ಭಾರತಕಥಾಮಂಜರಿ13
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಆದಿಪರ್ವ - ಹದಿಮೂರನೆಯ ಸಂಧಿ
ಕಮಲಮುಖಿ ನಡೆತಂದಳಂದಿನ
ಕಮಲೆಯೆನೆ ಪಾಂಚಾಲಸುತೆ ನಿಜ
ರಮಣರನು ನೋಡಿದಳು ಪೃಥ್ವೀಪಾಲ ಪಂಕ್ತಿಯಲಿ
------
ಅರಸ ಕೇಳ್ ನಾಂದೀಮುಖದ ವಿ
ಸ್ತರಣವಾದುದು ಪೂರ್ವವೇದಿಯ
ವರನಿಗಮ ನಿರ್ಘೋಷ ಘಾತಿಸಿತಖಿಳ ಕಲ್ಮಷವ
ಮರುದಿವಸ ಮಹಿಳಾಶಿರೋಮಣಿ
ಪರಮಸೌಭಾಗ್ಯದ ಸಮುದ್ರದ
ಸಿರಿಯ ಪರಿಣಯವೆಂದು ಸಾರಿತು ಪಾಳಯಂಗಳಲಿ ೧
ತಿಗುರ ಗೆಲುವುದು ವಶ್ಯ ತಿಲಕಾ
ದಿಗಳನಿಡುವುದು ಮೋಹನದ ಮ
ದ್ದುಗಳ ಮಾಯೆಯ ಬೀಸುವುದು ಸೂಸುವುದು ಸೊಗಸುಗಳ
ಹಗಲು ಕಾಹಿನ ರೂಹುಗಳ ಗಾ
ಹುಗಳ ಮೆರೆವುದು ಮನ್ಮಥನ ಕಾ
ಳಗದ ಖಾಡಾಖಾಡಿಯೆಂದರು ಹೊಯ್ದು ಡಂಗುರವ ೨
ಹರಸಿಕೊಂಡರು ನಿಖಿಳ ಪೃಥ್ವೀ
ಶ್ವರರು ಮಾಯಾಪುರದ ಕಾಂಚೀ
ಪುರದ ಜಾಳಾಂಧರದ ವಿವಿಧ ಸ್ಥಾನ ದೇವರಿಗೆ
ಕರಿಮುಖನ ಕಜ್ಜಾಯದಲಿ ಸ
ತ್ಕರಿಸಿ ಸಂಶಯ ಭೇದವರ್ಗದ
ಹರುಷದಲಿ ಹೊರವಂಟರೊಬ್ಬರನೊಬ್ಬರುರವಣಿಸಿ ೩
ಉಬ್ಬು ಮುರಿದುದು ರಾಯರೊಬ್ಬರ
ನೊಬ್ಬರೀಕ್ಷಿಸಿ ಚೆಲುವಿನಲಿ ಸಿರಿ
ಗೊಬ್ಬಿನಲಿ ಸಾಹಸಿಕೆಯಲಿ ಸೇನಾ ಸಮುದ್ರದಲಿ
ಒಬ್ಬರೊಬ್ಬರಸೂಯೆಯೊಬ್ಬರ
ನೊಬ್ಬ ರಳುಕಿಸುವದಟುಗಂಗಳ
ಹಬ್ಬದಲಿ ಮನ ಸಂಚು ತಪ್ಪಿ ತಸಾಧ್ಯ ಚಿಂತೆಯಲಿ ೪
ಹೋರೆಗರ ಹೊಳ್ಳಿರಿತ ಜೋಯಿಸ
ರಾರುಭಟೆಗಳ ಬಿಂಕ ಮಾಂತ್ರಿಕ
ರೋರೆಮುಸುಕಿನ ಜಾಳು ಜಪವೀ ನೃಪರ ಚಾಳೈಸೆ
ಪೂರವಿಪ ಪುಳಕಂಗಳಲಿ ಸಿಂ
ಗಾರಿಗಳು ಸೀವರಿಸದೈತಂ
ದೋರಣಿಸಿದರು ಸಾಲ ಶೋಭಿತ ಸಿಂಹಪೀಠದಲಿ ೫
ಕೌರವರು ಯಾದವರು ಸಹಿತೀ
ಧಾರುಣಿ ಕ್ಷತ್ರಿಯರ ವಂಶದ
ವೀರಪಾರ್ಥಿವವಿತತಿ ಕುಳ್ಳಿರ್ದುದು ಸರಾಗದಲಿ
ಸಾರೆ ಸೋದರ ಸಚಿವ ಮಂತ್ರಿ ಕು
ಮಾರ ಚಾಮರ ಹಡಪದೊಳಪರಿ
ವಾರ ಬಳಸಿತುವೊಬ್ಬರೊಬ್ಬರ ಸುತ್ತು ವಳಯದಲಿ ೬
ಅಂಕೆಯಿದು ಪಾರ್ಥಿವರ ವಿಭವಾ
ಲಂಕೃತಿಯನದನೇನ ಹೇಳುವೆ
ನಂಕವಿದು ಕಳನೇರಿತಾಹವವೆನಗೆ ತನಗೆನುತ
ಶಂಕರಾರಿಯ ಮಸೆದಲಗು ಮಾ
ರಂಕದುಬ್ಬಿನ ಜಂಕೆಯಂಕೆಯ
ಬಿಂಕವನು ವಿಸ್ತರಿಸುವೆನು ನರನಾಥ ಕೇಳೆಂದ ೭
ತರಿಸು ಧನುವನು ಯಂತ್ರ ಮತ್ಸ್ಯವ
ನಿರಿಸು ತಳುವದೆ ತಂಗಿಯನಲಂ
ಕರಿಸು ದಂಡಿಗೆಯಿಂದ ತಾ ತೋರಿಸು ಮಹೀಶ್ವರರ
ವರನ ವರಿಸಲಿ ಲಗ್ನವಿದೆ ಹ
ತ್ತಿರೆಯೆನುತ ಪಾಂಚಾಲಭೂಪತಿ
ಕರೆದು ಧೃಷ್ಟದ್ಯುಮ್ನನನು ಬೆಸಸಿದನು ಬೇಗದಲಿ ೮
ಅರಸನಾಜ್ಞೆಯ ಮೇಲೆ ಶತ ಸಾ
