ಭಾರತಕಥಾಮಂಜರಿ6
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಆದಿಪರ್ವ - ಆರನೆಯ ಸಂಧಿ
ಭೀಮ ದುರ್ಯೋಧನರ ಸೆಣಸಿನ
ತಾಮಸಿಕೆ ಹೆಚ್ಚಿದುದು ಕದನೋ
ದ್ದಾಮರಸ್ತ್ರಾಭ್ಯಾಸವನು ಮಾಡಿದರು ದ್ರೋಣನಲಿ
--
ಕೇಳು ಜನಮೇಜಯ ಮಹೀಪತಿ
ಬಾಲಕರು ನೂರಾರು ಮೆರೆದರು
ಬಾಲಕೇಳೀವ್ಯಸನಿಗಳು ಹೊರ ವಳಯದಲಿ ಪುರದ
ಆಳಿನೇರಿಕೆ ಹಿಡಿಗವಡೆ ಗುರಿ
ಯಾಳು ಚೆಂಡಿನ ಹೊಣಕೆ ಚಿಣಿಕೋ
ಲಾಳು ಗೊತ್ತಿನ ದಂಡೆಯನೆ ನಾನಾ ವಿನೋದದಲಿ ೧
ಗುಡುಗು ಗುತ್ತಿನಚೆಂಡು ಗುಮ್ಮನ
ಬಡಿವ ಕತ್ತಲೆ ಗುದ್ದುಗಂಬದ
ಗಡಣೆ ಕಣ್ಮುಚ್ಚಸಗವರಿ ಹರಿಹಲಗೆ ನಿಡುಗವಣೆ
ಕೆಡಹು ಕುಟ್ಟಿಗನಾದಿಯಾದವ
ಗಡ ವಿನೋದದಲಾಡಿದರು ಪಂ
ಗಡದಲೈವರು ನೂರ್ವರಿವರಿತ್ತಂಡವೊಂದಾಗಿ ೨
ಅದರೊಳೊಬ್ಬನೆ ಭೀಮನನಿಬರ
ಸದೆವ ತಾ ಸತರೆ ವಿಭಾಡಿಸಿ
ಕೆದರುವನು ಗೆದ್ದೋಡಿದರೆ ಬೆಂಬತ್ತಿ ಹಿಡಿದೆಳೆದು
ಸದೆದು ಬಿಡುವನು ಮುನ್ನ ಭೀಷ್ಮಂ
ಗೊದರಿ ದೂರವನನಿಬರನು ಮೇ
ಳದಲಿ ಮಗುಳೊಂದಾಗಿ ಸಂಗಡವಹರು ಸೂರುಳಿದು ೩
ಕೆಣಕಿ ದುರ್ಯೋಧನನ ನೆತ್ತಿಯ
ನಣೆದು ಹಾಯ್ವನು ನಿಮ್ಮ ನೂರ್ವರ
ಬಣಗುಗಳಿಗೆಡಗಾಲ ತೊಡರಿದೆ ಬನ್ನಿ ನೀವೆನುತ
ಗುಣವ ನುಡಿದೊಂದಾಗಿ ಕೆಳೆಗೊಂ
ಡಣಕಿಸದೆ ಮೆಮರೆಸಿ ಮರೆಯಲಿ ೪
ಹಣಿದು ಬಿಡುವರು ಭೀಮನನು ದುರ್ಯೋಧನಾದಿಗಳು
ಹೇಳುವರು ಯಮಜಂಗೆ ನಿನ್ನವ
ನೂಳಿಗವ ನಿಲಿಸೆಂದು ಪಾರ್ಥಗೆ
ಹೇಳುವರು ಬಳಿಕವರು ಭೀಮನ ಕರೆದು ಗಾರುಡಿಸೆ
ಕೇಳುವನು ಹೈಯೆಂದು ತನ್ನಯ
ಸೋಲದಲಿ ಮೈಯೊಡ್ಡುವನು ಮೇ
ಲಾಳನೇರಿಸಿ ಹರಿದು ಸದೆವನು ಗುತ್ತಿನಲಿ ಕೆಡಹಿ ೫
ಅಳುತ ಧೃತರಾಷ್ಟ್ರಂಗೆ ಭೀಮನು
ಕಳೆದ ಹಲುಗಳನೊಡೆದ ಮೊಳಕಾ
