ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ14


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರ
ಆದಿಪರ್ವ - ಹದಿನಾಲ್ಕನೆಯ ಸಂಧಿ


ತಮತಮಗೆ ತವಕದಲಿ ಭೂಪೋ
ತ್ತಮರು ಹೋರಿದು ಬಳಲಿ ಜಾತ
ಶ್ರಮರು ಹಿಮ್ಮೆಟ್ಟಿದರು ಗೆಲಿದುದು ಧನು ಮಹಾರಥರ 

—————


ಕೇಳು ಜನಮೇಜಯನೃಪತಿ ಪಾಂ
ಚಾಲೆ ಪೊಕ್ಕಳು ಭದ್ರಮಂಟಪ
ಶಾಲೆಯನು ಮರಳಿದುದು ಮನ್ಮಥನೊಡ್ಡು ಸತಿಯೊಡನೆ
ಬಾಲೆಯನು ನಿಜರೂಪದರ್ಪದೊ
ಳಾಳಲರಿದಿರೆ ಬಾಹುಬಲದಲಿ
ಸೋಲಿಸುವಡನುವಾಗಿಯೆಂದರು ಹೊಯ್ದು ಡಂಗುರವ ೧

ಇದೆ ಮಹಾಧನು ಬಾಣಪಂಚಕ
ವಿದೆ ನಭೋಗ್ರದ ಯಂತ್ರ ಹೊಳವು
ತ್ತಿದೆ ವಿಭಾಡಿಸಿ ಮೆರೆವನಾವನು ಬಾಹು ವಿಕ್ರಮವ
ಇದುವೆ ಕಬ್ಬಿನ ಬಿಲು ಶರಾವಳಿ
ಯಿದು ಕುಸುಮಮಯ ಯಂತ್ರವಬಲೆಯ
ಹೃದಯವಾತನೆ ರಮಣನಾತನೆ ಕುಸುಮ ಶರನೆಂದ ೨

ಎಂದು ಸಾರಿದು ಭಾರಿ ಧನುವನು
ತಂದು ಧರೆಗಿಳುಹಿದರು ಯಂತ್ರವ
ನಂದವಿಟ್ಟರು ಗಗನದಲಿ ಗವಸಣಿಗೆಗಳನುಗಿದು
ಮುಂದೆ ಕೂರಂಬುಗಳ ಥರಥರ
ದಿಂದ ನಿಲಿಸಿ ಸುಗಂಧದಕ್ಷತೆ
ಯಿಂದ ಪೂಜೆಯ ರಚಿಸಿದರು ವೈದಿಕ ವಿಧಾನದಲಿ ೩

ಮಸಗಿದುದು ಬಹು ವಾದ್ಯರವ ನಿ
ಪ್ಪಸರದಲಿ ನಿಸ್ಸಾಳತತಿ ಗ
ರ್ಜಿಸಿದವಾವರ್ಜಿಸುವವೋಲ್ ಘನಯಂತ್ರ ಭೇದಿಗಳ
ಒಸಗೆಯಾಟವೊ ಬಿಲ್ಲ ಹೊಯ್ಲಿನ
ಹಸುಗೆಯಾಟವೊ ಗರುವರಿಗೆ ಗಂ
ಗಸೆಯ ಮಾಡಿತು ಚಾಪವಿತ್ತಲು ಭೂಪ ಕೇಳೆಂದ ೪

ನೆರವಿಯಲಿ ನಾನಾ ದಿಗಂತದ
ಧರಣಿಪತಿಗಳ ಹಮ್ಮಿಕೆಯಲು
ಬ್ಬರಿಸಿ ಹೊಕ್ಕರು ಬೇರೆ ಬೇರೊಬ್ಬೊಬ್ಬರುರವಣಿಸಿ
ಹರಗಿರಿಗೆ ಹುಲು ರಕ್ಕಸರು ಮ
ತ್ಸರಿಸುವಂತಾಯ್ತೇನನೆಂಬೆನು
ಧರೆಯ ಬಿಡದೀ ಧನು ವಿಭಾಡಿಸಿ ಕೆಡಹಿತವನಿಪರ ೫