ವಿರ ನಿತಂಬಿನಿಯರು ಕುಮಾರಿಯ
ಹೊರೆಗೆ ಬಂದರು ತಿಗುರಿದರು ಕುಂಕುಮದಲವಯವವ
ಅರಸಿ ಮಜ್ಜನ ಮಾಡಿ ನೂತನ
ವರದುಕೂಲವನುಟ್ಟು ಸಖಿಯರ
ತರದ ನೆಲನುಗ್ಗಡಣೆಯಲಿ ಬಂದಳು ನಿಜಾಲಯಕೆ ೯
ಹೊರೆಯ ಸಖಿಯರ ನೋಟ ಮೈಯಲಿ
ಹರಿದು ಬಳಲದು ಚಿತ್ತವೀಕೆಯ
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿಸವಿದು
ಅರುಚಿಯಾಗದು ನಾಸಿಕವು ಮೈ
ಪರಿಮಳದ ಪೂರದಲಿ ಗಂಧಾಂ
ತರಕೆ ನೆರೆಯದು ರೂಪವೇನೆಂಬೆನು ನಿತಂಬಿನಿಯ ೧೦
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ ೧೧
ಹೊಲಬುಗೆಡವೇ ಹೊಳೆವ ವಕ್ಷ
ಸ್ಥಳದೊಳಗೆ ಜನದೃಷ್ಟಿ ನಳಿತೋ
ಳ್ಗಳಲಿ ಸೆಳ್ಳುಗುರೋಳಿಯಲಿ ಕೆಂದಳದ ಶೋಭೆಯಲಿ
ಸುಳಿದಡಲ್ಲಿಯೆ ನಿಲುವು ದಶನಾ
ವಳಿಯ ಬಿಂಬಾಧರದ ಕದಪಿನ
ಚೆಲುವಿಕೆಗೆ ನರರಾಲಿ ನೆರೆಯವು ನೃಪತಿ ಕೇಳೆಂದ ೧೨
ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡರಿದೆಂದ ೧೩
ಪೂಸುವರೆ ಕತ್ತುರಿ ಜವಾಜಿಗ
ಳೈಸಲೇ ಪರಿಮಳವು ಪೂಸದೆ
ಸೂಸಿ ದೆಸೆ ಕಂಪಿಡುತ ಮಘಮಘಿಸುವಳು ಯೋಜನವ
ಈ ಸಮಸ್ತ ಮನುಷ್ಯಧರ್ಮದ
ದೋಷ ಗರ್ವಿತ ಧಾತುಗಳ ವಿ
ನ್ಯಾಸವೇ ದ್ರೌಪದಿಯ ಭಾವದ ಭಂಗಿ ಬೇರೆಂದ ೧೪
ಬೆರಳ ಚೆಲ್ವಿಕೆಯಿಂದ ಮುದ್ರಿಕೆ
ಮೆರೆಯೆ ಪಾಡಗ ನೇವುರಂಗಳು
ಕರ ಚರಣ ಸೌಂದರ್ಯದಲಿ ಬಲುಮೊಲೆಯ ಢಾಳದಲಿ
ಕೊರಳ ಮುತ್ತಿನ ಹಾರ ಸುಮನೋ
ಹರದ ಕದಪುಗಳಿಂದ ಕರ್ಣಾ
ಭರಣವೊಪ್ಪಿದವೇನನೆಂಬೆನು ರೂಪನಂಗನೆಯ ೧೫
ಎಸೆವಧರ ರಾಗದಲಿ ಮಿಗೆ ರಂ
ಜಿಸುವವೋಲ್ ಮಾಣಿಕ್ಯ ಮೆರೆದವು
ದಶನ ದೀಧಿತಿಯಿಂದ ಥಳಥಳಿಸಿದವು ಮುತ್ತುಗಳು
ಮಿಸುಪ ದೇಹಚ್ಛವಿಗಳಲಿ ಢಾ
ಳಿಸುವವೋಲ್ ಭೂಷಣದ ಹೇಮ ೧೬
ಪ್ರಸರ ಮೆರೆದವು ಹೊಗಳೆ ಕವಿ ಯಾರಬುಜಲೋಚನೆಯ
ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿ ದುಂಬಿಗಳ ವರ್ಣಾಂತರವನಳವಡಿಸಿ
ಸರಸ ವೀಣಾಧ್ವನಿಯ ಹಂಸೆಯ
ಗರುವ ಗತಿಗಳನಾಯ್ದು ಮನ್ಮಥ
ವರ ವಿರಿಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ ೧೭
ಸರಸ ಲಾವಣ್ಯಾಂಬುಮಯ ತನು
ಸರಸಿಯಲಿ ಮುಳುಗಿರ್ದ ಯೌವನ
ಕರಿಯ ಕುಂಭಸ್ಥಳವೊ ವಿಪುಳ ಪಯೋಧರ ದ್ವಯವೊ
ತರಳ ನಯನವೊ ಶಫರಿಗಳೊ ತಾ
ವರೆಯೊ ಮುಖವೋ ತುಂಬಿಗಳೊ ನಿರಿ ೧೮
ಗುರುಳುಗಳೊ ಮಣಿಗಣವೊ ರದನವೊ ಚಿತ್ರವಾಯ್ತೆಂದ
ರಾಜಸೂಯದ ಕರ್ತೃವೋಲ್ ಜಿತ
ರಾಜ ಮಂಡಲವಾಯ್ತು ಮುಖವಿದು