ಲ್ಗಳನು ತೋರಿಸಿ ದೂರುವರು ದುರ್ಯೋಧನಾದಿಗಳು
ಮುಳು ಮೊನೆಗಳಲಿ ಗೀರಿ ನೆತ್ತರ
ಗಳೆದು ಹುಡಿಯಲಿ ಹೊರಳಿ ತಾ ಬಂ
ದಳುತ ಧೃತರಾಷ್ಟ್ರಂಗೆ ಭೀಷ್ಮಗೆ ದೂರುವನು ಭೀಮ ೬
ಆಕೆವಾಳರು ಭೀಷ್ಮ ಎದುರರು
ಸಾಕು ನಿಮ್ಮೊಳು ನೂರು ನಾಲ್ವರು
ಆ ಕುಮಾರರು ಬೇರೆ ನೀನಿಹುದೊಬ್ಬ ಬೇರೆಂದು
ನೂಕಿ ಸೂರುಳು ಮಾಡಿ ಬಿಟ್ಟರೆ
ನಾಕು ಜಾವದೊಳಿಹರು ಮರುದಿನ
ವಾ ಕುಮಾರರು ತಮ್ಮೊಳೊಂದಾಗಿಹರು ಗೆಳೆಯಾಗಿ ೭
ಒಂದು ದಿನ ನೂರಾರು ಮಾನಿಸ
ರೊಂದು ಗೆಳೆಯಲಿ ಪುರದ ಹೊರಗಿಹು
ದೊಂದು ಠಾವು ಪ್ರಮಾಣ ವೃಕ್ಷವ ಕಂಡು ನಡೆತರಲು
ಬಂದು ನಿಂದರು ಕೋಲ ಬಿಸುಟೀ
ವೃಂದ ಹತ್ತಿತು ಮರನನಿವನೈ
ತಂದು ತಂದೆಡೆಯಾಡಿ ಬಳಲಿದು ನೋಡಿದನು ಭೀಮ ೮
ಮರನ ಹಿಡಿದಲುಗಿದರೆ ಬಿದ್ದರು
ಭರತಕುಲ ಪಾಲಕರು ನೂರೈ
ವರು ಮಹಾವಾತದಲಿ ತರುಫಲನಿಕರ ಬೀಳ್ವಂತೆ
ಶಿರವೊಡೆದು ಬೆನ್ನೊಡೆಯ ಮೊಳಕಾ
ಲ್ಜರಿಯ ಕೈಗಳು ಮುರಿದು ನೆತ್ತರು
ಸುರಿದು ಧೃತರಾಷ್ಟ್ರಂಗೆ ದೂರಿದರನಿಬರೀ ಹದನ ೯
ದುರುಳನವನೊಡನಾಡ ಬೇಡಂ
ದರಸನನಿಬರೆ ಸಂತವಿಟ್ಟನು
ಹಿರಿದು ಹೆಚ್ಚಿತು ಭೀಮ ದುರ್ಯೋಧನರಿಗತಿ ವೈರ
ಮರಳಿ ತಾವೊಂದಾಗುತಾತನ
ಕರೆಸಿ ವಿವಿಧ ಕ್ರೀಡೆಯಲಿ ಮೈ
ಮರೆಸಿ ಭೀಮನ ಕಟ್ಟಿ ಹಾಯ್ದಿದರೊಂದು ಮಡುವಿನಲಿ ೧೦
ಪಾಶವನು ಹರಿದೆದ್ದು ಬಂದತಿ
ರೋಷಿ ಸದೆದನು ಮತ್ತೆ ತಮ್ಮೊಳು
ಭಾಷೆಗಳಲೊಂದಾಗಿ ಕೂಡಿದರೊಂದು ದಿವಸದಲಿ
ಆ ಸಿತಗ ಮೈಮರೆದ ಹೊತ್ತು ಮ
ಹಾಸುರದ ಫಣಿಗಳಲಿ ಕಚ್ಚಿಸಿ
ಘಾಸಿ ಮಾಡಲು ಬದುಕಿ ಬೇಸರನಡಿಗಡಿಗೆ ಭೀಮ ೧೧
ಅರಸ ಕೇಳ್ ಆಯುಷ್ಯವುಳ್ಳರೆ
ಹರಿಹರ ಬ್ರಹ್ಮಾದಿಗಳು ಸಂ
ಹರಿಸಲರಿಯರು ಬರಿದೆ ದೈನ್ಯಂಬಡುವುದೀ ಲೋಕ
