ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರುಣ್ ಜೇಟ್ಲಿ


 ಅರುಣ್ ಜೇಟ್ಲಿ


ಅರುಣ್ ಜೇಟ್ಲಿ ನಿರ್ಭೀತ, ನೇರ ನಡೆ ನುಡಿಯ, ಅಭಿವೃದ್ಧಿಶೀಲ ಚಿಂತಕರಾಗಿ ಹೆಸರಾಗಿದ್ದವರು.

ಅರುಣ್ ಜೇಟ್ಲಿ  ವಕೀಲರಾಗಿ, ರಾಜಕಾರಣಿಯಾಗಿ, ಅದ್ಭುತ ವಾಗ್ಮಿಯಾಗಿ, ಎದ್ದುಕಾಣುವ ವ್ಯಕ್ತಿತ್ವದವರಾಗಿದ್ದವರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೆಲ್ಲಾ ಸಚಿವರಾಗಿದ್ದ ಅರುಣ್ ಜೇಟ್ಲಿ, ವಿರೋಧ ಪಕ್ಷಗಳ ಟೀಕೆಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದವರು.

ಅರುಣ್ ಜೇಟ್ಲಿ 1952ರ ಡಿಸೆಂಬರ್ 28ರಂದು ಕಿಶನ್ ಜೇಟ್ಲಿ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಗಳ ಪುತ್ರರಾಗಿ ದೆಹಲಿಯಲ್ಲಿ ಜನಿಸಿದರು. ತಂದೆ ಕಿಶನ್ ವಕೀಲರಾಗಿದ್ದರು. 1969-70ರಲ್ಲಿ ದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅವರು, 1973ರಲ್ಲಿ ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‍ನಲ್ಲಿ ವಾಣಿಜ್ಯ ಪದವಿ ಪೂರೈಸಿದರು. 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಲಾ ದಿಂದ ಕಾನೂನು ಪದವಿಯನ್ನು ಪಡೆದುಕೊಂಡರು.

ಅರುಣ್ ಜೇಟ್ಲಿ, ವಿದ್ಯಾರ್ಥಿ ಜೀವನದಲ್ಲೇ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ತಮ್ಮ ಪ್ರತಿಭೆಗಳನ್ನು ಹಲವು ರೀತಿಗಳಲ್ಲಿ ಅನಾವರಣಗೊಳಿಸಿದ್ದರು. 70ರ ದಶಕದಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ‌ಬಿವಿಪಿ)ನ ವಿದ್ಯಾರ್ಥಿ ನಾಯಕರಾಗಿದ್ದ ಅರುಣ್ ಜೇಟ್ಲಿ,  1974ರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು. ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದ ಅರುಣ್ ಜೇಟ್ಲಿ, 1973ರಲ್ಲಿ ಜಯ ಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ  ಸಕ್ರಿಯವಾಗಿ ತೊಡಗಿಕೊಂಡಿದ್ದರು.

ಜಯ ಪ್ರಕಾಶ್ ನಾರಾಯಣ್ ಅವರು ಜೇಟ್ಲಿ ಅವರನ್ನು ವಿದ್ಯಾರ್ಥಿಗಳ ರಾಷ್ಟ್ರೀಯ ಸಮಿತಿ ಹಾಗೂ ಯುವ ಸಂಘಟನೆಯ ಸಂಯೋಜಕರಾಗಿ ನೇಮಕಗೊಳಿಸಿದರು. ಸತೀಶ್ ಝಾ ಹಾಗೂ ಸ್ಮಿತು ಕೋಠಾರಿ ಅವರೊಂದಿಗೆ ನಾಗರಿಕ ಹಕ್ಕು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಜೇಟ್ಲಿ, ಪಿಯುಸಿಎಲ್ ಬುಲೆಟಿನ್ ಹೊರತಂದು ಹಲವು ಲೇಖನಗಳನ್ನು ಬರೆದರು.  ಜೈಲಿನಿಂದ ಹೊರಬಂದ ಮೇಲೆ ಅವರು ಜನಸಂಘವನ್ನು ಸೇರಿ ಪೂರ್ಣ ಪ್ರಮಾಣದ ರಾಜಕಾರಣಿಯಾದರು.
 
1977ರಿಂದ ದೇಶದ ಹಲವಾರು ಹೈಕೋರ್ಟ್‌ಗಳಲ್ಲಿ ಹಾಗೂ ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ವಕೀಲರಾಗಿ ಕೆಲಸ ಮಾಡಿದ್ದ ಜೇಟ್ಲಿ,  1989ರ ವಿ.ಪಿ. ಸಿಂಗ್ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು. ಬೋಫೋರ್ಸ್ ಹಗರಣ ಪ್ರಕರಣದಲ್ಲಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ, ಕಾಗದ ವ್ಯವಹಾರಗಳನ್ನು ನೋಡಿಕೊಳ್ಳುವ ಕೆಲಸವನ್ನು ಜೇಟ್ಲಿ ಸಮರ್ಥವಾಗಿ ನಿರ್ವಹಿಸಿದ್ದರು. ಅರುಣ್ ಜೇಟ್ಲಿಯವರಿಗೆ ಜನತಾದಳದ ಶರದ್ ಯಾದವ್ ಅವರಿಂದ ಹಿಡಿದು ಕಾಂಗ್ರೆಸ್‌ನ ಮಾಧವ್‌ರಾವ್ ಸಿಂಧ್ಯಾ, ಬಿಜೆಪಿಯ ಎಲ್.ಕೆ. ಅಡ್ವಾಣಿಯವರವರೆಗೆ ನೂರಾರು ಕಕ್ಷಿದಾರರಿದ್ದರು. 
 
ಜೂನ್ 1998ರಲ್ಲಿ ಮಾದಕ ದ್ರವ್ಯ ಹಾಗೂ ಅಕ್ರಮ ಹಣ ವರ್ಗಾವಣೆ ಹಗರಣಗಳಿಗೆ ಸಂಬಂಧಿಸಿದಂತೆ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಅರುಣ್ ಜೇಟ್ಲಿ  ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. 1999ರ  ಚುನಾವಣೆಯ ಸಮಯದಲ್ಲಿ ಜೇಟ್ಲಿ ಬಿಜೆಪಿ ವಕ್ತಾರರಾಗಿ ನೇಮಕಗೊಂಡರು.
 
ಎನ್‌ಡಿಎ ಒಕ್ಕೂಟದಡಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, 1999 ಅಕ್ಟೋಬರ್ 13 ರಂದು ಅರುಣ್ ಜೇಟ್ಲಿ, ಮಾಹಿತಿ ಹಾಗೂ ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ ನೇಮಕಗೊಂಡರು. ರಾಮ್ ಜೇಟ್ಮಲಾನಿ ಅವರು ರಾಜೀನಾಮೆ ನೀಡಿದ ನಂತರ ಜೇಟ್ಲಿಯವರು 2000ರ ಜುಲೈ 23ರಿಂದ ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರ ಖಾತೆಯ ಹೆಚ್ಚುವರಿ ಹೊಣೆಗಾರಿ ಹೊತ್ತುಕೊಂಡರು.  ಅದೇವರ್ಷ ಕ್ಯಾಬಿನೆಟ್ ಮಂತ್ರಿಯಾಗಿ ಸೇರ್ಪಡೆಗೊಂಡರು. ಕೆಲ ಕಾಲ ತಮಗಿದ್ದ ವಿವಿಧ  ಮಂತ್ರಿ ಖಾತೆಗಳನ್ನು ತೊರೆದು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ,  ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದರು. ಜನವರಿ 2003ರಲ್ಲಿ ಮತ್ತೊಮ್ಮೆ ಕೇಂದ್ರ ಸಚಿವ ಸಂಪುಟದಲ್ಲಿ ವಾಣಿಜ್ಯ,  ಕೈಗಾರಿಕೆ, ಕಾನೂನು ಮತ್ತು ನ್ಯಾಯಾಂಗ ಖಾತೆಯನ್ನು ಜೇಟ್ಲಿ ವಹಿಸಿಕೊಂಡರು. ಮೇ 2004ರಲ್ಲಿ ಎನ್‍ಡಿಎ ಚುನಾವಣೆಗಳಲ್ಲಿ ಸೋತಾಗ ಜೇಟ್ಲಿಯವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹಿಂದಿರುಗಿದರು. ಕಾನೂನು ವೃತ್ತಿಯನ್ನು ಮುಂದುವರಿಸಿದರು. ಅವರು ಗುಜರಾತ್ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.  2009ರ ಜೂನ್ 3ರಂದು ರಾಜ್ಯಸಭೆಯ  ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡರು. 2009ರ ಜೂನ್ 16ರಂದು ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷದ ನಿಯಮಕ್ಕೆ ಬದ್ಧರಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದರು. 
 
2002ರಲ್ಲಿ ಮತ್ತು 2007ರಲ್ಲಿ ಅರುಣ್ ಜೇಟ್ಲಿಯವರು  ನರೇಂದ್ರಮೋದಿ ಅವರು ಗುಜರಾತಿನಲ್ಲಿ ಅಧಿಕಾರ ಗಳಿಸುವಲ್ಲಿ ಶ್ರಮಿಸಿದರು. ಮೇ 2004ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿಯವರಿಗೆ ಕರ್ನಾಟಕದ ವಿಶೇಷ ಹೊಣೆಯನ್ನು ನೀಡಲಾಗಿತ್ತು. ಒಟ್ಟು 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತು, ರಾಜ್ಯದಲ್ಲಿ ಒಟ್ಟು 83 ಸ್ಥಾನಗಳನ್ನು ಪಡೆದುಕೊಂಡು ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿತು.
 
ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಿದ್ದ ಅರುಣ್ ಜೇಟ್ಲಿ ನರೇಂದ್ರ ಮೋದಿ ಅವರ ಬಲಗೈ ಆಗಿ ಹಲವು ಜವಾಬ್ಧಾರಿಗಳನ್ನು ನಿರ್ವಹಿಸಿದರು.  ನೋಟಿನ ಅಮೌಲ್ಯೀಕರಣ, ದೇಶದಾದ್ಯಂತ ಸಮಾನ ಜಿಎಸ್‍ಟಿ ಅಳವಡಿಕೆಯಂತಹ ತೆರಿಗೆ ಕಾನೂನು ಪರಿಷ್ಕರಣೆಗಳಂತಹ ದಿಟ್ಟ ನಿರ್ಧಾರಗಳ ನಡೆ ಅರುಣ್ ಜೇಟ್ಲಿ ಅವರದ್ದು.  ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದ ನಿಕೃಷ್ಟ ಜೀವಿಗಳಿಗೆ ಕೋರ್ಟ್ ಮೆಟ್ಟಿಲು ಹತ್ತಿಸಿ, ದಮ್ಮಯ್ಯ ಅನ್ನುವ ಶೋಚನೀಯ ಪರಿಸ್ಥಿತಿಯಲ್ಲಿ ಕ್ಷಮಾಪಣೆ ಕೇಳುವಂತೆ ಮಾಡಿದ ದಿಟ್ಟತನ ಅವರದು.  ತನಗಾಗಿ ರಾಜಕೀಯದಿಂದ ಸಂಪತ್ತು ಮಾಡಿಕೊಳ್ಳದೆ, ರಾಜಕೀಯದ ಮೂಲಕ ದೇಶಕ್ಕೆ ತಮ್ಮನ್ನು ಕೊಟ್ಟುಕೊಂಡ ವ್ಯಕ್ತಿತ್ವ ಅವರದು.

2019ರ ಆಗಸ್ಟ್ 24ರಂದು ಅರುಣ್ ಜೇಟ್ಲಿ ನಿಧನರಾದಾಗ ಅವರಿಗೆ 66ವರ್ಷವಷ್ಟೇ.  ಅನಾರೋಗ್ಯವಿದ್ದಾಗ ಸಾವೆಂಬುದು ನೋವಿಗಳಿಂದ ಬಿಡುಗಡೆಯ ಹಾದಿ.  ಅರುಣ್ ಜೇಟ್ಲಿ ಬದುಕಿದ್ದಾಗ ಸಕ್ರಿಯರಾಗಿ ಜೀವಿಸಿದ್ದರು. ಹಾಗಾಗಿ ಅವರು ಸ್ಮರಣಾರ್ಹರು.

Remembrance of Arun Jaitley on his death anniversary 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