ಭಾರತಕಥಾಮಂಜರಿ10
ವಿಕಟ ಭುಜಬಲರೇಕಚಕ್ರದೊ
ಳಕುಟಿಲರು ಭೂಸುರರ ರಕ್ಷಿಸಿ
ಬಕನ ಮುರಿದರು ಮೆರೆದರಮಲ ಗುಣಾಗ್ರಹಾರದಲಿ
---
ಕೇಳು ಜನಮೇಜಯ ಮಹೀಪತಿ
ಶಾಲಿಹೋತ್ರಾಶ್ರಮವನನಿಬರು
ಬೀಳುಕೊಂಡರು ಮತ್ತೆ ಕಂಡರು ಬಾದರಾಯಣನ
ಹೇಳಿದನು ನಿಮಗೇಕಚಕ್ರ ವಿ
ಶಾಲಪುರದೊಳಗಾರು ತಿಂಗಳು
ಕಾಲ ಸವೆಯಲಿ ಬಳಿಕ ಬಳಸುವಿರುತ್ತರೋತ್ತರವ ೧
ಎಂದು ಮುನಿ ತಿರುಗಿದನು ಕುಂತೀ
ನಂದನರು ಸುಕ್ಷಾತ್ರ ತೇಜೋ
ವೃಂದವನು ಮುಸುಕಿದರು ವಿಮಲ ಬ್ರಹ್ಮ ರಶ್ಮಿಯಲಿ
ಅಂದವೇರಿದ ಗಡ್ಡ ದರ್ಭೆಗ
ಳಿಂದ ನೆರಿಯುಡಿಗೆಗಳ ನಾಟಕ
ದಿಂದ ಮಟ್ಟಿಯ ಧಟ್ಟು ನೊಸಲಲಿ ದೇಶಿ ಪರಿ ಮೆರೆಯೆ ೨
ಅವನಿಪತಿ ಕೇಳೇಕಚಕ್ರವ
ನಿವರು ಹೊಕ್ಕರು ವಿಪ್ರನೊಬ್ಬನ
ಭವನದಲಿ ಮಾಡಿದರು ಬೀಡಾರವನು ವಿನಯದಲಿ
ಇವರು ಯಾಚಕ ವಿಷಯದಾತಿ
ಥ್ಯವನು ಕೈಕೊಂಡಲ್ಲಿ ಕತಿಪಯ
ದಿವಸವನು ನೂಕಿದರು ಭಿಕ್ಷಾ ವಿಹಿತ ವೃತ್ತಿಯಲಿ ೩
ತಂದ ಭಿಕ್ಷಾಶನವನೈವರು
ನಂದನರು ತಾಯಿಗೆ ನಿವೇದಿಸ
ಲಿಂದುಮುಖಿ ಭಾಗದ್ವಯವ ಸಾನಂದದಲಿ ಮಾಡಿ
ಒಂದು ಭಾಗ ವೃಕೋದರಂಗುಳಿ
ದೊಂದು ಭಾಗವ ತಾನು ನಾಲ್ವರು
ನಂದನರು ವಿನಿಯೋಗಿಸುವರವನೀಶ ಕೇಳೆಂದ ೪
ಸಿರಿಯ ಹೇಳ್ವರೆ ಹಸ್ತಿನಾಪುರ
ದರಸುಗಳ ಸಂತಾನ ಶೌರ‍್ಯದ
ಪರಿಯ ನೋಳ್ವರೆ ಶಕ್ರ ಸೂರ್ಯರ ತೇಜಕುರೆ ಮಿಗಿಲು
ತಿರಿದ ಕೂಳನು ತಾಯಿ ಹಸುಗೆಯ
ಲೆರಡು ಭಾಗವ ಮಾಡಿ ಮಕ್ಕಳ
ಹೊರೆದಳಿನ್ನುಳಿದವರ ಪಾಡೇನರಸ ಕೇಳೆಂದ ೫
ಉದಯವಾಗದ ಮುನ್ನ ಸುಬ್ರಾ
ಹ್ಮ್ಯದ ಮುಹೂರ್ತದಲೆದ್ದು ಜನನಿಯ
ಪದಯುಗಕ್ಕಭಿನಮಿಸಿ ಸಂಧ್ಯಾಮಠಕೆ ನಡೆತಂದು
ವಿದಿತ ಸಂಧ್ಯೋಪಾಸ್ಥೆ ಜಪ ನಿಯ