ಭರತ ವಂಶದ ಬಾಹಿರರು ನಿ
ಮ್ಮ ರಸುಗಳು ಭೀಮಂಗೆ ಮಾಡಿದ
ಹುರಿಯನಾ ಹುರಿ ಹರಿದ ಪರಿಯನು ಮತ್ತೆ ಕೇಳೆಂದ ೧೨
ಕಾಳಕೂಟ ಹಲಾಹಲವ ಕಾ
ರ್ಕೊಲ ದಾರದ ವತ್ಸನಾಭಿ ಕ
ರಾಳ ಸೌರಾಷ್ಟ್ರಿಕವ ಶೌಕ್ಲಿಕ ಸುಪ್ರದೀಪಕವ
ಹೇಳಲರಿದೆನಿಪೆಂಟು ವಿಷವನು
ಮೇಳವಿಸಿ ಬಳಿಕುಳಿದ ಮಧುರ ವಿ
ಶಾಲ ವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ ೧೩
ದಿಟ್ಟಿಸಿದರೆವೆ ಸೀವುದಂಗೈ
ಮುಟ್ಟಿದರೆ ಹುಗುಳಹುದು ಬಳಿಕವ
ನಟ್ಟ ಕೈ ಕರಣದ ಸುವಾರದ ವಿದ್ಯವೇನರಿದೊ
ಕೊಟ್ಟ ರೀತಂಗೆಲ್ಲವನು ಜಗ
ಜಟ್ಟಿ ಹಾಯಿಕಿ ಕೊಂಡು ನುಣ್ಣನೆ
ಚಿಟ್ಟುಮುರಿಯಾಟದಲಿ ಸದೆದನು ಮತ್ತೆ ಕೌರವರ ೧೪
ಮಡುವಿನಲಿ ಹಾಯ್ಕಿದಿರಿ ಹಾವಿನ
ಹೆಡೆಯ ಕೊಂಡೂರಿದಿರಿ ಬಲು ವಿಷ
ದಡಿಗೆಗಳ ಮೆಲಿಸಿದಿರಿ ಬಲ್ಲಂದದ ವಿಕಾರದಲಿ
ಕೆಡಹಲನು ಮಾಡಿದಿರಿ ನೂರ‍್ವರ
ಕಡಿದು ಶಾಕಿನಿಯರಿಗೆ ರಕುತವ
ಕುಡಿಸಿದಲ್ಲದೆ ಮುನ್ನ ಸಾವೆನೆ ಕೇಳಿ ನೀವೆಂದ ೧೫
ಒಳಗೆ ಬೆಳೆದುದು ವೈರಶಿಖಿ ಕಡೆ
ಗಳಕೆ ಹಾಯ್ದುದು ಜನನಿ ಜನಕರ
ಬಲು ನುಡಿಗಳಲಿ ನೂರ‍್ವರಿರ್ದರು ಶಕುನಿ ಮತವಿಡಿದು
ಬಲುಹುಗುಂದದೆ ಭೀಷ್ಮ ವಿದುರರ
ಬಳಕೆಯಲಿ ತಾವಡಗಿ ಗುಣದಲಿ
ಕೆಲನ ಮೆಚ್ಚಿಸಿ ನಡೆದರಿವರು ಯುಧಿಷ್ಠಿರಾದಿಗಳು ೧೬
ಆಟದಲಿ ತೊಡಗಿದರು ಮೊದಲಲಿ
ತೋಟಿಯನು ಸಾಕೀತಗಳ ಕಾ
ಲಾಟವನು ನಿಲಿಸುವೆನು ಶಸ್ತ್ರಾಸ್ತ್ರ ಪ್ರಸಂಗದಲಿ
ಆಟವಿಕರಿವದಿರಲಿ ಬಲಿದೊಳ
ತೋಟಿ ಬರಿದೇ ಬಿಡದು ಮೃತ್ಯುವಿ
ನೂಟ ಮುಂದಿಹುದೆಂದು ಕರೆಕರೆಗುಂದಿದನು ಭೀಷ್ಮ ೧೭
ಧರಣಿಪತಿ ಚಿತ್ತೈಸು ಗೌತಮ
ವರಮುನಿಗೆ ಜನಿಸಿದ ಶರದ್ವನು
ಪರಮಋಷಿಯಾತನು ತಪೋಯುತನಾಗಿ ಧನು ಸಹಿತ
