ಕುರುಡಿ ವೆಂಕಣ್ಣಾಚಾರ್
ನಾದಬ್ರಹ್ಮ ವಿದ್ವಾನ್ ಕುರುಡಿ ವೆಂಕಣ್ಣಾಚಾರ್ ಅವರು ನಾಡಿನ ಮಹಾನ್ ಸಂಗೀತಗಾರರಲ್ಲಿ ಒಬ್ಬರು.
ಕುರುಡಿ ವೆಂಕಣ್ಣಾಚಾರ್ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ 1928ರ ಡಿಸೆಂಬರ್ 15ರಂದು ಜನಿಸಿದರು. ಅವರ ಪ್ರಥಮ ಸಂಗೀತಾಭ್ಯಾಸ ಅವರ ತಂದೆ ವಿದ್ವಾನ್ ವಿ. ಅಡಿವಾಚಾರ್ ಅವರಿಂದಲೇ ಆರಂಭವಾಯಿತು. ನಂತರ ಆಸ್ಥಾನ ವಿದ್ವಾನ್ ಚಿಂತನಪಲ್ಲಿ ವೆಂಕಟರಾಯರಲ್ಲಿ ಉನ್ನತ ಶಿಕ್ಷಣ ಪಡೆದು, ಹದಿಮೂರನೇ ವಯಸ್ಸಿನಿಂದ ಆರಂಭಿಸಿ ಅವಿಚ್ಛಿನ್ನವಾಗಿ ಸಾವಿರಾರು ಕಛೇರಿಗಳನ್ನು ನೀಡಿರುವ ಹಿರಿಮೆಗೆ ಪಾತ್ರರಾದರು. ದೇಶದ ಎಲ್ಲೆಡೆ ಅವರ ಸಂಗೀತ ಕಚೇರಿಗಳು ನಡೆದಿವೆ. ಆಕಾಶವಾಣಿ, ದೂರದರ್ಶನಗಳಲ್ಲಿ ಇವರ ಗಾಯನ ಕಾರ್ಯಕ್ರಮಗಳು ನಿರಂತರವಾಗಿ ಪ್ರಸಾರವಾಗಿದೆ.
ಸಾಹಿತ್ಯೋಚ್ಚಾರಣೆಯಲ್ಲಿ ಶುದ್ಧತೆ, ಸ್ಫುಟತೆ, ಉತ್ತಮ ಮನೋಧರ್ಮ ಕುರುಡಿ ವೆಂಕಣ್ಣಾಚಾರ್ ಅವರ ಗಾಯನದ ವಿಶಿಷ್ಟತೆಗಳು. ಹಲವು ಬಾರಿ ವಿದೇಶ ಪ್ರವಾಸ ಮಾಡಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸೌರಭವನ್ನು ಹರಡಿದ್ದಾರೆ. ಸಂಸ್ಕೃತ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ವರ್ಣಗಳು, ಕೃತಿಗಳು, ತಿಲ್ಲಾನಗಳು ಇವರಿಂದ ರಚಿತವಾಗಿವೆ. ಹೊಸ ರಾಗಗಳಿಗೆ ಲಕ್ಷ್ಯವನ್ನು ನೀಡಿ ಆ ರಾಗಗಳು ರೂಢಿಗೆ ಬರಲು ಕಾರಣರಾಗಿದ್ದಾರೆ. ಇವರ ಗಾಯನದ ಅನೇಕ ಧ್ವನಿಸುರುಳಿಗಳೂ ಬಿಡುಗಡೆಯಾಗಿವೆ.
