ಭಾರತಕಥಾಮಂಜರಿ11
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಆದಿಪರ್ವ - ಹನ್ನೊಂದನೆಯ ಸಂಧಿ
ವೀರಕುಂತೀ ತನುಜರಿರುಳಂ
ಗಾರವರ್ಮನ ಗೆಲಿದು ಹೊಕ್ಕರು
ಧಾರುಣೀಸುರ ವೇಷದಲಿ ಪಾಂಚಾಲ ಪಟ್ಟಣವ
- - - -
ಅರಸ ಕೇಳೈ ಕಲಿ ಬಕಾಸುರ
ಮರಣ ಸಮನಂತರದೊಳಾ ಪುರ
ವರದೊಳಿರ್ದರು ವಿಮಲ ವಿಪ್ರಸ್ತೋಮದೊಡಗೂಡಿ
ವರುಷ ತುಂಬಿತು ನಮ್ಮ ಹಸ್ತಿನ
ಪುರವ ಹೊರವಂಟಂದಿನಲಿಯೆಂ
ದರಸ ಕುಂತೀದೇವಿಗೆಂದನು ಧರ್ಮಸುತ ನಗುತ ೧
ಆ ಸಮಯದಲಿ ಬಂದನೊಬ್ಬನು
ಭೂಸುರನು ಸಕುತೂಹಲನು ಬಹು
ದೇಶ ಪರಿಯಟಣ ಪ್ರವಾಸಾಭ್ಯಾಸ ಶಿಕ್ಷೆಯಲಿ
ಗ್ರಾಸ ಯಾಚಕನಾಗಿ ತಮ್ಮ ನಿ
ವಾಸದಲಿ ಸಲೆ ತುಷ್ಟನಾದ ಮ
ಹೀಸುರನ ಮಾತಾಡಿಸಿದನಂದರಸ ವಿನಯದಲಿ ೨
ಎತ್ತಣಿಂದಲಿ ಬರವು ಬಳಿಕಿ
ನ್ನೆತ್ತ ಗಮನವು ಪೂರ್ವ ಸುಕೃತವ
ಹೊತ್ತುದಿಂದಿನ ದಿವಸವಿದೆಲಾ ಸುಜನ ಸಂಸರ್ಗಸ
ಉತ್ತರೋತ್ತರ ಸಿದ್ಧಿಯಿಲ್ಲಿಂ
ದಿತ್ತಲೆಮಗೆನೆ ಹಸ್ತಿನಾಪುರ
ದತ್ತಣಿಂದವೆ ಬಂದೆವಾವುದು ದೇಶ ನಿಮಗೆಂದ ೩
ನಾವು ನಿಮ್ಮೋಪಾದಿಯಲಿ ತೀ
ರ್ಥಾವಲೋಕನಪರರು ಭಿಕ್ಷಾ
ಜೀವಿಗಳು ನೀವೇಸು ದಿನ ಗಜಪುರವ ಹೊರವಂಟು
ಆವನಲ್ಲಿಗೆ ಪತಿ ಯುಧಿಷ್ಠಿರ
ದೇವನೋ ದುರ್ಯೋಧನನೊ ಬಳಿ
ಕಾವುದುಂಟು ವಿಶೇಷ ಕೌರವ ಪಾಂಡುತನಯರಲಿ ೪
ಮರುಳುಗಳೊ ನೀವ್ ಮೇಣು ನಮ್ಮನು
ಮರುಳು ಮಾಡುವ ಪರಿಯೊ ಪಾಂಡವ
ರರಗು ಮನೆಯಲಿ ಬೆಂದರಿದು ಲೋಕಪ್ರಸಿದ್ಧವಲೆ
ಅರಸು ಕೌರವರಾಯನಾತನ
ಸಿರಿಯನಾತನ ಬಲುಹನಾತನ
ಪರಿಯನಭಿವರ್ಣಿಸುವಡರಿಯೆನು ವಿಪ್ರ ಕೇಳೆಂದ ೫
ಅಕಟ ಪಾಂಡವರಳಿದರೇ ಬಾ
ಧಕರೆ ಪರರಿಗೆ ಲೇಸಿನಲಿ ಕಂ
ಟಕವು ದುಗ್ಧ ವಿಷಂಗಳಲಿ ಹಾವಿಂಗೆ ಹಾನಿಯಲೆ
ವಿಕಳ ಪುಣ್ಯರು ನಿಲಲಿ ಕುರು ರಾ
ಜಕದೊಳಗೆ ಭೀಷ್ಮಾದಿ ವೃದ್ಧ