ಮದ ಪುರಾಣಶ್ರವಣ ಮಧ್ಯಾ
ಹ್ನದಲಿ ಭಿಕ್ಷಾಟನಗಳಿವರಿಗೆ ನಿತ್ಯ ವಿಧಿಯೆಂದ ೬
ಭೋಜನೋತ್ತರ ವೇಳೆಯಲಿ ನೃಪ
ರಾಜವಾರ್ತಾ ಕಥನದಿಂದ ಮ
ಹಾಜನಂಗಳೊಳಾಡುತಿರ್ದರು ನಿಜವಿನೋದದಲಿ
ರಾಜತನವನು ಮರೆದರಾ ದ್ವಿಜ
ರಾಜತೇಜದಿ ಮೆರೆದರಾ ನರ
ರಾಜರಾಜರ ನೀತಿಯಿದು ಭೂಪಾಲ ಕೇಳೆಂದ ೭
ಇರಲಿರಲು ಮಾಸಾಂತರದಲಾ
ನೆರೆಮನೆಯ ಶೋಕಾರ್ತರವದ
ಬ್ಬರವ ಕೇಳಿದು ಕುಂತಿ ಸಾಯಂಕಾಲ ಸಮಯದಲಿ
ಭರದಿನೈತಂದಕಟ ಭೂಸುರ
ವರ ನಿರೋಧವಿದೇನು ದುಃಖೋ
ತ್ಕರುಷವಾಕಸ್ಮಿಕವದೆಂದಳು ಕುಂತಿ ವಿನಯದಲಿ ೮
ನಾಳೆ ವೈವಾಹೋತ್ಸವದ ದೆ
ಖ್ಖಾಳವಿದು ಮೊದಲೀ ವಸಂತದ
ಬಾಲಿಕೆಯರೋಕುಳಿಯ ಮಳೆಯಲಿ ಸಿಡಿಲು ಸುಳಿದುದೆನೆ
ಹೇಳಿರೇ ನಿಮಗಾದವಸ್ಥೆಯ
ಕೇಳಲಾಗದೆಯೆನಲು ದ್ವಿಜನಿದ
ಕೇಳಿ ಫಲವೇನವ್ವಯೆಂದನು ಸುಯ್ದು ದುಗುಡದಲಿ ೯
ಹೇಳ ಬೇಹುದು ತನ್ನ ನಿಷ್ಟವ
ನಾಳಿಗೊಳ್ಳದ ಸುಜನ ನಿಕರಕೆ
ಕೇಳ ಬೇಹುದು ದೀನರಹ ವಿಪ್ರೇಂದ್ರರುಪಹತಿಯ
ಹೇಳು ನೀನೆಲೆ ವಿಪ್ರ ತಾನಿದ
ಕೇಳಿ ದುಃಖಿತೆಯಾಗಲಾಗದೆ
ಹೇಳ್ ನ ದುಃಖಂ ಪಂಚಭಿಸ್ಸಹ ವೆನ್ನದೇ ವಚನ ೧೦
ತಾಯೆ ಕೇಳೀ ವಿಪ್ರಪುರದೊಳ
ಗಾಯವುಂಟೆನಗೆಂದು ರಕ್ಕಸ
ನಾಯಿ ನೆಲಸಿಹನೂರ ಹೊರಗಣ ಶೈಲಶಿಖರದಲಿ
ಆಯಿದೊಬ್ಬನ ಮನೆಮನೆಗೆ ಮೇ
ಲಾಯಿ ಮಹಿಷದ್ವಯ ಸಹಿತ ನಿ
ರ್ದಾಯದಲಿ ಹನ್ನೆರಡು ಕಂಡುಗದಕ್ಕಿಯೋಗರವ ೧೧
ಇನಿತುವನು ಮನೆಮನೆಗೆ ಬಾರಿಯ
ದಿನಕೆ ತೆತ್ತಡೆ ತುಷ್ಟನಿಲ್ಲದ
ದಿನಕೆ ನುಂಗುವನೂರನೀ ಪರಿ ಹಲವು ಕಾಲದಲಿ
ಎನಗೆ ಬಂದುದು ತಾಯೆ ನಾಳಿನ
ದಿನದ ಬಾರಿಯಿದಕ್ಕೆ ತನ್ನಯ
ತನುಜ ತಾನುಳಿದಂತೆ ಮಾನಿಸರಿಲ್ಲ ತನಗೆಂದ ೧೨
ಮಗನನೀವೆನೆ ಪೌರಲೌಕಿಕ