ಹಾರ ಹರಿದುದು ಕರ್ಣಪೂರದ
ಚಾರು ಮಣಿಗಳು ಸಡಲಿದುವು ಪದ
ವೀರ ನೇವುರ ನೆಗ್ಗಿದವು ಕುಗ್ಗಿದವು ನೆನಹುಗಳು
ನಾರಿಯರ ಕೈಹೊಯ್ಲ ನಗೆಯ ನಿ
ಹಾರ ಜಡಿದುದು ಮುಸುಕದಲೆಯ ಮ
ಹೀರಮಣರೋಸರಿಸಿ ಸಿಂಹಾಸನವ ಸಾರಿದರು ೬

ಮಿಡುಕದೀ ಧನು ನಮ್ಮ ಝಾಡಿಸಿ
ಕೆಡಹಿತದನಿನ್ನಾರು ಕೊರಳಲಿ
ತೊಡಿಸಿ ತಿರುವನು ಸೆಳೆದು ಬಿಡುವರೊ ಯಂತ್ರದಲಿ ಶರವ
ಕಡುಹಿನಣ್ಣನ ಕಾಂಬೆವೈಸಲೆ
ನುಡಿದು ಮಾಡುವುದೇನೆನುತ ಸಿರಿ
ಮುಡಿಯ ಮುಸುಕಿನ ರಾಯರಿದ್ದರು ಬಯಲ ಬಿಂಕದಲಿ ೭

ಐಸಲೇ ಸೌಭಾಗ್ಯವೆಮಗೆ ಶ
ರಾಸನಾಕರುಷಣದೊಳತಿ ಡೊ
ಳ್ಳಾಸದಲಿ ಡಾವರಿಸಿ ಗೆಲಿದಳು ದ್ರುಪದಸುತೆ ನೃಪರ
ಲೇಸು ತಪ್ಪೇನಿದಕೆನುತ ಭ
ದ್ರಾಸನವನಿಳಿದುಲಿವ ತೊಡರಿನ
ಘೋಷಣೆಯ ಘಳಿಲುಗಳ ಮಗಧ ನೃಪಾಲನೈತಂದ ೮

ಬಿಲ್ಲ ಹೊರೆಗೈದಿದನು ಚೌಪಟ
ಮಲ್ಲ ನೋಡಿದನೈಸಲೇ ತ
ಪ್ಪಲ್ಲೆನುತ ಮೇಲ್ದಿರುಹಿದನು ಮುಂಗೈಯ ಸರಪಣಿಯ
ಬಿಲ್ಲನೆತ್ತಿದರಿವನನಂಗನೆ
ಯೊಲ್ಲಳೋ ಮೇಣೊಲಿವಳೋ ಮಿಗೆ
ಬಲ್ಲಿದನು ತಾನೀತನೆನುತಿರ‍್ದುದು ಸಖೀನಿವಹ ೯

ಈತ ಕುಸಿದೆತ್ತಿದಡೆ ಧನು ಮಾ
ರಾತುದಿವನೌಕಿದಡೆ ಕಾರ್ಮುಕ
ವೀತನಾರೆಂದರಿಯದಿವನೌಡೊತ್ತಿ ಮೈಬಲಿದ
ಘಾತಿಯಲಿ ಘಲ್ಲಿಸಿದಡಾ ಧನು
ಸೋತುದೆವೆಯಂತರಕೆ ತೊಲಗದು
ಧಾತುಗುಂದಿದನಳ್ಳಿರಿದವಳ್ಳೆಗಳು ಮಾಗಧನ ೧೦

ಬೆಮರನಾರಿಸಿಕೊಂಡು ವಿಗತ
ಶ್ರಮನು ಮೊಳಕಾಲಿಕ್ಕಿ ದಂಡೆಯೊ
ಳಮರಿ ದೇಹವ ಬಲಿದು ವಕ್ಷದೊಳೌಂಕಿ ಗಾಢದಲಿ
ಕುಮತಿಯಲ್ಲಾಡಿದರೆ ಬಿಟ್ಟುದು
ಅಮಮ ಜವೆ ಮಾತ್ರಕ್ಕೆ ಘನ ವಿ
ಕ್ರಮವನೊಡೆದುದು ಸದೆದುದಾತನ ಗರ್ವವಿಭ್ರಮವ ೧೧