ಪ್ರಕರ ಗುರುಸುತ ಗುರು ಕೃಪಾದ್ಯರು ಕುಶಲರೇಯೆಂದ ೬
ಗುರುಸುತಾದಿ ಸಮಸ್ತ ಪರಿಜನ
ಪುರಜನಕೆ ಸುಕ್ಷೇಮ ದ್ರುಪದನ
ವರ ಕುಮಾರಿಯ ಮದುವೆ ಗಡ ಪಾಂಚಾಲನಗರದಲಿ
ನೆರವುತಿದೆ ನಾನಾ ದಿಗಂತದ
ಧರಣಿಪತಿಗಳು ಭೂರಿಯಲಿ ಮಿಗೆ
ಭರಿತ ದಕ್ಷಿಣೆ ಮೃಷ್ಟ ಭೋಜನವುಂಟು ನಮಗೆಂದ ೭
ಸಾರವಿದು ನೃಪ ಕನ್ನಿಕೆಗೆ ವರ
ನಾರು ಲಗ್ನವದೆಂದು ಬಳಿಕಾ
ರಾರು ಬಂದರು ಭೂಪತಿಗಳಿದನೆಂದು ಕೇಳಿದಿರಿ
ಭೂರಿಯಲಿ ನಮಗುಂಟೆ ಮೃಷ್ಟಾ
ಹಾರ ದಕ್ಷಿಣೆ ನಮ್ಮಭೀಷ್ಟ ವಿ
ಹಾರ ವಾರ್ತೆಯಿದೆಂದು ಧರ್ಮಜ ನುಡಿದನಾ ದ್ವಿಜಗೆ ೮
ಇವರು ಕಪಟೋಪಾಧ್ಯರೆಂಬುದ
ನವನು ಬಲ್ಲನೆ ಭೂಮಿದೇವ
ಪ್ರವರನೈಸಲೆಯೆಂದು ಬಗೆದನು ಧರ್ಮನಂದನನ
ಅವನಿಯಲಿ ಪಾತಾಳದಲಿ ಸುರ
ಭವನದಲಿ ಪಾಂಚಾಲ ತನುಜೆಗೆ
ಯುವತಿಯರು ಸರಿಯಲ್ಲವೆಂಬುದ ಕೇಳ್ದೆವಾವೆಂದ ೯
ಈಟೆಗೆಣೆಯಹ ವರನನೀ ನರ
ಲೋಕದಲಿ ತಾ ಕಾಣೆನರ್ಜುನ
ನೀ ಕುಮಾರಿಯ ರಮಣನೆಂದೇ ಮನದ ಸಂಕಲ್ಪ
ಈಕೆಯಪದೆಸೆಯುದಯದಲಿ ಕುಂ
ತೀಕುಮಾರಕರನಲ ಮುಖದಲಿ
ನಾಕದಲಿ ನೆಲೆಗೊಂಡರೆಂದುಮ್ಮಳಿಸುವನು ದ್ರುಪದ ೧೦
ಜ್ವಲನ ನೆರೆ ನುಂಗಿದನೊ ಮೇಣೆಂ
ಜಲಿಸಿ ಬಿಟ್ಟನೊ ಬಲ್ಲನಾವನು
ಕಲು ಹೃದಯನೈ ಕಮಲಭವನೀ ಪಾಂಡುನಂದನರ
ಸುಳಿವ ಸೈರಿಸನಕಟ ಹೂಹೆಗ
ಳಳಿವ ಹರೆಯವೆ ಶಿವಶಿವಾಯೆಂ ೧೧
ದಳಲುದೊರೆಯಲಿ ಮುಳುಗಿ ಮೂಡುವ ದ್ರುಪದಪತಿಯೆಂದ
ಅರಸ ಕೇಳ್ವನು ಸಕಲ ದೈವ
ಜ್ಞರಲುಪಶ್ರುತಿಗಳಲಿ ಋಷಿಗಳ
ಪರಮಸಿದ್ಧಾಂತದಲಿ ಮಂತ್ರಾವೇಶ ವಚನದಲಿ
ಧರಯೊಳೀಗಳು ಪಾಂಡುಸುತ ಸಂ
ಚರಣೆಯುಂಟದು ಸತ್ಯವೆಂದುಪ
ಚರಿಸಿ ನುಡಿದು ಪುರೋಹಿತನು ಸಂತವಿಸುವನು ನೃಪನ ೧೨
ಸರಸಿಜಾನನೆ ನೋಡಿ ನೃಪರಲಿ
ವರಿಸುವಳು ವಲ್ಲಭನನೆಂದುಪ
ಚರಿಸುವನು ಸವಿವಾತುಗಳ ಸಾರಾಯ ಸೋನೆಯಲಿ
ಬರಿಸುವುದು ಬಹುದೇಶ ಭೂಮೀ
ಶ್ವರರನವರೊಳು ಪುಣ್ಯದಲಿ ಗೋ