ವಗಡಹುದಪಖ್ಯಾತಿ ತನ್ನನು
ತಗುಹುದೈಹಿಕದಲ್ಲಿ ಬಳಿಕೀ ಸಂತತಿಚ್ಛೇದ
ಬಗೆಯದೆನ್ನೊಡಲಸುರ ಘಾತಿಗೆ
ಮಿಗೆ ವಿಭಾಡಿಸಿ ಕೊಡುವೆನೆಂದೆನೆ
ನಗುತ ಕುಂತೀದೇವಿ ನುಡಿದಳು ವಿಪ್ರ ಕೇಳೆಂದು ೧೩
ಐಸಲೇ ನಿಮಗಾದ ಗಸಣಿಯಿ
ದೇಶರಾಪತ್ತಂಜಬೇಡ ಮ
ಹಾಸುರನ ಬಾಣಸದ ಬೀಯಕೆ ರಪಣವುಂಟೆಮಗೆ
ಏಸು ಕಂಡುಗದಕ್ಕಿ ಯೋಗರ
ವೈಸ ನೀನಳವಡಿಸು ಮೇಲುಂ
ಟೇಸು ಸಾಧನವನಿತುವನು ತೆಗೆಸೆಂದಳಾ ಕುಂತಿ ೧೪
ತಿರುಗಿ ನಿಮ್ಮೂರೊಳಗೆ ಕೂಳನು
ತಿರಿದು ಸಲಹುವೆನೆನ್ನ ಮಕ್ಕಳು
ಧರೆಯನಾಳುವ ಸತ್ಯ ಸಹಸಿಗಳಿದ್ದು ಫಲವೇನು
ಹೊರೆಯಲರಿಯೆನು ದುರುಳನೆರಡೆಂ
ಟರಿಯನದರೊಳಗೊಬ್ಬ ನುದರಕೆ
ನೆರಹಲಾರೆನು ಕೂಳನೆಂದಳು ಕುಂತಿ ನಸುನಗುತ ೧೫
ಸಾಕಲಾರೆನು ಮಗನನಾತನ
ನೂಕುವೆನು ನಿಮ್ಮಸುರನೂಟಕೆ
ಸಾಕು ತನಗುಳಿದವರೆನಲ್ ದ್ವಿಜನದಕೆ ಬೆರಗಾಗಿ
ಸಾಕಲಾರದೆ ಮಗನನುರಿಯಲಿ
ನೂಕಿದವರುಂಟೆ ಮಹಾಸತಿ
ಯಾಕೆವಾಳತನಕ್ಕೆ ನಮಿಸಿದೆನೆನುತ ಕೈಮುಗಿದ ೧೬
ಮರುಳಲಾ ಬ್ರಾಹ್ಮಣ ವೃಥಾ ವಿ
ಸ್ತರಣ ವಾಕ್ಯವೆ ತನ್ನ ನುಡಿ ಸಂ
ವರಿಸು ಬಂಡಿಯನಡೆಸು ಭಕ್ಷ್ಯವ ಸೂಪದಂಶಕವ
ತರಿಸು ತುಪ್ಪದ ಕೊಡನನೊದವಿಸು
ಹರವಿಗಳ ಪಾಲ್ಮೊಸರನೆನೆ ಭೂ
ಸುರನು ಕುಂತಿಗೆ ಕೈಯ್ಯ ಮುಗಿದನು ತಾಯೆ ಬೇಡೆನುತ ೧೭
ಎರವು ಮುಯಿಮುಟ್ಟುಂಟು ವಸ್ತೂ
ತ್ಕರದೊಳಗೆ ಭಾವಿಸಲು ಮಕ್ಕಳ
ನೆರವ ಕೊಟ್ಟವರುಂಟೆ ಮಾರಿಯ ನಾಲಿಗೆಯ ಸವಿಗೆ
ನೆರವಿ ನಗದೇ ನಮ್ಮ ನಿಹಪರ
ವೆರಡರಲಿ ಕೇಳಹುದು ಕಷ್ಟವು
ಗರುವೆಯಹುದೌ ತಾಯಿ ನೀ ದಿಟ ಮನುಜೆಯಲ್ಲೆಂದ ೧೮
ಏನನಿತ್ತು ದಧೀಚಿ ಲೋಗರ
ಹಾನಿಯನು ಕಾಯಿದನು ಶಿಬಿ ತಾ