ಕೇಳಿದನು ಕಾಂತಾ ಕದಂಬದ
ಘೋಳುಗಳ ಘೋಳೆಂಬ ನಗೆಗಳ
ಕಾಳು ಮಾಡಿದನೇಕೆ ಧನು ತಾನೇಕೆ ಸುಡುಯೆನುತ
ಬೇಳುವೆಯಲುಡಿದಂಕದವೊಲು
ಬ್ಬಾಳುತನ ಪೈಸರಿಸೆ ಮುಸುಕಿನ
ಮೌಳಿ ಹಿಮ್ಮೆಟ್ಟಿದನು ಕಡೆಯವ ತಿರುಗಿ ಕಿರುದೊಡೆಗೆ ೧೨

ಕೆರಳಿದನು ದಮಘೋಷನಂದನ
ನರರೆ ದಿಟ್ಟನ ಧನು ವಿಭಾಡಿಸಿ
ತೆರಳಿಚಿತಲಾ ವಿಗಡ ಚಕ್ರಾಯುಧನ ಮಾಗಧನ
ಹರಿಬವೆನ್ನದು ಹೊಳ್ಳುಗಳೆವೆನು
ದುರುಳ ಧನುವನು ನಗುವ ಕನ್ನೆಯ
ತುರುಬ ಕೊಯ್ಸುವೆನೆನುತ ಕಲಿ ಶಿಶುಪಾಲನೈತಂದ ೧೩

ಇವನಲೇ ರಾವಣನು ಮುನ್ನಿನ
ಭವದೊಳಗೆ ತಪ್ಪಿಲ್ಲೆನುತ ಜನನಿವಹ ನಡುಗಿತು ಕೋಮಲಾಂಗಿಯ ಪುಣ್ಯವೆಂತೆನುತ
ಅವನಿಪತಿ ಕೇಳನೆದನಿವ ಚಾ
ಪವನು ಬೋಳೈಸಿದನು ಬಲುಹೋ
ಶಿವಯೆನುತ ಸೀವರಿಸಿದನು ಡಾವರಿಸಿದನು ಧನುವ ೧೪

ಏನನೆಂಬೆನು ಧನು ಸಘಾಡದ
ಮಾನಭಂಗದ ಮೊದಲ ಮನೆಯೆನೆ
ಮಾನಿನಿಯರಪಹಾಸ್ಯವೀ ಜನರೀ ನೃಪಾಲಕರ
ಹೀನ ನುಡಿಗಳ ಕಂಡು ದೈತ್ಯಸ
ಮಾನ ಮನದಲಿ ನೊಂದು ತಿರುಗಿದ
ನೇನನೆಂಬೆನು ಸದೆದುದಾತನ ಗರ್ವವಿಭ್ರಮವ ೧೫
ಕಂಡು ಮಾಗಧ ಕರೆದನೀ ಧನು
ಚಂಡಿಯಿದು ನಮಗಲ್ಲ ನಾವ್ ಮುಂ
ಕೊಂಡು ತಪ್ಪಿತು ನೊಪ್ಪಿತಾದುದು ಭಾರಿಯಗ್ಗಳಿಕೆ
ಭಂಡರೀ ಭೂಮಿಪರು ದ್ರುಪದನ
ಗುಂಡುದೊತ್ತಿರು ನಗೆಯನಾನಲ
ಮಂಡೆಗಳಲಿವರೆನುತ ಹಾಯ್ದರು ತಮ್ಮ ಪಟ್ಟಣಕೆ ೧೬

ಗರುವರಲ್ಲಾ ಚೈದ್ಯ ಮಾಗಧ
ರಿರದೆ ತಮ್ಮಯ ಪುರಕೆ ಗಮಿಸಿರರಸುಗಳೆ ಮಿಕ್ಕವರ ವಿಧಿಯನು ಕೇಳು ನರನಾಥ
ಧರಧುರದೊಳಭಿಮಾನಹಾನಿಯ
ಹುರುಳಹುದು ಬಿಲು ಹೋರಟೆಗೆ ನಿಲರಿದೆನುತ್ತಂಗದಣೆಗುಂದಿತು ನೆರೆದ ನೃಪನಿಕರ ೧೭

