ಭಾರತಕಥಾಮಂಜರಿ9
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಆದಿಪರ್ವ - ಒಂಭತ್ತನೆಯ ಸಂಧಿ
ಬೆಂಬಿಡದೆ ಕಲಿಭೀಮ ಹಿಡಿದು ಹಿ
ಡಿಂಬಕನ ಮುರಿದವನ ತಂಗಿ ಹಿ
ಡಿಂಬಿಯನು ಕೂಡಿದನು ಪಡೆದನು ಕಲಿ ಘಟೋತ್ಕಚನ
---
ಕೇಳು ಜನಮೇಜಯ ಧರಿತ್ರೀ
ಪಾಲ ಯಮನಂದನನ ಪಾರ್ಥನ
ಕಾಲೊಡೆದು ಬಸಿವರುಣ ಜಲದಲಿ ಬಟ್ಟೆ ಕೆಸರಾಯ್ತು
ಮೇಲೆ ಯಮಳರ ಕುಂತಿಯರನೇ
ವೇಳುವೆನು ಬೇಗದಲಿ ಕುರು ಭೂ
ಪಾಲ ಹಿಡಿಯಲಿ ಕೊಲಲೆನುತ ಕುಳ್ಳಿರ್ದರಡವಿಯಲಿ ೧
ಉರಿಯ ಮನೆಯಲಿ ಸಾಯಲೀಯದೆ
ಸೆರಗ ಹಿಡಿದೆಳತಂದು ಕೊಯ್ದನು
ಕೊರಳನಕಟಾ ಭೀಮನೇ ಹಗೆಯೆಂದಳಾ ಕುಂತಿ
ಅರಸ ಹಿಡಿಯಲಿ ದಾನವರು ನಿಂ
ದಿರಿಕೆಯಲಿ ನುಂಗಲಿ ಕೃತಾರ್ಥರು
ಧರೆಯೊಳಾವೆಂದೊದರಿದರು ಮಾದ್ರೀಕುಮಾರಕರು ೨
ಸಾಕು ಸಾಕಾನಿರಲು ಹೆಕ್ಕಳ
ವೇಕೆ ಹೋ ಹೋಯೆನುತ ಹೊತ್ತನು
ನೂಕಿ ಹೆಗಲೆರಡರಲಿ ಕುಂತಿಯ ಧರ್ಮನಂದನನ
ಆ ಕಿರೀಟಿಯನೆಡದಲಾ ಮಾ
ದ್ರೀ ಕುಮಾರರ ಬಲದ ಬದಿಯೊಳ ೩
ಗೌಕಿ ನಡೆದನು ಭೀಮನೊಡೆಹಾಯ್ದೊದೆದು ಕಲು ಮರನ
ಬಂದನೀ ಪರಿ ಹಲವು ಯೋಜನ
ದಿಂದ ಹೇರಡವಿಯಲಿ ಬಳಲಿದೆ
ನೆಂದನೇ ನೀರಡಿಸಿದನೆ ಮೇಣ್ ನಿದ್ರೆಗೆಳಸಿದನೆ
ತಂದು ಕಾನನ ಮಧ್ಯದಲಿ ತರು
ವೃಂದದಡಿಯೊಳಗಿಳುಹಿ ಬಳಿಕರ ೪
ವಿಂದದೆಲೆಯಲಿ ನೀರ ತಂದೆರೆದನು ಮಹೀಶರಿಗೆ
ಷಿಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ
ಝಳಕೆ ಕಂದಿದ ಮೈಯ ಬಾಡಿದ
ಲಲಿತ ವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ ೫
ತಾಯೆ ನೀ ದಿಟ ನಾಗ ನಗರಿಯ
ರಾಯನರಸಿಯೆ ನಿನ್ನ ಮಕ್ಕಳು
ರಾಯರೆದೆ ದಲ್ಲಣರೆ ಭಾರಿಯ ಬಾಹು ವಿಕ್ರಮರೆ
ಈಯವಸ್ಥೆಗೆ ಸೋಮವಂಶದ
ರಾಯತನವೆಂತಹುದು ಹೇಳೌ
