ಶ್ರೀಧರಸ್ವಾಮಿಗಳು
ಭಗವಾನ್ ಶ್ರೀಧರ ಸ್ವಾಮಿಗಳು
ಭಗವಾನ್ ಶ್ರೀಧರ ಸ್ವಾಮಿಗಳ ಪೂರ್ವನಾಮ ಶ್ರೀಧರ್ ದೇಗ್ಲೂರ್‌ಕರ್. ಇವರ ಹುಟ್ಟೂರು ಲ್ಯಾಡ್ ಚಿಂಚೋಳಿ.
ಶ್ರೀಧರರು 1908ರ ಡಿಸೆಂಬರ್ 7ರಂದು ಕಮಲಾಬಾಯಿ ಮತ್ತು ನಾರಾಯಣರಾವ್ ದೇಗ್ಲೂರ್‌ಕರ್ ಅವರ ಐದನೆಯ ಪುತ್ರನಾಗಿ ಜನಿಸಿದರು. ಶ್ರೀಧರರ 12ನೇ ವಯಸ್ಸಿನೊಳಗಾಗಿಯೇ ತಂದೆ,ಅಕ್ಕ, ತಾಯಿಯೂ ಕಾಲಕ್ಕೆ ತುತ್ತಾಗಿ ಶ್ರೀಧರರನ್ನು ಅಗಲಿದರು. ಶ್ರೀಧರರ ಬಾಲ್ಯ ಮತ್ತು ವಿದ್ಯಾಭ್ಯಾಸವು ಗುಲ್ಬರ್ಗಾದ "ನೂತನ ವಿದ್ಯಾಲಯದಲ್ಲೂ ಅನಂತರ ಪುಣೆಯ "ಅನಾಥ ವಿದ್ಯಾರ್ಥಿ ಗೃಹ" ಹಾಗೂ "ಭಾವೆ ವಿದ್ಯಾಲಯ" ದಲ್ಲಿ ನಡೆಯಿತು.
ಶ್ರೀಧರರಿಗೆ ದಿನದಿಂದ ದಿನಕ್ಕೆ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿ ಹೆಚ್ಚುತ್ತಿತ್ತು. ಶಾಂತ ಸ್ವಭಾವದ ಭಗವಾನ್ ಶ್ರೀಧರರಿಗೆ ಮೊದಲಿನಿಂದಲೂ ರಾಮ ಭಕ್ತಿ. ಈತನ ರಾಮ ಭಕ್ತಿಗೆ ನೀರೆರೆದು ಪೋಷಿಸಿದವರೇ ಅವರ ತಾಯಿ. ಅಧ್ಯಾತ್ಮ ಪಥದಲ್ಲಿ ಮುಂದುವರೆಯುವ ಇಚ್ಛೆಯನ್ನು ಹೊಂದಿದ್ದ ಭಗವಾನ್ ಶ್ರೀಧರರು ಶ್ರೀ ಕ್ಷೇತ್ರ ಸಜ್ಜನಗಡಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಕಡು ತಪಸ್ಸನ್ನಾಚರಿಸುತ್ತಿರಲು ಶ್ರೀ ಸಮರ್ಥರ ಪ್ರತ್ಯಕ್ಷ ದರ್ಶನವಾಗಿ ದಕ್ಷಿಣಕ್ಕೆ ತೆರಳುವಂತೆ ಅಪ್ಪಣೆಯನ್ನು ಇತ್ತರು. ಸಜ್ಜನಗಢದಲ್ಲಿ ಎರಡೂವರೆ ವರ್ಷಗಳ ಕಾಲವಿದ್ದ ಭಗವಾನ್ ಶ್ರೀಧರರು ಗೋಕರ್ಣ, ಸಿರ್ಸಿ, ಶೀಗೆಹಳ್ಳಿಗೆ ಬಂದರು. ಅಲ್ಲಿ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳ ಸಹವಾಸದಲ್ಲಿ ಕೆಲಕಾಲವಿದ್ದು ನಂತರ ಸಾಗರ ಕೊಡಚಾದ್ರಿ ಇತ್ಯಾದಿ ಕರ್ನಾಟಕದ ಹಲವು ಭಾಗಗಳನ್ನು ಸಂಚರಿಸಿದರು. ಅನಂತರ 1942ರ ವಿಜಯದಶಮಿಯಂದು ಶ್ರೀ ಶೀಗೆಹಳ್ಳಿಯಲ್ಲಿ ತುರ್ಯಾಶ್ರಮವನ್ನು ಹೊಂದಿದರು. ಮುಂದೆ ಚಿಕ್ಕಮಂಗಳೂರು, ಕಳಲೆ, ಮಂಗಳೂರು, ಕಾಶಿ, ಉತ್ತರಕಾಶಿ, ಕನ್ಯಾಕುಮಾರಿ, ಅಯೋಧ್ಯಾ, ಬದರಿಕಾಶ್ರಮ, ದ್ವಾರಕ, ಗಿರಿನಾರ್, ಕುರಗಡ್ಡೆ ಇತ್ಯಾದಿ ಅನೇಕ ಕಡೆ ಚಾತುರ್ಮಾಸ ಹಾಗೂ ವಾಸ್ತವ್ಯವನ್ನು ಮಾಡಿದರು. ಭಾರತಾದ್ಯಂತ ಸಂಚರಿಸಿ ಅಲ್ಲಿನ ದೇವಸ್ಥಾನ ಗುಡಿಗಳ ಜೇಣೋದ್ಧಾರ ಮಾಡಿದರು. ಪೇಟೆ-ಪಟ್ಟಣ, ಊರು-ಹಳ್ಳಿಗಳನ್ನು ಸಂಚರಿಸಿ ಭಕ್ತರಿಗೆ ದರ್ಶನವಿತ್ತು ಧರ್ಮ, ಭಕ್ತಿ, ಜ್ಞಾನ, ವ್ಯೆರಾಗ್ಯವನ್ನು ಭೋಧಿಸಿದರು.
ಒಮ್ಮೆ ಸಾಗರದ ಸಮೇಪದ ವರದಪುರ(ವರದಹಳ್ಳಿ) ಕ್ಷೇತ್ರಕ್ಕೆ ಶ್ರೀಗಳವರ ಆಗಮನವಾಯಿತು. ಶಾಂತ ರಮಣೀಯವಾಗಿರುವ ಈ ಸ್ಥಳದಲ್ಲಿ 1954ರಲ್ಲಿ ಒಂದು ಕುಟೀರ ನಿರ್ಮಾಣವಾಗಿ ಶ್ರೀಗಳವರ ಚಾತುರ್ಮಾಸ ಪ್ರಾರಂಭವಾಯಿತು.
ಭಗವಾನ್ ಶ್ರೀಧರ ಸ್ವಾಮಿಗಳ ಅನುಯಾಯಿಗಳು ದೇಶದಾದ್ಯಂತ ಇದ್ದಾರೆ. 1973ರ ಏಪ್ರಿಲ್ 19ರಂದು ಅವರು ತಮ್ಮ ಇಹಲೋಕ ಕರ್ತವ್ಯವನ್ನು ಪೂರ್ಣಗೊಳಿಸಿದರು. ಇಂದಿಗೂ ಸಾವಿರಾರು ಭಕ್ತರು ವರದಹಳ್ಳಿಯ ಶ್ರೀಧರ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ವೇದಪಾಠಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ವೇದಾಧ್ಯಯನವನ್ನು ಮಾಡುತ್ತಿದ್ದಾರೆ.
Bhagavan Sridhara Swamy
ಕಾಮೆಂಟ್‌ಗಳು