ನೇನನಿತ್ತನು ಕೇಳಿದೈ ಜೀಮೂತವಾಹನನು
ಏನ ಮಾಡಿದನೆಂದು ನೀನಿದ
ನೇನುವನು ಕೇಳ್ದರಿಯಲಾ ಮ
ತ್ಸೂನುವನು ನಿನ್ನವಸರಕೆ ಕೊಳ್ಳೆಂದಳಾ ಕುಂತಿ ೧೯
ಆವನರ್ಥ ಪರಾರ್ಥದಲಿ ಸಂ
ಜೀವನಿಯನೈದಿತು ಪರಾರ್ಥದೊ
ಳಾವನಸು ನಿರ್ವಾಣಮಾದುದು ಲೋಕ ಮೂರರಲಿ
ಆ ವಿರಿಂಚಿ ಪುರಂದರಾದಿಯ
ದೇವತತಿಗಿವರಿಬ್ಬರೇ ಸಂ
ಭಾವನೀಯರು ಕೇಳು ಭೂಸುರಯೆಂದಳಾ ಕುಂತಿ ೨೦
ಬಲುಹಿನಲಿ ಭೂಸುರನ ಚಿತ್ತವ
ತಿಳುಹಿ ಬಂದಳು ಮನೆಗೆ ಭೀಮನ
ಕೆಲಕೆ ಕರೆದಳು ಹೇಳಿದಳು ಹೇರಾಳದೌತಣವ
ಉಲಿದು ಮುದದಲಿ ಭೀಮ ಬಾಹ
ಪ್ಪಳಿಸಿದನು ಯಮನಂದನಾದಿಗ
ಳಳಲಿ ನುಡಿದರು ದೈತ್ಯಜಯ ಸಂಶಯದ ಭೇದದಲಿ ೨೧
ಮರುಳುಗಳು ನೀವೆಂದವರ ಚ
ಪ್ಪರಿಸಿದನು ಕಲಿಭೀಮನಾ ನಡು
ವಿರುಳು ತೊಡಗಿತು ವಿಪ್ರಭವನದ ಪಾಕಮಯ ರಭಸ
ಹೊರೆದಳೆನ್ನನು ತಾಯಿ ಕುಂತಿಯ
ಹರಸುವೆನು ಪಾರಣೆಯ ಹೊತ್ತಿನೊ
ಳರಸು ನಾಳಿನೊಳಾನೆನುತ ಹಿಗ್ಗಿದನು ಕಲಿಭೀಮ ೨೨
ಪರಿಪರಿಯ ಬಹುಭಕ್ಷ್ಯ ಪಾಕದ
ಪರಿಮಳದ ಶಾಕಾದಿಗಳ ವೊ
ಗ್ಗರಣೆಗಳ ಸೌರಭಕೆ ತಿಳಿದುದು ನಿದ್ರೆ ಪವನಜನ
ತರಣಿ ಸುಳಿದನು ಪೂರ್ವ ಶೈಲದ
ಶಿರದ ಬಳಿಯಲಿ ಭೀಮ ಕುಂತಿಯ
ಕರೆದು ಕಳುಹಿದನಾ ಮಹೀಸುರ ಗೃಹಕೆ ವಹಿಲದಲಿ ೨೩
ಏನು ಬಂದಿರಿ ತಾಯೆ ಚಾಪಳ
ವೇನೆನಲು ತೆಗೆ ಹೂಡು ಬಂಡಿಯ
ನೇನು ಜಂಜಡ ಬೇಡ ಭಕ್ಷ್ಯವ ಹಿಡಿಸು ಕುನಿಕಿಲಲಿ
ಭಾನುವುದಿಸಿದನೆನಲು ಘನಸು
ಮ್ಮಾನದಲಿ ಸಾಧನ ಸಮಗ್ರವ
ಸೂನು ಸಹಿತಡಕಿದನು ಭಾರಿಯ ಬಂಡಿ ಜವಜಡಿಯೆ ೨೪
ನಳನಳಿಪ ಬಹುವಿಧದ ಭಕ್ಷ್ಯಾ
ವಳಿಯ ಹೆಡೆಗೆಗಳೋರಣಿಸಿ ಮಂ
ಡಳಿಸಿ ಕೂಡಿದ ಹಾಲು ತುಪ್ಪದ ಹಲವು ಹರವಿಗಳ
ಬಳಸಿ ಮುಚ್ಚಿದ ವಿವಿಧ ಶಾಕಾ