ಚರಿಸರೇ ಗರುವೆಯರ ದೇವಿಗೆ ಪಾಂಡುಸುತರೆಂದ ೧೩
ಆದೊಡೀ ಮಗುವಿನ ಮಹಾಪು
ಣ್ಯೋದಯದ ಫಲವೈಸಲೇ ಬರೆ
ಮೇದಿನೀಶ್ವರರೆಲ್ಲರಿಗೆ ಲೇಖಾರ್ಥ ಸಂಗತಿಯ
ಸೋದರರು ಸಹಿತಾ ಸುಯೋಧನ
ನಾದಿಯಾದ ಸಮಸ್ತ ನೃಪರು ವಿ
ವಾದವಿಲ್ಲದೆ ಬರಲಿ ಕಟ್ಟಿಸು ಪಾವುಡವನೆಂದ ೧೪
ಬರೆದ ವೋಲೆಗಳಖಿಳ ಭೂಮೀ
ಶ್ವರರಿಗುಡುಗೊರೆ ಸಹಿತ ದೂತರು
ಹರಿದರುತ್ತರ ಪೂರ್ವ ದಕ್ಷಿಣ ಪಶ್ಚಿಮಂಗಳಿಗೆ
ಧರೆಯ ಕನ್ಯಾಜನ ಶಿರೋಮಣಿ
ವರ ದ್ರುಪದ ತನುಜಾ ಸ್ವಯಂವರ
ಕರಸುಗಳು ಬಹುದೆಂದು ವಾಚಿಸಿತಖಿಳ ಲೇಖಾರ್ಥ ೧೫
ಮಾಡಿದರೆ ಶತ ಯಾಗವನು ಕೈ
ಗೂಡುವಳು ಶಚಿ ಮಖ ಸಹಸ್ರವ
ಮಾಡಿ ಮೇಣ್ ಜನಿಸದೊಡೆ ಬಹಳೇ ದ್ರೌಪದಾದೇವಿ
ನೋಡುವೆವು ನಡೆ ಜನ್ಮ ಶತದಲಿ
ಕೂಡಿ ಕೊಬ್ಬಿದ ಪುಣ್ಯಫಲ ಕೈ
ಗೂಡುವುದೊ ತಪ್ಪೇನೆನುತ ನೆರೆದುದು ನೃಪಸ್ತೋಮ ೧೬
ಆ ಪುರೋಹಿತ ವಚನದಲಿ ನಿ
ರ್ವ್ಯಾಪಿತಾಂತರ್ವ್ಯಥೆಯಲವನಿಪ
ನಾ ಪುರಪ್ರಾಂತ್ಯದಲಿ ಸುತ್ತಲು ಮೂರು ಯೋಜನದ
ತೋಪಿನಲಿ ಕಟ್ಟಿಸಿದನಗ್ಗದ
ಭೂಪರಿಗೆ ಭವನವನು ಕೇಳೈ
ದ್ರೌಪದಿಯ ವೈವಾಹ ರಚನಾ ರಾಮಾಣೀಯಕವ ೧೭
ನೆರವುತಿದೆ ನಾನಾ ದಿಂಗತದ
ಧರಣಿಪರು ಕನ್ಯಾರ್ಥಿಗಳು ಭೂ
ಸುರ ಸಮೂಹದ ಸಾಲು ನೆರೆದುದು ದಕ್ಷಿಣಾರ್ಥದಲಿ
ಎರಡರೊಳು ನಿಮಗೇನು ಕನ್ಯಾ
ವರಣವೋ ಮೇಣ್ ದಕ್ಷಿಣಾರ್ಥವೊ
ಬರವು ನಿಮಗುಂಟೇಯೆನುತ ದ್ವಿಜನಿವರ ಬೆಸಗೊಂಡ ೧೮
ಈಸು ಪರಿಯಲಿ ನಮ್ಮ ನೀವಪ
ಹಾಸ ಮಾಡುವಿರಾವು ಭಿಕ್ಷಕ
ರೈಸಲೇ ಕನ್ಯಾರ್ಥದಲಿ ನಾವೆತ್ತ ನೃಪರೆತ್ತ
ಐಸೆ ನಿಮ್ಮೊಡೆ ನಾವು ಬಹೆವೀ
ಭೂಸುರರ ನೆರವುಂಟಲಾ ಶುಭ
ವಾಸರವ ಬೆಸಗೊಂಬೆನೆಂದನು ಧರ್ಮಸುತ ನಗುತ ೧೯
ಇವನು ಬಳಿಕ ನಿಜ ಪ್ರಯೋಜನ
ಭವನಕೈದಿದನಖಿಳ ವಾರ್ತಾ
ವಿವರಣ ವ್ಯಾಖ್ಯಾನ ಸಮನಂತರದ ಸಮಯದಲಿ
ಇವರು ತಮ್ಮೊಳಗೆಂದರವನೀ