ತಾಯೆ ಹೇಳೆನ್ನಾಣೆ ಹೇಳೆಂದಳಲಿದನು ಭೀಮ ೬
ಜನನಿಯಂಘ್ರಿಯನೊತ್ತಿ ಯಮನಂ
ದನನ ಚರಣವ ಮುರಿದು ಬಳಿಕ
ರ್ಜುನನ ಯಮಳರ ಪದವನೆಚ್ಚರದಂತೆ ಹಿಡಿಕಿಸುತ
ಅನಿಬರಿರವನು ನೋಡಿ ಪೂರ್ವವ
ನೆನೆದು ಬಿರಿದಳುತ ಘನಕಾ
ನನದ ಮಧ್ಯದಲೀತನಿದ್ದನು ಹಿರಿದು ಚಿಂತಿಸುತ ೭
ಔಕುವುದು ಬಲು ನಿದ್ರೆ ನಿದ್ರೆಯ
ನೂಕುವನು ಕಣ್ಣೆವೆಗಳಲಿ ನಸು
ತೂಕಡಿಕೆ ತೋರಿದೊಡೆ ಮೈಗೆದರುವನು ಕೈಯೊಡನೆ
ಸೋಕುವುದು ಮೈಮರವೆ ಮರವೆಯ
ನೋಕರಿಸುವುದು ಚಿತ್ತವೃತ್ತಿ ನಿ
ರಾಕುಲಾಂತಃಕರಣನಾದನು ಬಳಿಕ ಕಲಿಭೀಮ ೮
ವ್ಯಾಳ ಗಜ ಭೂದಾರ ವೃಕ ಶಾ
ರ್ದೂಲ ಸಿಂಹಾದಿಗಳ ಭಯವಾ
ಕೀಳ ದೈತ್ಯ ಪ್ರಕರ ಭಯವಹುದೆನ್ನ ಮರವೆಯಲಿ
ಹೇಳಲೇನದನಿನ್ನು ನಿದ್ರಾ
ವ್ಯಾಳ ವಿಷವನು ಮೊಗೆದು ಸೂಸಿ ವಿ
ಶಾಲ ಮತಿಯವಧಾನದಲಿ ಕಾದಿರ್ದನೈವರನು ೯
ಧರಣಿಪತಿ ಕೇಳೊಂದು ಮಾರಿಯ
ಮುರಿವನಿವರಿಗೆ ತದ್ವನಾಂತರ
ದರಸು ದೈತ್ಯ ಹಿಡಿಂಬನೆಂಬವನತುಲ ಭುಜಬಲನು
ಮುರಿಮುರಿದು ಮೇಗಾಳಿಯಲಿ ಮೂ
ಗರಳಿ ಮಾನವ ಗಂಧವಿದು ಗೋ
ಚರಿಸಿತೆತ್ತಣದೋ ಮಹಾದೇವೆನುತ ಬೆರಗಾದ ೧೦
ತಾಯೆ ಬಾರೌ ತಂಗಿ ಗಂಧದ
ವಾಯುವಿದೆ ಹೊಣೆಗಾರನಾಗಿ ನ
ವಾಯ ಭೋಜನವಿಂದು ದೊರಕಿತು ಮನುಜಮಾಂಸದಲಿ
ಸಾಯಲವದಿರ ಬಡಿದು ತಾ ತಮ
ಗಾಯವಿದು ಕೃತಪುಣ್ಯಫಲವೆನೆ
ಮಾಯಗಾತಿ ಹಸಾದವೆನುತ ಹಿಡಿಂಬಿ ಗಮಿಸಿದಳು ೧೧
ಬಂದಳವಳತಿ ರೌದ್ರರೂಪಿನೊ
ಳಂದು ಕಂಡಳು ದೂರದಲಿ ಹರಿ
ನಂದನನ ಸುಳಿದಲೆಯ ಕೆಮ್ಮೀಸೆಗಳ ಕರ್ಕಶದ
ಕೆಂದಳದ ಕೇಸರಿಯ ಕಂಗಳ
ಕುಂದ ರದನಚ್ಛವಿಯಲಿರೆ ಮನ
ಸಂದಳಾ ಖಳನನುಜೆ ಸೋತಳು ಭೀಮಸೇನಂಗೆ ೧೨
ಇವನ ರಮಣನ ಮಾಡಿಕೊಂಡೋ
ಡುವೆನು ವಿಪಿನಾಂತರಕೆ ಮುನಿದವ
ನಿವದಿರೈವರ ತಿನಲಿ ಮರದಡಿಯಲ್ಲಿ ಮಲಗಿದರ
ಇವನು ತನ್ನಯ ರೌದ್ರಮಯ ರೂ