ಕುರುಡಿ ವೆಂಕಣ್ಣಾಚಾರ್ ಪುರಂದರ ಸೇವಾ ಸಮಿತಿಯಲ್ಲಿ ಆ ಸಂಸ್ಥೆಯ ಆರಂಭದಿಂದಲೂ ಎಲ್ಲಾ ಕಾರ್ಯಗಳಲ್ಲೂ, ಜವಾಬ್ದಾರಿಗಳಲ್ಲೂ ಭಾಗಿಗಳಾಗಿ ಸನ್ಮಾನ್ಯರಾದವರು. ಕರ್ನಾಟಕ ಗಾನಕಲಾ ಪರಿಷತ್ತಿನ ಕಾರ್ಯಕಾರಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕುರುಡಿ ವೆಂಕಣ್ಣಾಚಾರ್ ಅವರು ಪ್ರಸಿದ್ಧ ಸಂಗೀತ ಗುರುಗಳಾಗಿಯೂ ಹೆಸರಾಗಿದ್ದಾರೆ. ಬಿ. ಸರೋಜಾ ದೇವಿ, ಶ್ಯಾಮಲಾ ಜಿ ಭಾವೆ ಅಂತ ಮಹಾನ್ ಕಲಾವಿದರು ಇವರ ಶಿಷ್ಯೆಯರಾಗಿದ್ದವರು. ಇವರ ಪತ್ನಿ ಸುಲೋಚನಾ ಅವರು ಹಿಂದೆ ಅವರ ಶಿಷ್ಯೆಯಾಗಿದ್ದರು. ಇವರಿಂದ ಕರ್ನಾಟಕ ಸಂಗೀತವನ್ನು ಕಲಿತ ಇವರ ಪುತ್ರ ನಂದಕುಮಾರ್ ಕುರುಡಿ ಹಿಂದೂಸ್ಥಾನಿ ಗಾಯನದ ಮಹತ್ವದ ಸಾಧಕರೂ ಆಗಿದ್ದಾರೆ. ತಂದೆ ಮಕ್ಕಳಿಬ್ಬರೂ ಅಮೆರಿಕದಲ್ಲೇ 16 ಕರ್ನಾಟಕ ಸಂಗೀತ ಕಚೇರಿಗಳನ್ನು ನೀಡಿದ್ದರು.
ಮಲ್ಲಾಡಿ ಹಳ್ಳಿ ಆಶ್ರಮದಿಂದ ನಾದಬ್ರಹ್ಮ, ಗಾಯನ ಸಮಾಜದಿಂದ ನಾದ ಚಿಂತಾಮಣಿ, ನಾದ ಜ್ಯೋತಿ ಕಲಾ ಸಭಾದಿಂದ ಕಲಾಜ್ಯೋತಿ, ತ್ಯಾಗರಾಜ ಗಾನಸಭಾದಿಂದ ಕಲಾಭೂಷಣ, ಕರ್ನಾಟಕ ಸರಕಾರದಿಂದ ಕರ್ನಾಟಕ ಕಲಾಶ್ರೀ, ಸುವರ್ಣ ಕರ್ನಾಟಕ ರಾಜ್ಯಪ್ರಶಸ್ತಿ, ಧಾರವಾಡದ ಪುಟ್ಟರಾಜ ಗವಾಯಿ ಪ್ರತಿಷ್ಠಾನದಿಂದ ಪುಟ್ಟರಾಜ ಸನ್ಮಾನ, ಸಂಗೀತ ಸ್ವರ ಸಾಮ್ರಾಜ್ಞ್ಯ, ಪ್ರಣವಶ್ರೀ, ನಿಜಗುಣ ಪುರಂದರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಆಚಾರ್ಯರಿಗೆ ಸಂದಿವೆ.
ಆಚಾರ್ಯರ ಶಿಷ್ಯರು ಮತ್ತು ಅಭಿಮಾನಿಗಳು ನಾದಬ್ರಹ್ಮ ಕುರುಡಿ ವೆಂಕಣ್ಣಾಚಾರ್ ಟ್ರಸ್ಟ್ ಸ್ಥಾಪಿಸಿ ಸಾಧಕರನ್ನು ಗೌರವಿಸುತ್ತ ಬಂದಿದ್ದಾರೆ.
On the birthday of great musician Kurudi Venkannachar
ಕಾಮೆಂಟ್‌ಗಳು