ಭಾರತಕಥಾಮಂಜರಿ7
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಆದಿಪರ್ವ - ಏಳನೆಯ ಸಂಧಿ
ರಾಯ ಕಟಕಾಚಾರ್ಯನಿಂದ ವಿ
ಘಾಯದಲಿ ನೊಂದನಲ ಮುಖದಲಿ
ರಾಯ ದ್ರುಪದನು ಪಡೆದ ಧೃಷ್ಟದ್ಯುಮ್ನ ದ್ರೌಪದಿಯ
---
ಕೇಳು ಜನಮೇಜಯ ಧರಿತ್ರೀ
ಪಾಲ ಕಲಿತರು ನಿಮ್ಮ ಪೂರ್ವ ನೃ
ಪಾಲಕರು ಸರಹಸ್ಯ ಸಾಂಗೋಪಾಂಗ ವಿದ್ಯೆಗಳ
ಸ್ಥೂಲದಲಿ ಸೂಕ್ಷ್ಮದಲಿ ಬಹಳ ವಿ
ಶಾಲದಲಿ ಸಂಕೋಚದಲಿ ಲಘು
ಪಾಳಿಯಲಿ ಹಾರದಲಿ ವಿವಿಧಾನುಪ್ರಯೋಗದಲಿ ೧
ಎಡ ಬಲದ ಮಯಣಾಮ ಹೊಳಹಿನ
ಕಡಲ ತೆರೆವೆರೆಯದತಿ ಬವರಿಯ
ಬಿಡೆಯ ದುವ್ವಾಳಿಗಳ ಸೂಟಿಯ
ಕಡುಗಲಿಗಳೇರಾಟದಲಿ ಮಿಗೆ
ಝಡಿ ಪವಾಡ ದೃಢಾಯತಿಕೆಗಿದು
ಪಡಿಯ ನಳ ರೇವಂತರೆಂದುದು ರಾವುತಿಕೆಗಳಲಿ ೨
ನಗವನೊಡ್ಡಿದರೊಂದೆ ಸರಳಲಿ
ಹುಗಿಲುಗಳೆವ ವಿದೂರಪಾತದಿ
ಗಗನಯಂತ್ರನೆಸುವ ಜೋಕೆಯ ಜೋದ ವಿದ್ಯದಲಿ
ಉಗಿವ ಬಿಡುವೆಡ ಬಲನ ಬವರಿಯ
ಲಗಿವ ಲವಣಿಯ ದಂತಿ ಶಿಕ್ಷೆಗೆ
ಮಿಗಿಲು ಭಗದತ್ತಾದಿಗಳಿಗೆಂದುದು ಕುಮಾರಕರ ೩
ರಥವ ರಕ್ಷಿಸಿಕೊಂಡು ನಿಜ ಸಾ
ರಥಿಯ ಕಾಯಿದು ಮುಂದೆ ಹೂಡಿದ
ರಥಹಯಂಗಳ ಮೈಗಳಲಿ ಮಸೆಗಾಣದಂದದಲಿ
ಪ್ರಥಿತರಿಪು ಶಸ್ತ್ರಾಸ್ತ್ರವನು ರಿಪು
ರಥಿಕರನು ಸಮರದಲಿ ಜಯಿಸುವ
ರಥಿಕ ವಿದ್ಯೆದೊಳಿವರ ಸರಿ ಸುರನರರೊಳಿಲ್ಲೆಂದ ೪
ಇನಿಬರೊಳು ಬಿಲುಗಾರನಾರ
ರ್ಜುನನೊ ಕರ್ಣನೊ ಭೀಮ ದುರ್ಯೋ
ಧನರೊ ಮಾದ್ರೀಸುತರೊ ಮೇಣ್ ದುಶ್ಶಾಸನಾದಿಗಳೊ
ಮನದಿ ಕೈಯಲಿ ಕಂಗಳೋ ಲೋ
ಚನವೆ ಕಂಗಳೊ ಕಾಣಬೇಕೆಂ
ದೆನುತ ಗುರು ರಚಿಸಿದನು ಲಕ್ಷ್ಯವನೊಂದು ವೃಕ್ಷದಲಿ ೫
ಕಾಣಬಾರದು ಲಕ್ಷ್ಯವಗ್ಗದ
ಜಾಣ ಭಟರಿಗೆ ಕಟ್ಟಿದೊರೆಯಿದು
ಕಾಣಿಸಿದೆರೈ ಹೂಣಿಸಿದೆರೈ ಹೂಡಿದಂಬಿನಲಿ
ಕಾಣಿರೇ ಕರ್ಣಾದಿ ಸುಭಟ
ಶ್ರೇಣಿಯೆಂಬೀ ಗುರುವಿನಣಕವ
ನಾಣೆಯಿಟ್ಟವೊಲೆಚ್ಚು ಲಕ್ಷ್ಯವ ಕೆಡಹಿದನು ಪಾರ್ಥ ೬
ಹಿರಿದು ಮೆಚ್ಚಿ ಧನಂಜಯನನಾ
ದರಿಸಿ ಕೊಟ್ಟನು ಸಕಲ ವಿದ್ಯವ
ನುರುತರ ಪ್ರೇಮದಲಿ ಸೆಣಸಿದೊಡೇಕಲವ್ಯಕನ
ಬೆರಳ ಕೊಂಡನು ಪಾರ್ಥನನು ಪತಿ
ಕರಿಸಿದನು ತನಗಾದ ನೆಗಳಿನ
ದರಧುರದ ಭೀತಿಯನು ಗೆಲಿದನು ನರನ ದೆಸೆಯಿಂದ ೭
ಇರಲಿರಲು ಫಲುಗುಣನನೆಕ್ಕಟಿ
ಗರೆದು ಶಸ್ತ್ರಾಸ್ತ್ರ ಪ್ರಪಂಚದ
ಪರಮ ಸಿದ್ಧಾಂತವನು ಕಲಿಸಿ ಮಹಾಸ್ತ್ರ ಸಂಗತಿಯ
ಕರುಣಿಸಿದನಾಗ್ನೇಯ ಪೌರಂ
ದರ ಮಹಾ ವಾಯುವ್ಯ ವಾರುಣ
ಹರಸಖ ಬ್ರಹ್ಮಾಸ್ತ್ರ ಸೌರೋರಗ ನಗಾದಿಗಳ ೮
ಒಂದು ದಿನ ವೊಡ್ಡೋಲಗಕೆ ಗುರು
ಬಂದು ಮನ್ನಿಸಿಕೊಂಡು ನಸುನಗು
ತೆಂದನಾ ಧೃತರಾಷ್ಟ್ರ ಗಂಗಾಸೂನು ವಿದುರರಿಗೆ
ಇಂದು ಪರಿಯಂತರವು ನಿಮ್ಮಯ
ನಂದನರನೋದಿಸಿದೆನವರಭಿ
ನಂದನೀಯರೊ ನಿಂದ್ಯರೋ ನೀವ್ ನೋಡಬೇಕೆಂದ ೯
ಸಕಲ ಶಸ್ತ್ರಾಸ್ತ್ರದಲಿ ಗಜ ಹಯ
ನಿಕರದೇರಾಟದಲಿ ಲೋಕ
ಪ್ರಕಟ ಮಾರ್ಗೀಕೃತ ಚತುರ್ದಶ ವಿಮಲ ವಿದ್ಯದಲಿ
ಸಕಲ ಲಕ್ಷಣ ಗಣಿತ ಗಾರುಡ