ರಾಜರಾಜನ ಪೋಲ್ದುದಳಕಾವೇಷ್ಟಿ ತತ್ವದಲಿ
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತು ತಮಾಲಪತ್ರ ವಿ
ರಾಜಿತವು ಜನಮೇಜಯಕ್ಷಿತಿಪಾಲ ಕೇಳೆಂದ ೧೯
ಜನಪ ಕೇಳುಪಲಾಲಿತಾಂಜನ
ವೆನೆ ಜಿತಾಕ್ಷ ವಿಪಕ್ಷವಾದವು
ವಿನುತ ಕರ್ಣಪ್ರಣಯಗಳು ವೃಷಸೇನ ವೈರದಲಿ
ಜನ ವಿಡಂಬನ ತಾರಕಾ ಮಂ
ಡನ ಕದರ್ಥಿತ ಕುಮುದವೆನೆ ಲೋ
ಚನ ಯುಗಳವೊಪ್ಪಿದವು ವರ ಪಾಂಚಾಲನಂದನೆಯ ೨೦
ಏನನೆಂಬೆನು ಮನಸಿಜನ ಮದ
ದಾನೆಯನು ಮನ್ಮಥನ ರತ್ನ ನಿ
ಧಾನವನು ಟಿಪ್ಪಣವನಂಗಜ ಮಂತ್ರ ಸೂತ್ರಕದ
ಮಾನಿನಿಯರಧಿದೈವವನು ಸು
ಜ್ಞಾನಕನ್ಯಾ ಮಾತೃಭವನ
ಸ್ಥಾನವನು ಮೂಲೋಕ ಮೋಹನವಶ್ಯ ಚಿತ್ರಕವ ೨೧
ನಾರಿಯನು ಸಂಸಾರಸುಖ ಸಾ
ಕಾರಿಯನು ಜನ ನಯನ ಕಾರಾ
ಗಾರಿಯನು ಮುನಿಧೈರ್ಯ ಸರ್ವಸ್ವಾಪಹಾರಿಯನು
ಧೀರರಿಗೆ ಮಾರಂಕವನು ವರ
ಪಾರಿಕಾಂಕ್ಷಿಯ ಚಿತ್ತಚೌರ್ಯ ವಿ
ಹಾರಿಯನು ದ್ರೌಪದಿಯನಭಿವರ್ಣಿಸುವಡಾರೆಂದ ೨೨
ನಳಿನಮುಖಿಯರ ಸಕಲಸೃಷ್ಟಿಗೆ
ಕಳಸವಿದು ಸೌಂದರ್ಯ ವಸನದ
ವಿಲಸವಿದು ರತಿರಮಣ ವೈಭವ ರತ್ನ ಕೋಶವಿದು
ಲಲನೆಯರ ಸೀಮಂತಮಣಿ ಜಗ
ದೊಳಗೆ ಚೆಲುವಿನ ಕಣಿ ತಪೋಧನ ೨೩
ಕಳಭರಿಗೆ ಸೃಣಿಯೆನಲು ಮೆರೆದುದು ರೂಪವಂಗನೆಯ
ಹೊಳೆ ಹೊಳೆದುದಾಭರಣ ರತ್ನಾ
ವಳಿಯ ರುಚಿ ತನ್ಮಣಿ ರುಚಿಯ ಮು
ಕ್ಕುಳಿಸಿತಂಗಚ್ಛವಿ ತದಂಗ ಪ್ರಭೆಯನಡಹಾಯ್ದು
ಥಳಥಳಿಸಿದುದು ವದನ ಮುಖ ಮಂ
ಡಲದ ಕಾಂತಿಯನೊದೆದು ಕಂಗಳ
ಬೆಳಗು ವಿಸಟಂಬರಿದುದೇನೆಂಬೆನು ನಿತಂಬಿನಿಯ ೨೪
ಕಂಗಳಲಿ ಕುಡಿಮೇಳ ಹುಬ್ಬಿನ
ಹೊಂಗಿನಲಿ ಭಂಜವಣೆ ಭಾವದ
ಭಂಗಿಯಲಿ ಪತಿಕರಣೆ ಸಕಲ ಸಖೀಕದಂಬದಲಿ
ಇಂಗಿತದ ಬಿರಿಮುಗುಳ ಪರಿಮಳ
ವಂಗಹಾರ ವಿಲಾಸವಿಭ್ರಮ
ಭಂಗಿಗಳು ಬಿಬ್ಬೋಕ ಲಲಿತಾದಿಗಳು ದ್ರೌಪದಿಯ ೨೫
ವರ ವಸಂತನ ಬರವು ಜಾಜಿಯ
ಬಿರಿ ಮುಗುಳು ಮರಿ ದುಂಬಿಗಳ ನಯ
ಸರದ ದನಿ ಕರಿಕಳಭಲೀಲೆ ನವೇಕ್ಷು ರಸಧಾರೆ
ಮೆರೆವವೋಲ್ ಹೊಸ ಹೊಗರ ಜವ್ವನ
ಸಿರಿಯ ಜೋಡಣೆ ಜನಮನವನಾ
ವರಿಸಿದುದು ನಿಪ್ಪಸರದಲಿ ಪಾಂಚಾಲ ನಂದನೆಯ ೨೬
ಆರತಿಗಳೆತ್ತಿದರು ಬಳಿಕು
ಪ್ಪಾರತಿಯ ಹಾಯ್ಕಿದರು ಮುತ್ತಿನ
ಸಾರ ಸೇಸೆಯ ಸೂಸಿ ಹರಸಿ ಸುವಾಸಿನೀ ನಿಕರ
ಚಾರು ಮುಕುರವ ನೋಡಿ ನಿಂದಳು
ಭಾರಣೆಯ ಗರುವಾಯಿಯಲಿ ಜಂ
ಬೀರ ಫಲವನು ಕೊಂಡಳಂಗನೆ ವಿಪ್ರಮಂತ್ರದಲಿ ೨೭
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಾಲಿನಲಿ ದಂಡಿಗೆ
ಗಿಂದುಮುಖಿ ಬಂದಳು ಸಿತಾಬ್ಜಕೆ ಲಕ್ಷ್ಮಿಯಂದದಲಿ