ವಳಿಯ ಬೋನದ ಬಿಗಿದ ಕುನಿಕಿಲ
ಕಳವೆಯಕ್ಕಿಯ ಕೂಳ ರಾಶಿಯ ಬಂಡಿ ಜೋಡಿಸಿತು ೨೫
ಮರಳಿ ಬಂದಳು ಕುಂತಿ ಭೀಮನ
ಕರೆದಳೇಳೈ ಪಾರಣೆಗೆ ಕಾ
ತರಿಸದಿರು ಖಳನೊಡನೆ ಸದೆವುದು ಸತ್ವದನುವರಿದು
ಬರವ ಬರಿದೇ ಬೀಯ ಮಾಡದಿ
ರುರುವಣೆಯನರಿದಾನುವುದು ಸಂ
ಹರಿಸು ದೈತ್ಯನನೆಂದು ತಾಯ್ ಹರಸಿದಳು ನಂದನನ ೨೬
ಬೆರಳ ದರ್ಭೆಯ ಹರಿದು ಧೌತಾಂ
ಬರವನುಟ್ಟನು ಬಿಗಿದು ಕುಂತಿಯ
ಚರಣ ರಜವನು ಕೊಂಡು ಧರ್ಮಜನಂಘ್ರಿಗಭಿನಮಿಸಿ
ಹರುಷ ಮಿಗೆ ಹರಿತಂದು ಬಂಡಿಯ
ಶಿರದ ಹಲಗೆಯನಡರಿದನು ಬಲು
ಹುರಿಯ ಹಗ್ಗವ ಹಿಡಿದು ಜಡಿದನು ಹೂಡಿದೆತ್ತುಗಳ ೨೭
ಪುರದೊಳಗೆ ಭಿಕ್ಷಾನ್ನದಿಂದೈ
ವರು ಮಹಾಪಂಡಿತರು ನಿರ್ಧನ
ಪುರುಷರವರೊಳಗೊಬ್ಬನನು ನಮ್ಮೂರ ದಾನವನ
ಪರಿವಿಡಿಯ ಭೋಜನಕೆ ತದ್ಭೂ
ಸುರನ ತಾಯ್ಕೊಟ್ಟಳು ಗಡೇನ
ಚ್ಚರಿಯೆನುತ ಪವನಜನ ಮುತ್ತಿತು ನೋಟಕರ ನೆರವಿ ೨೮
ಪೌರಜನವೈತರಲು ಬಂಡಿಯ
ನೂರ ಹೊರವಂಡಿಸಿದನೆಲ್ಲರು
ದೂರದಲ್ಲಿರಿ ಸಾವವನೆ ತಾ ಸಾಕು ದೈತ್ಯನಲಿ
ಸಾರಿ ನೀವೆಂದೆನುತ ಹೂಡಿದ
ಹೋರಿಗಳ ಹೊಯ್ದುಬ್ಬರಿಸಿ ರಣ
ಧೀರ ಮಾರುತಿ ಮಿಕ್ಕು ಹರಿಸಿದನಸುರನಿದ್ದೆಡೆಗೆ ೨೯
ಎಡೆಯಲೇ ಭಕ್ಷ್ಯಾದಿಗಳ ಬರಿ
ಹೆಡೆಗೆಯುಳಿದವು ಕೂಳೊಳರ್ಧವ
ಹೊಡೆದು ಸುರಿದನು ಹಾಲುತುಪ್ಪದ ಹರವಿಯೋಜೆಯಲಿ
ಕುಡಿದು ಪಕ್ಕಲೆ ನೀರನೊಯ್ಯನೆ
ನಡೆಸಿ ತಂದನು ಕಂಡು ದನುಜನ
ನುಡಿದನೆಲವೋ ಕುನ್ನಿ ಕೂಳಿದೆ ತಿನ್ನು ಬಾರೆನುತ ೩೦
ಕಂಡು ಖಳ ಬೆರಗಾದನಿವನು
ದ್ದಂಡತನವಚ್ಚರಿಯಲಾ ಹರಿ
ಖಂಡಪರಶುಗಳಳುಕುವರು ತನ್ನೊಡನೆ ತೊಡಕುವರೆ
ಬಂಡಿ ತುಂಬಿದ ಕೂಳನಿವನಿಂ
ದುಂಡು ಬದುಕಲಿ ಊರಪಾರ್ವರ