ಮರುಳೆ ಪಾಂಚಾಲನ ಕುಮಾರಿಯ
ವರ ಕಟಾಕ್ಷದ ಬೀಸುವಲೆಯಲಿ
ಶರಮಹಾಧನುವೆಂಬ ಬಲುದಡಿವಲೆಯನಳವಡಿಸಿ
ಧರಣಿಪಾಲ ಮೃಗಂಗಳನು ಸಲೆ
ಬರಿಸಿ ಸದೆದನು ಹೊಲ್ಲೆಹೇನಂ
ತಿರಲಿ ನೋಡುವೆನೆನುತ ಶಲ್ಯನೃಪಾಲನೈತಂದ ೧೮

ಅಗ್ಗಳೆಯನಾ ಮಗಧ ಮಾತಿನ
ಲಗ್ಗಿಗನು ಶಿಶುಪಾಲ ಸೋಲದ
ಸುಗ್ಗಿಯಿಬ್ಬರಿಗಾಯ್ತು ಹಲಬರಿಗಾಯ್ತು ರಣಧೂಳಿ
ತಗ್ಗುವುದೊ ಧನು ಧನುವಿಘಾತಿಗೆ
ಮುಗ್ಗುವನೊ ಮಾದ್ರೇಶನಿವರೊಳ
ಗಗ್ಗಳೆಯನಹನೆಂದು ನೋಡಿದರಂದು ನಾರಿಯರು ೧೯

ಬಂದನೀತನು ಧನುವ ಸಾರಿದು
ನಿಂದು ಸಂವರಿಸಿದನು ಕಾಂತಾ
ವೃಂದವನು ನೋಡಿದನು ಮನದಲಿ ಧಿಕ್ಕುಧಿಗಿಲೆನುತ
ಸಂದಣಿಯ ನಭಕೊತ್ತಿ ಫಣಿಯಲಿ
ಮಂದರವ ಬಿಗಿವಂತೆ ಭುಜದಲಿ
ಮುಂದುವರಿದವುಚಿದನು ದಂಡೆಯನಿಕ್ಕಿ ಕೋಪದಲಿ ೨೦

ಕೊಳ್ಳದೀ ಧನುವೀತನುಬ್ಬಿನೊ
ಳಳ್ಳೆಗೊಬ್ಬಿನೊಳೌಕಿ ತೊಡರಿನ
ಘಲ್ಲಣೆಯ ಘನಕುಲಿಯೆ ಪಂಟಿಸಿ ನಿಮಿಷ ಮಾತ್ರದಲಬಿಲ್ಲು ಬಿಡದವನಿಯಲಿ ಬಿದ್ದನು
ಡೊಳ್ಳು ಮೇಲಾಗಿತ್ತ ಸತಿಯರಘೊಳ್ಳೆನಲು ಸುಡು ಘೋರಧನುವನೆನುತ್ತ ಹೊರದೆಗೆದ ೨೧

ಹಿಂಗಿದನು ಮಾದ್ರೇಶನೀ ಧನು
ಭಂಗಿಸಿತು ಮಾನ್ಯರನು ಜಡವಿದು
ಜಂಗಮತ್ವದಲೇನಹುದೊ ಝೋಂಪಿಸಿತಲೈ ಜಗವ
ಅಂಗನಾ ಪಾಣಿಗ್ರಹಣ ರಾ
ಯಂಗೆ ತಾನೀ ದುಷ್ಟ ಧನುವನು
ಭಂಗಬಡಿಸದೆ ಬಿಡೆನೆನುತ ಕಲಿ ಕರ್ಣನೈತಂದ ೨೨

ಈತನರ್ಜುನನಲ್ಲಲೇ ರೂ
ಪಾತಿಶಯವುಳ್ಳಾತ ಯಂತ್ರವ
ನೀತ ಗೆಲಿದರೆ ಪುಣ್ಯವೈಸಲೆ ತಂಗಿಗನುಸಾರಈತ ವರನಹುದೆನುತ ಲಲನಾ
ಜಾತವಾತನನೀಕ್ಷಿಸುತ ಸಂ
ಪ್ರೀತಿಯಲಿ ಕೊಂಡಾಡುತಿರ್ದುದು ರಾಯ ಕೇಳೆಂದ ೨೩