ಪವನು ಕಂಡರೆ ಹೆದರುವನಲಾ
ಯುವತಿಯಹೆನೆಂದಸುರೆ ಸುಳಿದಳು ದಿವ್ಯರೂಪಿನಲಿ ೧೩
ಹೊಳೆವ ಕಂಗಳ ಕಾಂತಿ ಮರಗ
ತ್ತಲೆಯ ಮೊತ್ತವ ಬಿಗಿಯೆ ಮೈ ಪರಿ
ಮಳಕೆ ತೂಳುವ ತುಂಬಿಗಳ ತನುಲತೆಯ ಚೆಲುವಿಕೆಯ
ಲಲನೆ ಸುಳಿದಳು ಕುಚದ ಭಾರಕೆ
ಬಳುಕೆ ನಡು ಬಿಡದೊಲೆದು ಮೇಲುದು
ತಳೆಯೆ ಸುಳಿಗುರುಳೊಲೆಯಲಾ ಕಲಿಭೀಮನಿದಿರಿನಲಿ ೧೪
ಭೀಮ ನೋಡನು ನುಡಿಸನೊಯ್ಯನೆ
ತಾಮರಸಮುಖಿ ಹೊದ್ದಿದಳು ನಿ
ಸ್ಸೀಮನೈ ನೀನಾರು ಮಲಗಿದ ಮರ್ತ್ಯರಿವರಾರು
ಈ ಮಹಾರಣ್ಯದಲಿ ಬರವಿದು
ಕಾಮಿತವೆ ಕೋಮಲರಿಗೆನೆ ನಿ
ಷ್ಕಾಮ ಮನದಲಿ ಸತಿಯ ನುಡಿಸಿದನಾರು ನೀನೆಂದು ೧೫
ವನ ಹಿಡಿಂಬನದಾ ಹಿಡಿಂಬಕ
ನನುಜೆ ತಾನು ಹಿಡಿಂಬಿಯೀ ಕಾ
ನನವಿದೆಮ್ಮಾಶ್ರಮವಗಮ್ಯವು ದಿವಿಜ ಮನುಜರಿಗೆ
ನಿನಗೆ ಕಾಮಿಸಿ ಬಂದೆನಣ್ಣನು
ಮುನಿದೊಡಿವದಿರ ತಿನಲಿ ನೀನೇ
ಳೆನಗೆ ವಲ್ಲಭನಾಗು ಕೊಂಡೊಯ್ವೆನು ಹಿಮಾಚಲಕೆ ೧೬
ನಿನ್ನನೊಲ್ಲೆನು ಮುನಿದೆಯಾದಡೆ
ನಿನ್ನ ದೈತ್ಯನ ಕೊಂಡು ಬಾ ಹೋ
ಗೆನ್ನ ಬಲುಹನು ನೋಡು ನೀನೆನಲಸುರೆ ವಿನಯದಲಿ
ಮುನ್ನಲೇ ಮನುಮಥನ ಶರದಲಿ
ಖಿನ್ನೆಯಾಗಿಹೆ ಮರೆಯ ಹೊಕ್ಕೆನು
ತನ್ನನೀ ಪರಿ ಮುರಿದು ನುಡಿವರೆ ಎಂದಳಿಂದುಮುಖಿ ೧೭
ಅನುಜೆ ತಳುವಿದಳೆಂದು ರೋಷ
ಸ್ತನಿತ ಗದ್ಗದ ಕಂಠನೊದೆದೆ
ದ್ದನು ಮಹೀಮಂಡಲವನುಗ್ರಾಂಬಕನ ಡೊಂಬಿನಲಿ
ಅನಿಲಸುತನಿದಿರೆದ್ದನೀತನೆ
ದನುಜೆ ನಿನ್ನವನಾಯ್ತು ತಪ್ಪೇ
ನೆನುತೆ ಹಳಚಿದೊಡಾ ಹಿಡಿಂಬಕ ಜಡಿದು ಬೊಬ್ಬಿರಿದ ೧೮
ಒರಲ ಬೇಡವೊ ಕುನ್ನಿ ಮೆಲ್ಲನೆ
ತರುಬಿ ಕಾದುವುದೆಲವೊ ಮೈಮರ
ದೊರಗಿದವರೇಳ್ವರು ಕಣಾ ಸತ್ತಂತೆ ಸಾರೆನುತ
ತರುಬಿ ಹಿಡಿದಾ ಭೀಮ ಬೆನ್ನಿನೊ
ಳೆರಗಿದನು ಹೆಮ್ಮರಕೆ ಹಾಯಿದು
ಮುರಿದು ಹೊಯ್ದು ಹಿಡಿಂಬ ಕೊಡಹಿದನನಿಲ ನಂದನನ ೧೯
ಎದ್ದು ತಿವಿದನು ಖಳನ ಬದಿಯೊಳ
ಗದ್ದು ದೀತನ ಮುಷ್ಟಿ ಮುರಿದೊಡ
ನೆದ್ದು ನಿಮಿಷಕೆ ಸಂತವಿಸಿ ಹೆಮ್ಮರನ ಕೊಂಬಿನಲಿ
ಗೆದ್ದೆಯಿದ ಕೊಳ್ಳೆನುತ ಖಳನು
ಬ್ಬೆದ್ದು ಹೊಯ್ದರೆ ಮರ ಸಹಿತ ಹಿಡಿ
ದುದ್ದಿ ನೆಲದೊಳಗೊರಸಿ ಕೊಂದನು ಕಲಿ ಹಿಡಿಂಬಕನ ೨೦
ಕಳಕಳದೊಳಿವರೆದ್ದುಯಿವನತಿ
ಬಳ ಮಹಾದೇವೆಮ್ಮನೆಬ್ಬಿಸಿ
ಬಳಿಕ ಕಾದದೆ ತಮ್ಮ ಕೆಡಿಸಲು ಕಾಕ ಬಳಸಿದೆಲ
ಬಳಲಿದೆಮ್ಮನು ಹೊತ್ತು ತೊಳಲಿದ
ಬಳಲಿಕೆಯಲೀ ಕೇಡು ಲೇಸಾ
ಯ್ತುಳಿದೆ ಪುಣ್ಯವಿದೆಂದರಾ ಯಮನಂದನಾದಿಗಳು ೨೧
ಖಳ ಮಡಿಯಲವನನುಜೆ ಭೀಮನ
ನೊಲಿಸಲರಿಯದೆ ಕುಂತಿಗೆಲ್ಲವ
ತಿಳುಹಿ ನುಡಿದಳು ತನ್ನ ಪೂರ್ವಾಪರದ ಸಂಗತಿಯ
ಹಲವು ಪರಿಯಲಿಯಿವರನವಳಂ
ಡಲೆದು ಭೀಮಗೆ ಹೇಳಿಸಿದಳಾ
ಫಲುಗುಣನ ಕೈಯಿಂದ ಧರ್ಮಜನಿಂದ ನುಡಿಸಿದಳು ೨೨
ಆರು ನುಡಿಯಲು ಸರ್ವಥಾ ಖಳ
ನಾರಿಯನು ಕೈಕೊಳ್ಳೆನೆಂದೇ
ವೀರ ಬಲಿದನು ಬಳಿಕ ವೇದವ್ಯಾಸಮುನಿ ಬಂದು
ಸಾರ ನಯದಲಿ ತೋರಿ ತಿಳುಹಿ ಕು
ಮಾರ ಸಂಭವವವಧಿಯೆಂದಾ
ನಾರಿಯನು ಗಂಟಿಕ್ಕಿದನು ಮುನಿ ಭೀಮಸೇನಂಗೆ ೨೩
ಎಲ್ಲಿ ಉಪವನ ವರ ಸರೋವರ
ವೆಲ್ಲಿ ಕೇಳೀ ಶೈಲ ಹಿಮಗೃಹ
ವೆಲ್ಲಿ ರಮ್ಯೋದ್ಯಾನವೆಲ್ಲಿ ವಿಹಾರ ವನಭೂಮಿ
ಅಲ್ಲಿಗಲ್ಲಿಗೆ ಹರಿದು ಮಾರುತಿ
ವಲ್ಲಭೆಯ ರಮಿಸಿದನು ಚೌಪಟ
ಮಲ್ಲ ಜನಿಸಿದ ಕಲಿ ಘಟೋತ್ಕಚನಾ ಹಿಡಿಂಬಿಯಲಿ ೨೪
ನುಡಿದ ಸಮಯಕೆ ತನ್ನ ರಮಣಿಯ
ನೊಡಬಡಿಸಿ ಹೈಡಿಂಬ ರಾಜ್ಯವ
ವೊಡೆತನವ ನೆರೆ ಮಾಡಿ ನಿಲಿಸಿದನಾ ಘಟೋತ್ಕಚನ
ನಡೆದು ಬಂದರು ಶಾಲಿಹೋತ್ರನ
ನಡುವೆ ಕಂಡುಪಚರಿಸಿ ಕೊಂಡರು
ಪಡುವಲಭಿಮುಖರಾದರನಿಬರು ವಿಪ್ರವೇಷದಲಿ ೨೫
ಸಂಕ್ಷಿಪ್ತ ಭಾವ
ಈ ಭಾಗದಲ್ಲಿ ಹಿಡಿಂಬನ ಸಂಹಾರ, ಹಿಡಿಂಬಿಯೊಡನೆ ಭೀಮನ ವಿವಾಹ ಮತ್ತು ಘಟೋತ್ಕಚನ ಜನನ.
ಅರಗಿನ ಮನೆಯಿಂದ ತಪ್ಪಿಸಿಕೊಂಡು ಅರಣ್ಯಕ್ಕೆ ಬಂದ ಯಮನಂದನಾದಿಗಳು ನಡೆದು ಸೋತರು. ಈ ಕಷ್ಟಕ್ಕೆ ಮರುಗಿದ ಭೀಮ ಅವರೆಲ್ಲರನ್ನೂ ಹೊತ್ತು ನಡೆದನು. ಅವನ ಶಕ್ತಿಯ ಚಿತ್ರಣ ಇಲ್ಲಿದೆ. ಬಹು ದೂರ ನಡೆದು ಒಂದು ಮರದ ಕೆಳಗೆ ಅವರನ್ನು ಇಳಿಸಿ ಮಲಗಿದ ಅವರಿಗೆ ತಾನು ಕಾವಲಾಗಿ ಕುಳಿತನು. ತೂಗಿ ಬರುವ ನಿದ್ರೆಯನ್ನು ನೂಕಿ ಎಚ್ಚರದಿಂದ ಇದ್ದನು.
ಆ ವನ ಹಿಡಿಂಬ ಎಂಬ ರಾಕ್ಷಸನದು. ಮನುಷ್ಯರ ವಾಸನೆ ಹಿಡಿದು ನರಮಾಂಸದ ಆಸೆಯಿಂದ ಅವನು ತನ್ನ ತಂಗಿ ಹಿಡಿಂಬಿಯನ್ನು ಕಳಿಸಿದನು. ಅವಳು ಭೀಮನನ್ನು ನೋಡಿ ಮೋಹಗೊಂಡು ರೂಪಸಿಯ ವೇಷದಲ್ಲಿ ಬಂದು ಅವನನ್ನು ಮಾತನಾಡಿಸಿ ತನ್ನನ್ನು ವರಿಸೆಂದಳು. ಭೀಮ ಒಪ್ಪಲಿಲ್ಲ.
ಈ ವೇಳೆಗೆ ತಂಗಿ ಬರುವುದು ತಡವಾಯಿತು ಎಂದು ಕೋಪಗೊಂಡ ರಕ್ಕಸನು ತಾನೇ ಅಲ್ಲಿಗೆ ಬಂದನು. ಭೀಮನು ಅವನೊಂದಿಗೆ ಹೋರಾಡಿ ಹಿಡಿಂಬನನ್ನು ಕೊಂದನು. ಈ ಸದ್ದಿಗೆ ಎಚ್ಚರಗೊಂಡ ಉಳಿದವರು ಭೀಮನ ಪರಾಕ್ರಮಕ್ಕೆ ಮೆಚ್ಚಿದರು. ಕುಂತಿಯ ಬಳಿಗೆ ಹೋಗಿ ಹಿಡಿಂಬೆಯು ತನ್ನ ವಿಚಾರವನ್ನೆಲ್ಲ ತಿಳಿಸಿದಳು. ಯಾರು ಹೇಳಿದರೂ ಭೀಮ ಅವಳನ್ನು ವರಿಸಲು ಒಪ್ಪಲಿಲ್ಲ.
ಆಗ ವ್ಯಾಸಮುನಿ ಅಲ್ಲಿಗೆ ಆಗಮಿಸಿ ಕುಮಾರಸಂಭವದ ಅಗತ್ಯತೆಯ ಬಗ್ಗೆ ತಿಳಿಹೇಳಿದನು. ಹಿಡಿಂಬೆಯೊಡನೆ ವಿವಾಹವಾದ ಭೀಮನು ಕೆಲಕಾಲ ವಿಹರಿಸಿದನು. ನಂತರದಲ್ಲಿ ಘಟೋತ್ಕಚನೆಂಬ ಪುತ್ರ ಜನಿಸಲು ಇವರುಗಳು ಹಿಡಿಂಬೆಯನ್ನು ಒಡಂಬಡಿಸಿ ಅಲ್ಲಿಂದ ವಿಪ್ರವೇಷದಲ್ಲಿ ಹೊರಟರು.
ಕಾಮೆಂಟ್‌ಗಳು