ವಿಕಟ ಭರತಾದ್ಯಖಿಲ ಕಳೆಯಲಿ
ವಿಕಳರೋ ಸಂಪೂರ್ಣರೋ ನೀವ್ ನೋಡಬೇಕೆಂದ ೧೦
ಲೇಸನೆಂದಿರಿ ಸುತರ ವಿದ್ಯಾ
ಭ್ಯಾಸ ರಚಿತ ಶ್ರಮವನಾವರಿ
ದೈಸು ನಿಮಗುತ್ಸವವಲೇ ತಪ್ಪಾವುದುಚಿತವಲೆ
ಈಸು ದಿನವೀ ಮಕ್ಕಳೊಡನಾ
ಯಾಸವಿದು ಸಾಮಾನ್ಯವೇ ನಾ
ವೇಸು ಧನ್ಯರೊ ನಿಮ್ಮ ದೆಸೆಯಿಂದೆಂದನಾ ಭೀಷ್ಮ ೧೧
ಆದಿಯಲಿ ಪುರವೈರಿ ಬಳಿಕಿನೊ
ಳಾದನಗ್ಗದ ಪರಶುಧರನೀ
ಮೇದಿನಿಯೊಳೀ ಯುಗದಲನುಪಮ ಶಸ್ತ್ರ ವಿದ್ಯದಲಿ
ವೈದಿಕದಲೀ ನಿಮ್ಮ ವೋಲ್ ದೊರೆ
ಯಾದನಾರು ಕುಮಾರಕರ ಪು
ಣ್ಯೋದಯದ ಕಂದೆರವೆಯೈ ಸಲೆಯೆಂದನಾ ಭೀಷ್ಮ ೧೨
ಜೋಯಿಸನ ಕರೆದಖಿಳ ದಿವಸದೊ
ಳಾಯಿದರು ಶುಭ ದಿನವನವಗೆ ಪ
ಸಾಯದುಡುಗೊರೆ ಸಹಿತ ಮನ್ನಿಸಿ ಮನೆಗೆ ಕಳುಹಿದರು
ರಾಯನಾಜ್ಞೆಯೊಳಿಭಪುರದ ಹೊರ
ಗಾಯತದ ಭೂಮಿಯಲಿ ವಾಸ್ತು ವಿ
ಧೇಯವೆನಲಳವಡಿಸಿದರು ಹನ್ನೆರಡು ಯೋಜನವ ೧೩
ತರವಿಡಿದು ರಚಿಸಿದರು ನೆರೆಯು
ಪ್ಪರಿಗೆಗಳ ಹಂತಿಗಳನಂತಃ
ಪುರವ ತತ್ಪಾರ್ಶ್ವದಲಿ ಭಾರಿಯ ಭದ್ರಭವನಿಕೆಯ
ಪುರಜನದ ಪರಿಜನದ ನೆಲೆಯು
ಪ್ಪರಿಗೆಗಳ ರಚಿಸಿದರು ಹಸ್ತಿನ
ಪುರದ ಸಿರಿ ಸಾಮಾನ್ಯವೇ ನರನಾಥ ಕೇಳೆಂದ ೧೪
ನೆರೆದುದಗಣಿತ ಕರಿ ತುರಂಗಮ
ವರವರೂಥ ಪದಾತಿ ಭೂಮೀ
ಶ್ವರರು ಬಂದರು ನೋಡಲೆಂದು ದಿಗಂತ ಸಂತತಿಯ
ವರ ಮುಹೂರ್ತದ ದಿವಸದಲಿ ಸಾ
ಗರದ ತೆರೆ ಬಿಟ್ಟಂತೆ ಕಳನೊಳು
ನೆರೆದು ನಿಂದುದು ಜನ ನಿಕರವೇನೆಂಬೆನದ್ಭುತವ ೧೫
ಸಮದಣಿಸಿ ನೃಪರಾಣಿ ವಾಸದ
ಗೊಂದಣದ ದಂಡಿಗೆಗಳಿಳಿದವು
ಮುಂದೆ ಹೊಯ್ಕಂಬಿಗಳ ಜೋಡಿಯ ಜನ ಪಲಾಯನದ
ಬಂದರಾ ಗಾಂಧಾರಿ ಕುಂತಿಯ
ರಿಂದುಮುಖಿಯರ ಮೇಳದಲಿ ನಡೆ
ತಂದುದಗಣಿತ ಪುರವಧೂ ನಿಕುರುಂಬವೊಗ್ಗಿನಲಿ ೧೬
ವಿದುರ ಧೃತರಾಷ್ಟ್ರರು ಸಹಿತ ಸುರ
ನದಿಯ ಮಗನೈತಂದು ನವ ಭ
ದ್ರದಲಿ ಕುಳ್ಳಿರ್ದನು ಪಸಾಯಿತ ಸಚಿವ ಜನ ಸಹಿತ
ಒದರುವಗ್ಗದ ವಂದಿಗಳ ಬಿಡೆ
ಸದೆವ ಬಹು ವಿಧ ವಾದ್ಯರವ ಮಿ ೧೭
ಕ್ಕೊದೆದು ಹೊಯ್ದುದು ಲೋಕ ಮೂರರ ಕರ್ಣ ಕೋಟರವ
ಪರಿಪರಿಯ ಶೃಂಗಾರದಲಿ ನೂ
ರ್ವರು ಸಹಿತ ದುರ್ಯೋಧನನು ನಾ
ಲ್ವರು ಸಹಿತ ಯಮನಂದದನು ತಮ್ಮೆರಡು ಪಾರ್ಶ್ವದಲಿ
ಗುರುತನುಜ ಕೃಪ ಕರ್ಣ ಸುಬಲಾ
ದ್ಯರು ಪುರೋಭಾಗದಲಿ ಭೂಮೀ
ಶ್ವರರಸಂಖ್ಯರು ಹಿಂದೆ ಬರಲೈತಂದನಾ ದ್ರೋಣ ೧೮
ಹೊಯ್ದು ಕೋಣನ ಕುರಿಯ ಹಿಂಡಿನ
ತೊಯ್ದ ರಕ್ತೋದನದ ರಾಶಿಯ
ನೈದೆ ದೆಸೆದೆಸೆಗಳಲಿ ಬಲಿದರು ಭೂತ ತುಷ್ಟಿಗಳ
ಕೈದುಗಳ ತನಿವೆಳಗು ನೈದಿಲ
ಮೈದುನನ ಮಾರಂಕವೆನೆ ಬಂ
ದೈದೆ ರಂಗಸ್ಥಳವ ಹೊಕ್ಕುದು ರಾಜಸುತನಿಕರ ೧೯
ಬಾಗಿಲಲಿ ಕಟ್ಟಿಗೆಯ ಕೈಗಳ
ಲಾ ಗುರೂದ್ಭವ ಕೃಪರು ನಿಂದರು
ಸೀಗುರಿಯ ಸುಳಿವಿನ ತರಂಗದ ಸಾಲ ಸತ್ತಿಗೆಯ
ಸಾಗರದ ಗಳ ಗರ್ಜನೋದ್ಭಟೆ
ಹೋಗಲಿದಕದು ಪಾಡೆಯೆನೆ ಚಾ
ಪಾಗಮಾಚಾರ್ಯನ ಘಡಾವಣೆ ಘಲ್ಲಿಸಿತು ಜಗವ ೨೦
ಆ ಮಹಾ ಕಳನೆಂಟು ದಿಕ್ಕಿನ
ಹೋಮ ತೀರಲು ಘಳಿಗೆವಟ್ಟಲ
ಸೌಮುಹೂರ್ತಿಕರಾಯತ ಧ್ವನಿ ಸಾರ ಸಮಯದಲಿ
ಸೋಮ ವಂಶೋದ್ಭವ ನೃಪಾಲ ಲ
ಲಾಮನಗ್ಗದ ಧರ್ಮಸುತನು
ದ್ದಾಮ ಗುರುವಿಂಗೆರಗಿ ನಿಂದನು ನುಡಿಸಿದನು ಧನುವ ೨೧
ಅರಸ ಕೇಳು ಯುಧಿಷ್ಠಿರನು ಪರಿ
ಪರಿಯಯೆಸುಗೆಯ ಚಾಪ ವಿದ್ಯಾ
ನಿರತಿಶಯಕೋಯೆಂದು ಗರ್ಜಿಸಿತಾ ಸಭಾಜಲಧಿ
ಸುರಗಿ ಹಿರಿಯುಬ್ಬಣವಡಾಯುಧ
ಹರಿಗೆ ಚಕ್ರ ಮುಸುಂಡಿ ಮುದ್ಗರ
ಪರಶು ಮೊದಲಾದಖಿಳ ಶಸ್ತ್ರ ಶ್ರಮವ ತೋರಿಸಿದ ೨೨
ಕರಿ ತುರಗದೇರಾಟ ಮೊದಲಾ
ಗಿರೆ ಸಮಸ್ತ ನೃಪಾಲ ವಿದ್ಯಾ
ಪರಿಣತಿಗೆ ಹಿಗ್ಗಿದರು ಭೀಷ್ಮಾದಿಗಳು ಹರುಷದಲಿ
ಪರಿವಿಡಿಗಳಲಿ ನಕುಲ ಸಹದೇ
ವರು ವಿವಿಂಶತಿ ಚಿತ್ರಬಲ ದು ೨೩
ರ್ಮರುಷಣರು ತೋರಿದರು ಶ್ರಮವನು ನೂರ್ವರೊಗ್ಗಿನಲಿ
ಈತ ಧರ್ಮಜನಿವರು ಮಾದ್ರೀ
ಜಾತರೀತ ಸುಲೋಚನನು ಬಳಿ
ಕೀತ ದೀರ್ಘಕವಿಂದನಿವನಿಂತೀತನಿವನೆಂದು
ಈತ ಧನುವಿನಲೀತ ಖಡ್ಗದ
ಲೀತ ಪರಿಘದಲೀತ ಕುಂತದ
ಲೀತ ಬಲುಹೆಂದಂಧ ಭೂಪತಿಗರುಹಿದನು ವಿದುರ ೨೪
ಬಳಿಕ ನಾನಾ ದೇಶದರಸುಗ
ಳಿಳಿದು ತಮಗಳವಟ್ಟ ಶಸ್ತ್ರಾ
ವಳಿಗಳಲಿ ತೋರಿದರು ಮೆಚ್ಚಿಸಿ ತನ್ಮಹಾಸಭೆಯ
ನೆಲನನಬ್ಬರಿಸುವ ಸಭಾ ಕಳ
ಕಳದ ಮೊರೆಯನು ತಿವಿವ ಪರಿ ವೆ
ಗ್ಗಳದ ಪಾಯವಧಾರು ಮಸಗಿದುದೊಂದು ಥಟ್ಟಿನಲಿ ೨೫
ಹಗಲು ಕೈದೀವಿಗೆಯ ಬಿರುದಿನ
ವಿಗಡನಿವನಾರೆನಲು ಭೂಪಾ
ಳಿಗಳ ರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಿಲು
ಝಗಝಗಿಪ ತನುರುಚಿಯ ಮಿಂಚನು
ಮಿಗುವ ಖಡ್ಗಚ್ಛವಿಯ ತಲೆಯೊ
ತ್ತುಗಳ ಚಾವಡಿಯೊಳಗೆ ಕೌರವ ರಾಯನೈತಂದ ೨೬
ಹೋ ನಿರಂತರ ಗಜಬಜವು ತಾ
ನೇನು ಜೀಯವಧಾರು ಚಿತ್ರವ
ಧಾನವೆಂದುದು ಸಾಲ ಕಂಚುಕಿ ನಿಕರ ಕೈ ನೆಗಹಿ
ಭಾನುವಿನ ಭಾರಣೆಯವೋಲು
ತ್ಥಾನಮುಖ ಚತುರಾಕ್ಷ ಭೂಪನ
ಸೂನು ಹೊಕ್ಕನು ರಂಗವನು ಭೀಷ್ಮಾದಿಗಳಿಗೆರಗಿ ೨೭
ಬವರಿಯಲಿ ಪಯಪಾಡಿನಲಿ ಮೈ
ಲವಣಿಯಲಿ ಬಿನ್ನಾಣದಲಿ ಭಾ
ರವಣೆಯಲಿ ದೆಖ್ಖಾಳದಲಿ ವೇಗಾಯ್ಲ ರೇಖೆಯಲಿ
ತಿವಿವ ಮೊನೆಯೊಂದರಲಿ ನೂರಂ
ಗವನು ತೋರ್ಪ ವಿಭೇದದಲಿ ಕೌ
ರವ ಮಹೀಪತಿ ತೋರಿದನು ಶ್ರಮವನು ಕಠಾರಿಯಲಿ ೨೮
ಸುರಗಿಯಲಿ ಚಕ್ರದಲಿ ಹಲದಲಿ
ಹರಿಗೆಯಲಿ ಕಕ್ಕಡೆಯಲಸಿಯಲಿ
ಪರಿಘದಲಿ ಸಬಳದಲಿ ಗದೆಯಲಿ ಬಿಂಡಿವಾಳದಲಿ
ಪರಿಪರಿಯ ಚಿತ್ರದ ಚಮತ್ಕೃತಿ
ಕರವ ತೋರಿಸಿದನು ಶರಾಸನ
ಶರ ವಿಸರ ಸಂಧಾನದೊಳಗಹುದೆನಿಸಿದನು ಸಭೆಯ ೨೯
ಧೀರರೇ ಜಗಜಟ್ಟಿ ರಾಜ ಕು
ಮಾರ ಚೌಪಟ ಮಲ್ಲ ಕುರುಕುಲ
ಕೈರವಾಮೃತಕಿರಣ ಧಿರು ಧಿರು ಭಲರೆ ಭಲರೆನುತ
ಭೂರಿ ಸಭೆಯಲಿ ಸುಲಿದು ಬಿಸುಡುವ
ಸೀರೆಗಳ ತೂಪಿರಿದು ಸುಳಿವು
ಪ್ಪಾರತಿಯ ತನಿಹರಕೆ ತಳಿತುದು ತಾಯ ನೇಮದಲಿ ೩೦
ಏರಿ ತೋರಿದನಶ್ವ ಗಜ ರಥ
ವಾರನೇಳನು ಸಭೆಯೊಳೊಂದನು
ನೂರು ಪರಿಯಲಿ ತೋರಿದನು ಶಸ್ತ್ರಾಸ್ತ್ರ ಕೌಶಲವ
ಮೀರಿ ಹೆಚ್ಚಿದ ಹರುಷದಿಂದು
ಬ್ಬೇರಿದನು ಧೃತರಾಷ್ಟ್ರನುಬ್ಬಿದ
ಳಾರು ಮಡಿಯಲಿ ಜನನಿ ದುರ್ಯೋಧನನ ಪರಿಣತಿಗೆ ೩೧
ಮಸಗಿದಾನೆಯ ಕುಂಭದಲಿ ಝಾ
ಡಿಸುವ ಕೇಸರಿಯಂತೆ ಜಂಭನ
ಜಸದ ಝಾಡಿಗೆ ಬೆದರದಿದಿರಹ ವಜ್ರಧರನಂತೆ
ಪಸರಿಸಿದ ಪರಿವಾರ ಮಧ್ಯದೊ
ಳಸಮಬಲ ಹೊಳಕಿದನು ಮೇಘದ
ಮುಸುಕನುಗಿದಿನನಂತೆ ಮೈದೋರಿದನು ಕಲಿಭೀಮ ೩೨
ಗುರು ನದೀಸುತ ವಿದುರ ಧೃತರಾ
ಷ್ಟ್ರರಿಗೆ ಕೈಮುಗಿದಾಯುಧದ ಪರಿ
ಪರಿಯ ಚಿತ್ರಶ್ರಮವ ಸಾಂಗೋಪಾಂಗ ಕೌಶಲವ
ಕರಿ ತುರಗದೇರಾಟ ಮೊದಲಾ
ಗಿರೆ ಸುಯೋಧನ ರಚಿತ ವಿದ್ಯಾ
ಪರಿಣತಿಗೆ ವೆಗ್ಗಳವಿದೆನೆ ತೋರಿದನು ಕಲಿಭೀಮ ೩೩
ಕೋಲಗುರು ಚಿತ್ತೈಸು ಕುರು ಭೂ
ಪಾಲ ಸಮ್ಮುಖನಾಗು ಹಿಡಿ ಮಾ
ರ‍್ಕೋಲನೆನ್ನೊಡನೆನುತ ತಿವಿದನು ಭೀಮ ಕುರುಪತಿಯ
ಮೇಳವಿಸಿತೆರಡಂಕ ಬಂದಿಗೆ
ಕೋಲ ಹೊಯ್ದಾಟದಲಿ ಬಳಿಕಾ
ಕೀಲುಗದೆಗಳ ಹಿಡಿದು ತರುಬಿದರಧಿಕ ರೋಷದಲಿ ೩೪
ಹೊಯ್ದರೊಡ್ಡಿದ ರಣದ ಮೊನೆಯಲಿ
ಹಾಯ್ದ ರೊಳ ಸುಳಿಯಿಂದ ಕಳೆದರು
ಕಾಯ್ದು ಹೆಣಗಿದರುಪ್ಪರಕೆ ಜಾರಿದರು ಪಡಿತಳಕೆ
ಮೈದೆಗೆದರಡ ಹೊಯ್ಲಿನಲಿ ಬಲು
ಗೈದುದಾರರು ಮನದ ಖತಿಗಿದಿ
ರೈದುದೆನೆ ಹೊಯ್ದಾಡಿದರು ಕಲಿಭೀಮ ಕೌರವರು ೩೫
ಎಲೆಲೆ ಹಿಡಿ ಹಿಡಿ ಭೀಮನನು ತೆಗೆ
ಕೆಲಕೆ ದುರ್ಯೋದನನಿದು ಮಂ
ಗಳದ ಬೆಳೆಗಿಂಗಳಿನ ಮಳೆ ಸುರಿದುದೆ ಮಹಾದೇವ
ಕಳವಳಿಸೆ ಭೀಷ್ಮಾದಿಗಳು ನೃಪ
ತಿಲಕರಿಬ್ಬರ ನಡುವೆ ಹಾಯ್ದರು
ಕುಲಗಿರಿಗಳಂದದಲಿ ಕೃಪ ಗುರುಸುತರು ವಹಿಲದಲಿ ೩೬
ತೆಗೆದರೀತನನಿತ್ತಲಾತನ
ನುಗಿದರತ್ತಲು ಜನದ ಗಳದಿಂ
ದೊಗೆದ ಗಾಢದ ಗಜಬಜವ ಧಟ್ಟಿಸಿದರಲ್ಲಲ್ಲಿ
ಬೆಗಡು ಮೊಳೆತುದು ಭೀಷ್ಮ ವಿದುರಾ
ದಿಗಳ ಮನದಲಿ ಮೇಲೆ ಹಬ್ಬುವ
ಹಗೆಗಿದುಪಲಕ್ಷಣವಲಾಯೆಂದುದು ಬುಧವ್ರಾತ ೩೭
ಅಳಿಮಸಗಿದಂಬುಜದವೋಲ್ ಜನ
ಜಲಧಿಜಾತ ಕ್ಷೋಭೆಯಲಿ ವೆ
ಗ್ಗಳಿಸಿತಗ್ಗದ ಸಾಧು ವಾದವಿವಾದ ರಭಸದಲಿ
ಮೊಳಗಿದವು ಕಲ್ಪಾಂತಮೇಘಾ
ವಳಿಯ ಗುರುವೆನೆ ವಾದ್ಯತತಿ ಕಳ
ಕಳದೊಳರ್ಜುನ ದೇವನೆದ್ದನು ಮುನಿಯ ಸನ್ನೆಯಲಿ ೩೮
ಈತನಾರರ್ಜುನನೆ ಹೋ ಹೋ
ಮಾತು ಮಾಣಲಿ ಮಾಣಲೆಂಬೀ
ಮಾತು ಹಿಂಚಿತು ಮುನ್ನ ಮೌನದೊಳಿರ್ದುದಾಸ್ಥಾನ
ಭೀತ ಕಳಕಜಳರಂಗದಲಿ ಪುರು
ಹೂತಸುತ ಮೈದೋರಿದನು ಜನ
ವೀತನನು ಕೊಂಡಾಡುತಿರ್ದುದು ರಾಯ ಕೇಳೆಂದ ೩೯
ದ್ರೋಣ ಕೃಪ ಮೊದಲಾದ ಮಾನ್ಯ
ಶ್ರೇಣಿಗೆರಗಿದನಮರ ನಿಕರಕೆ
ಗೋಣನೆತ್ತಿದನಿಟ್ಟು ಕರಪುಟವನು ಲಲಾಟದಲಿ
ಪ್ರಾಣ ಮಣವಿದು ನಿಖಿಳ ವಿದ್ಯದ
ಜಾಣತನವಿದು ವಿನಯವೆಂದಿದು
ಕೇಣವಿಲ್ಲದೆ ನೆರವಿ ನೆರೆ ಹೊಗಳಿತು ಧನಂಜಯನ ೪೦
ನಿಲುವಿನಲಿ ಸ್ವಸ್ಥಾನದಲಿ ಕೈ
ಚಳಕದಲಿ ಭಂಗಿಯಲಿ ಭರದಲಿ
ಲುಳಿಯಲೊಯ್ಯಾರದಲಿ ಮೋಡಾಮೋಡಿಯಂದದಲಿ
ಅಳವಿಯಲಿ ಪರಿವಿಡಿಯಲೂಹಾ
ಬಲದಲವಧಾನದಲಿ ಶಸ್ತ್ರಾ ೪೧
ವಳಿಯ ಸಾಂಗೋಪಾಂಗ ಶ್ರಮವನು ತೋರಿದನು ಪಾರ್ಥ
ತುರಗಚಯ ರೇವಂತ ಮದ ಕುಂ
ಜರ ಮಹಾದಿವಿಜೇಂದ್ರ ಪಥ ಸಂ
ಚರಣ ವರಮಾರ್ತಾಂಡಯೆಂದಬ್ಬರಿಸೆ ಜನ ನಿಕರ
ತುರಗ ಗಜ ರಥ ವಿವಿಧ ಶಿಕ್ಷಾ
ಪರಿಣತಿಯ ತೋರಿದನು ಗುರು ಕೃಪ
ಸುರನದೀಜರು ಮುಳುಗಿದರು ಪುಳಕಾಂಬು ಪೂರದಲಿ ೪೨
ಮತ್ತೆ ಕೊಂಡನು ಧನುವ ನೆರವಿಯ
ನತ್ತ ಹೊಯ್ ಹೊಯ್ ಹೋಗ ಹೇಳ್ ದುರ್
ವೃತ್ತರೆದೆ ಜರ್ಝರಿತವಾಗಲು ತೋರ ಬೇಕೆನುತ
ಬತ್ತಳಿಕೆಯಿಂದುಗಿದು ಹೂಡಿ ವಿ
ಯತ್ತಳಕೆ ಹಾಯ್ಸಿದನು ಕರ್ಬೊಗೆ
ಸುತ್ತಿ ದಳ್ಳುರಿ ಸುರಿದುದಾಗ್ನೇಯಾಸ್ತ್ರ ಧಾರೆಯಲಿ ೪೩
ತೆಗೆಸಿದನು ಶಿಖಿಶರವ ಧನುವಿಂ
ದುಗಿಸಿದನು ವಾರುಣವನಭ್ರವ
ಮೊಗೆದುದದ್ಭುತ ವಾರಿಯುಪಸಂಹರಿಸಿದನು ಮರಳಿ
ಹಗಲನೊಂದೇ ತುತ್ತು ಮಾಡಿದ
ವಿಗಡ ತಿಮಿರಾಸ್ತ್ರದಲಿ ತಿಮಿರವ
ತೆಗೆಸಿದನು ಸೂರ್ಯಾಸ್ತ್ರದಲಿ ಬೆರಗಾಗೆ ಸುರನಿಕರ ೪೪
ಗಿರಿಶರದಲದ್ರಿಗಳ ಮೇಘದ
ಶರದಿನಭ್ರವನುರಗ ಬಾಣದಿ
ನುರು ಭುಜಂಗವನನಿಲ ಶರದಲಿ ತೀವ್ರ ಮಾರುತನ
ಪರುಠವವ ತೋರಿದನು ಜನವು
ಬ್ಬರಿಸಲಡಿಗಡಿಗಂಧ ಭೂಪನ
ಕೊರಳು ಕುಸಿದುದು ನುಡಿಯ ನಾಟಕ ಹರ್ಷಭಾರದಲಿ ೪೫
ಇವರ ಮುಖವರಳಿದವು ಗಂಗಾ
ಭವ ಕೃಪ ದ್ರೋಣಾದಿಗಳ ಬಳಿ
ಕವರ ತಲೆವಾಗಿದವು ಧೃತರಾಷ್ಟ್ರಾದಿ ಕೌರವರ
ಇವರ ಜನನಿಯ ಮುಖದ ಸುಮ್ಮಾ
ನವನು ದುರ್ಯೋದನನ ಜನನಿಯ
ಜವಳಿ ದುಮ್ಮಾನವನು ಬಣ್ಣಿಸಲರಿಯೆ ನಾನೆಂದ ೪೬
ಬಾಯ ಹೊಯ್ ಫಲುಗುಣನ ಹೊಗಳುವ
ನಾಯಿಗಳನೇನಾಯ್ತು ಕೌತುಕ
ವಾಯಕಿವದಿರ ಪಕ್ಷಪಾತವ ನೋಡು ನೋಡೆನುತ
ಸಾಯಕವ ತಿರುಹುತ್ತ ಲಾ ಕ
ರ್ಣಾಯತಾಂಬಕನೆಡಬಲದ ಕುರು
ರಾಯನನುಜರ ಮೇಳದಲಿ ಹೊರವಂಟನಾ ಕರ್ಣ ೪೭
ಗುರುಗಳಿಗೆ ಕೈಮುಗಿದು ಶಿರದಲಿ
ತರಣಿ ಮಂಡಲಕೆರಗಿ ನೋಡುವ
ನೆರವಿಗಿವನಾರೀತನಾರೆಂಬದ್ಭುತವ ಬೀರಿ
ಅರಸ ಕೇಳೈ ವಿವಿಧ ಶಸ್ತ್ರೋ
ತ್ಕರದ ಶ್ರಮವನು ತೋರಿದನು ಕರಿ
ತುರಗ ರಥವಾಹನದ ಶಿಕ್ಷಾ ವಿದ್ಯಗಳು ಸಹಿತ ೪೮
ಆವ ವಿಧದಲಿ ಪಾರ್ಥತೋರಿದ
ನಾವ ದಿವ್ಯಾಸ್ತ್ರಪ್ರಪಂಚವ
ಪಾವಕಾನಿಲ ವಾರುಣಾದಿಯನೈದೆ ವಿರಚಿಸಿದ
ಆ ವಿಧಾನದಲಾ ವಿಹಾರದ
ಲಾ ವಿಬಂಧದಲರ್ಜುನನ ಬಾ
ಣಾವಳಿಯ ಬಿನ್ನಾಣವನು ತೋರಿದನು ಕಲಿಕರ್ಣ ೪೯
ಸೆಣಸುವಡೆ ಬಾಯೆಂದು ಪಾರ್ಥನ
ಕೆಣಕಿದನು ಘನರೋಷ ಶಿಖಿಯಲಿ
ಕುಣಿದವಿಬ್ಬರ ಮೀಸೆ ಕಂಗಳೊಳೊಗುವ ಕೆಂಪಿನಲಿ
ಕಣೆ ಕಣೆಗಳಾಟದಲಿ ಶರ ಖಂ
ಡಣೆಯ ಕೋಲಾಟದಲಿ ಖಣಿ ಖಣಿ
ಖಣಿಲು ಖಣಿ ಖಣಿ ಮಸಗಲೆಚ್ಚಾಡಿದರು ಚಳಕದಲಿ ೫೦
ರಾಯ ಸಭೆ ಕಳವಳಿಸೆ ಹೋ ಹೋ
ಹೋಯಿದೇನೇನೆನುತ ಹಿಡಿದರು
ವಾಯುಸುತ ಕೃಪ ಗುರುಜ ದ್ರೋಣಾದ್ಯರು ಧನಂಜಯನ
ಆಯಿತೆಲವೋ ಕರ್ಣ ನೀನನು
ನಾಯುಕನೊ ನೃಪಹಾರದಲಿ ಮೇಣ್
ನಾಯಕನೊ ನೀನಾವನೆಂದನು ಕೃಪನು ಖಾತಿಯಲಿ ೫೧
ಈತನಾವನು ಕರ್ಣನೆಂಬವ
ನೀತನರ್ಜುನನೊಡನೆ ತಾ ಮಾ
ರಾತು ಕೈಮಾಡಿದನು ಕೈಕೊಳ್ಳನು ಧನಂಜಯನ
ಈತ ತಪ್ಪಲ್ಲೆನುತ ಮಿಗೆ ಮೈ
ಯಾತನಾ ಧೃತರಾಷ್ಟ್ರ ನೀತನ
ಮಾತೆ ಕಂಡಳು ಕುಂತಿ ನೆನೆದಳು ಪೂರ್ವ ಸಂಗತಿಯ ೫೨
ಎನ್ನ ಮಗನೆನೆ ಬಂದುದಿಲ್ಲದು
ತನ್ನ ವಶವೇ ವಿಷ್ಣು ಮಾಯೆಯ
ಬಿನ್ನಣವಲೇ ಮಾತು ಬಿಗಿದುದು ಮನವನೊಳಗಿಕ್ಕಿ
ತನ್ನ ತಾನೇ ಮರುಗಿ ಮೂರ್ಛಾ
ಪನ್ನೆಯಾದಳು ಕುಂತಿಯಿತ್ತಲು
ಖಿನ್ನನಾದನು ಕೃಪನ ನುಡಿಯಲಿ ದುಗುಡ ಮಿಗೆ ಕರ್ಣ ೫೩
ಈತನರಸಲ್ಲೆಂದು ಕೃಪ ಪಳಿ
ವಾತನೇ ತಪ್ಪೇನು ರಾಜ್ಯದೊ
ಳೀತನರಸೆನಿಸುವೆನು ಕರೆ ನಮ್ಮಯ ಪುರೋಹಿತರ
ಶಾತ ಕುಂಭಾಸನವ ಮಂಗಳ
ಜಾತ ವಸ್ತುವ ತರಿಸು ತರಿಸೆಂ
ದಾ ತತುಕ್ಷಣದಲಿ ಸುಯೋಧನನೆದ್ದ ರಭಸದಲಿ ೫೪
ತರಿಸಿ ಭದ್ರಾಸನದೊಳೀತಂ
ಗರಸು ಪದವಿಯೊಳಂಗದೇಶದ
ಸಿರಿಯನಿತ್ತನು ರಚಿಸಿದನು ಮೂರ್ಧಾಭಿಷೇಚನವ
ದರುಶನವನಿತ್ತಖಿಳ ಭೂಮೀ
ಶ್ವರರು ಕಂಡರು ಪೂರ್ವಶೈಲದ
ತರಣಿಯಂತಿರೆ ಕರ್ಣನೆಸೆದನು ರಾಜತೇಜದಲಿ ೫೫
ಈತನುತ್ಸವ ತನ್ನದೆಂದೇ
ಪ್ರೀತಿಯಲಿ ಬರೆ ಸಿಂಹಪೀಠವ
ನೀತನಿಳಿದೆರಗಿದನು ಪದದಲಿ ಬಳಿಕ ಜನಜನಿತ
ಸೂತಸುತನಿವನೆಂದು ಭುವನ
ಖ್ಯಾತವಾದುದು ಬಳಿಕ ನಸುನಗು
ತೀತನನು ಕುಲವೆತ್ತಿ ಭಂಗಿಸಿ ನುಡಿದನಾ ಭೀಮ ೫೬
ಇವನ ತಂದೆಯದಾರು ಪಾಂಡುವೊ
ಪವನನೋ ಕೃಪ ನಿಮ್ಮ ಜನ್ಮವ
ನೆವಗೆ ಹೇಳಿರೆ ಹಿರಿಯ ಗುರುಗಳ ತಾಯದಾವವಳೊ
ಅವಘಡಿಸದಿರಿ ಹಿರಿಯತನಕಂ
ಜುವೆನು ನಿಮಗೆನುತಡಿಗಡಿಗೆ ಕೌ
ರವ ಮಹೀಪತಿ ಜರಿದು ನುಡಿದನು ಗುರು ಕೃಪಾದಿಗಳ ೫೭
ಒಳಗೆ ಗಜಬಜವಾಯ್ತು ಕೈದುವ
ಸೆಳೆದುದಲ್ಲಿಯದಲ್ಲಿ ಗುರು ಕೃಪ
ರುಲುಹ ಕೇಳುವರಿಲ್ಲ ಕೈದೊಳಸಾಯ್ತು ಕಳನೊಳಗೆ
ಇಳಿದು ಭೀಷ್ಮಾದಿಗಳು ತಮ್ಮಯ
ನಿಳಯಕೈದಿದರೆರಡು ಬಲ ತ
ಮ್ಮೊಳಗೆ ತಾವೇ ಹಣಿದು ಹರಿದುದು ರಾಯ ಕೇಳೆಂದ ೫೮
ಕೆಲರು ಭೀಮನನರ್ಜುನನ ಕೆಲ
ಕೆಲರು ಕರ್ಣನ ಕೌರವೇಂದ್ರನ
ಕೆಲರು ಹೊಗಳುತ ಬಂದು ಹೊಕ್ಕರು ಹಸ್ತಿನಾಪುರವ
ಬಳಿಕಲಾ ಮರುದಿವಸದಲಿ ಮ
ಕ್ಕಳುಗಳೆಲ್ಲರ ಕರೆಸಿ ಗರುಡಿಯ
ನಿಳಯದಲಿ ಕುಳ್ಳಿರ್ದು ಗುರು ನುಡಿದನು ಕುಮಾರರಿಗೆ ೫೯
ಏನಿರೈ ಕುರುವಂಶನಳಿನೀ
ಭಾನುಗಳಿರ ವಿದಗ್ಧ ಜನ ಸುರ
ಧೇನುಗಳಿರಾವಿಂದು ನಿಮ್ಮಲಿ ದಕ್ಷಿಣಾರ್ಥಿಗಳು
ಏನನೀವಿರಿ ನಮಗೆ ಕೊಡೆ ಸಂ
ಪೂರ್ಣರೈ ಕೊಡಲಾಪ ಸತ್ವನಿ
ಧಾನವುಂಟೇ ಹೇಳಿಯೆಂದನು ದ್ರೋಣನನಿಬರಿಗೆ ೬೦
ಆವುದನು ಬಯಸುವಿರಿ ನಿಮ್ಮಡಿ
ಯಾವ ಕಾರ್ಯವ ಬೆಸಸಿದುದ ತಂ
ದೀವೆವಿದಕೆ ವಿಚಾರವೇನೆಂದರು ಕುಮಾರಕರು
ತೀವಿದಗ್ಗದ ಹರುಷರಸದಲಿ
ಭಾವ ನೆನೆದುದು ಮುನಿಗೆ ವರ ಶಿ
ಷ್ಯಾವಳಿಗೆ ನುಡಿದನು ನಿಜಾಭಿಪ್ರಾಯ ಸಂಗತಿಯ ೬೧
ಕೇಳಿ ಬಲ್ಲಿರೆ ಗಂಗೆಯುತ್ತರ
ಕೂಲದಲಿ ಪಾಂಚಾಲದೇಶ ನೃ
ಪಾಲನಲ್ಲಿಗೆ ದ್ರುಪದನೆಂಬವನತುಳ ಭುಜಬಲನು
ಆಳುತನದಂಗದಲಿ ಪರರಿಗೆ
ಸೋಲನವನೊಟ್ಟೈಸಿ ದ್ರುಪದ ನೃ
ಪಾಲಕನ ಪಿಡಿದೊಪ್ಪಿ ಸಿದರೆಮಗಹುದು ಪರಿತೋಷ ೬೨
ಐಸಲೇ ಗುರುದಕ್ಷಿಣಾರ್ಥವಿ
ದೇಸು ಘನ ತಂದೀವೆವೆಂದುಪ
ಹಾಸದಲಿ ಕೈವೊಯ್ದು ತಮ್ಮೊಳು ನಗುತ ಕೌರವರು
ಆ ಸುಯೋಧನ ಕರ್ಣಸಹಿತ ಮ
ಹೀಶ ತನುಜರು ಬೀಳುಕೊಂಡರು
ವಾಸಿ ಬಿದ್ದುದು ಪಾಂಡುಸುತ ಕೌರವ ಕುಮಾರರಿಗೆ ೬೩
ಧಾಳಿಯಿಟ್ಟುದು ರಾಯದಳ ಪಾಂ
ಚಾಲದೇಶಕೆ ಮುಂದೆ ಹೊಕ್ಕುದು
ಚೂಳಿಕೆಯಲಿ ಸುಯೋಧನಾದಿಗಳೂರನುರವಣಿಸಿ
ಧೂಳಿಗೋಟೆಯ ಕೊಂಡಿವರು ರಾ
ಜಾಲಯಕೆ ಬರೆ ದ್ರುಪದನನುಜರು
ಸೋಲಿಸಿದರೈ ಕೌರವೇಂದ್ರನ ಬಲವ ಬರಿಕೈದು ೬೪
ಪುರದ ಹೊರ ಬಾಹೆಯಲಿ ತಾವೈ
ವರು ಮಹಾ ಸನ್ನಾಹ ಚಾಪ
ಸ್ಫುರಿತ ತೂಣೀಬದ್ಧ ಕಂಪಿತ ಖಡ್ಗ ಪಾಣಿಗಳು
ಗುರು ಸಹಿತಲಿವರಿದ್ದರಿತ್ತಲು
ಪುರಜನಂಗಳ ಮುಸಲ ಹತಿಯಲಿ
ಮುರಿದು ಬಂದುದು ಕೌರವೇಂದ್ರನ ದಳ ವಿಘಾತಿಯಲಿ ೬೫
ಆತುಕೊಂಡರು ಪಾಂಡು ಸುತರಭಿ
ಜಾತ ಸಮರವನಿವರ ಕೈಯಲಿ
ಮಾತು ಹಲವಿಲ್ಲೆನುತ ಹೊಕ್ಕರು ಕೊಂದು ಪರಬಲವ
ಘಾತಿಗಾನುವರಿಲ್ಲ ದೊರೆಯೆನು
ತಾತನನು ಮುತ್ತಿದರು ಗುರುಗಳಿ
ಗೀತನೇ ದಕ್ಷಿಣೆಯೆನುತ ಹಿಡಿದರು ಮಹೀಪತಿಯ ೬೬
ಕೊಂಡು ಬಂದರು ದ್ರೋಣನಿದಿರಲಿ
ದಿಂಡುಗೆಡಹಿದರೀತನನು ಕೈ
ಕೊಂಡನೆಲವೋ ದ್ರುಪದ ಸಖ ಪೂರ್ವವನು ನೆನೆಯೆನುತ
ಭಂಡನಿವನನು ಸಾಕು ಬಿಡಿ ಸಲೆ
ಚಂಡಿಯಾದನು ದರ್ಪವಿಷ ಮುಂ
ಕೊಂಡು ಮೂರ್ಛಿತನೇನ ಮಾಡುವೆನೆಂದನಾ ದ್ರೋಣ ೬೭
ಎಲವೊ ಕೊಟ್ಟೆನು ಜೀವದಾನವ
ನಳಲು ನಿನಗೇಕಿನಿತು ಸಾಹಸ
ದಳವಿಯಲಿ ನೀ ನೆರಹು ಹಗೆಯನು ಭಂಡ ಹೋಗೆಂದು
ಕಳೆದು ಕೊಟ್ಟೆನು ನಿನ್ನ ರಾಜ್ಯದ
ನೆಲದೊಳರ್ಧವನಿತ್ತು ನೀ ನಡೆ
ಬಳಿಕಲೆಂದೊಡಬಡಿಸಿ ದ್ರುಪದನ ಬಿಟ್ಟನಾ ದ್ರೋಣ ೬೮
ಅರಸ ಕೇಳೈ ದ್ರುಪದನೀ ಪರಿ
ಪರಿಭವಕೆ ಗುರಿಯಾಗಿ ತನ್ನಯ
ಪುರವ ಹೊಗದೈತಂದು ಗಂಗಾತೀರದೇಶದಲಿ
ಧರಣಿಸುರರಲಿ ಪುತ್ರಕಾಮ್ಯಾ
ಧ್ವರವ ವಿರಚಿಸಲಾಗ ಸತ್ವೋ
ತ್ಕರುಷವಂತರನರಸಿದನು ನಾನಾಗ್ರಹಾರದಲಿ ೬೯
ದ್ರೋಣಭಯದಲಿ ಸಕಲ ವಿಪ್ರ
ಶ್ರೇಣಿಯಿರೆ ಯಾಜೋಪಯಾಜರು
ಪ್ರಾಣ ನಿಸ್ಪೃಹರಾಗಿ ಮಾಡಿಸಿದರು ಮಹಾಕ್ರತುವ
ಕೇಣವಳಿದಾಹುತಿಯನಮರರ
ಬಾಣಸಿಗಗುಣಬಡಿಸೆ ದೇವ
ಶ್ರೇಣಿದಣಿದುದು ಸಲಿಸಿದರು ಪಾಂಚಾಲನಭಿಮತವ ೭೦
ಅರಸ ಕೇಳೈ ಕುಂಡ ಮಧ್ಯದೊ
ಳುರಿಯ ಕರುವಿಟ್ಟೆ ರಕಿದರೊ ಭಾ
ಸುರ ಮಹಾನಲನಪರ ರೂಪೋ ತಾನಿದೇನೆನಲು
ಶರವಡಾಯುಧ ಚಾಪ ವರ್ಮೋ
ತ್ಕರ ಸಹಿತ ರೌದ್ರಾಂಗನಾಗವ
ತರಿಸಿದನು ಪಾಂಚಾಲ ಭೂಪತಿ ಭುಜವ ಸೂಳೈಸೆ ೭೧
ವೇದಿ ಮಧ್ಯವನೊಡೆದು ಮೂಡಿದ
ಳಾದರಿಸೆ ಜನವಮಮ ಕಾಮನ
ಕೈದುವೋ ತ್ರೈಲೋಕ್ಯ ಮೋಹನ ಮಂತ್ರ ದೇವತೆಯೊ
ಕಾದುವರೆ ಕರೆ ಹರಿ ಹರಬ್ರ
ಹ್ಮಾದಿಗಳಿಗೊರೆಯೆಂಬ ಹೂಂಕೃತಿ
ಯಾದುದಾ ಕಾಮಂಗೆ ದ್ರುಪದಾತ್ಮಜೆಯ ಜನನದಲಿ ೭೨
ದ್ರೋಣವಧೆಗೀ ಮಗನು ಪಾರ್ಥಗೆ
ರಾಣಿಯೀ ಮಗಳೆಂದು ದ್ರುಪದ
ಕ್ಷೋಣಿಪತಿ ಸಲಹಿದನು ಸುತರನು ಸಾನುರಾಗದಲಿ
ದ್ರೋಣನೀತನ ಕರೆಸಿ ಶಸ್ತ್ರದ
ಜಾಣಿಕೆಯ ಕಲಿಸಿದನು ವಿಗಡರ
ಕಾಣೆನೀ ಕಲಶಜನ ಪರಿಯಲಿ ರಾಯ ಕೇಳೆಂದ ೭೩
ಮಗನು ಧೃಷ್ಟದ್ಯುಮ್ನ ದ್ರೌಪದಿ
ಮಗಳು ಭಾರದ್ವಾಜನೆತ್ತಿದ
ಹಗೆಗೆ ಹರುವಾಯ್ತೆನುತ ಹಿಗ್ಗಿ ದ ದ್ರುಪದ ಭೂಪಾಲ
ದುಗುಡದಲಿ ಕುರು ರಾಯ ನೀ ದಾ
ಯಿಗರ ಬಿರಿದಿನ ಬಿಂಕದಂಕೆಯ
ಬಿಗಿದ ಪರಿಯನು ನೆನೆದು ಮರುಗಿದನರಸ ಕೇಳೆಂದ ೭೪
ಸಂಕ್ಷಿಪ್ತ ಭಾವ
Lrphks Kolar
ರಾಜಕುಮಾರರಿಗೆ ವಿದ್ಯಾಭ್ಯಾಸ, ಅದರ ಪ್ರದರ್ಶನ, ಕರ್ಣನಿಗೆ ಅಂಗ ರಾಜ್ಯ, ದ್ರುಪದನ ಅಭಿಮಾನ ಭಂಗ, ಮತ್ತು ಅವನಿಗೆ ಅಗ್ನಿಯ ವರದಿಂದ ಮಕ್ಕಳ ಜನನದ ಪ್ರಸ್ತಾಪ ಇಲ್ಲಿದೆ
ದ್ರೋಣಾಚಾರ್ಯರ ನೇತೃತ್ವದಲ್ಲಿ ಎಲ್ಲ ಕುಮಾರರೂ ವಿದ್ಯೆ ಕಲಿತರು. ರಥ, ಕುದುರೆ, ವಿವಿಧ ಶಸ್ತ್ರಗಳಲ್ಲಿ ತರಬೇತಿ, ಯುದ್ಧದ ಹಲವು ಕೌಶಲಗಳು... ಹೀಗೆ ಪ್ರವೀಣರಾದರು. ಅರ್ಜುನನು ಗುರು ಪರೀಕ್ಷೆಯಲ್ಲಿ ಗೆದ್ದು ದ್ರೋಣರಿಗೆ ಅಚ್ಚಮೆಚ್ಚಿನವನಾದನು. ಏಕಲವ್ಯನ ಬೆರಳನ್ನು ಗುರುದಕ್ಷಿಣೆಯಾಗಿ ಪಡೆದು ಪಾರ್ಥನಿಗೆ ಯಾರೂ ಎದುರು ಸಮನಿಲ್ಲದಂತೆ ಮಾಡಿ ದ್ರೋಣ ಶಿಷ್ಯಪ್ರೀತಿ ಮೆರೆದ.
ರಾಜಕುಮಾರರ ಪ್ರದರ್ಶನವನ್ನು ಏರ್ಪಡಿಸಲಾಯಿತು. ರಾಜ ಪರಿವಾರದವರು, ಪ್ರಜೆಗಳು ಎಲ್ಲರೂ ಸೇರಿದರು. ಒಬ್ಬೊಬ್ಬರಾಗಿ ಬಂದು ತಮ್ಮ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸಿದರು. ಅವರೆಲ್ಲರ ಸಾಮರ್ಥ್ಯವನ್ನು ಕಂಡು ಪ್ರಜೆಗಳು ಸಂತೋಷಪಟ್ಟರು.
ವಿದುರನು ಪ್ರತಿಯೊಬ್ಬರನ್ನೂ ಸಭೆಗೆ ಪರಿಚಯಿಸಿದನು. ಧುರ್ಯೋಧನ ಮತ್ತು ಭೀಮರಿಗೆ ನಡೆದ ಸ್ಪರ್ಧೆ ಸೆಣಸಾಟಕ್ಕೆ ತಿರುಗಿ ಗುರುಜನರು ಅವರನ್ನು ತಡೆಯಬೇಕಾಯ್ತು.
ಅರ್ಜುನನ ಸಮ ಯಾರೂ ಇಲ್ಲವೆಂಬ ಸಮಯದಲ್ಲಿ ಕರ್ಣನು ಬಂದು ಅರ್ಜುನ ಮಾಡಿದ್ದೆಲ್ಲವನ್ನೂ ಎಲ್ಲವನ್ನೂ ತಾನೂ ಬಲ್ಲೆನೆಂದ. ಅಲ್ಲಿ ಕರ್ಣನನ್ನು ಕಂಡಾಗ ಕುಂತಿಗೆ ಅವನು ತನ್ನ ಮಗನೆಂಬುದು ಅರಿವಾಗಿ ಒಳಗೇ ಮರುಗಿದಳು.
ಕರ್ಣನನ್ನು ಕೃಪ ಭೀಮಾದಿಗಳು ನೀನೇನು ರಾಜಪುತ್ರನೇ, ಸೂತಪುತ್ರನೆಂದು ಅವಮಾನಿಸಿದಾಗ ತಕ್ಷಣ ಧುರ್ಯೋಧನನು ಕರ್ಣನನ್ನು ಅಂಗದೇಶದ ಅಧಿಪತಿಯನ್ನಾಗಿ ನೇಮಿಸಿದನು. ಹೀಗೆ ಪ್ರದರ್ಶನವು ಮುಗಿಯಿತು.
ಗುರುದಕ್ಷಿಣೆಯಾಗಿ ದ್ರುಪದನನ್ನು ಸೋಲಿಸಿ ತರಲು ದ್ರೋಣರು ಹೇಳಿದಾಗ ಕೌರವರು ಮೊದಲು ಹೋಗಿ ಆ ಕೆಲಸ ಸಾಧ್ಯವಾಗದೆ ಬಂದರು. ನಂತರ ಪಾಂಡವರು ದ್ರುಪದನನ್ನು ಸೆರೆ ಹಿಡಿದು ತಂದರು. ಆಗ ದ್ರೋಣನು ದ್ರುಪದನನ್ನು ಹೀಯಾಳಿಸಿದರೂ ಮತ್ತೆ ಅವನಿಗೇ ರಾಜ್ಯ ಕೊಟ್ಟು ಕಳಿಸಿದನು. ದ್ರುಪದನಿಗೆ ದ್ರೋಣರ ಬಗ್ಗೆ ಕೋಪ. ಅರ್ಜುನನ ಪರಾಕ್ರಮದ ಬಗ್ಗೆ ಮೆಚ್ಚುಗೆ. ಅವನು ಅಗ್ನಿಯ ಪ್ರಸಾದದಿಂದ ದುಷ್ಟದ್ಯುಮ್ನ ಮತ್ತು ದ್ರೌಪದಿಯನ್ನು ಮಕ್ಕಳಾಗಿ ಪಡೆದನು. ದ್ರೋಣನ ಮರಣ ತನ್ನ ಮಗನಿಂದ ಆಗಬೇಕು ಮತ್ತು ದ್ರೌಪದಿ ಅರ್ಜುನನ ಸತಿಯಾಗಬೇಕು ಎನ್ನುವುದು ದ್ರುಪದನ ಮನದಾಳದ ಆಸೆಯಾಯಿತು.
('ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್‌ಗಳು