ಹಿಂಡುವೆನುಯಿವ ಸಹಿತೆನುತ ಹಲು ಮೊರೆದನಮರಾರಿ ೩೧
ಮತ್ತೆ ಶೇಷಾನ್ನದಲಿ ತೋರುತ
ತುತ್ತುಗಳ ತೂಗುತ್ತ ಮಾರುತಿ
ಮೆತ್ತಿಕೊಂಡನು ಬಾಯೊಳವನನು ಬೆರಳಲೇಡಿಸುತ
ಇತ್ತಲೆನ್ನಯ ಹಸಿವು ಹೆಚ್ಚಿದೆ
ತುತ್ತು ಹೊಗದೊಳಗಿವನ ತೊಡಗಲ
ದೆತ್ತಲಕಟಾ ವಿಧಿಯೆನುತ ಮುರಿದೆದ್ದನಮರಾರಿ ೩೨
ಎರಡು ಕೈಯನು ಬಲಿದು ಮುಷ್ಟಿಯೊ
ಳೆರಗಿದನು ಖಳ ಬೆನ್ನನೇನಂ
ದರಿಯನಿತ್ತಲು ಭೀಮ ಬಲುದುತ್ತುಗಳ ತೋಟಿಯಲಿ
ಮರನ ಮುರಿದೆರಗಿದರೆ ಪುನರಪಿ
ಮುರಿದು ನೋಡಿದು ಬಹೆನು ನಿಲ್ಲೆನು
ತರೆಗೆಲಸ ಪೂರೈಸಲೆಂದನು ನಗುತ ಕಲಿಭೀಮ ೩೩
ಅರಸ ಕೇಳೈ ನಿಮ್ಮ ಭೀಮನ
ಪರಿಯನಾ ಪರಿ ಬಂಡಿ ತುಂಬಿದ
ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ
ವರ ಸಮಾಧಾನದಲಿ ಕೈದೊಳೆ
ದುರವಣಿಪ ತೇಗಿನ ತರಂಗದ
ಪರಬಲಾಂತಕನೆದ್ದು ನಿಂದನು ಸಿಂಹನಾದದಲಿ ೩೪
ಉಂಡೆವೈ ಸಮಚಿತ್ತದಲಿ ನೀವ್
ಕೊಂಡಿರೈ ಘಾಯಗಳನೆಡೆಯಲಿ
ಹಿಂಡುವಿರಲೈ ನಾವು ಸಹಿತೀ ಊರ ಹಾರುವರ
ಉಂಡೆವೈ ಹಲ ಕಾಲಕಿಂದನ
ಲುಂಡದೂಟ ಕಣಾ ನಿಧಾನವು
ಖಂಡಪರಶುವಿನಾಣೆನುತ ಮದವೇರಿದನು ಭೀಮ ೩೫
ಖ್ಯಾತಿಗೊಳ್ಳದ ಮುನ್ನ ಪವನಜ
ನೋತು ಕೊಟ್ಟನು ತನ್ನ ಹೊಯ್ಗಳ
ನಾತನೀತನು ಮುಳಿದು ಬಳಿಕಿವನೇನ ಮಾಡುವನೊ
ಈತನೆದ್ದನು ಗಜರಿ ಬಳಿಕಿನೊ
ಳಾತನಿದಿರಾದನು ಸುರಾರಿಯ
ವಾತಜನ ಹೋರಟೆಗೆ ಕೊರಳಳುಕಿದುದು ವಾಸುಕಿಯ ೩೬
ಹಿಡಿದರೊಬ್ಬರನೊಬ್ಬರುರದಲಿ
ಹೊಡೆದು ಹಿಂಗಿದರುಲಿದು ಹೆಮ್ಮರ
ನುಡಿಯೆ ಹೊಯ್ದಾಡಿದರು ತಿವಿದರು ತೋಳು ಬಲುಹಿನಲಿ
ಕೊಡಹಿದನು ಕಲಿ ಭೀಮನವನು
ಗ್ಗಡದ ಸತ್ವದಿಯುಂಡ ಕೂಳಿನ