ದಿವಿಜಪುರದಲಿ ದೈನ್ಯವೃತ್ತಿಯ
ನಿವಹ ನಿಲಲಿ ನಿರೀಕ್ಷಿಸುವೆವಾ ದ್ರುಪದ ಪಟ್ಟಣವ ೨೦
ಆ ಲತಾಂಗಿಯ ಮದುವೆಗವನೀ
ಪಾಲವರ್ಗದ ಬರವು ಗಡ ಹರ
ನೂಳಿಗದ ಹೆಚ್ಚಾಳು ಮಕರಧ್ವಜನಮೌಳಿ ಗಡ
ಮೇಳವಹ ಕಿವಿಗಳಿಗೆ ಹಂಗಹ
ವಾಲಿಗಳು ಪರಿವಿಡಿಯ ವೇಧೆಗೆ
ಸೋಲುವವೆಯೆಂದೈವರಾಳೋಚಿಸಿದರೊಳಗೊಳಗೆ ೨೧
ಅರಸ ಚಿತ್ತೈಸಮಳ ಲಗ್ನಾಂ
ತರದಲಿವರುದಯದಲಿ ಹೊರವಂ
ಟರು ಸುವಿದ್ಯಾ ಪರಿಣತರ ಪಂಡಿತರ ಗಡಣದಲಿ
ಬರುತ ಕಂಡರು ಕಳಶ ಕನ್ನಡಿ
ವರ ಯುವತಿ ಖಗಮೃಗದ ಬಲು ಸು
ಸ್ವರ ಸುಗಂಧಾನಿಲ ಸುಸಂಗತ ಶಕುನ ಸೂಚಕವ ೨೨
ಚಾರು ಶಕುನವಿದುತ್ತರೋತ್ತರ
ವಾರಿಗಿದು ಫಲಿಸುವುದೊ ನಮ್ಮೊಳು
ಹಾರುವರ ಹುಲು ಮೊತ್ತ ಕನ್ಯಾಲಾಭ ಫಲವಿದಕೆ
ಭೂರಿ ಭಾಗ್ಯನು ನಮ್ಮ ವಿಪ್ರರೊ
ಳಾರೆನುತ ತತ್ ಶಕುನಫಲ ವಿ
ಸ್ತಾರವನು ನೆರೆ ವಿವರಿಸುತ ನಡೆದುದು ಬುಧಸ್ತೊಮ ೨೩
ಧರಣಿಯಮರರ ಗಡಣದಲಿ ನಾ
ಲ್ಕೆರಡು ಪಯಣಾಂತರದಲವನೀ
ಸುರರನುಳಿದಾಶ್ರಮದೊಳಗೆ ಪಾರಾಶರವ್ರತಿಯ
ದರುಶನವ ಮಾಡಿದರು ಬಕ ಸಂ
ಹರಣ ವೃತ್ತಾಂತವನು ನೆರೆ ವಿ
ಸ್ತರಿಸಿದರು ವಿನಯದಲಿ ಬೀಳ್ಕೊಂಡರು ಮುನೀಶ್ವರನ ೨೪
ಗಮನ ಭರದಲಿ ಭಾರಿಯದ್ವ
ಶ್ರಮವ ನೋಡದೆ ಭೂಮಿ ನಭದಲಿ
ತಮದ ಚಾವಡಿಯಿಕ್ಕಿದರೆ ಗತಿ ಚಾಪಳವ ಬಿಡದೆ
ದ್ಯುಮಣಿ ಕೈಸೆರೆಯಾಗಲಟವೀ
ಭ್ರಮಣದಲಿ ಬೆಳಗಡಗೆ ಭೂಪೋ
ತ್ತಮರು ಬಂದರು ಬಹಳಗಮನದೊಳರ್ಧ ರಾತ್ರಿಯಲಿ ೨೫
ಮುಂದೆ ಪಾರ್ಥನ ಬೀಸುಗೊಳ್ಳಿಗ
ಳಿಂದ ತಮದಾವಳಿ ಮುರಿಯೆ ಬಳಿ
ಸಂದು ಕುಂತೀದೇವಿ ಧರ್ಮಜನಕುಲ ಸಹದೇವ
ಹಿಂದೆ ಭೀಮನ ಕೈಯ ಕೊಳ್ಳಿಯ
ಬಿಂದು ಬೆಳಗಿನಲನಿಬರಟವೀ
ವೃಂದದಲಿ ಬರುತಿರ್ದರಿರುಳವನೀಶ ಕೇಳೆಂದ ೨೬
ಬರುತ ಕಂಡರು ಮುಂದೆ ಗಂಧ
ರ್ವರ ವಧೂ ನಿಕುರುಂಬವನು ನೇ
ವುರದ ಝಣ ಝಣ ರವದ ಕಂಕಣ ಝೇಂಕೃತಿಧ್ವನಿಯ