ತುಡುಕಿದನು ಚಾಪವನು ಮಹಿಯಿಂ
ಮಿಡುಕದಿರೆ ಮಂಡಳಿಸಿ ಝಾಡಿಸಿ
ಜಡಿದು ಜರೆದೌಂಕಿದನು ದಂಡೆಯನಿಕ್ಕಿ ಕೋಪದಲಿ
ಹೊಡಕರಿಸಿ ಸತ್ವಾತಿಶಯವಿ
ಮ್ಮಡಿಸೆ ಸರ್ಷಪಮಾತ್ರ ತಿರುವನು
ತೊಡಿಸಲರಿಯದೆ ಹಿಂಗಿ ಮೌನದೊಳಿರ್ದನಾ ಕರ್ಣ ೨೪

ಇವರು ನಾಲ್ವರಿಗೊಂದೆ ಪಥ ಹಲ
ರವಗಡಿಸಿ ಮುನ್ನಳುಕಿದರು ಬಹು
ಭುವನಪತಿಗಳು ಭಾರಿಧನುವಿದೆ ಭಾಮಿನಿಯ ಮುಂದೆ
ಎವಗೆ ತವಗಿದು ವಶವೆ ಬಾವ
ನ್ನವನು ವೇಷ್ಟಿಸಿ ಭುಜಗವಿದೆಯೆಂ
ದವನಿಪರು ಹೊರಗುಂದಿದರು ಭಯಮುಖದ ದುಗುಡದಲಿ ೨೫


ಕ್ಷಿತಿಪ ಕೇಳೈ ವಿಗಡ ಚಾಪ
ವ್ಯತಿಕರಕೆ ದುರ್ಯೋಧನಾದಿ
ಕ್ಷಿತಿಪತಿಗಳಂಜಿದುದ ಕಂಡನು ನಗುತ ಬಲರಾಮ
ಕೃತಕ ಧನುವನು ಮುರಿದು ದ್ರುಪದನ
ಸುತೆಯ ಮುಂದಲೆವಿಡಿದು ತಹೆನು
ದ್ಧತನಲಾ ಪಾಂಚಾಲನೆನುತಿಳಿದನು ವರಾಸನವ ೨೬

ಹಲಧರನ ಮಸಕವನು ಕಂಡನು
ನಳಿನನಾಭನಿದೇನು ಪೀಠವ
ನಿಳಿದಿರೆಲ್ಲಿಗೆ ಗಮನವಾವುದು ಕಾರ್ಯಗತಿ ನಿಮಗೆ
ತಿಳುಹಿಯೆನೆ ಬೇರೇನು ಯಂತ್ರವ
ಕಳಚಿ ಬಿಸುಟು ಲತಾಂಗಿಯನು ಹಿಡಿ
ದೆಳೆದು ತಹೆನೆನಲೈಸಲೇ ಕೇಳೆಂದನಸುರಾರಿ ೨೭

ಏನಹರು ನಿಮಗಿಂದು ಕುಂತೀ
ಮಾನಿನಿಯರತ್ತೆಯರಲೇ ತ
ತ್ಸೂನುಗಳು ಮೈದುನರು ತತ್ಪತ್ನಿಯರು ತಂಗಿಯರು
ಸಾನುರಾಗವೆ ಮನಕೆ ಸಂಶಯ
ವೇನಿದಕೆ ತಪ್ಪಿಲ್ಲ ಕುಂತೀ
ಸೂನುಗಳು ದ್ರೌಪತಿಗೆ ರಮಣರು ನೋಡಿ ನೀವೆಂದ ೨೮

ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ಬಲರಾಮನವನಿಯ
ನೀಗಿ ಹೋದರ ಮಾತು ಪಾಂಡವರೆತ್ತಲಿವಳೆತ್ತ
ಬೇಗುದಿಯೊಳುರಿಯರ ಮನೆಯೊಳೊಂ
ದಾಗಿ ಬೆಂದರು ಲೋಕವರಿಯೆ ಶ
ಠಾಗಮಿಕ ನಿನಗಂಜುವೆನು ತಾನೆನುತ ಕೈಮುಗಿದ ೨೯

ಕ್ಷಿತಿಯೊಳವರಿಲ್ಲೆಂದು ದ್ರುಪದನ
ಸುತೆಗೆ ಪತಿ ಪರರೆಂದು ಯಂತ್ರ
ಚ್ಯುತಿಗೆ ನೀವುಂಟೆಂದು ತೋರಿತೆ ನಿಮ್ಮ ಚಿತ್ತದಲಿ
ಕ್ಷಿತಿಗೆ ಪಾಂಡವರಲ್ಲದಿಲ್ಲೀ
ಸತಿಗೆ ಪತಿ ಪೆರರಿಲ್ಲ ಕುಂತೀ
ಸುತರನೀಗಳೆ ತೋರುವೆನು ವಸುದೇವನಾಣೆಂದ ೩೦

ಇದು ವಿಚಿತ್ರವಲಾ ಗತಾಸುಗ ಳುದಿಸಿದರೆ ಲೇಸೈಸಲೇ ದ್ರೌ
ಪದಿಯನವರನುರಾಗಿಸಲಿ ಭೋಗಿಸಲಿ ಭೂತಳವ
ಇದುವೆ ನಿಶ್ಚಯವಾದರವರ
ಭ್ಯುದಯನವರನುರಾಗಿಸಲಿ ಭೋಗಿಸಲಿ ಭೂತಳವ
ಇದುವೆ ನಿಶ್ಚಯವಾದರವರ ಭ್ಯುದಯವೆಮ್ಮಭ್ಯುದಯವೆಂದಾ
ಪದುಮನಾಭನ ಹೊಗಳಿ ಕುಳ್ಳಿರ್ದನು ಸರಾಗದಲಿ ೩೧

ಈಕೆಯನು ಮೆಚ್ಚಿಸದು ರಾಜಾ
ನೀಕ ಸೌಂದರ್ಯದಲಿ ಚಾಪ
ವ್ಯಾಕರಣ ಪಾಂಡಿತ್ಯವೆಂಬಡೆ ಕಾಣೆ ನಾನೀಗ
ಈಕೆಗಿನ್ನಾರೊಡೆಯರೋ ಕುಂ
ತೀ ಕುಮಾರಕರಿಲ್ಲಲೇ ಸುಡ
ಲೇಕೆ ನೆರಹಿದೆನಿವರನೆನುತಾ ದ್ರುಪದ ಚಿಂತಿಸಿದ ೩೨

ಹರಾ ಹರಾ ಇನ್ನಾರೊ ತಂಗಿಗೆ
ವರನು ವಾರಿಧಿವಲಯದವನೀ
ಶ್ವರರು ನೆರೆದಿದೆ ರೂಪು ವಿಕ್ರಮವೆರಡು ಹೊರತಾಗಿ
ನರಪತಿಗಳಿವರೈಸಲೇಯಿ
ನ್ನರಸಿಗಾವುದು ಹರಸೆನುತ ವಿ
ಸ್ತರದ ಗುಜುಗುಜು ಮಸಗಿದುದು ಕಾಂತಾಕದಂಬದಲಿ ೩೩

ಅವನಿಪತಿಗಳು ಹೊಳ್ಳುವಾರಿದ
ರಿವರೊಳಿಲ್ಲಲೆ ದಕ್ಷಿಣೆಯ ಹಾ
ರುವ ಮಹಾಜನವಿದೆ ಸಮುದ್ರಕೆ ಪಡಿ ಸಮುದ್ರವೆನೆ
ಇವರೊಳಗೆ ಮುಂಗೈಯ ಬಲುಹು
ಳ್ಳವರು ನೆಗಹಲಿ ಧನುವನೀ ಯಂ
ತ್ರವನು ಜಯಿಸಲಿಯೆಂದು ಧೃಷ್ಟದ್ಯುಮ್ನ ಸಾರಿಸಿದ ೩೪

ಸಂಕ್ಷಿಪ್ತ ಭಾವ

ರಾಜರುಗಳು ಧನುಸ್ಸನ್ನು ಎತ್ತಲಾರದೆ ಹಿಮ್ಮೆಟ್ಟಿದ ಪ್ರಸಂಗ ಇಲ್ಲಿ ವರ್ಣಿತಗೊಂಡಿದೆ.

ದ್ರೌಪದಿಯು ಯಾವ ರಾಜರನ್ನೂ ವರಿಸದೆ ಹೋದಾಗ ದ್ರುಪದನು ಮತ್ಸ್ಯ ಯಂತ್ರ ಧನುವನ್ನು ತರಿಸಿದನು. ಯಾರು ಇದನ್ನು ಬೇಧಿಸುವರೋ ಅವರಿಗೆ ದ್ರೌಪದಿಯು ವಧುವಾಗುವಳೆಂದು ಡಂಗುರ ಸಾರಿಸಿದನು.

ಒಬ್ಬೊಬ್ಬರಾಗಿ ತಮ್ಮ ಪರಾಕ್ರಮದ ಬಗ್ಗೆ ಬಹಳ ಗರ್ವವಿದ್ದ ರಾಜರುಗಳು ಬಂದು ಈ ಧನುವನ್ನು ಎತ್ತಲಾರದೆ ಅವಮಾನಕ್ಕೆ ಒಳಗಾಗಿ ವಾಪಸಾದರು. ಮಗಧ ದೇಶದ ಅರಸು, ಶಿಶುಪಾಲ, ದುರ್ಯೋಧನ, ಕರ್ಣ, ಶಲ್ಯ ಇತ್ಯಾದಿ ರಾಜರುಗಳು ಬಂದು ಸೋತರು. ಪ್ರತಿ ಬಾರಿಯೂ ಅಲ್ಲಿ ನೆರೆದಿದ್ದ ಹೆಂಗಸರು ನಕ್ಕು ಅಪಮಾನ ಮಾಡಿದರು.

ಒಬ್ಬೊಬ್ಬರು ಬಂದಾಗಲೂ ಸಖಿಯರು ಇವನು ತಮ್ಮ ಅರಸಿಗೆ ರಾಯನಾಗುವನೋ ಇಲ್ಲವೋ ಎನ್ನುತ್ತ ಅವರವರ ಪರಾಕ್ರಮ, ರೂಪ, ದರ್ಪ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದರು.
 
ಎಲ್ಲರೂ ಸೋಲುತ್ತಿರುವುದನ್ನು ಕಂಡು ಬಲರಾಮ ಸಿಟ್ಟಿನಿಂದ ಎದ್ದು ನಿಂತ. ಆಗ ನಳಿನನಾಭನು ಅವನನ್ನು ಮಾತನಾಡಿಸಿದ. ಯಾಕೆ ಎದ್ದಿರಿ ಎನಲು ಧನುವನ್ನು ಮುರಿದು ಮಾನಿನಿಯ ಮುಂದಲೆ ಹಿಡಿದು ಎಳೆತರಲೆಂದಾಗ ಕೃಷ್ಣ ಸಮಾಧಾನ ಹೇಳಿದ. 

ದ್ರೌಪದಿಯನ್ನು ವರಿಸುವವರು ಪಾಂಡವರು. ಅವರು ನಮ್ಮ ಸೋದರತ್ತೆ ಕುಂತಿಯ ಮಕ್ಕಳಾದ್ದರಿಂದ ಅವರ ಅಭ್ಯುದಯವನ್ನು ಬಯಸಬೇಕಿದೆ. ಬಲರಾಮನಿಗೆ ಅಚ್ಚರಿ. ಪಾಂಡವರು ಸತ್ತರೆಂಬ ಸುದ್ದಿ ಇರುವಾಗ ಇವನು ಹೀಗೆ ಹೇಳುತ್ತಾನಲ್ಲ ಎಂದು. ಈ ಕ್ಷಣ ಅವರನ್ನು ತೋರಿಸುತ್ತೇನೆಂದು ಕೃಷ್ಣ ಹೇಳಿದಾಗ ಇವನ ಲೀಲೆಯ ಬಗ್ಗೆ ತಿಳಿದಿದ್ದ ಅಣ್ಣ ಬಲರಾಮ ಸುಮ್ಮನೆ ಕುಳಿತನು.

ರಾಜರುಗಳು ಯಾರೂ ಧನುವನ್ನು ಗೆಲ್ಲದೆ ಹೋದಾಗ ಎಲ್ಲರಿಗೂ ಆತಂಕ. ಆಗ ದುಷ್ಟದ್ಯುಮ್ನನು ಅಲ್ಲಿ ನೆರೆದಿದ್ದ ಭೂಸುರರಲ್ಲಿ ಯಾರಾದರೂ ಮುಂದೆ ಬರಬಹುದೆಂದು ಡಂಗುರ ಸಾರಿಸಿದನು.

(ನಮ್ಮ 'ಕನ್ನಡ  ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