ಕಡುಹ ತೋರೆಂದೊರಲಿ ತುಡಿಕಿದನನಿಲ ನಂದನನ ೩೭
ಸಿಕ್ಕಿದನು ಕಲಿಭೀಮನೆನೆ ಕೈ
ಯಿಕ್ಕಿ ಕೊಟ್ಟನು ಮೈಯನಸುರನ
ಹೊಕ್ಕು ತಿವಿದನು ತಿರುಗಿ ಬದಿಯೆಲು ನುಗ್ಗು ನುಸಿಯಾಗೆ
ಬಿಕ್ಕುಳಿಯ ತಾಳಿಗೆಯ ಮೂಗಿನೊ
ಳೊಕ್ಕು ರುಧಿರದ ಧಾರೆ ಬಿಗಿದುರೆ
ಡೊಕ್ಕರಿಸಲಸು ನೀಗಿತಸುರನ ತನುವ ನಿಮಿಷದಲಿ ೩೮
ಕೊಂದು ಧನುಜನ ಹೆಣನ ಬಂಡಿಯ
ಹಿಂದೆ ಬಂಧಿಸಿ ಪುರದ ಬಾಹೆಗೆ
ತಂದು ಬಿಟ್ಟನು ತನತನಗೆ ಜನಜಾಲ ಜೋಡಿಯಲಿ
ಬಂದು ಕಂಡುದು ಹೆಣನ ಭೂಸುರ
ರಿಂದು ಧನ್ಯರು ವಿಪ್ರಜಾತಿಗೆ
ಸಂದುದಿನ್ನಗ್ಗಳಿಕೆಯೆಂದುದು ನೆರದ ಪೌರಜನ ೩೯
ಈ ಅಮಾನುಷ ಶಕ್ತಿಯಮರರ
ರಾಯಗಳವಲ್ಲೆಂದು ವಿಪ್ರ ನಿ
ಕಾಯಕಿದು ಸಾಮಾನ್ಯವೇ ನಮ್ಮಗ್ರಹಾರದಲಿ
ಕಾಯಿದವರಿವರೆಂದು ವಿಪುಲ
ಶ್ರೇಯ ಪದ್ಮಜ ಸೋಮಧರ ನಾ
ರಾಯಣರು ಕೊಡಲೆಂದು ಹರಸಿತು ಭೂಸುರ ವ್ರಾತ ೪೦
ಸಂಕ್ಷಿಪ್ತ ಭಾವ
ಈ ಭಾಗದಲ್ಲಿ ಭೀಮನಿಂದ ಬಕಾಸುರನ ವಧೆ.
ಅರಣ್ಯದಿಂದ ಹೊರಟು ನಡೆದಾಗ ಬಾದರಾಯಣನು ( ವ್ಯಾಸ) ಆಗಮಿಸಿ ವಿಪ್ರ ವೇಷದಲ್ಲಿಏಕಚಕ್ರನಗರವನ್ನು ತಲುಪಿ ಅಲ್ಲಿ ಸ್ವಲ್ಪ ಕಾಲ ಇರುವಂತೆಯೂ ನಂತರ ಒಳ್ಳೆಯದಾಗುವುದೆಂದೂಹೇಳಿದನು.
ಅದರಂತೆ ಇವರು ಏಕಚಕ್ರನಗದಲ್ಲಿ ಒಂದೆಡೆ ಬಿಡಾರ ಮಾಡಿದರು. ಸಂಪೂರ್ಣಬ್ರಾಹ್ಮಣರಂತೆಯೇ ನಡೆದುಕೊಳ್ಳುತ್ತ ಭಿಕ್ಷಾಟನೆಯಿಂದ ಜೀವನ ನಡೆಸುತ್ತಿದ್ದರು. ಪ್ರತಿದಿನ ತಂದಭಿಕ್ಷಾನ್ನವನ್ನು ಕುಂತಿ ಎರಡು ಪಾಲು ಮಾಡಿ ಒಂದು ಭಾಗವನ್ನು ಭೀಮನಿಗೆ ಕೊಟ್ಟು ಉಳಿದಭಾಗವನ್ನು ಉಳಿದೆಲ್ಲರಿಗೂ ಹಂಚುತ್ತಿದ್ದಳು. ಹಸ್ತಿನಾಪುರದ ಅರಸರಿಗೇ ಈ ಪಾಡು ಬಂದರೆಉಳಿದವರ ಪಾಡೇನು?