ಅರಳುಗಂಗಳ ಬೆಳಗಿನಲಿ ತಮ
ವಿರುಳು ಬೀತುದು ಬೆಸುವುದಾಗಲೆ
ಕುರುಳ ಕಾಳಿಕೆಯಿಂದ ತತ್ಕಾಂತಾ ಕದಂಬದಲಿ ೨೭
ಲಲಿತ ತನುಕಾಂತಿಗಳ ಮೊಗೆದರು
ತಿಳಿಗೊಳನ ಜಲವೆಂದು ಕಂಗಳು
ಹೊಳೆಯೆ ಮರಿಮೀನೆಂದು ಹೆಕ್ಕಳಿಸಿದರು ಹಿಡುಹಿನಲಿ
ಅಲರಿದಂಬುಜವೆಂದು ವದನಕೆ
ನಿಲುಕಿ ತುಂಬಿಗಳೆಂದು ಕುರುಳಿಂ
ಗಳುಕಿ ಕೈಗಳ ತೆರೆದರತಿ ಮುಗುದೆಯರು ಖಚರಿಯರು ೨೮
ಅವರ ಮುಖಕಾಂತಿಗಳಲಂಗ
ಚ್ಛವಿಗಳಲಿ ಕಂಕಣದ ಹಾರದ
ವಿವಿಧ ರತ್ನಾಭರಣ ಕಿರಣದ ಲಲಿತ ಲಹರಿಯಲಿ
ಸವೆದುದಗ್ಗದ ತಿಮಿರವವದಿರ
ನಿವರು ಕಂಡರು ಜಲವಿಹಾರದ
ದಿವಿಜಸತಿಯರಲಾಯೆನುತ ಬರುತಿರ್ದರಡವಿಯಲಿ ೨೯
ನಾರಿಯರು ಕಂಡರು ಸುಲಜ್ಜಾ
ಭಾರದಲಿ ತಡಿಗಡೆಗೆ ಹಾಯಿದು
ಸೀರೆಗಳ ತೆರೆವಿಡಿದರಂಗೋಪಾಂಗ ಲತೆಗಳಿಗೆ
ಆರಿವರು ನಡುವಿರಳು ದರ್ಪ ವಿ
ಕಾರದಲಿ ಕೈಕೊಳ್ಳಿರೆನುತಂ
ಗಾರವರ್ಮನು ಧನುವ ಕೊಂಡನು ನುಡಿಸಿದನು ನರನ ೩೦
ಈಸು ಭರದಲಿ ಗಮನವೆಲ್ಲಿಗೆ
ದೇಶಕಾಲವ ನೋಡದೀ ಸ
ರ್ವಾಸುರದ ಸೌರಂಭವೇನೆನೆ ಪಾರ್ಥ ನಸುನಗುತ
ದೇಶವಿದು ವನ ಕಾಲ ನಡುವಿರು
ಳೈಸಲೇ ನಿಜಕಾರ್ಯ ಸಂಗತಿ
ಗೋಸುಗವೆ ಗತಿಯೆಂದನಾ ಗಂಧರ್ವರಾಜಂಗೆ ೩೧
ನರರು ಸುಳಿವುದು ಪೂರ್ವಭಾಗದ
ಲಿರುಳಿನುತ್ತರ ಭಾಗದಲಿ ಖೇ
ಚರರು ಸುಳಿವುದು ಸೀಮೆ ಚತುರಾನನನ ಸೃಷ್ಟಿಯಲಿ
ಇರುಳಿನುತ್ತರ ಭಾಗವಿದು ನೀವ್
ನರರು ಬಹುದುದ್ದಂಡ ದರ್ಪ
ಜ್ವರಿತವಿದಕೌಷಧಿಯನೆರೆವೆನೆನುತ್ತ ತೆಗೆದೆಚ್ಚ ೩೨
ಕನಲಿ ಫಲುಗುಣನಾದಡಿದ ಕೊ
ಳ್ಳೆನುತ ಕೊಳ್ಳಿಯೊಳಿಟ್ಟನಗ್ನಿಯ
ನೆನೆದು ಮಂತ್ರಿಸಲುರಿಮುಖದ ಕಾರ್ಬೊಗೆಯ ಮೊಬ್ಬಿನಲಿ
ಹೊನಲುಗಿಡಿಗಳ ತಗಡುರಿಯ ಕೊಂ
ಡಿನಲಿ ಮುತ್ತಿತು ರಥವನಾತನ
ಧನುವನಾತನ ತನುವನಾತನ ಸರಳ ಸಾರಥಿಯ ೩೩
ಉರಿದುದಾ ರಥವವನ ಮೈಯಲಿ
ಕರಿಕುವರಿತರಲೋಡಿ ಹೊಕ್ಕನು
ಸರಸಿಯನು ಶಿಖಿಯೊಡನೆ ಹೊಕ್ಕುದು ನೀರನುರೆ ಸುರಿದು
ತರುಣಿ ಹಾಹಾ ಕೆಟ್ಟೆನೆಂದ
ಬ್ಬರಿಸಲಾ ಗಂಧರ್ವನಂಗನೆ
ಹರಿದಳೆಡೆಗೈಯಿಂದ ಸಂವರಿಸುತ್ತ ಬಿಡುಮುಡಿಯ ೩೪
ಬಂದು ಯಮನಂದನನ ಚರಣ
ದ್ವಂದ್ವದಲಿ ಚಾಚಿದಳು ನೊಸಲನು
ತಂದೆ ಕರುಣಿಸು ಕಾಂತಭಿಕ್ಷವ ಕರುಣಿಸೆನಗೆನಲು
ಮುಂದುವರಿಯದಿರೆಲೆ ಧನಂಜಯ
ಕೊಂದರೆನ್ನಾಣೀಕೆಯರಸನ
ತಂದುಕೊಡು ಬೇಗದಲಿ ಉಪಸಂಹರಿಸು ಶಿಖಿಶರವ ೩೫
ಎನೆ ಹಸಾದವೆನುತ್ತ ನಿಮಿಷದೊ
ಳನಲನನು ನಂದಿಸಿದನಿತ್ತಲು
ಮನದ ದುಮ್ಮಾನದಲಿ ಲಜ್ಜಾವನತ ಮುಖನಾಗಿ
ಮನುಜರಲ್ಲಿವರಾರೊ ನೋಡುವೆ
ನೆನುತ ಹತ್ತಿರೆ ಬಂದು ನೀವಾ
ರಿನಿತು ಸಾಹಸ ಮಲ್ಲರೆಂದರ್ಜುನನ ಬೆಸಗೊಂಡ ೩೬
ನರರು ವೈದೇಶಿಗರು ಕಾರ್ಯಾ
ತುರರು ನಾವೆನಲರ್ಜುನನನುಪ
ಚರಿಸಿ ವಿವಿಧ ಗುಣಾನುಮುಖದಲ್ಲಿವರನಂಡಲೆಯೆ
ಧರೆಯೊಳುಂಟೇ ಪಾಂಡುಸುತರೆಂ
ಬರಸುಗಳು ನೀ ಕೇಳಿ ಬಲ್ಲೈ
ನಿರುತವಾದವರೆಂದು ನುಡಿದನು ನಗುತ ಕಲಿಪಾರ್ಥ ೩೭
ಶಿವ ಶಿವಾದೊಡೆ ಯಮ ಪುರಂದರ
ಪವನನಶ್ವಿನಿಯರಿಗೆ ನೀವ್ ಸಂ
ಭವಿಸಿದವರೇ ನೀವೆಮಗೆ ಸಂಭಾವನೀಯರಲ
ಇವೆ ಸಹಸ್ರ ತುರಂಗ ದಿವ್ಯೋ
ದ್ಭವವನರ್ಘ್ಯಾಭರಣರತ್ನ
ಪ್ರವರವಿವೆ ಕಾರುಣ್ಯದಲಿ ಕೈಕೊಂಬುದಿವನೆಂದ ೩೮
ಬಂದವೆಮಗಿವು ನಿನ್ನ ನಾವ್ ಬೇ
ರೆಂದು ಕಾಣೆವು ಪರಮ ಬಾಂಧವ
ರಿಂದು ಮೊದಲಾಗೆಮಗೆ ನೀನೇ ಮೌಲ್ಯಧನವೆಂದ
ಇಂದು ನಿಜರೂಪಡಗಿ ರಾಯರ
ವೃಂದವನು ನೋಡುವೆವು ದ್ರುಪದನ
ನಂದನೆಯ ವೈವಾಹ ರಚನೆಯೊಳೆಂದನಾ ಪಾರ್ಥ ೩೯
ಇವು ಮದೀಯ ಸುವಸ್ತು ನಿನ್ನಯ
ಭವನದೊಳಗಿರಲೊಂದು ಸಮಯದೊ
ಳಿವನು ತರಿಸುವೆವೆಂದು ಬಳಿಕಂಗಾರವರ್ಮಂಗೆ
ಇವರು ವಿನಯವ ಮಾಡಿ ಗಮನೋ
ತ್ಸವದಲಿರೆ ಗಂಧರ್ವ ನಸು ನಗು
ತಿವರಿಗೆಂದನು ಧರ್ಮಶಾಸ್ತ್ರದ ಸಾರ ಸಂಗತಿಯ ೪೦
ಮುನಿಯದಿರು ಕಲಿಪಾರ್ಥ ನಿನ್ನಯ
ಘನತರದ ವಿಕ್ರಮಕೆ ದಿವಿಜರು
ದನುಜ ಭುಜಗರು ನೆರೆಯರುಳಿದೀ ನರರ ಪಾಡೇನು
ಅನುಪಮಾನಕ್ಷತ್ರವಹ್ನಿಗೆ
ವಿನುತ ವಿಮಲ ಬ್ರಹ್ಮತೇಜೋ
ಘನ ಸಮೀರ ಸಹಾಯವಾಗಲಸಾಧ್ಯವೇನೆಂದ ೪೧
ಅರಸ ನಿಮ್ಮೊಳು ಪೂರ್ವದಲಿ ಸಂ
ವರಣನೆಂಬನು ಸೂರ್ಯತನುಜೆಗೆ
ಮರುಳುಗೊಂಡನು ಮರೆದು ಕಳೆದನು ರಾಜ್ಯವೈಭವವ
ಬರಿಯ ಪಾರ್ಥಿವತೇಜದಲಿ ಗೋ
ಚರಿಸದಿರೆ ತತ್ಸತಿ ವಿವಾಹೋ
ತ್ಕರುಷವಾಯ್ತು ವಸಿಷ್ಠನಮಲ ಬ್ರಹ್ಮತೇಜದಲಿ ೪೨
ಆ ವಸಿಷ್ಠನ ಕೌಶಿಕನ ಯು
ದ್ಧಾವಲಂಬನವೇನನೆಂಬೆನು
ದೇವಕುಲವಂಜುವುದು ವಿಶ್ವಾಮಿತ್ರನುಬ್ಬಟೆಗೆ
ಆ ವಿವಿಧ ಮಂತ್ರಾಸ್ತ್ರವನು ಶತ
ಸಾವಿರವನಾ ಬ್ರಹ್ಮದಂಡದ
ಢಾವರದಲೇ ಗೆಲಿದನೊಬ್ಬ ವಸಿಷ್ಠಮುನಿಯೆಂದ ೪೩
ಒದಗಲಾರದೆ ತನ್ನ ಸುಕ್ಷ
ತ್ರದ ಮಹತ್ವದ ಬಿಸುಟು ಸುಬ್ರಾ
ಹ್ಮದಲಿ ಹೊಕ್ಕನು ವಿಗಡ ವಿಶ್ವಾಮಿತ್ರಮುನಿಯಂದು
ಅದರಿನಿಂದೀ ಕ್ಷತ್ರತೇಜದೊ
ಳುದಿತ ವಿಮಲಬ್ರಹ್ಮವನು ಕೂ
ಡಿದೊಡೆ ಕೌತುಕವೆಂದನಾ ಗಂಧರ್ವನರ್ಜುನಗೆ ೪೪
ಇಲ್ಲಿಗಿದೆ ನಾಲ್ಕೈದು ಯೋಜನ
ದಲ್ಲಿ ಧೌಮ್ಯಾಶ್ರಮ ವಸಿಷ್ಠಂ
ಗಲ್ಲಿ ಸನ್ನಿಧಿಯಾ ವಸಿಷ್ಠಂಗಾತನನುಜಾತ
ಅಲ್ಲಿ ಪೌರೋಹಿತ್ಯವನು ನಿಮ
ಗೊಲ್ಲೆನೆನ್ನದೆ ಮುನಿಪ ಮಾಡಿದ
ಡೆಲ್ಲ ಲೇಸಹುದೆಂದು ಕಳುಹಿದನಿವರನಾ ಖಚರ ೪೫
ಗಮಿಸಿದರು ಬಳಿಕವರು ಧೌಮ್ಯಾ
ಶ್ರಮಕೆ ಬಂದರು ಮುನಿಪನರ್ಘ್ಯಾ
ದ್ಯಮಲ ಸತ್ಕಾರೋಚಿತವ ಕೈಕೊಂಡು ವಿನಯದಲಿ
ಎಮಗೆ ಪೌರೋಹಿತ್ಯದಲಿ ಸಂ
ಕ್ರಮಿಸಬೇಕೆಂದೊಡಬಡಿಸಿ ಭೂ
ರಮಣರಲ್ಲಿಂದೈದಿದರು ಪಾಂಚಾಲ ಪಟ್ಟಣವ ೪೬
ಸಂಕ್ಷಿಪ್ತ ಭಾವ
Lrphks Kolar
ಈ ಭಾಗದಲ್ಲಿ ಪಾಂಡವರಿಗೆ ಪಾಂಚಾಲ ರಾಜಕುಮಾರಿ ದ್ರೌಪದಿಯ ಸ್ವಯಂವರದ ವಿಷಯ ತಿಳಿದು ಅಲ್ಲಿಗೆ ಹೊರಡುವರು. ನಡುವೆ ಅಂಗಾರವರ್ಮನನ್ನು ಜಯಿಸುವರು.
