ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ. ರಾಮರತ್ನಂ


 ವಿ. ರಾಮರತ್ನಂ


ವಿದ್ವಾನ್ ವಿ. ರಾಮರತ್ನಂ ಕಳೆದ ಶತಮಾನದ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರು. 

ವಿ. ರಾಮರತ್ನಂ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ 1917ರ ಡಿಸೆಂಬರ್ 23ರಂದು ಜನಿಸಿದರು. ತಂದೆ ವಿ. ಸುಬ್ಬರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳನ್ನು ಕೇಳಿ ಅವರಲ್ಲಿ ಸಂಗೀತದಲ್ಲಿ ಆಕರ್ಷಣೆ ಮೂಡಿತು. 

ರಾಮರತ್ನಂ ಅವರಿಗೆ ಡಿ. ಸುಬ್ಬರಾಮಯ್ಯ, ನಾರಾಯಣ ಸ್ವಾಮಿ ಭಾಗವತರ್, ಪಾಲ್ಘಾಟ್ ಸೋಮೇಶ್ವರ ಭಾಗವತರಲ್ಲಿ ಸಂಗೀತ ಪಾಠವಾಯಿತು. ಟಿ. ಚೌಡಯ್ಯನವರಲ್ಲಿ ಹತ್ತುವರ್ಷ ಶಿಷ್ಯವೃತ್ತಿ ಮಾಡಿದರು. ಮೈಸೂರು ವಾಸುದೇವಾಚಾರ್ಯ, ಅರಿಯಾಕುಡಿ, ಚಂಬೈ ಮುಂತಾದ ದಿಗ್ಗಜರ ಸಂಗೀತ ಕಛೇರಿ ಕೇಳುತ್ತ ಬೆಳೆದರು. 

ರಾಮರತ್ನಂ ಅವರು ಟಿ. ಚೌಡಯ್ಯನವರ ಅಯ್ಯನಾರ್ ಸಂಗೀತ ಶಾಲೆಯಲ್ಲಿ ಉಪಪ್ರಾಂಶುಪಾಲರಾಗಿ, ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನ ಸಂಗೀತ ವಿಭಾಗದ ರೀಡರ್, ಪ್ರೊಫೆಸರ್, ಪ್ರಾಂಶುಪಾಲರಾಗಿ, ಯು.ಜಿ.ಸಿ.ಯ ಎಮರಿಟಸ್ ಆಗಿ, ಆಯ್ಕೆ ಸಮಿತಿ, ಭಾರತ ಸರಕಾರದ ವೇತನ ಸಮಿತಿ ಮುಂತಾದುವುಗಳಲ್ಲಿ ಜವಾಬ್ದಾರಿಯ ಹುದ್ದೆ ನಿರ್ವಹಿಸಿದರು. 

ರಾಮರತ್ನಂ ಅವರು ಮುಂಬೈ, ಮದರಾಸು, ಕೊಯಮತ್ತೂರು, ಬೆಂಗಳೂರು, ಮುಂತಾದೆಡೆ ಆಕಾಶವಾಣಿಯ 'ಎ' ಶ್ರೇಣಿ ಕಲಾವಿದರಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ದೇಶದ ಎಲ್ಲ ಪ್ರತಿಷ್ಠಿತ ವೇದಿಕೆಗಳಲ್ಲಿ ಅವರ ಕಛೇರಿಗಳು ನಡೆದವು. 

ರಾಮರತ್ನಂ  ಅವರು ಸಂಗೀತ ದರ್ಪಣ, ಟಿ. ಚೌಡಯ್ಯನವರ ಕೃತಿಗಳು, ಕರ್ನಾಟಕ ಸಂಗೀತ ಸುಧಾ, ನೌಕಾಚರಿತ್ರೆ, ಪಲ್ಲಕ್ಕಿ ಸೇವಾ ಪ್ರಬಂಧಗಳು, ಕೀರ್ತನ ದರ್ಪಣ, ಕರ್ನಾಟಕ ಸಂಗೀತ ಕೃತಿ ರಚನ ಸಂಗ್ರಹ ಮುಂತಾದ ಅನೇಕ ಗ್ರಂಥಗಳ ರಚನೆ ಮಾಡಿದರು. 

ವಿದ್ವಾನ್ ರಾಮರತ್ನಂ ಅವರಿಗೆ ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಸಂಗೀತ ಕಲಾರತ್ನ ಬಿರುದು, ರಾಜ್ಯ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಮದರಾಸು ಮ್ಯೂಸಿಕ್ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದವು.

ವಿದ್ವಾನ್ ವಿ. ರಾಮರತ್ನಂ ಅವರು 2008ರ ನವೆಂಬರ್ 15ರಂದು ಈ ಲೋಕವನ್ನಗಲಿದರು.

On the birth anniversary of great musician Vidwan V. Ramarathnam

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