ಒಂದು ದಿನ ತಮಗೆ ವಾಸಿಸಲು ಸ್ಥಳ ನೀಡಿದ್ದ ಮನೆಯಿಂದ ಶೋಕದ ಅಬ್ಬರ ಕೇಳಿಬಂದಾಗ ಕುಂತಿಹೋಗಿ ಏನೆಂದು ವಿಚಾರಿಸಲಾಗಿ, ಬಕಾಸುರನೆಂಬ ಒಬ್ಬ ರಕ್ಕಸನ ಕಾಟವೆಂದೂ ಪ್ರತಿನಿತ್ಯ ಒಂದುಮನೆಯಿಂದ ಅವನಿಗೆ ಆಹಾರ, ಮತ್ತು ಒಬ್ಬನನ್ನು ಬಲಿ ಕೊಡಬೇಕಾಗಿದೆಯೆಂದೂ ನಾಳೆ ತನ್ನಮನೆಯ ಸರದಿಯೆಂದೂ ಹೇಳುತ್ತ ಗೋಳಾಡಿದರು.
ಕುಂತಿಯು ಅವರನ್ನು ಸಂತೈಸಿ ತನ್ನ ಮಗನನ್ನು ಕಳಿಸುವುದಾಗಿ ಒಪ್ಪಿಸಿ ಮನೆಗೆ ಬಂದು ಭೀಮನಿಗೆಹೇಳಿದಳು. ಸರಿಯಾದ ಊಟ ಸಿಗುವುದೆಂದು ಅವನಿಗೆ ಸಂತಸವಾಯಿತು.
ಮರುದಿನ ನಸುಕಿಗೆ ಎಲ್ಲ ಸಿದ್ಧವಾಯಿತು. ಬಗೆಬಗೆಯ ಭಕ್ಷಾನ್ನಗಳು, ಹಾಲು ಮೊಸರು ತುಪ್ಪಗಳಗಡಿಗೆಗಳು ಎಲ್ಲ ಸೇರಿದವು. ಪುರದ ಜನರಿಗೆ ಕುಂತಿಯ ಬಗ್ಗೆ ಆಶ್ಚರ್ಯ. ತನ್ನ ಮಗನನ್ನು ಬಲಿಗಾಗಿಕಳಿಸುತ್ತಿರುವಳಲ್ಲ ಎಂದು!
ಭೀಮ ಹೊರಟನು. ದಾರಿಯುದ್ದಕ್ಕೂ ಚೆನ್ನಾಗಿ ತಿನ್ನುತ್ತಾ ಕುಡಿಯುತ್ತಾ ಸಂತಸಪಟ್ಟನು. ಅತ್ತತಡವಾಗುತ್ತಿದೆಯೆಂದು ಬಕಾಸುರನಿಗೆ ಕೋಪ. ನೋಡಿದರೆ ಈ ಮನುಷ್ಯ ತನ್ನ ಪಾಲಿನದನ್ನುತಿಂದು ತೇಗುತ್ತಿದ್ದಾನೆ. ಭೀಮನ ಕಡೆಗೆ ಕೋಪದಿಂದ ನುಗ್ಗಿದ ಬಕಾಸುರ ಅವನ ಬೆನ್ನಿನ ಮೇಲೆಗುದ್ದಿದ. ಒಳಿತಾಯಿತು ಎಂದ ಭೀಮ ಎಲ್ಲವನ್ನೂ ತಿಂದು ಪೂರೈಸಿ ರಕ್ಕಸನೊಂದಿಗೆಹೋರಾಟಕ್ಕಿಳಿದ. ಭೀಮನೆದುರಿಗೆ ಬಕಾಸುರನ ಶಕ್ತಿ ಉಳಿಯಲಿಲ್ಲ. ಅವನನ್ನು ಕೊಂದುಹೆಣವನ್ನು ಬಂಡಿಗೆ ಕಟ್ಟಿ ತಂದು ಪುರದ ಬಾಗಿಲಿನಲ್ಲಿ ನಿಲ್ಲಿಸಿದ. ಇಡೀ ನಗರದ ಜನತೆ ಇವನಸಾಹಸವನ್ನು ಕೊಂಡಾಡಿತು.
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್‌ಗಳು