ಹಿಂದೆ ಮುಂದಿಕ್ಕೆಲದ ನಾರೀ
ವೃಂದ ನೆರೆದುದು ವೀರ ಪಟಹದ
ದುಂದುಭಿಯ ಡಂಬರದ ರವವಳ್ಳಿರಿದುದಂಬರವ ೨೮
ಸಾಲಝಲ್ಲರಿ ಮುಸುಕಿದವು ಸಮ
ಪಾಳಿಯಲಿ ಸೀಗುರಿಗಳಾಡಿದ
ವಾಲಿಯವಗಾಹಿಸದು ನೆಲನೆನಿತನಿತು ವಳಯದಲಿ
ಬಾಲೆಯರ ಮುಗ್ಧೆಯರನತಿ ಘಾ
ತಾಳೆಯರ ಕಡೆಗಣ್ಣ ಢಾಳದ
ಚಾಳೆಯರ ಚದುರೆಯರನಲ್ಲದೆ ಕಾಣೆ ನಾನೆಂದ ೨೯
ನಿರಿದಲೆಯ ಚೊಲ್ಲೆಯದ ತುಂಬಿಯ
ಮರಿಗುರುಳ ಬೈತಲೆಯ ಮುತ್ತಿನ
ಹೆರೆನೊಸಲ ನಿಡು ಹುಬ್ಬುಗಳ ಢಾಳಿಸುವ ಕದಪುಗಳ
ತುರುಗೆವೆಯ ನಿಟ್ಟೆಸಳುಗಂಗಳ
ಮೆರೆವ ಸುಲಿಪಲ್ಲುಗಳೆಸೆವ ನು
ಣ್ಗೊರಳ ನಳಿತೋಳುಗಳ ನೀರೆಯರೈದಿತೊಗ್ಗಿನಲಿ ೩೦
ತೋರಮೊಲೆಗಳ ನಲಿವನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ ೩೧
ಕೀಲ ಕಡಗದ ವಜ್ರ ಲಹರಿಯ
ಜೋಲೆಯದ ಕಂಕಣದ ರವೆಯದ
ತೋಳಬಂದಿಯ ಕೊರಳ ತ್ರಿಸರದ ಬೆರಳ ಮುದ್ರಿಕೆಯ
ನೀಲ ರತುನದ ಪದಕ ಮಾಣಿಕ
ದೋಲೆಗಳ ಮೂಗುತಿಯ ಮುತ್ತಿನ
ಮೇಲು ಶೃಂಗಾರದ ಸಖೀಜನ ಸಂದಣಿಸಿತಲ್ಲಿ ೩೨
ವಿಲಸದೇಕಾವಳಿಯ ಮುತ್ತಿನ
ತಿಲಕ ಸೂಡಗ ಪಾಯವಟ್ಟದ
ಲಲಿತ ಬಂಧದ ವಜ್ರಲಹರಿಯ ತಾರಕಾವಳಿಯ
ಹೊಳೆವ ಕಾಂಚಿಯ ಕಿಂಕಿಣಿಯ ಸಂ
ಕುಲದ ನೇವುರ ವೀರಮುದ್ರಾ
ವಳಿಯ ಚರಣಾಭರಣದಬಲೆಯರೈದಿತೊಗ್ಗಿನಲಿ ೩೩
ಭ್ರೂಲತೆಯ ಬಿಲುಗಳ ಕಟಾಕ್ಷದ
ಕೋಲ ಹೊದೆಗಳ ಬಾಸೆಗಳ ಕರ
ವಾಳಿಗಳ ಕತ್ತುರಿಯ ತಿಲಕದ ಹರಿಗೆ ಹಲಗೆಗಳ
ತೋಳುಗಳ ಲೌಡಿಗಳ ಸೆಳ್ಳುಗು
ರೋಳಿಗಳ ಸುರಗಿಗಳ ಮನ್ಮಥ
ನಾಳು ನಡೆದುದು ದ್ರೌಪದಿಯ ದಂಡಿಗೆಯ ಬಳಸಿನಲಿ ೩೪
ತೋರಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಯ ಝಾಡಿಗಳ
ಚಾರು ನಯನದ ಚಪಲಗತಿಗಳ
ವಾರುವಂಗಳ ಮೇಲು ವಸನದ
ಸಾರಸಿಂಧವ ಸೇನೆ ನಡೆದುದು ಸತಿಯ ಬಳಸಿನಲಿ ೩೫
ಯತಿಗಳಿಗೆ ಮೊನೆದೋರಿ ತಣಿಸದು
ವ್ರತಿಗಳಿಗೆ ಬೀರುತ ಸಮಾಧಿ
ಸ್ಥಿತರ ಮೂಗಿನ ಮೇಲಡಾಯುಧ ಧಾರೆಗಳನೆಳೆದು
ಶ್ರುತಿವಿಹಿತ ಸತ್ಕರ್ಮಿಗಳ ದೀ
ಕ್ಷಿತರ ಮತಿಯಲಿ ತಮ್ಮ ಮುದ್ರಾಂ
ಕಿತವನೊತ್ತುತ ಮೀರಿ ನಡೆದುದು ಯುವತಿಜನ ಕಟಕ ೩೬
ಆರು ನಿಲುವರು ಸಮ್ಮುಖಕೆ ಮದ
ನಾರಿಯರ್ಧದ ನಾರಿ ಹರಿ ತಾ
ಹೇರುರದ ಹೆಂಗುಸುರೆ ಬೊಮ್ಮನು ಮಗಳ ಮೊರೆಗೇಡಿ
ಘೋರವದು ಸುರಪತಿಯ ಕಥೆ ಮೈ
ಯಾರೆ ಹೊತ್ತನು ಮದನ ಮುದ್ರಾ ೩೭
ಧಾರಿಯೆಂಬವೊಲೊದರಿದವು ಮುಂಗುಡಿಯ ಕಹಳೆಗಳು
ಪಸರಿಸಿತು ತಂಬೆಲರು ಬೀತುದು
ಬಿಸಿಲ ಬಿಂಕ ಸರೋಜ ಸಂತತಿ