ಇರುತ ಕಂಡನು ದೈವ ಗತಿಯಲಿ
ಸುರವಧುವನಾ ಕ್ಷಣಕೆ ಕಾಮ
ಜ್ವರಿತನಾದನು ಚಲಿಸಿತಾತನ ವೀರ್ಯವವನಿಯಲಿ ೧೮
ಅದು ಶರಸ್ತಂಭದಲಿ ನೆಲೆಯಾ
ದುದು ಮುನಿಚ್ಯುತ ವೀರ್ಯ ಮುನಿಸುತ
ರುದಿಸಿದರು ಶಂತನು ಮಹೀಪತಿ ಕಂಡು ಕೃಪೆಯಿಂದ
ಸದನದಲಿ ತನ್ಮಿಥುನವನು ಸಲ
ಹಿದನು ಕೃಪ ಕೃಪೆಯೆಂಬ ಹೆಸರಾ
ದುದು ಮಹಾಬಲನಾದನಾತನ ಕರೆಸಿದನು ಭೀಷ್ಮ ೧೯
ಆ ಕೃಪಾಚಾರಿಯನ ದೆಸೆಯಿಂ
ದೀ ಕುಮಾರರು ನಿಖಿಳ ತರ್ಕ
ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯಗಳನರಿದು
ಲೋಕ ವೈದಿಕ ಮುಖ್ಯ ಸಕಲ ಕ
ಲಾ ಕುಶಲರಾದರು ಧನುಃಪ್ರವಿ
ವೇಕ ನಿಪುಣರನರಸುತಿದ್ದನು ಮತ್ತೆ ಗಾಂಗೇಯ ೨೦
ಮುನಿ ಭರದ್ವಾಜಾಖ್ಯನಿರ್ದನು
ಘನ ತಪೋ ನಿಷ್ಠೆಯಲಿ ದಿವಿಜಾಂ
ಗನೆಯ ಕಂಡನು ಗಾಯವಡೆದನು ಮದನನೆಸುಗೆಯಲಿ
ತನು ಪರಿಚ್ಯುತ ವೀರ್ಯವನು ಸ
ತ್ಕನಕ ಕಲಶದೊಳಿರಿಸಲಲ್ಲಿಯೆ
ಜನಿಸಿದನು ದ್ರೋಣಾಭಿಧಾನನು ಮುನಿಯ ದೆಸೆಯಿಂದ ೨೧
ದ್ರೋಣಕಲಶದೊಳಾದ ದೆಸೆಯಿಂ
ದ್ರೋಣನಾದನು ಬಳಿಕ ಮುನಿಯಾ
ದ್ರೋಣಗುಪನಯನಾದಿ ವಿಪ್ರಕ್ರಿಯೆಗಳನು ರಚಿಸಿ
ದ್ರೋಣನೊಡನೋದಿಸಿ ನೃಪಾಲ
ಶ್ರೇಣಿಯನು ಶಸ್ತ್ರಾಸ್ತ್ರ ಕಳೆಯಲಿ
ಜಾಣರನು ಮಾಡಿದನು ಭಾರಧ್ವಾಜ ಮುನಿಯಂದು ೨೨
ಕೃಪನನುಜೆಯನು ತಂದು ದ್ರೋಣಂ
ಗುಪಯಮವ ಮಾಡಿದನು ಹರ್ಷದಿ
ದ್ರುಪದ ಬಂದೀ ದ್ರೋಣನೊಡನರಿದನು ಧನುಶ್ರುತಿಯ
ಕೃಪೆಯಲೀ ದ್ರೋಣಂಗೆ ಜನಿಸಿದ
ನಪರ ಶಂಕರ ರೂಪನಾಹವ
ನಿಪುಣನಶ್ವತ್ಥಾಮ ಭಾರದ್ವಾಜ ಗೋತ್ರದಲಿ ೨೩
ತಂದೆಯೊಳ್ ಶ್ರಮ ಮಾಡಿದರು ನೃಪ
ವೃಂದ ಸಹಿತೀ ದ್ರೋಣ ದ್ರುಪದರು
ನಿಂದನಾ ದ್ರುಪದಾಖ್ಯನಯ್ಯನು ದಿವಿಜ ನಗರಿಯಲಿ
ಅಂದು ಸಖ್ಯಪ್ರೀತಿಯನು ