ದತ್ತಾತ್ರೇಯ
ದತ್ತಾತ್ರೇಯ
ದತ್ತಾತ್ರೇಯ ಎಂದೊಡನೆ ಮೊದಲು ನೆನಪಾಗುವುದು ಇಡೀ ಸಮಷ್ಟಿಯನ್ನೇ ತನ್ನ ಗುರುವೆಂದು ಭಾವಿಸಿದ ಶ್ರೇಷ್ಠ ಅರಿವಿನ ಭಾವ.
‘ದತ್ತ’ ಮತ್ತು ‘ಆತ್ರೇಯ’ ಎರಡು ಪದಗಳು ಸೇರಿ ದತ್ತಾತ್ರೇಯ ಆಗಿದೆ. ಅಂದರೆ ದತ್ತನು ಅತ್ರಿಯ ಮಗ ಆತ್ರೇಯ. ದತ್ತ ಎಂದರೆ ಕೊಡುವುದು ಎಂದರ್ಥ. ಇಲ್ಲಿ ತನ್ನನ್ನು ತಾನೇ ಅತ್ರಿ-ಅನಸೂಯೆಯರಿಗೆ ಕೊಟ್ಟುಕೊಂಡು ‘ದತ್ತ’ನಾದನು. ಅತ್ರಿ ಒಬ್ಬ ಋಷಿ. ಈತ ಬ್ರಹ್ಮನ ಏಳು ಮಕ್ಕಳಲ್ಲಿ ಒಬ್ಬ. ಈ ಜಗತ್ತಿನ ಸೃಷ್ಟಿಗಾಗಿ ತಪಸ್ಸು ಮಾಡುತ್ತಿದ್ದವನು. ಈತನ ಹೆಂಡತಿ ಅನಸೂಯೆ ಮಹಾ ಪತಿವ್ರತೆ.
ಪ್ರತಿಷ್ಠಾನಗರ (ಈಗಿನ ಪೈಠಣ: ಮಹಾರಾಷ್ಟ್ರದಲ್ಲಿದೆ) ದಲ್ಲಿ ಇಂಥವಳೇ ಇನ್ನೊಬ್ಬ ಪತಿವ್ರತೆ ಇದ್ದಳು. ಅವಳ ಹೆಸರು ಸುಮತಿ. ಅವಳ ಗಂಡ ಕೌಶಿಕ. ಅವನು ತಪ್ಪುದಾರಿ ಹಿಡಿದ. ಸುಮತಿಯನ್ನು ಬಿಟ್ಟು ಹೊರಟುಹೋದ. ಅವನಿಗೆ ವಿಪರೀತ ಕಾಯಿಲೆ ಬಂದಿತು. ಮೈಯೆಲ್ಲಾ ಹುಣ್ಣಾಯಿತು. ಮತ್ತೆ ಸುಮತಿಯ ಬಳಿಗೇ ಬಂದ. ಅವಳು ತುಂಬ ಒಳ್ಳೆಯವಳು, ಕ್ಷಮಾಶೀಲೆ. ಅವನ ಹುಣ್ಣುಗಳನ್ನು ತೊಳೆದು ಔಷಧ ಹಾಕಿದಳು. ಒಳ್ಳೆಯ ಆಹಾರ ಕೊಟ್ಟಳು. ಅವನಿಗೆ ನಡೆಯಲು ಆಗುತ್ತಿರಲಿಲ್ಲ. ಒಂದು ಸಂಜೆ ಸುಮತಿ ಅವನನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರಟಿದ್ದಳು.
ಇದೇ ಸಮಯದಲ್ಲಿ ಆ ನಗರದಲ್ಲಿ ಒಂದು ಘಟನೆ ನಡೆದಿತ್ತು. ದೊಡ್ಡ ಅಪರಾಧ ಮಾಡಿದವನೊಬ್ಬನಿಗೆ ಮರಣದಂಡನೆ ವಿಧಿಸಿದ್ದರು. ಆದರೆ ಅವನು ತಪ್ಪಿಸಿ ಕೊಂಡುಬಿಟ್ಟನು. ಅವನನ್ನು ರಾಜಭಟರು ಹುಡುಕಿಕೊಂಡು ಹೊರಟರು. ಒಂದು ಕಡೆ ಅಪರಾಧಿಯಂತೆ ಕಂಡ ಒಬ್ಬನನ್ನು ಹಿಡಿದು ತಂದರು. ರಾಜನು ವಿಚಾರ ಮಾಡದೆ ಅವನನ್ನು ಶೂಲಕ್ಕೆ ಏರಿಸುವಂತೆ ಅಪ್ಪಣೆ ಮಾಡಿದನು. ರಾಜಭಟರು ಕೂಡಲೇ ಅವನನ್ನು ಶೂಲಕ್ಕೆ ಹಾಕಿದರು. ಹೀಗೆ ಶಿಕ್ಷೆಗೆ ಒಳಗಾದವನು ನಿಜವಾಗಿ ಅಪರಾಧ ಮಾಡಿದವನಲ್ಲ, ಮಾಂಡವ್ಯನೆಂಭ ಋಷಿ. ಅವನು ತನ್ನ ಯೋಗಮಹಿಮೆಯಿಂದ ಶೂಲದ ಮೇಲಿದ್ದರೂ ಮರಣಕ್ಕೆ ತುತ್ತಾಗದೆ ನೇತಾಡುತ್ತಿದ್ದನು.
ಅದೇ ಮಾರ್ಗದಲ್ಲಿ ಪತಿಯನ್ನು ಹೊತ್ತ ಸುಮತಿ ಬರುತ್ತಿದ್ದಳು. ಆಗ ಕತ್ತಲೋ ಕತ್ತಲೆ. ಒಬ್ಬರ ಮುಖ ಒಬ್ಬರಿಗೆ ಕಾಣಿಸದು. ಆಕೆ ಈ ಕತ್ತಲಲ್ಲಿ ನಡೆಯುತ್ತಿರುವಾಗ ಕೌಶಿಕನ ಕಾಲು ಶೂಲಕ್ಕೆ ತಾಗಿತು. ಅದರಿಂದ ಮಾಂಡವ್ಯನಿಗೆ ತುಂಬಾ ನೋವಾಯಿತು. ಋಷಿಗೆ ಕೋಪ ಬಂತು. ಅವನು ಕೂಡಲೇ “ಈ ಶೂಲಕ್ಕೆ ಕಾಲು ತಾಗಿಸಿದವನು ಸೂರ್ಯ ಹುಟ್ಟಿದೊಡನೆ ಸಾಯಲಿ” ಎಂದು ಶಾಪ ಕೊಟ್ಟನು.
ಇದು ಸುಮತಿಗೆ ಕೇಳಿಸಿತು. ಕಳವಳವಾಯಿತು. ಪತಿಯೇ ಸರ್ವಸ್ವ ಎಂದು ನಂಬಿದ ಪತಿವ್ರತೆಯಲ್ಲವೇ ಅವಳು? ಕೂಡಲೇ ಅವಳು “ಎಲೈ ಸೂರ್ಯನೇ, ನೀನು ಉದಯಿಸಬೇಡ. ನನ್ನ ಮಾತನ್ನು ಮೀರಿದರೆ ನೀನು ಸುಟ್ಟು ಬೀಳುವೆ” ಎಂದುಬಿಟ್ಟಳು.
ಪತಿವ್ರತೆಯ ಶಕ್ತಿ ಮಹತ್ತಾದುದು. ಅವಳ ಶಾಪಕ್ಕೆ ಹೆದರಿ ಸೂರ್ಯ ಹುಟ್ಟಲೇ ಇಲ್ಲ. ಇದರಿಂದ ಜಗತ್ತೆಲ್ಲ ಕತ್ತಲಾಯಿತು. ಸಸ್ಯಗಳು ಬೆಳೆಯುವುದು ನಿಂತು ಹೋಯಿತು. ಎಲ್ಲ ಕೆಲಸಗಳೂ ನಿಂತುಹೋದವು. ಜನರ ಈ ಸಂಕಟವನ್ನು ನೋಡಿ ದೇವತೆಗಳಿಗೆ ಮರುಕ ಹುಟ್ಟಿತು. ಅವರು ಈ ಕಷ್ಟವನ್ನು ನಿವಾರಿಸೆಂದು ಬ್ರಹ್ಮನನ್ನು ಬೇಡಿದರು. ಬ್ರಹ್ಮನು “ಇದೆಲ್ಲ ಪತಿವ್ರತೆಯ ಶಾಪದ ಫಲ. ಇದನ್ನು ಪರಿಹರಿಸಲು ಮಹಾಪತಿವ್ರತೆಯಾದ ಅನಸೂಯೆಯನ್ನೇ ಮೊರೆ ಹೋಗೋಣ” ಎಂದನು.
ಬ್ರಹ್ಮಾದಿ ದೇವತೆಗಳೆಲ್ಲ ಪ್ರತಿಷ್ಠಾನಗರದ ಬಳಿ ಇದ್ದ ಅತ್ರಿ ಋಷಿಯ ಆಶ್ರಮಕ್ಕೆ ಬಂದರು. ಅನಸೂಯಾದೇವಿಯನ್ನು ಕಂಡು ವಂದಿಸಿದರು. ಋಷಿ ದಂಪತಿಗಳಿಗೆ ಆಶ್ಚರ್ಯವೋ ಆಶ್ಚರ್ಯ. ಬ್ರಹ್ಮದೇವರು, ದೇವರಾಜ ಇಂದ್ರ ಮೊದಲಾದ ಎಲ್ಲ ದೇವತೆಗಳೂ ಇಳಿದು ಬಂದಿದ್ದಾರೆ! ಕಾರಣ ಕೇಳುವ ಮೊದಲೇ ದೇವತೆಗಳು ಹೇಳಿದರು : “ತಾಯಿ, ಕೌಶಿಕನ ಪತ್ನಿ ಸುಮತಿಯ ಶಾಪದಿಂದ ಸೂರ್ಯನು ಹುಟ್ಟದೆ ಮರೆಯಾಗಿದ್ದಾನೆ. ಇದರಿಂದ ಲೋಕವೆಲ್ಲ ಅಸ್ತವ್ಯಸ್ತವಾಗಿದೆ. ಜನರು , ಪಶುಪಕ್ಷಿಗಳು ಹಾಹಾಕಾರ ಮಾಡುತ್ತಿವೆ. ಆದ್ದರಿಂದ ನೀನು ಪ್ರಸನ್ನಳಾಗಿ ಸುಮತಿಗೆ ತಿಳಿಯಹೇಳಬೇಕು. ಇದರಿಂದ ನಾವು ಉಪಕೃತರಾಗುವೆವು.
ಅತ್ರಿ-ಅನಸೂಯೆಯರು ದೇವತೆಗಳೊಡನೆ ಸುಮತಿಯ ಮನೆಗೆ ನಡೆದರು. ಸುಮತಿ ಅನಸೂಯೆಯನ್ನು ಆದರಿಸಿ, ಎಲ್ಲರನ್ನೂ ಸ್ವಾಗತಿಸಿದಳು. ಅನಸೂಯೆ ತಾನು ಬಂದುದೇಕೆ ಎಂಬುದನ್ನು ತಿಳಿಸಿದಳು. “ಇದು ದೇವಕಾರ್ಯ, ನೀನು ಮಾಡಿಕೊಡಬೇಕು. ಸೂರ್ಯನಿಗೆ ಕೊಟ್ಟ ಶಾಪ ಹಿಂತೆಗೆದುಕೊಂಡು ಲೋಕವನ್ನು ಉದ್ಧರಿಸು” ಎಂದಳು. “ನಿಜ. ಆದರೆ ಸೂರ್ಯನು ಉದಯಿಸಿದರೆ ನನ್ನ ಗಂಡನಿಗೆ ವಿಪತ್ತಲ್ಲವೆ? ಆತ ಹೋದರೆ ನನ್ನ ಸರ್ವಸ್ವವೂ ಹೋದಹಾಗೆ. ಶಾಪವನ್ನು ಹಿಂದಕ್ಕೆ ತೆಗೆದುಕೊಳ್ಳಲಾರೆ” ಎಂದುಬಿಟ್ಟಳು ಸುಮತಿ. ಆಗ ಅನಸೂಯೆ, “ತಂಗೀ, ಸೂರ್ಯ ಹುಟ್ಟಿದರೆ ನಿನ್ನ ಗಂಡ ಸಾಯುವನು, ನಿಜ. ಆದರೆ ಆತನನ್ನು ನನ್ನ ಶಕ್ತಿಯಿಂದ ಮತ್ತೆ ಜೀವಿಸುವಂತೆ ಮಾಡುವೆ. ಈ ಮಾತು ನಿಶ್ಚಯ, ನಂಬು. ಕೂಡಲೇ ದೇವಕಾರ್ಯವನ್ನು ನಡೆಸಿಕೊಡು” ಎಂದಳು.
ಸುಮತಿ ಸೂರ್ಯನಿಗೆ ತಾನು ಕೊಟ್ಟ ಶಾಪವನ್ನು ಹಿಂತೆಗೆದುಕೊಂಡಳು. ಕೂಡಲೇ ಸೂರ್ಯನು ಹುಟ್ಟಿ ಬಂದನು. ಲೋಕವೆಲ್ಲ ಉತ್ಸಾಹ, ಸಂತೋಷದಲ್ಲಿ ಮುಳುಗಿತು. ಆಗಲೇ ಕೌಶಿಕನ ಪ್ರಾಣ ಹಾರಿಹೋಗಿ, ಸುಮತಿಯ ಮುಖ ಬಾಡಿತು. ಆಗ ಅನಸೂಯೆ ಅವಳಿಗೆ ಧೈರ್ಯ ಕೊಟ್ಟಳು. ಆಕೆಯ ಪಾತಿವ್ರತ್ಯ ಪ್ರಭಾವದಿಂದ ಕೌಶಿಕನು ಆರೋಗ್ಯವಂತನಾಗಿ, ಒಳ್ಳೇ ಮನಸ್ಸಿನವನಾಗಿ ಮತ್ತೆ ಬದುಕಿಬಂದನು. ಎಲ್ಲರಿಗೂ ಸಂತೋಷವಾಯಿತು.
ದೇವತೆಗಳು ಅನಸೂಯೆಯನ್ನು ಹೊಗಳಿದರು. ಅವರು “ಮಾತೆ, ನೀನು ದೇವತಾಕಾರ್ಯವನ್ನು ಮಾಡಿಕೊಟ್ಟೆ. ನಾವು ಸಂತುಷ್ಟರಾಗಿರುವೆವು. ನಿನಗೆ ಬೇಕಾದ ವರವನ್ನು ಕೇಳು, ಕೊಡುವೆವು” ಎಂದರು.
ಅನಸೂಯೆ, “ಹರಿ, ಹರ, ಬ್ರಹ್ಮರು ನನ್ನ ಮಕ್ಕಳಾಗಲಿ” ಎಂದು ಬೇಡಿದಳು. ದೇವತೆಗಳು “ಹಾಗೇ ಆಗಲಿ” ಎಂದರು. ಅದರಂತೆ ಅನಸೂಯೆಯ ಹೊಟ್ಟೆಯಲ್ಲಿ ತ್ರಿಮೂರ್ತಿಗಳು ಹುಟ್ಟಿದರು. ಬ್ರಹ್ಮನ ಅಂಶದಿಂದ ಚಂದ್ರನೂ, ವಿಷ್ಣುವಿನ ಅಂಶದಿಂದ ದತ್ತನೂ, ಈಶ್ವರನ ಅಂಶದಿಂದ ದುರ್ವಾಸನೂ ಹುಟ್ಟಿದರು.
ಕನ್ಯಾಕುಮಾರಿಯ ಹೆಸರನ್ನು ಎಲ್ಲರೂ ಬಲ್ಲರು. ಅದು ನಮ್ಮ ಭಾರತ ಮಾತೆಯ ಪದತಲ. ಮೂರು ಸಮುದ್ರಗಳು ಸೇರುವ ಸ್ಥಳ ಇದೊಂದೇ. ಇಲ್ಲಿಂದ ಆರು ಮೈಲಿ ದೂರದಲ್ಲಿ ‘ಸುಚೀಂದ್ರ’ ಎಂಬ ಸ್ಥಳವಿದೆ. ಅಶುಚಿಯಾದ ಇಂದ್ರ ಇಲ್ಲಿನ ತೀರ್ಥದಲ್ಲಿ ಸ್ನಾನಮಾಡಿ ಶುಚಿಯಾದನಂತೆ. ಅದಕ್ಕೇ ಆ ಹೆಸರು. ಇದು ಅತ್ರಿ ಅನಸೂಯೆಯರ ಆಶ್ರಮವಿರುವ ಸ್ಥಾನ . ಇಲ್ಲಿನ ದೇವರು ‘ಸ್ಥಾಣುಮಾಲೈಯರ್’ ಅಂದರೆ ತ್ರಿಮೂರ್ತಿ ಸ್ವರೂಪನಾದ ದತ್ತಾತ್ರೇಯ.
ಅನಸೂಯಾದೇವಿ ತನ್ನ ಮೂರು ಮಕ್ಕಳನ್ನೂ ಲಾಲಿಸಿದಳು, ಪಾಲಿಸಿದಳು. ಮಕ್ಕಳು ಬೆಳೆದು ದೊಡ್ಡವರಾದರು. ಆಗ ತಂದೆತಾಯಿಯರ ಅಪ್ಪಣೆ ಪಡೆದು ಚಂದ್ರ ಮಂಡಲಕ್ಕೆ ಹೋದನು. ಅಲ್ಲಿಂದಲೇ ತಂದೆತಾಯಿಯರಿಗೆ ಕಾಣಿಸಿಕೊಳ್ಳುವನು. ದುರ್ವಾಸನು ತಪಸ್ಸಿಗೆ ಹೋದನು. ನೆನಸಿದಾಗ ಬರುವೆನೆಂದು ತಂದೆ-ತಾಯಿಯರಿಗೆ ಹೇಳಿ ಹೋದನು. ದತ್ತನು ತಂದೆತಾಯಿಯರ ಸೇವೆಯಲ್ಲೇ ಉಳಿದನು.
ದತ್ತಾವತಾರ
ಈ ದತ್ತನಲ್ಲೇ ಚಂದ್ರ, ದುರ್ವಾಸರ ಅಂಶವೂ ಒಳಗೊಂಡಿತ್ತು. ಅದರಿಂದಲೇ ಆತನಿಗೆ ಮೂರು ಮುಖ, ಆರು ಕೈ. ಕೆಳಗಿನ ಕೈಗಳಲ್ಲಿ ಮಾಲೆ, ಕಮಂಡಲ; ಮಧ್ಯದ ಕೈಗಳಲ್ಲಿ ಡಮರು, ತ್ರಿಶೂಲ; ಮೇಲಿನ ಕೈಗಳಲ್ಲಿ ಗದಾ, ಚಕ್ರ. ಕಾವಿಬಟ್ಟೆಯನ್ನು ತೊಟ್ಟು, ಜಟೆ, ವಿಭೂತಿಗಳಿಂದ ಅಲಂಕೃತನಾಗಿದ್ದನು. ಆತ ಹುಟ್ಟಿದ್ದು ಮಾರ್ಗಶೀರ್ಷ ಮಾಸದ ಶುಕ್ಲಪಕ್ಷ ಚತುರ್ದಶಿ. ಆ ದಿನವನ್ನೇ ಪ್ರತಿ ವರ್ಷ ‘ದತ್ತಜಯಂತಿ’ ಆಚರಿಸುವರು.
ದತ್ತಾತ್ರೇಯನ ಚಿತ್ರಣದಲ್ಲಿ ಹಸುವೊಂದಿದೆ. ಅದೇ ಕಾಮಧೇನು. ಆತನ ಹಿಂದೆ ದೊಡ್ಡ ಮರವಿದೆ. ಅದೇ ಕಲ್ಪವೃಕ್ಷ. ನಾಲ್ಕು ನಾಯಿಗಳಿವೆ. ಅವೇ ನಾಲ್ಕು ವೇದಗಳು. ಹೀಗೆ ದತ್ತಾತ್ರೇಯನ ಮೂರ್ತಿ ತ್ಯಾಗ, ಭಕ್ತಿ, ಜ್ಞಾನ, ಅನುಕಂಪಗಳ ಸಾಕಾರಮೂರ್ತಿಯಾಗಿದೆ.
ನಮ್ಮ ದೇಶದ ನೈರುತ್ಯ ಭಾಗದಲ್ಲಿ, ಗುಜರಾತ್ ರಾಜ್ಯದಲ್ಲಿರುವ ಸಸ್ಯಗಿರಿ ದತ್ತಾತ್ರೇಯನ ವಾಸಸ್ಥಾನವಾಗಿತ್ತಂತೆ. ಇದು ರಮ್ಯವಾದ ಬೆಟ್ಟ ಪ್ರದೇಶ, ಅನೇಕ ಗವಿಗಳು, ಕಂದರಗಳು ಅಲ್ಲಿವೆ. ಹೆಮ್ಮರಗಳು ಬೆಳೆದು ನಿಂತಿವೆ. ಇಂಥ ಪ್ರಕೃತಿ ರಮ್ಯಸ್ಥಾನದಲ್ಲಿ ದತ್ತನ ಆಶ್ರಮ ಇದೆ. (ಇದನ್ನು ಈಗ ‘ಗಿರಿನಾರ್’ ಎಂದು ಕರೆಯುತ್ತಾರೆ. ಮುಂಬಯಿನಿಂದ ಅಹಮದಾಬಾದ್, ಅಲ್ಲಿಂದ ರಾಜಕೋಟೆ, ಅಲ್ಲಿಂದ 63 ಮೈಲಿಯಲ್ಲಿ ಜುನಾಗಡ್ – ಹೀಗೆ ರೈಲಿನಲ್ಲಿ ಹೋಗಬಹುದು. ಜುನಾಗಡ್ ಹಿಂದೆ ನವಾಬರ ಸಂಸ್ಥಾನವಾಗಿತ್ತು. ಇದರ ಸಮೀಪವೇ ಉತ್ತುಂಗ ಶಿಖರದ ‘ಗಿರಿನಾರ್’ ಇದೆ . ಇದರ ಎತ್ತರ 3500 ಅಡಿಗಳು.)
24 ಗುರುಗಳು
ಭಾಗವತದಲ್ಲಿ ಶ್ರೀಕೃಷ್ಣ ತನ್ನ ಸ್ನೇಹಿತನಾದ ಉದ್ಧವನಿಗೆ ಉಪದೇಶಿಸಿದ ‘ಉದ್ಧವಗೀತೆ’ ಎಂದೇ ಪ್ರಸಿದ್ಧವಾಗಿರುವ ಮಾತುಗಳಲ್ಲಿ ದತ್ತಾತ್ರೇಯನ 24 ಗುರುಗಳ ಮಾತು ಬರುತ್ತದೆ.
ಒಮ್ಮೆ ರಾಜ ‘ಯದು’ ಎಲ್ಲಾ ಚಿಂತೆಗಳಿಂದ ಮುಕ್ತನಾಗಿ ಸಂತಸವೇ ಮೂರ್ತಿವೆತ್ತಂತೆ ಕಾಡಿನಲ್ಲಿ ಅವಧೂತನಾಗಿ ಸಂಚರಿಸುತ್ತಿದ್ದ ‘ದತ್ತ’ನನ್ನು ಕುರಿತು ನಮ್ರನಾಗಿ, ಮಹಾನುಭಾವನೆ, “ನೀನು ಇಷ್ಟು ಸಂತಸದಿಂದಿರುವುದು ಹೇಗೆ ಸಾಧ್ಯ, ನಿನ್ನ ಗುರುವಾದರೂ ಯಾರು?” ಎಂದು ಪ್ರಶ್ನಿಸುತ್ತಾನೆ.
ಇದಕ್ಕೆ ಉತ್ತರಿಸಿದ ದತ್ತನು “ನನ್ನ ಸಂತಸ ಮತ್ತು ಸಂತೃಪ್ತಿಗಳು ನನ್ನ ಆತ್ಮ ಸಾಕ್ಷಾತ್ಕಾರದ ಫಲಗಳು. ನನ್ನ ಆತ್ಮವೇ ಗುರು. ಆದಾಗ್ಯೂ ನನಗೆ ಸಮಸ್ತ ಸೃಷ್ಟಿಯೇ ಗುರುವಾಗಿದ್ದು 24 ಮೂಲಗಳಿಂದ ಅಗತ್ಯವಾದ ಸುಜ್ಞಾನವನ್ನು ಗಳಿಸಿದ್ದು ಈ 24 ಮೂಲಗಳನ್ನೂ ನನ್ನ ಗುರುಗಳೆಂದೇ ಭಾವಿಸಿದ್ದೇನೆ, ಇವುಗಳನ್ನು ಸವಿಸ್ತಾರವಾಗಿ ಹೇಳುತ್ತೇನೆ ಕೇಳುವವನಾಗು” ಎಂದನು.
1. ಪೃಥ್ವಿ: ನಾನು ಪೃಥ್ವಿಯಿಂದ ಧರ್ಮದ ಮಾರ್ಗ, ಸಹನಶೀಲತೆ, ಕ್ಷಮೆ, ತಾಳ್ಮೆ ಹಾಗೂ ಕರ್ತವ್ಯಗಳನ್ನು ನಿರ್ವಹಿಸುವ ಕಲೆಯನ್ನು ಅರಿತಿದ್ದೇನೆ. ಪರ್ವತಗಳು ಮತ್ತು ಮರಗಿಡಗಳಂತೆ ನಾವು ಕೂಡಾ ಎಲ್ಲ ಜೀವಿಗಳ ಒಳಿತಿಗಾಗಿ ಬಾಳುವುದನ್ನು ಅರಿಯಬೇಕು.
2. ವಾಯು: ಯಾವ ರೀತಿಯಲ್ಲಿ ವಾಯುವು ಶೀತ ಉಷ್ಣತೆಗಳಲ್ಲಿ ಸಂಚರಿಸುತ್ತಿರುವಾಗಲೂ ಅವುಗಳ ಗುಣದೋಷಗಳಲ್ಲಿ ಸಿಲುಕಿಕೊಳ್ಳುವುದಿಲ್ಲವೋ, ಹಾಗೆಯೇ ನಾವು ಯಾರ ಗುಣ ದೋಷಗಳನ್ನೂ ನೋಡದೇ ಸುತ್ತಮುತ್ತಲಿನ ವಿಷಯಗಳಿಂದ ವಿಚಲಿತರಾಗದೇ ಮಾರ್ಗಕ್ರಮಣವನ್ನು ಮಾಡಬೇಕು.
3. ಆಕಾಶ: ಆಕಾಶಕ್ಕೆ ಯಾವುದೇ ಎಲ್ಲೆಗಳಿಲ್ಲ. ಅದು ಎಲ್ಲ ವಸ್ತುವಿನ ಪ್ರಕೃತಿಗಳಿಗೂ ಅತೀತವಾಗಿದೆ. ಕೆಲವೊಮ್ಮೆ ಮೋಡಗಳು ಮುಸುಕಿದರೂ ಕೂಡಾ ಆಕಾಶವು ಬಾಧಿತಗೊಳ್ಳುವುದಿಲ್ಲ. ಅಂತೆಯೇ ನಮ್ಮ ಆತ್ಮವೂ ಕೂಡ. ನಮ್ಮ ದೇಹವು ಸಹಾ ಎಷ್ಟೇ ಕಶ್ಮಲ ಧೂಳುಗಳಿಂದ ಆವೃತಗೊಂಡರೂ ಅದು ಆತ್ಮವನ್ನು ಬಾಧಿಸಲಾರವು. ಆಕಾಶವು ಎಲ್ಲೆಡೆ ವ್ಯಾಪಿ, ಎಲ್ಲವನ್ನೂ ಆವರಿಸಿದೆ ಮತ್ತು ಎಲ್ಲವನ್ನೂ ಮೀರಿ ಅನಂತವಾಗಿದೆ. ಆಗಸದೊಳಗಿನ ಬರಿದಾದ ಆಳ, ನಾವು ನಮ್ಮ ಮನಸ್ಸಿನ ಪ್ರಕ್ಷುಬ್ಧತೆಗಳಿಗೆ ಅತೀತವಾಗಿ ನಿರ್ಮಲವಾಗಿರಬೇಕೆಂಬುದನ್ನು ತಿಳಿಹೇಳುತ್ತಿದೆ.
4. ನೀರು: ಉತ್ತಮ ವ್ಯಕ್ತಿ ಎಲ್ಲ ಕಲ್ಮಶಗಳಿಂದ ವಿಮುಕ್ತನಾಗಿದ್ದು, ಸಜ್ಜನಿಕೆಯಿಂದ ಕೂಡಿದವನಾಗಿ, ಇತರರೊಂದಿಗೆ ವ್ಯವಹರಿಸುವಾಗಲೆಲ್ಲಾ ಹರಿಯುವ ನೀರಿನಂತೆ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತಾನೆ. ಅಂತಹ ವ್ಯಕ್ತಿಯ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಶುಭ್ರ ನೀರಿನ ಸಂಪರ್ಕಕ್ಕೆ ಬಂದಂತೆ ಪುನೀತಭಾವ ಹೊಂದುತ್ತಾರೆ. ನೀರು ಎಲ್ಲಾ ಜೀವಿಗಳ ಬಾಯಾರಿಕೆಯನ್ನು ತಣಿಸತ್ತದೆ. ಯಾವುದೇ ಗರ್ವವಿಲ್ಲದೆ ಎಲ್ಲ ಜೀವಿಗಳ ಅಗತ್ಯವನ್ನೂ ಪೂರೈಸುತ್ತದೆ. ನೀರಿನಂತೆಯೇ ಉತ್ತಮ ವ್ಯಕ್ತಿ ಸಹಾ ತನ್ನ ಬಳಿ ಬರುವ ಪ್ರತಿಯೊಬ್ಬರ ಆರೋಗ್ಯ, ಶಾಂತಿ ಮತ್ತು ಸಂತಸಗಳಿಗೆ ಅಗತ್ಯವಾಗುವಂತೆ ಬದುಕಬೇಕು. ನೀರಿನಂತೆ ಯಾವುದೇ ಅಹಮಿಕೆ ತೋರದಿರುವಂತೆ ಪರಮಾತ್ಮನ ಶ್ರೇಷ್ಠ ಸೃಷ್ಟಿಯ ತೆರದಿ ಬಾಳಬೇಕು.
5. ಅಗ್ನಿ: ಅಗ್ನಿಯು ಪ್ರಕಾಶಮಾನವಾಗಿ ಉರಿಯುವಂತದ್ದು. ಈ ಗುಣ ಯಾರೂ ಅಪಹರಿಸಲಾಗದಂತದ್ದು. ಅದು ಏನನ್ನೂ ಶೇಖರಿಸಿಟ್ಟುಕೊಳ್ಳುವುದಕ್ಕಾಗಿ ಏನನ್ನೂ ಹೊಂದಿರುವುದಿಲ್ಲ. ಅದು ಏನನ್ನೇ ಆಗಲಿ ಭಕ್ಷಿಸುವುದು ಹೌದಾದರೂ, ತನ್ನ ಸಂಪರ್ಕಕ್ಕೆ ಬರುವ ಯಾವುದೇ ವಸ್ತುವಿನ ಗುಣಗಳಿಗೂ ಅತೀತವಾಗಿದೆ. ಸಚ್ಚಾರಿತ್ಯ್ರವುಳ್ಳ ವ್ಯಕ್ತಿಯೂ ವೈರಾಗ್ಯ, ಜ್ಞಾನ ತಪಃಶ್ಚರ್ಯೆಗಳಿಂದ ಪಾವಿತ್ರ್ಯಹೊಂದಿದ್ದು ತನ್ನ ಉದರವನ್ನು ಹೊರತುಪಡಿಸಿದಂತೆ ಯಾವುದನ್ನೇ ಶೇಖರಿಸಿಟ್ಟುಕೊಳ್ಳುವ ಆವರಣವನ್ನು ಹೊಂದುವುದಿಲ್ಲ. ಬೆಂಕಿಗೆ ಯಾವುದೇ ಸ್ವರೂಪವಿಲ್ಲದಿದ್ದಾಗಿಯೂ ತಾನು ಸುಡುತ್ತಿರುವ ಕಟ್ಟಿಗೆಯರೂಪದಲ್ಲಿ ತನ್ನನ್ನು ಅಭಿವ್ಯಕ್ತಿಗೊಳಿಸಿಕೊಳ್ಳುತ್ತದೆ. ಅಂತೆಯೇ ತಾನು ಪಡೆದ ದೇಹದ ರೂಪದ ಮುಖಾಂತರವೇ ಆತ್ಮವೂ ಸಹಾ ತನ್ನನ್ನು ತೋರ್ಪಡಿಸಿಕೊಳ್ಳುತ್ತದೆ.
6. ಚಂದ್ರ: ಚಂದ್ರನು ಕುಗ್ಗುತ್ತಾನೆ, ಹಿಗ್ಗುತ್ತಾನೆ. ಹೀಗೆ ನಿರಂತರವಾದ ಪ್ರಕ್ರಿಯೆಗಳಿಗೆ ಒಳಗಾದರೂ ಶಾಂತನಾಗಿರುತ್ತಾನೆ. ಅಂತೆಯೇ ಪ್ರಾಜ್ಞ ವ್ಯಕ್ತಿಯು ಸಹಾ ಜನನದಿಂದ ಮರಣದವರೆಗಿನ ನಿರಂತರ ಬದಲಾವಣೆಗಳಿಂದ ಬಾಧಿಸಲ್ಪಡುವುದಿಲ್ಲ.
7. ಸೂರ್ಯ: ಸೂರ್ಯನ ಪ್ರತಿಫಲನವನ್ನು ಬಹಳ ವಸ್ತುಗಳ ಮೇಲೆ ಕಾಣಬಹುದಾದರೂ ಸೂರ್ಯನು ಮಾತ್ರಾ ಒಬ್ಬನೇ. ಇದು ಪರಮಾತ್ಮನು ಒಬ್ಬನೇ ಒಬ್ಬನಾಗಿದ್ದು, ವಿವಿಧ ಜೀವಿಗಳ ಮೇಲೆ ತನ್ನನು ಪ್ರತಿಫಲಿಸಿದ್ದಾನೆ ಎಂಬುದನ್ನು ಸೂಚಿಸುತ್ತಿದೆ. ಹೀಗೆ ಆತ್ಮವು ದೇಹವಲ್ಲ ಎಂಬುದನ್ನು ನಾವು ಅರಿಯಬಹುದಾಗಿದೆ. ಸೂರ್ಯನು ನೀರನ್ನು ಆವಿಯಾಗಿಸಿ ಯೋಗ್ಯ ಸಮಯ ಬಂದಾಗ ಅದನ್ನು ಪರೋಪಕಾರಕ್ಕಾಗಿ ಭೂಮಿಯ ಮೇಲೆ ಮಳೆಯಾಗಿ ಸುರಿಸುತ್ತಾನೆ. ಹಾಗೆಯೇ ಪ್ರಾಜ್ಞನೂ ಸಹಾ ವಸ್ತುಗಳನ್ನು ಸ್ವೀಕರಿಸುತ್ತಾನಾದರೂ, ಅವುಗಳಿಗೆ ಆಂಟಿಕೊಳ್ಳುವ ಮನೋಭಾವಕ್ಕೆ ಸಿಲುಕದವನಾಗಿ, ಅವುಗಳನ್ನು ತನ್ನ ಕರ್ತವ್ಯ ನಿರ್ವಹಣಾ ರೂಪದಲ್ಲಿ ಲೋಕಕ್ಕೆ ಒಳಿತಾಗುವಂತೆ ಹಿಂದಿರುಗಿಸುತ್ತಾನೆ.
8. ಪಾರಿವಾಳ: ಪಾರಿವಾಳವು ತನ್ನ ಸಂಗಾತಿಯೊಡನೆ ಪ್ರೀತಿಯಿಂದ ಇದ್ದು, ತನ್ನ ಮರಿಗಳೊಂದಿಗೆ ಆನಂದದಿಂದ ಇರುತ್ತದೆ. ಒಮ್ಮೆ ಸಂಗಾತಿಯೊಂದಿಗೆ ಹೊರಗೆ ಹೋಗಿ ಮರಿಗಳಿಗೆ ಆಹಾರ ತರುವಷ್ಟರಲ್ಲಿ ಮರಿಗಳು ಬೇಡನ ಬಲೆಗೆ ಸಿಲುಕಿರುತ್ತವೆ. ಮಕ್ಕಳಿಂದ ದೂರವಿರುವುದು ಅಸಾಧ್ಯವೆನಿಸಿ ತಾವೂ ಮೂರ್ಖತನದಿಂದ ಬಲೆಗೆ ಹಾರಿ ಬಂಧಿತಗೊಳ್ಳುತ್ತವೆ. ಪ್ರಾಜ್ಞನು ಅತಿಯಾದ ವ್ಯಾಮೋಹಗಳಿಂದ ಬಂಧಿತನಾಗುವುದಿಲ್ಲ.
9. ಹೆಬ್ಬಾವು: ಹೆಬ್ಬಾವು ಭಯಪಡದೆ ಪ್ರಾರಬ್ಧದ ಮೇಲೆ ನಂಬಿಕೆಯನ್ನಿಟ್ಟು ಒಂದೇ ಜಾಗದಲ್ಲಿ ಬಿದ್ದುಕೊಂಡಿರುತ್ತದೆ. ಅದು ಯಾವ ಯಾವ ಸಮಯದಲ್ಲಿ ಏನೇನು ಸಿಗುತ್ತದೆಯೋ, ಅದನ್ನು ಭಕ್ಷಿಸಿ ಸಂತೋಷ ಪಡುತ್ತದೆ. ಅದಕ್ಕೆ ಪ್ರಾಪ್ತವಾದ ಆಹಾರವನ್ನು ಹೆಚ್ಚು-ಕಡಿಮೆ ಅಥವಾ ಸಿಹಿ-ಕಹಿ ಎಂದು ಎಂದೂ ವಿಚಾರ ಮಾಡುವುದಿಲ್ಲ. ಕೆಲವೊಂದು ಸಮಯದಲ್ಲಿ ಹೆಬ್ಬಾವು ತಿನ್ನುವುದಕ್ಕೆ ಏನೂ ಸಿಗದಿದ್ದರೂ ಹೆದರುವುದಿಲ್ಲ. ಪ್ರಾಜ್ಞನು ಸುಖದ ಆಮಿಷಗಳ ಅರಸುವಿಕೆಯಲ್ಲಿ ಎಂದೂ ಕಳೆದುಹೋಗುವುದಿಲ್ಲ.
10. ಸಮುದ್ರ: ನದಿಗಳು ಬಹಳಷ್ಟು ನೀರನ್ನು ತಂದರೂ ಸಮುದ್ರವು ಸುಖ ಪಡುವುದಿಲ್ಲ ಅಥವಾ ನೀರನ್ನು ತರಲಿಲ್ಲವೆಂದು ದುಃಖ ಪಡುವುದಿಲ್ಲ. ಅದರಿಂದ ಉಬ್ಬುವುದೂ ಇಲ್ಲ ಅಥವಾ ಕ್ಷೀಣಿಸುವುದೂ ಇಲ್ಲ. ಹಾಗೆಯೇ ಪ್ರಾಜ್ಞನು ಭೋಗಗಳು ಲಭಿಸಿದಾಗ ಸುಖಿಯಾಗಬಾರದು ಅಥವಾ ನೋವುಗಳು ಬಂದಾಗ ದುಃಖಿತನೂ ಆಗಬಾರದು, ಯಾವಾಗಲೂ ಆನಂದದಲ್ಲಿಯೇ ಇರಬೇಕು.
11. ದೀಪದ ಹುಳ: ಯಾವ ರೀತಿ ಉರಿಯುತ್ತಿರುವ ದೀಪದಿಂದ ಹರಡಿದ ಮೋಹಕವಾದ ತೇಜವನ್ನು ನೋಡಿ ದೀಪದ ಹುಳವು ಮೋಹಿತವಾಗುತ್ತದೆಯೋ ಮತ್ತು ಅದರ ಮೇಲೆ ಎರಗಿ ಸುಟ್ಟು ಸಾಯುತ್ತದೆಯೋ ಹಾಗೆಯೇ, ಯಾವ ಮನುಷ್ಯನು ಮೋಹಿತನಾಗುತ್ತಾನೆಯೋ ಅವನು ದೀಪದ ಹುಳದಂತೆ ಅದರಲ್ಲಿಯೇ ನಾಶವಾಗುತ್ತಾನೆ.
12. ಜೇನುನೊಣ: ಜೇನುನೊಣವು ಬಹಳ ಕಷ್ಟಪಟ್ಟು ಇಕ್ಕಟ್ಟಿನ ಜಾಗದಲ್ಲಿ, ಎತ್ತರದ ಮರದ ಮೇಲೆ ಜೇನುಗೂಡನ್ನು ಕಟ್ಟಿ ಅದರಲ್ಲಿ ಜೇನುತುಪ್ಪವನ್ನು ಶೇಖರಿಸುತ್ತದೆ. ಅದನ್ನು ತಾನೂ ತಿನ್ನುವುದಿಲ್ಲ ಮತ್ತು ಬೇರೆ ಯಾರಿಗೂ ತಿನ್ನಲು ಕೊಡುವುದಿಲ್ಲ. ಕೊನೆಗೆ ಜೇನುತುಪ್ಪವನ್ನು ಸಂಗ್ರಹ ಮಾಡುವವರು ಹಠಾತ್ತಾಗಿ ಬಂದು, ಜೇನುನೊಣಗಳನ್ನು ಸಾಯಿಸಿ ಜೇನುತುಪ್ಪವನ್ನು ಗೂಡುಸಮೇತವಾಗಿ ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ಯಾವ ಜಿಪುಣನು ಬಹಳಷ್ಟು ಪ್ರಯತ್ನಪಟ್ಟು ದ್ರವ್ಯವನ್ನು ಸಂಪಾದನೆ ಮಾಡಿ ಶೇಖರಿಸಿಟ್ಟುಕೊಳ್ಳುತ್ತಾನೆಯೋ, ಅವನು ಅಗ್ನಿ, ಕಳ್ಳರು ಅಥವಾ ರಾಜರು ಹಠಾತ್ತಾಗಿ ಬಂದು ಆ ದ್ರವ್ಯವನ್ನು ಅಪಹರಿಸುವುದರಿಂದ ದುಃಖಿತನಾಗುತ್ತಾನೆ, ಅಥವಾ ಅವನಿಗೆ ಅಯೋಗ್ಯ ಸಂತತಿ ಪ್ರಾಪ್ತವಾಗಿ ಆ ಸಂತತಿಯಿಂದ ದ್ರವ್ಯದ ಅಪವ್ಯಯವಾಗುತ್ತದೆ ಅಥವಾ ಅವನು ಸಂತತಿರಹಿತನಾಗಿ ಮರಣ ಹೊಂದುತ್ತಾನೆ. ಹೀಗೆ ಅವನ ಮರಣದ ನಂತರ ಆ ದ್ರವ್ಯವು ಎಲ್ಲಿರುತ್ತದೆಯೋ ಅಲ್ಲಿಯೇ ಉಳಿಯುತ್ತದೆ ಅಥವಾ ಬೇರೆ ಯಾರಿಗಾದರೂ ಪ್ರಾಪ್ತವಾಗುತ್ತದೆ. ಅವನಿಗೆ ಮರಣದ ಸಮಯದಲ್ಲಿ ಆ ದ್ರವ್ಯದ ಮೇಲೆ ಆಸಕ್ತಿ ಇದ್ದರೆ ಅವನು ಪಿಶಾಚಿ ಅಥವಾ ಸರ್ಪನಾಗಿ ಆ ದ್ರವ್ಯವನ್ನು ಉಪಯೋಗಿಸುವವರಿಗೆ ಉಪದ್ರವ ಕೊಡುತ್ತಾನೆ. ಈ ರೀತಿಯಲ್ಲಿ ಜೇನುನೊಣದಂತೆ ಧನವನ್ನು ಸಂಗ್ರಹಿಸುವುದರಿಂದ ಹಠಾತ್ತಾಗಿ ಮರಣ ಬರುತ್ತದೆ. ಈ ಉಪದೇಶವನ್ನು ಪಡೆದುಕೊಂಡು ದ್ರವ್ಯಸಂಗ್ರಹ ಮಾಡುವುದನ್ನು ಬಿಡಬೇಕು.
13. ಗಜೇಂದ್ರ (ಆನೆ): ಆನೆಯು ಬಲಾಢ್ಯವಾಗಿದ್ದರೂ ಜನರು ಅದನ್ನು ವಶ ಪಡಿಸಿಕೊಳ್ಳುವುದಕ್ಕಾಗಿ ಒಂದು ಗುಂಡಿಯನ್ನು ತೋಡಿ ಅದರ ಮೇಲೆ ಹುಲ್ಲನ್ನು ಹಾಕುತ್ತಾರೆ ಮತ್ತು ಕಟ್ಟಿಗೆಯ ಒಂದು ಹೆಣ್ಣು ಆನೆಯ ಪ್ರತಿಕೃತಿಯನ್ನು ಮಾಡಿ ಅದರ ಮೇಲೆ ಆನೆಯ ಚರ್ಮವನ್ನು ಹೊದಿಸಿ ಆ ಗುಂಡಿಯ ಮೇಲೆ ನಿಲ್ಲಿಸುತ್ತಾರೆ. ಅದನ್ನು ನೋಡಿ ಆನೆಯು ಆಸೆಯಿಂದ ಮೋಹಗೊಂಡು ಆ ಕಟ್ಟಿಗೆಯ ಆನೆಯತ್ತ ಬರುತ್ತದೆ ಮತ್ತು ಗುಂಡಿಯೊಳಗೆ ಬೀಳುತ್ತದೆ ಮತ್ತು ಸುಲಭವಾಗಿ ಜನರ ಕೈಗೆ ಸಿಕ್ಕಿಕೊಳ್ಳುತ್ತದೆ. ಹಾಗೆಯೇ ಯಾವ ಪುರುಷನು ಸ್ತ್ರೀಸುಖಕ್ಕೆ ಮರುಳಾಗುತ್ತಾನೆಯೋ, ಅವನು ಬಂಧನದಲ್ಲಿ ಸಿಲುಕಿಕೊಳ್ಳುತ್ತಾನೆ.
14. ಭ್ರಮರ (ಭೃಂಗ): ಸೂರ್ಯವಿಕಾಸೀ ಕಮಲಗಳು (ಸೂರ್ಯನೊಂದಿಗೆ ಅರಳುವ ಮತ್ತು ಸೂರ್ಯಾಸ್ತವಾದ ನಂತರ ಮುದುಡುವ ಕಮಲ) ಸೂರ್ಯಾಸ್ತದ ಸಮಯದಲ್ಲಿ ಮುಚ್ಚುತ್ತವೆ. ಇಂತಹ ಸಮಯದಲ್ಲಿ ಅದರ ಮೇಲೆ ಭ್ರಮರವು ಕುಳಿತಿದ್ದರೆ ಅದು ಕಮಲದೊಳಗೆ ಸಿಲುಕಿಕೊಳ್ಳುತ್ತದೆ. ಇದರಿಂದ, ವಿಷಯಾಸಕ್ತಿಯಲ್ಲಿ ಬಂಧನವಿರುತ್ತದೆ ಎಂಬುದು ತಿಳಿದುಬರುತ್ತದೆ. ಇದನ್ನು ತಿಳಿದುಕೊಂಡು ಮನುಷ್ಯರು ವಿಷಯಾಸಕ್ತರಾಗಬಾರದು. ಭ್ರಮರವು ಒಂದೇ ಕಮಲದ ಸುಗಂಧವನ್ನು ಸೇವಿಸದೇ ಬಹಳಷ್ಟು ಕಮಲಗಳ ಸುವಾಸನೆಯ ಆನಂದವನ್ನು ಪಡೆಯುತ್ತಿರುತ್ತದೆ. ಹಾಗೆಯೇ ನಾವು ಪ್ರತಿಯೊಂದುನ್ನು ಕಲಿಯಲು ಪ್ರಯತ್ನಿಸಬೇಕು.
15. ಕಸ್ತೂರಿಮೃಗ: ವಾಯುವಿನಂತೆ ವೇಗವಿರುವ ಕಸ್ತೂರಿ ಮೃಗವು ಯಾರ ಕೈಗೂ ಸಿಗುವುದಿಲ್ಲ. ಅದಕ್ಕೇ ಅದನ್ನು ಹಿಡಿಯಲು ಬೇಟೆಗಾರರು ಸಂಗೀತವನ್ನು ಕೇಳಿಸುತ್ತಾರೆ. ಸಂಗೀತದ ಮಧುರ ಗಾಯನಕ್ಕೆ ಮೋಹಪರವಶವಾಗಿ ಅದು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಯಾವುದೇ ಮೋಹದಲ್ಲಿ ಸಿಲುಕಿಕೊಳ್ಳಬಾರದು.
16. ಮತ್ಸ್ಯ (ಮೀನು): ಕಬ್ಬಿಣದ ಗಾಳಕ್ಕೆ ಮಾಂಸವನ್ನು ಕಟ್ಟಿ ನೀರಿನೊಳಗೆ ಬಿಟ್ಟಾಗ ಆ ಮಾಂಸಕ್ಕೆ ಮೋಹಿತವಾಗಿ ಮೀನುಗಳು ಆ ಗಾಳವನ್ನು ನುಂಗುತ್ತವೆ ಮತ್ತು ಆ ಗಾಳದಲ್ಲಿನ ಮುಳ್ಳು ಬಾಯಲ್ಲಿ ಸಿಕ್ಕಿಕೊಂಡದ್ದರಿಂದ ಪ್ರಾಣ ಕಳೆದುಕೊಳ್ಳುತ್ತವೆ. ಹಾಗೆಯೇ ಮನುಷ್ಯನು ನಾಲಿಗೆಯ ರುಚಿಯಲ್ಲಿ ಬದ್ಧನಾಗಿದ್ದು ಜನ್ಮಮರಣದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾನೆ.
17. ಪಿಂಗಲಾ ವೇಶ್ಯೆ: ಒಂದು ರಾತ್ರಿ ಬಹಳಷ್ಟು ಸಮಯ ಯಾವುದೇ ಪುರುಷನು ಪಿಂಗಲಾ ಬಳಿಗೆ ಬರಲಿಲ್ಲ. ಕೊನೆಗೆ ಬೇಸರವಾಗಿ ಅವಳಿಗೆ ಹಠಾತ್ತಾಗಿ ವೈರಾಗ್ಯ ಬಂದಿತು. ಎಲ್ಲಿಯವರೆಗೆ ಮನುಷ್ಯನಲ್ಲಿ ಆಸೆಯು ಪ್ರಬಲವಾಗಿರುತ್ತದೆಯೋ ಅಲ್ಲಿಯವರೆಗೆ ಅವನಿಗೆ ಸುಖನಿದ್ರೆ ಬರುವುದಿಲ್ಲ. ಯಾವ ಪುರುಷನು ಆಸೆಯನ್ನು ತ್ಯಜಿಸಿದ್ದಾನೆಯೋ ಅವನಿಗೆ ಈ ಸಂಸಾರದ ದುಃಖಗಳು ಬಾಧಿಸುವುದಿಲ್ಲ.
18. ಟಿಟ್ಟಿಭ (ಒಂದು ಜಾತಿಯ ಪಕ್ಷಿ): ಒಮ್ಮೆ ಒಂದು ಟಿಟ್ಟಿಭವು ಕೊಕ್ಕಿನಲ್ಲಿ ಮೀನನ್ನು ಹಿಡಿದು ಹೋಗುತ್ತಿರುವುದನ್ನು ನೋಡಿ ನೂರಾರು ಕಾಗೆಗಳು ಮತ್ತು ಹದ್ದುಗಳು ಅದರ ಹಿಂದೆ ಬಿದ್ದು ಅದನ್ನು ಕುಕ್ಕಿ, ಬಲಹೀನವಾಗಿ ಮಾಡಿ, ಆ ಮೀನನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡತೊಡಗಿದವು. ಅದು ಎಲ್ಲಿ ಹೋದರೂ ಆ ಕಾಗೆಗಳು ಮತ್ತು ಹದ್ದುಗಳು ಅದನ್ನು ಹಿಂಬಾಲಿಸುತ್ತಿದ್ದವು. ಕೊನೆಗೆ ದಣಿದು ಹತಾಶವಾಗಿ, ಬೇರೆ ಏನೂ ತೋಚದೇ ಆ ಟಿಟ್ಟಿಭವು ಆ ಮೀನನ್ನು ಬಾಯಿಯಿಂದ ಬಿಟ್ಟುಬಿಟ್ಟಿತು. ಕೂಡಲೇ ಒಂದು ಹದ್ದು ಆ ಮೀನನ್ನು ಹಿಡಿದುಕೊಂಡಿತು. ಇದನ್ನು ನೋಡುವುದೇ ತಡ, ಎಲ್ಲ ಕಾಗೆಗಳು ಮತ್ತು ಹದ್ದುಗಳು ಆ ಟಿಟ್ಟಿಭವನ್ನು ಬಿಟ್ಟು ಮೀನನ್ನು ಹಿಡಿದಿದ್ದ ಹದ್ದನ್ನು ಹಿಂಬಾಲಿಸತೊಡಗಿದವು. ಇದರಿಂದ ಆ ಟಿಟ್ಟಿಭವು ನಿಶ್ಚಿಂತೆಯಾಗಿ ಒಂದು ಮರದಮೇಲೆ ಹೋಗಿ ಕುಳಿತಿತು. ಈ ಸಂಸಾರದಲ್ಲಿ ಮೋಹವನ್ನು ಬಿಡುವುದರಲ್ಲಿಯೇ ಶಾಂತಿ ಇದೆ, ಇಲ್ಲದಿದ್ದರೆ ಘೋರ ವಿಪತ್ತು ಇದೆ.
19. ಬಾಲಕ: ಮಾನಾಪಮಾನಗಳ ಬಗ್ಗೆ ವಿಚಾರ ಮಾಡದೆ, ಎಲ್ಲ ಚಿಂತೆಗಳ ಪರಿಹಾರ ಮಾಡಿಕೊಂಡು ಬಾಲಕನಂತೆ ಆನಂದದಿಂದ ಇರಬೇಕು.
20. ಕೈಬಳೆ: ಎರಡು ಬಳೆಗಳಿದ್ದರೆ ಒಂದಕ್ಕೊಂದು ತಗಲಿ ಶಬ್ದವಾಗುತ್ತದೆ. ಬಳೆಗಳು ಹೆಚ್ಚಿಗೆ ಇದ್ದರೆ ಹೆಚ್ಚು ಶಬ್ದವಾಗುತ್ತದೆ. ಹಾಗೆಯೇ ಇಬ್ಬರು ವ್ಯಕ್ತಿಗಳಿದ್ದರೆ ಮಾತುಕತೆಗಳಾಗುತ್ತವೆ ಮತ್ತು ಬಹಳಷ್ಟು ಜನರು ಒಟ್ಟಿಗೆ ಇದ್ದರೆ ಅಲ್ಲಿ ಕಲಹವಾಗುತ್ತದೆ. ಇವೆರಡರಿಂದಲೂ ಮನಸ್ಸು ಶಾಂತವಿರಲಾರದು. ಆದುದರಿಂದ ಓದುವಾಗ, ಧ್ಯಾನಯೋಗಾದಿ ಸಾಧನೆಯನ್ನು ಮಾಡುವಾಗ ಒಂಟಿಯಾಗಿರಬೇಕು.
21. ಶಸ್ತ್ರಕಾರ (ಶಸ್ತ್ರಗಳನ್ನು ತಯಾರಿಸುವವನು): ಒಮ್ಮೆ ಓರ್ವ ಶಸ್ತ್ರಕಾರನು ಏಕಾಗ್ರ ಚಿತ್ತದಿಂದ ಬಾಣದ ಅಲಗನ್ನು ಹರಿತಗೊಳಿಸುತ್ತಿದ್ದನು. ಆ ಸಮಯದಲ್ಲಿ ರಾಜನ ಸವಾರಿಯು ಸರಂಜಾಮುಸಹಿತ ಅವನ ಸಮೀಪದಿಂದ ಹೋಯಿತು. ನಂತರ ಒಬ್ಬ ಮನುಷ್ಯನು ಬಂದು ‘ಈ ಮಾರ್ಗದಿಂದ ರಾಜನ ಮೆರವಣಿಗೆ ಹೋದದ್ದನ್ನು ನೀವು ನೋಡಿದಿರಾ?’ ಎಂದು ಕೇಳಿದನು. ಆಗ ಆ ಶಸ್ತ್ರಕಾರನು ‘ನಾನು ನನ್ನ ಕೆಲಸದಲ್ಲಿ ಮಗ್ನನಾಗಿದ್ದರಿಂದ ನಾನೇನೂ ನೋಡಲಿಲ್ಲ’ ಎಂದನು. ಈ ಶಸ್ತ್ರಕಾರನಂತೆ ನಾವು ಪ್ರತಿಯೊಂದು ಕಾರ್ಯ ಮಾಡಬೇಕು.
23. ಸರ್ಪ: ಸರ್ಪಗಳು ಸದ್ದು ಮಾಡದೇ ಜಾಗ್ರತೆಯಿಂದ ತಿರುಗಾಡುತ್ತವೆ. ಅವುಗಳು ಬಹಿರಂಗವಾಗಿ ತಿರುಗಾಡುವುದಿಲ್ಲ, ಪ್ರಮಾದವಿಲ್ಲದೆ ನಿಂದನೆಯನ್ನೂ ಮಾಡುವುದಿಲ್ಲ ಮತ್ತು ಅಪಕಾರ ಮಾಡಿದ ಹೊರತು ಯಾರ ಮೇಲೆಯೂ ಕೋಪಿಸಿಕೊಳ್ಳುವುದಿಲ್ಲ. ಅವುಗಳನ್ನು ಕೆಣಕದ ಹೊರತು ಅವು ಯಾರನ್ನೂ ಕಚ್ಚುವುದಿಲ್ಲ. ಅದರಂತೆ ಮಿತವಾಗಿ ಮಾತನಾಡಬೇಕು, ಯಾರೊಂದಿಗೂ ಜಗಳ ಮಾಡಬಾರದು, ಸದಾ ವಿವೇಕದಿಂದ ವರ್ತಿಸಬೇಕು, ಯಾರಿಗೂ ನೋವುಂಟು ಮಾಡಬಾರದು.
23. ಜೇಡ: ಜೇಡವು ತನ್ನ ನಾಭಿಯಿಂದ ಎಳೆಗಳನ್ನು ತೆಗೆದು, ಅದರಿಂದ ಮನೆಯನ್ನು ನಿರ್ಮಿಸುತ್ತದೆ ಮತ್ತು ಹಗಲೂರಾತ್ರಿ ಅದರಲ್ಲಿ ಆಟವಾಡುತ್ತದೆ. ಮುಂದೆ ಮನಸ್ಸಿಗೆ ಬಂದಾಗ ಆ ಮನೆಯನ್ನು ನುಂಗಿ ಸ್ವತಂತ್ರವಾಗುತ್ತದೆ. ಹಾಗೆಯೇ ಈಶ್ವರನು ತನ್ನ ಇಚ್ಛೆಯಂತೆ ಜಗತ್ತನ್ನು ನಿರ್ಮಾಣ ಮಾಡಿ ಅದರೊಂದಿಗೆ ಬೇರೆಬೇರೆ ಆಟಗಳನ್ನು ಆಡುತ್ತಾನೆ. ಮುಂದೆ ಮನಸ್ಸಿಗೆ ಬಂದಾಗ ತನ್ನ ಇಚ್ಛೆಯಂತೆ ಅದನ್ನು ನಾಶಮಾಡಿ ಒಂಟಿಯಾಗಿ ಇರುತ್ತಾನೆ. ಹೇಗೆ ಜೇಡವು ಪುನಃ ಪುನಃ ಎಳೆಗಳನ್ನು ತೆಗೆದು ಮನೆಯನ್ನು ತಯಾರಿಸಬಲ್ಲದೋ, ಹಾಗೆಯೇ ಈಶ್ವರನು ಕೂಡ ತನ್ನ ಇಚ್ಛೆಯಂತೆ ಜಗತ್ತನ್ನು ಉತ್ಪತ್ತಿ ಮಾಡಿ ಅದನ್ನು ತನ್ನಲ್ಲಿಯೇ ಲಯಪಡಿಸಿ ಮತ್ತೆ ಮನಸ್ಸಿಗೆ ಬಂದಾಗ ಅದನ್ನು ಮೊದಲಿನಂತೆಯೇ ನಿರ್ಮಿಸಬಲ್ಲನು. ಆದುದರಿಂದ ಜಗತ್ತಿನಲ್ಲಿನ ಘಟನೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಡಬಾರದು.
24. ಕಣಜ: ಯಾವುದಾದರೊಂದು ಜೀವವು ಸತತವಾಗಿ ಯಾವುದರ ಧ್ಯಾನ ಮಾಡುತ್ತದೆಯೋ (ಆ ಧ್ಯಾನದ ಪರಿಣಾಮದಿಂದ) ಅದು ಅದರಂತೆಯೇ ಆಗುತ್ತದೆ. ಕಣಜದ ಹುಳುವು ಮಣ್ಣಿನ ಮನೆ ಮಾಡಿ ಅದರಲ್ಲಿ ಒಂದು ಕೀಟವನ್ನು ತಂದು ಇಡುತ್ತದೆ ಮತ್ತು ಆಗಾಗ್ಗೆ ಬಂದು ಅದರ ಮೇಲೆ (ಗಾಳಿಯನ್ನು) ಊದುತ್ತದೆ. ಇದರಿಂದ ಆ ಕೀಟಕ್ಕೆ ಯಾವಾಗಲೂ ಆ ಕಣಜದ ಹುಳುವಿನ ಧ್ಯಾನವೇ ಇರುತ್ತದೆ ಮತ್ತು ಕೊನೆಗೆ ಅದು ಕೂಡ ಕಣಜದ ಹುಳುವೇ ಆಗುತ್ತದೆ. ಹಾಗೆಯೇ ನಾವು ಸತತ ನಮ್ಮ ಗುರಿಯ ಕಡೆಗೆ ಧ್ಯಾನ ಮಾಡಬೇಕು.
Dattatreya Jayanthi
ಕಾಮೆಂಟ್‌ಗಳು