ಮಸುಳಿದವು ಮದವೇರಿ ಮೆರೆದವು ತಾರಕಾ ನಿವಹ
ಒಸರಿದವು ಶಶಿಕಾಂತ ನೈದಿಲ
ಹಸರ ಹರಿದುದು ಚಕ್ರವಾಕದ
ಬೆಸುಗೆ ಸಡಲಿತು ಚಾರು ಚಂದ್ರಾನನೆಯ ಬರವಿನಲಿ ೩೮
ಹೊಳೆವ ಕಂಗಳ ಬೆಳಗಿನಲಿ ಕ
ತ್ತಲಿಸಿದವು ಕಾಮುಕರ ಮುಖ ತನು
ವಳಯ ಕಾಂತಿಯ ತಂಪಿನಲಿ ಬಾಡಿದವು ಬುದ್ಧಿಗಳು
ಲಲಿತ ವಿಭ್ರಮದಿಂದಹಂಕೃತಿ
ಶಿಲೆಗಳೊಡೆದವು ಮೋಹನದ ಹೊ
ಯ್ಲೊಳಗೆ ಹೊಳೆದಡಗಿದವು ಚಿತ್ತ ಮಹಾಮಹೀಶ್ವರರ ೩೯
ತರುಣಿಯರ ನವ ನೀಲ ಮಣಿಗಳ
ಕುರುಳ ಕಬರಿಯ ಭರದ ವರ ಕ
ತ್ತುರಿಯ ತಿಲಕದ ಕಾಳಿಕೆಯ ಘನ ಕಾಂತಿಗಳ ಲಹರಿಗಳ
ಕೊರಳ ಹಾರದ ಕರ್ಣಪೂರದ
ಸರದ ಮೌಕ್ತಿಕ ರುಚಿಯ ಯಮುನಾ
ಸುರನಿದಯ ಸಂಗದಲಿ ಮುಳುಗಿತು ಸಕಲ ನೃಪನಿಕರ ೪೦
ಪರಿಮಳಕೆ ಮಿಗೆ ಕವಿವ ತುಂಬಿಗೆ
ಕೆರಳುವರು ಹುಬ್ಬಿನಲಿ ಪದ ನೇ
ವುರದ ನುಣ್ದನಿಗೆಳಸಿ ಮುತ್ತುವ ರಾಜಹಂಸೆಗಳ
ಹೊರೆಯ ಕೆಳದಿಗೆ ದೂರುವರು ಕೈ
ಯರಗಿಳಿಗೆ ತಮ್ಮಧರ ಬಿಂಬದ ೪೧
ಮುರಿವರಿದು ಮುಖದಿರುಹುವರು ಮುಗ್ಧಾಂಗನಾ ನಿವಹ
ಕಂಗಳೋರೆಯ ಢಾಳಿಸುವ ಹಾ
ಸಂಗಿಗಳ ಬಿಗುಹಿನ ದುಹಾರದ
ಭಂಗಿಗಳ ಬಲು ವಿಟರ ಕರಣದ ಸಾರಿಗಳ ಸೆರೆಯ
ಮುಂಗುಡಿಯ ನಿಜನಾರಿಯರ ಕವಿ
ವಂಗವಣೆಗಳ ಜೂಜುಗಾತಿಯ
ರಂಗನೆಯ ದಂಡಿಗೆಯ ಬಳಿವಿಡಿದರು ವಿದಗ್ಧೆಯರು ೪೨
ಹಾವುಗೆಯ ಸೀಗುರಿಯ ವರ ಚಮ
ರಾವಳಿಯ ಕರ್ಪೂರಗಂಧದ
ಹೂವುಗಳ ಕತ್ತುರಿಯ ಸಾದು ಜವಾಜಿ ಕುಂಕುಮದ
ತೀವಿದನುಪಮ ಭಾಜನ ವ್ಯಜ
ನಾವಳಿಯ ಕನ್ನಡಿಯ ವಿವಿಧ ಸ
ಖೀ ವಿಳಾಸಿನಿಯರ ಕದಂಬಕವೈದಿತೊಗ್ಗಿನಲಿ ೪೩
ಧರಣಿಪತಿ ಕೆಳಖಿಳ ಪೃಥ್ವೀ
ಶ್ವರರ ಬಹಳಾಸ್ಥಾನದಲಿ ಮೋ
ಹರಿಸಿದರು ಮೋಹನದ ಮೋಡಾಮೋಡಿಯಬಲೆಯರು
ಅರಸುಗಳ ನಿಡುನೋಟವಲ್ಲಿಯ
ಗರುವೆಯರ ನಸುನೋಟ ತಮ್ಮೊಳು
ಬೆರಸಿ ಹೊಯ್ದಾಡಿದವು ಖಾಡಾಖಾಡಿಯಂದದಲಿ ೪೪
ದಾಯ ತಪ್ಪಿತು ಗರುವರಾಟ ವಿ
ಡಾಯಗೆಟ್ಟಿತು ವಿಟರನೋಟ ನ
ವಾಯಿಕಾರರ ಕೂಟ ಕುಸಿದುದು ಮಾರ ಶರಹತಿಗೆ
ಘಾಯವಡೆದುದು ಧೃತಿಯಘಾಟ ನ
ವಾಯಿ ಹೆಚ್ಚಿತು ಮತ್ತೆ ಬೇಟ ವ
ರಾಯತಾಕ್ಷಿಯ ಕೂಟಕೆಳಸುವ ಚದುರ ಭೂಮಿಪರ ೪೫
ಕೆಲಕಡೆಯ ಕೆಳದಿಯರ ಕಂಗಳ
ಹೊಳಹು ದುವ್ವಾಳಿಯಲಿ ಸುಮತಿ
ಸ್ಖಲಿತ ಕೆಂಧೂಳಿಯಲಿ ಮಾಸಿತು ಮನದ ಮಡಿವರ್ಗ
ಒಳಗೆಯೊತ್ತುವ ಧಗೆಯ ಹೊರಗಣ
ತಳಿತ ಬಿಮ್ಮಿನ ನಗೆಯ ನೃಪ ಮಂ
ಡಲದ ಮೌಳಿಯನೇನನೆಂಬೆನು ರಾಯ ಕೇಳೆಂದ ೪೬
ಚೆಲುವಿಕೆಯ ಚೈತನ್ಯವೋ ಪರಿ
ಮಳದ ಪುತ್ಥಳಿಯೋ ಲತಾಂಗಿಯ
ಸುಳಿವೊ ಲಾವಣ್ಯೈಕರಸ ಸಾಕಾರ ವಿಭ್ರಮವೊ