ಒಬ್ಬ ಬ್ರಾಹ್ಮಣನಿಂದ ಪಾಂಡವರಿಗೆ ದ್ರೌಪದಿಯ ಸ್ವಯಂವರದ ಸುದ್ದಿ ತಿಳಿಯುತ್ತದೆ. ಪಾಂಡವರ ಬಗ್ಗೆ ದ್ರುಪದನಿಗೆ ಚಿಂತೆಯಾಗಿರುವುದೆಂದೂ ಶಾಸ್ತ್ರಗಳು ಅವರು ಬದುಕಿರುವರೆಂದೇ ಹೇಳುತ್ತಿರುವವೆಂದೂ ತಿಳಿಯುತ್ತದೆ. ಸ್ವಯಂವರಕ್ಕೆ ಕೌರವರಾದಿಯಾಗಿ ಎಲ್ಲ ಕಡೆಯಿಂದಲೂ ರಾಜರುಗಳು ಸೇರುತ್ತಿರುವರೆಂದೂ ಸಾಕಷ್ಟು ದಕ್ಷಿಣೆ ಮತ್ತು ಮೃಷ್ಟಾನ್ನ ಭೋಜನಗಳು ಅಲ್ಲಿ ಉಂಟೆಂದೂ ಬ್ರಾಹ್ಮಣ ಹೇಳಿದ. ಆಗ ಇವರುಗಳು ಪಾಂಚಾಲ ದೇಶದ ಕಡೆಗೆ ಪಯಣ ಬೆಳೆಸಿದರು.
ಕತ್ತಲೆಯ ರಾತ್ರಿಯಲ್ಲಿ ಒಂದೆಡೆ ಗಂಧರ್ವಸ್ತ್ರೀಯರು ವಿಹರಿಸುತ್ತಿರುವಾಗ ಇವರನ್ನು ಕಂಡು ಅವರ ಒಡೆಯ ಅಂಗಾರವರ್ಮನೆಂಬುವನು ಕೋಪ ಮಾಡಿಕೊಂಡು ಮಾತನಾಡಿಸಿದ. ಇದು ಮಾನವರು ಸಂಚರಿಸುವ ಸಮಯವಲ್ಲವೆಂದಾಗ ಅರ್ಜುನನು ಅವನ ಮೇಲೆ ಆಗ್ನೇಯಾಸ್ತ್ರ ಪ್ರಯೋಗ ಮಾಡಿದ. ಅವನು ನೀರಿನೊಳಗೆ ಮುಳುಗಿದರೂ ಬಿಡದೆ ಹಿಂಬಾಲಿಸಿದ ಶಸ್ತ್ರವನ್ನು ಕಂಡು ಅವನ ಹೆಂಡತಿ ಬಂದು ಧರ್ಮರಾಜನನ್ನು ಬೇಡಿದಳು. ಆಗ ಶಸ್ತ್ರವನ್ನು ವಾಪಸು ಪಡೆದ ಅರ್ಜುನನು ತಮ್ಮ ಪರಿಚಯವನ್ನು ಹೇಳಿದನು. ಅಂಗಾರವರ್ಮನಿಗೆ ಬಹಳ ಸಂತೋಷವಾಯಿತು. ತನ್ನಲ್ಲಿದ್ದ ವಿವಿಧ ಅಸ್ತ್ರಗಳನ್ನು ಕೊಟ್ಟನು. ಸಧ್ಯಕ್ಕೆ ಇವು ನಿನ್ನಲ್ಲಿಯೇ ಇರಲಿ ಎಂದು ಹೇಳಿದ ಇವರು ತಮ್ಮ ಪಯಣದ ಉದ್ದೇಶವನ್ನು ಹೇಳಿದರು. ಆಗ ಅವನು ಸಂಕ್ಷಿಪ್ತವಾಗಿ ವಸಿಷ್ಠ ಮತ್ತು ವಿಶ್ವಾಮಿತ್ರರ ಬಗ್ಗೆ ಹೇಳುತ್ತ ಕ್ಷಾತ್ರತೇಜಸ್ಸಿಗೆ ಬ್ರಹ್ಮತೇಜಸ್ಸು ಸೇರಿದರೆ ಎಲ್ಲವೂ ಒಳ್ಳೆಯದಾಗುವುದೆಂದನು. ನಿಮಗೆ ಪುರೋಹಿತನಾಗಿ ಧೌಮ್ಯ ಋಷಿಯನ್ನು ಕರೆದುಕೊಂಡು ಹೋಗಿ. ಕೆಲಸವಾಗುವುದು ಎಂದನು. ಅದರಂತೆ ಇವರು ಧೌಮ್ಯರಲ್ಲಿಗೆ ಹೋಗಿ ಅವರನ್ನು ಒಪ್ಪಿಸಿ ಪಾಂಚಾಲ ನಗರವನ್ನು ಸೇರಿದರು.
ಕಾಮೆಂಟ್‌ಗಳು