂರ್ತಿ ಅವರು ಓದಿದ್ದು ಇಂಜಿನಿಯರಿಂಗ್ ಆದರೂ ಹವ್ಯಾಸವಾಗಿ ರೂಢಿಸಿಕೊಂಡದ್ದು ವಿಡಂಬನೆ, ಹಾಸ್ಯ, ವ್ಯಂಗ್ಯ ಮತ್ತು ಅಣಕು.  ನಾಡಿನ ಪ್ರಸಿದ್ಧ ಪತ್ರಿಕೆಗಳ ಮೂಲಕ ಯಾರ ಮನಸ್ಸಿಗೂ ನೋವಾಗದಂತೆ ಹಾಸ್ಯದ ಸವಿಯುಣಿಸಿದರು. ಇವರು ಬರೆದ ಹಾಸ್ಯ ಬರೆಹಗಳೆಲ್ಲಾ ಹಲವಾರು ಸಂಕಲನಗಳಾಗಿ ಹೊರಬಂದಿವೆ. ನಿನ್ಯಾಕೋ ನಿನ್ನ ಹಂಗ್ಯಾಕೋ ಮಾವ?, ಎಂಗಾರ ಟಿಕೆಟ್ ಕೊಡಿ, ಹರಕುತುಟಿ ಮಹಾತ್ಮೆ, ಇಸ್ಪೀಟ್ ನ್ಯಾಯ, (ಅ)ನೀತಿಕಥೆಗಳು, ಹನುಮ ನಿನ್ನ ನಾಮ ಒಂದೇ, ಥೂ ! ಹಲ್ಕಾ!!, ಜೆಂಟ್ಸ್ ದ್ರೌಪದಿ ವಸ್ತ್ರಾಪಹರಣ ಮುಂತಾದವು ಇವರ ನಗೆ ಬರೆಹ ಸಂಕಲನಗಳು. 
ಗೌರವಾನ್ವಿತ ದಗಾಕೋರರು, ಗಾಂಧಿ ಅವತ್ತು ಹುಟ್ಟಬಾರದಿತ್ತು! , ದೇವರುಗಳ ಟೈಮೇ ಸರಿಯಿಲ್ಲ, ಪಾತಕಿಯೇ ಪರಮಾತ್ಮ ಮುಂತಾದವು ವೈಚಾರಿಕ ವಿಡಂಬನೆಗಳು.  2011ರಲ್ಲಿ ಆಯ್ದ ಬರಹಗಳ ಸಂಕಲನ ‘ಬೆಸ್ಟ್ ಆಫ್ ಎಚ್.ಎಲ್. ಕೇಶವಮೂರ್ತಿ’ ಮತ್ತು ‘ಪುಗಸಟ್ಟೆ ಪಾರಾಯಣ’ ಕೃತಿಗಳು ಬಿಡುಗಡೆಗೊಂಡವು.  ಇವರು ಸಂಪಾದಿಸಿದ ಕೃತಿಗಳು ‘ಕನ್ನಡದಲ್ಲಿ ವಿನೋದ ಸಾಹಿತ್ಯ’ (ಕಾಲು ಶತಮಾನದ ವಿನೋದ ಸಾಹಿತ್ಯ – ಪ್ರೊ.ಅ.ರಾ. ಮಿತ್ರ ಮತ್ತು ಪ್ರೊ. ಕೆ.ನ. ಶಿವತೀರ್ಥನ್‌ರೊಡನೆ), ‘ಹಾಸ್ಯಕಸ್ತೂರಿ’ (ನಾ. ಕಸ್ತೂರಿಯವರ ಬರೆಹಗಳು – ಪ್ರೊ. ಕೆ.ಬಿ. ಪ್ರಸಾದರೊಡನೆ) ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ‘ವಿನೋದ ಸಾಹಿತ್ಯ – 1996’ ಮುಂತಾದವು.  ವೈವಾವೋಸಿ (ನಾಟಕ), ಹಿತ್ತಲಗಿಡವೇ ಮದ್ದು, ಯಾರದು ತಪ್ಪು?, ಕರಿನಾಯಿ ಸತ್ತಾಗ ಮುಂತಾದ 12 ಕೃತಿಗಳನ್ನು ನವಸಾಕ್ಷಕರಿಗಾಗಿ ರಚಿಸಿದ್ದರು. 

ಹವ್ಯಾಸಿ ವರದಿಗಾರರಾಗಿ, ಅಂಕಣಕಾರರಾಗಿಯೂ ಕೇಶವಮೂರ್ತಿಯವರು ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಕರ್ನಾಟಕ ಸಾಹಿತ್ಯ ಅಕಾಡಮಿ, ರಾಜ್ಯ ಸಂಪನ್ಮೂಲ ಕೇಂದ್ರ ಸಲಹಾ ಮಂಡಳಿ, ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಿತಿ, ಮೈಸೂರು ವಿವಿ.ದ ಸೆನೆಟ್ ಮುಂತಾದವುಗಳ ಸದಸ್ಯರಾಗಿ, ನವ ಸಾಕ್ಷರರ ಪಠ್ಯ ಪುಸ್ತಕ ಆಯ್ಕೆ ಸಮಿತಿ, ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ನೌಕರರ ಸಂಘ, ನಾಗಮಂಗಲ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನ, ಕೋಮು ಸೌಹಾರ್ದ ವೇದಿಕೆ ಮಂಡ್ಯ ಮುಂತಾದವುಗಳ ಅಧ್ಯಕ್ಷರಾಗಿಯೂ ಗೌರವ ಪಡೆದಿದ್ದರು. 

ಕೇಶವಮೂರ್ತಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ- 2 ಬಾರಿ, 1972ರಲ್ಲಿ ಇವರ ‘ನೀನ್ಯಾಕೊ ನಿನ್ನ ಹಂಗ್ಯಾಕೊ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು. 

ಎಚ್. ಎಲ್. ಕೇಶವಮೂರ್ತಿ 2017ರ ಮಾರ್ಚ್ 30ರಂದು ನಿಧನರಾದರು.

On the birth anniversary of writer, journalist, Prof. H. L. Keshavamurthy ಕೇಶವಮೂರ್ತ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