ಲಲಿತ ಶೃಂಗಾರಾಬ್ಧಿ ಮಥನೋ
ಚ್ಚಲಿತ ಸುಧೆಯೋ ಸಾಧಕರಿಗಿದು
ಫಲಿಸಿದರೆ ಕೃತಕೃತ್ಯರವರೆಂದುದು ಸುರಸ್ತೋಮ ೪೭
ಈಕೆಯಂದುದಿಸಿದರೆ ಮದನಂ
ಗೇಕೆ ದೇಹತ್ಯಾಗವಹುದು ಪಿ
ನಾಕಿ ತಾ ವೈರಾಗ್ಯದಲಿ ಹೊಗುವನೆ ತಪೋವನವ
ಸಾಕು ಗೌತಮಮುನಿಯ ಮುಳಿಸಿನ
ಕಾಕುನುಡಿ ಫಲಿಸುವುದೆಯೆನುತಾ
ನಾಕಪತಿ ರಂಭಾದಿ ಸತಿಯರ ನೋಡಿದನು ನಗುತ ೪೮
ತಂದರಾ ಪಾಂಚಾಲೆಯನು ಹೊ
ನ್ನಂದಣದಲಾಸ್ಥಾನ ಸೀಮೆಗೆ
ಮುಂದೆ ಸಿಂಹಾಸನದ ಸಾಲ ಮಹಾಮಹೀಶ್ವರರ
ಸಂದಣಿಯಲವರವರನಿವರಿವ
ರೆಂದು ವಿವರಿಸಬೇಕೆನುತ ದೃಪ
ನಂದನನು ಹೊದ್ದಿದನು ಕಮಲಾನನೆಯ ದಂಡಿಗೆಯ ೪೯
ತಂಗಿ ನೋಡೌ ತಾಯೆ ನಿನ್ನಯ
ಕಂಗಳೊಲಿವರೆ ಚಿತ್ತ ವಾರ್ಧಿತ
ರಂಗದಲಿ ತೂಗುವರೆ ತೋರುವೆನವನಿಪಾಲಕರ
ಇಂಗಿತದಲವರಂತರಂಗವ
ನಂಗವಟ್ಟದ ಬಳಕೆಯನು ಬಹಿ
ರಂಗದಲಿ ನೀನರಿಯೆನುತ ನುಡಿದನು ನಿಜಾನುಜೆಗೆ ೫೦
ಈತ ದುರ್ಯೋಧನ ಮಹೀಶ್ವರ
ನೀತ ದುಶ್ಶಾಸನನು ದುರ್ಜಯ
ನೀತ ದುಶ್ಶಳನೀತ ದುಸ್ಸಹನೀತ ಚಿತ್ರರಥ
ಈತ ದುರ್ಮದನೀತ ಚಿತ್ರಕ
ನೀತಗಳು ಕುರುವಂಶದಲಿ ವಿ
ಖ್ಯಾತರಬಲೆ ನಿರೀಕ್ಷಿಸಾ ಧೃತರಾಷ್ಟ್ರ ನಂದನರ ೫೧
ನೋಡಳವರನು ನುಡಿಸಳೀತನ
ಕೂಡೆ ಭಾವದೊಳಿವರ ಕೊಡಹೀ
ಡಾಡಿದಳಲಾಯೆನುತ ಧೃಷ್ಟದ್ಯುಮ್ನ ನಸುನಗುತ
ನೋಡು ತಂಗಿ ವಿರಾಟನುತ್ತರ
ಗೂಡಿ ಕೀಚಕರನು ಶ್ರುತಾಯುಧ
ಮೂಡಣರಸುಗಳನು ರವಿಧ್ವಜ ರೋಚ ಮಾನಕರ ೫೨
ನೀಲಚಿತ್ರಾಯುಧನ ದಕ್ಷಿಣ
ಚೋಳ ಕೇರಳ ಪಾಂಡ್ಯ ಧರಣೀ
ಪಾಲಕರೊಳೀ ಚಂದ್ರಸೇನ ಸಮುದ್ರಸೇನಕರು
ಲೋಲನಯನೆ ಕಳಿಂಗಧರಣೀ
ಪಾಲನೀತನು ಚೇಕಿತಾನ ನೃ
ಪಾಲನೀತನು ಭಾನುದತ್ತಮಹೀಶ ನೋಡೆಂದ ೫೩
ಇತ್ತಲೀಕ್ಷಿಸು ಪೌಂಡ್ರಕನ ಭಗ
ದತ್ತನನು ಕಾಂಭೋಜನನು ಹರ
ದತ್ತನನು ವರಹಂಸ ಡಿಬಿಕರ ಮಾದ್ರಭೂಪತಿಯ
ಇತ್ತಲು ಜರಾಸಂಧ ಮಣಿಮಾ
ನಿತ್ತ ಸಹದೇವನು ಬೃಹದ್ರಥ
ನಿತ್ತಲೀತನು ದಂಡಧಾರಕ ನೃಪನು ನೋಡೆಂದ ೫೪
ಭೂರಿ ಭೂರಿಶ್ರವನು ದಕ್ಷಿಣ
ವೀರಬಾಹ್ಲಿಕ ವಿಂಧ್ಯ ಚಿತ್ರ ಭ
ಗೀರಥನು ನೃಪವರ ಜಯದ್ರಥ ಶಿಬಿ ಶ್ರುತಾಯುಧರು
ವೀರ ವೃದ್ಧಕ್ಷತ್ರ ಸೃಂಜಯ
ಚಾರು ಭುಜಬಲ ಸೋಮದತ್ತ ಮ
ಹೀರಮಣರಿವರಿತ್ತಲಿದೆ ತರಳಾಕ್ಷಿ ನೋಡೆಂದ ೫೫
ಈತ ರುಕ್ಮಾಂಗದ ಜಯದ್ಬಲ
ನೀತ ಶ್ರುತಸೇನಾಚ್ಯುತಾಯುಧ
ರೀತಗಳು ನಿಯತಾಯು ದೀರ್ಘೋದರ ಮಹೋದರರು
ಈತ ದಮಘೋಷಾತ್ಮಜನು ವಿ
ಖ್ಯಾತ ಶಿಶುಪಾಲನು ಮಹಾಬಲ
ನೀತನಶ್ವತ್ಥಾಮ ಸೌಬಲನೀತ ನೋಡೆಂದ ೫೬
ಭೂತಳದ ರವಿಯಂತೆ ಹೊಳೆಹೊಳೆ
ವಾತ ಕರ್ಣನು ತನುಜರೀತಂ
ಗೀತಗಳು ವೃಷಸೇನನಗ್ಗದ ಚಿತ್ರಸೇನಕರು
ಈತನಾಹನೆ ನೋಡೆನಲು ಭಾ
ವಾತಿಶಯ ಸಂಬಂಧ ಭಾವದೊ
ಳೀತನನು ನೋಡಿದಳು ತಿರುಹಿದಳಬಲೆ ಲೋಚನವ ೫೭
ಉಕ್ಕಿದಾ ಕಿವಿವೇಟ ಕಣ್‌ಬೇ
ಟಕ್ಕೆ ತಂದುದು ಕಂಗಳೀಕೆಯ
ಮುಕ್ಕುಳಿಸಿ ಮೈ ಸೋಂಕಿನಲಿ ಲಟಕಟಸಿದುದು ಹೃದಯ
ಸಿಕ್ಕಿತಳಲಿಗೆ ಸೋತು ಸೊಕ್ಕಿನ
ಚುಕ್ಕಿಯೋ ಚಾಪಳವೊ ಸಿದ್ಧಿಯೊ
ಅಕ್ಕಜವೊ ತಾನೆನುತ ಚಿಂತಿಸಿತಾ ನೃಪವ್ರಾತ ೫೮
ಇತ್ತ ನೋಡೌ ತಂಗಿ ಯದು ಭೂ
ಪೋತ್ತಮನನಮರಾರಿ ಕದಳೀ
ಮತ್ತದಂತಿಯ ನಿಖಿಳನಿಗಮಾವಳಿ ಶಿರೋಮಣಿಯ
ಉತ್ತರೋತ್ತರ ರಮ್ಯಮೂರ್ತಿಯ
ನುತ್ತಮಾಮಲ ಕೀರ್ತಿಯನು ಮನ
ಹತ್ತುವಡೆ ಹಳಿವಿಲ್ಲ ಕೃಷ್ಣನ ವರಿಸು ನೀನೆಂದ ೫೯
ಮದನನಯ್ಯನು ಮೂಜಗವ ಮಾ
ಗದನ ತಾತನು ರೂಪ ವಿಭವವ
ನಿದರೊಳಗೆ ನೀ ನೋಡಿಕೋ ಯಾದವ ಶಿರೋಮಣಿಯ
ಸುದತಿಯರ ಸೇರುವೆಗಳ ನೋ
ಡಿದರೆ ಧಾರುಣಿ ಲಕ್ಷ್ಮಿ ಕೃಷ್ಣನ
ಪದಯುಗವನೋಲೈಸುತಿಹರಬುಜಾಕ್ಷಿ ಕೇಳೆಂದ ೬೦
ಎನಲು ಭಕುತಿಯ ಭಾವರಸದಲಿ
ನೆನೆದು ಹೊಂಪುಳಿವೋಗಿ ರೋಮಾಂ
ಚನದ ಮೈಯುಬ್ಬಿನಲಿ ತನು ಪುಳಕಾಂಬು ಪೂರದಲಿ
ಮನದೊಳಗೆ ವಂದಿಸಿದಳೆನಗೀ
ತನಲಿ ಗುರುಭಾವನೆಯ ಮತಿ ಸಂ
ಜನಿಸಿತೇನೆಂದರಿಯೆನೆಂದಳು ಕಮಲಮುಖಿ ನಗುತ ೬೧
ಹಿರಿಯನೀ ಕೃಷ್ಣಂಗೆ ನೀಲಾಂ
ಬರನು ನೋಡಾದೊಡೆ ಮುರಾರಿಯ
ಹಿರಿಯ ಮಗನನು ಲೋಕಮೂರರ ಬಂಧಿಕಾರನನು
ಹರನ ಕಣ್ಣಿಗೆ ಬಗೆಯನೆಂಬೀ
ಬಿರುದು ಮನ್ಮಥನೀತನೀತನ
ವರ ತನುಜನನಿರುದ್ಧನಿದು ಯದುರಾಜಕುಲವೆಂದ ೬೨
ಸಾರಣನು ಕಲಿ ಸಾಂಬನೀತನು
ಚಾರು ದೀಪಕನೀತನಮಲಾ
ಕ್ರೂರ ಸತ್ಯಕನೀತ ಸಾತ್ಯಕಿ ಈತ ಕೃತವರ್ಮ
ಸಾರಮೌಂಜಸನೀತನೀತ ವಿ
ದೂರಣಾದಿ ಸಮಸ್ತ ಯಾದವ
ವೀರರಿದಸಂಖ್ಯಾತ ಕೃಷ್ಣ ಕುಮಾರರಿವರೆಂದ ೬೩
ಜಗವನಿಂದ್ರಿಯ ಕರಣ ವಿಷಯಾ
ದಿಗಳನೆಲ್ಲವನೆತ್ತಿ ಮುಖದಲಿ
ತೆಗೆದು ಶ್ರುತಿಶಿರದಮಲ ತತ್ವವನರಸುವಂದದಲಿ
ಬಗೆಯ ಬಯಕೆಯ ಸೊಗಸುಗಳ ದಾ
ಯಿಗನನರಸುತ ಕುಡಿತೆಗಣ್ಣಲಿ
ಮೊಗೆದು ಸೂಸಿದಳಂಬುಜಾನನೆಯಖಿಳ ನೃಪಜನವ ೬೪
ಕೆಲರು ಮಧುರಾಪಾಂಗದಲಿ ಕಂ
ಗಳ ಮರೀಚಿಯ ಬೆಳಗಿನಲಿ ಕೆಲ
ರೆಳೆನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನ
ಲೊಲಿವ ಸಖಿಯರಿಗೆಂದಳೆಂದೊಳ ೬೫
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ
ಗರುವೆಯಿಂಗಿತವರಿದು ದಂಡಿಗೆ
ಮುರಿದೊಡನೆಯೈ ತಂದುದೀಕೆಯ
ನೆರವಿ ಕಳುಹುತ ಕಂಗಳಲಿ ಕರಣೇಂದ್ರಿಯಂಗಳಲಿ
ಬರಿಯ ಡಿಂಬದ ಡೊಂಬಿನಲಿ ಕೇ
ಸರಿಯ ಪೀಠವನಿಳಿಯದಿರ್ದರು
ಧರಣಿಪರು ಮುರವೈರಿ ಗಂಗಾಸೂನು ಹೊರತಾಗಿ ೬೬
ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪ ಶರವವ
ಘಡಿಸಿ ಕೈಗಳ ನೋಡಿ ನೃ ಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ ೬೭
ರಾಯನೆಂದನು ಸಕಲಧರಣೀ
ರಾಯರನು ಮನ್ನಿಸದೆ ಮರಳಿದ
ಳಾಯತಾಕ್ಷಿ ಮಹಾ ಸ್ವಯಂವರದಲಿ ಮಹಾದೇವ
ಜೊಯಿಸರ ಹೋರೆಗರ ಹೇಳಿಕೆ
ಹೋಯಿತೇ ಹೊಳ್ಳಾಗಿ ಪಾಂಡವ
ರಾಯರನು ತೋರಿಸನೆ ಗದುಗಿನ ವೀರ ನಾರಯಣ ೬೮
ಸಂಕ್ಷಿಪ್ತ ಭಾವ
Lrphks Kolar
ಸ್ವಯಂವರ ಮಂಟಪಕ್ಕೆ ಬಂದ ದ್ರೌಪದಿಯ ಮತ್ತು ಅವಳ ಸಖಿಯರ ಚೆಲುವಿನ ವರ್ಣನೆ ಇಲ್ಲಿದೆ. ಜೊತೆಗೆ ರಾಜರುಗಳ ಪರಿಚಯ. ಅವರೆಲ್ಲರನ್ನೂ ಕಡೆಗಣ್ಣನೋಟದಲಿ ನೋಡಿ ಸಾಗಿದ ಮಗಳ ಬಗ್ಗೆ, ಜೋಯಿಸರು ನುಡಿದಂತೆ ಆ ಪಾಂಡವರೆಲ್ಲಿ ಬರಲೇ ಇಲ್ಲ ಎಂದು ದ್ರುಪದನಿಗೋ ಚಿಂತೆ.
ಸ್ವಯಂವರ ಮಂಟಪಕ್ಕೆ ದ್ರೌಪದಿಯನ್ನು ಅಲಂಕರಿಸಿ ಗೆಳತಿಯರು ಕರೆತಂದರು. ಅವಳ ದೇಹಸೌಂದರ್ಯವನ್ನು ಹತ್ತಾರು ಪದ್ಯಗಳಲ್ಲಿ ಕುಮಾರವ್ಯಾಸ ಇಲ್ಲಿ ವರ್ಣಿಸಿದ್ದಾನೆ. ಜೊತೆಗೆ ಬಂದ ಸಖಿಯರೂ ಕಡಿಮೆಯೇನಲ್ಲ. ಒಬ್ಬೊಬ್ಬರನ್ನು ನೋಡುತ್ತಿದ್ದರೇ ಅಲ್ಲಿದ್ದ ರಾಜರುಗಳಲ್ಲಿ ರೋಮಾಂಚನ. ಆತಂಕ. ಆಸೆ. ನಿರೀಕ್ಷೆ. ಆ ಇಂದ್ರನಿಗೂ ಈಕೆಯ ಮುಂದೆ ರಂಭೆ ಊರ್ವಶಿ ಮೇನಕೆಯರೆಲ್ಲಿ ಎಂಬ ಭಾವ.
ವಸಂತಕಾಲವೇ ಆಗಮಿಸಿತೇನೋ ಎಂಬಂತೆ ರಾಜಕುಮಾರಿ ಬಂದಳು. ಬಿಟ್ಟ ಕಣ್ಣು ಬಿಟ್ಟಂತೆ ಎಲ್ಲರೂ ಅವಳನ್ನು ವೀಕ್ಷಿಸಿದರು. ತಂಗಿಯನ್ನು ದುಷ್ಟದ್ಯುಮ್ನನು ಕರೆದುಕೊಂಡು ಬಂದು ಅಲ್ಲಿ ಬಂದಿದ್ದ ರಾಜರುಗಳನ್ನು ಪರಿಚಯ ಮಾಡಿಸುತ್ತ ನಡೆದನು.
ದುರ್ಯೋಧನನಾದಿಯಾಗಿ ಸಕಲ ಕೌರವರು, ಕರ್ಣ, ಯಾದವರು, ಸೋಮದತ್ತ, ಜರಾಸಂಧ, ಕಾಂಭೋಜ,ಇತ್ಯಾದಿ ಸಕಲ ರಾಜರುಗಳ ಪರಿಚಯ ಹೇಳುತ್ತಾ ಬಂದನು. ಕೃಷ್ಣನನ್ನು ನೋಡಿದಾಗ ಅವಳ ಮನದಲ್ಲಿ ಗುರುಭಾವವು ಮೂಡಿತು. ಕೆಲವು ರಾಜರಲ್ಲದೆ ಅವರ ಮಕ್ಕಳುಗಳೂ ಬಂದಿದ್ದರು.
ದ್ರೌಪದಿಯು ಯಾರನ್ನೂ ಒಲಿಯದೆ ಹೋದುದನ್ನು ಕಂಡು ಪಾಂಚಾಲ ರಾಜನಿಗೆ ಚಿಂತೆಯಾಯಿತು. ಅಲ್ಲದೆ ಅಲ್ಲಿ ನೆರೆದಿದ್ದ ರಾಜರುಗಳಿಗೆ ಅಸಹನೆ ಮೂಡಿತು. ಜೋಯಿಸರು ಹೇಳಿದ್ದಂತೆ ಸ್ವಯಂವರವನ್ನು ಏರ್ಪಡಿಸಿದರೂ ಪಾಂಡವರು ಕಾಣಲಿಲ್ಲ ಎಂಬ ಚಿಂತೆ ದ್ರುಪದನಿಗೆ.
ಕಾಮೆಂಟ್‌ಗಳು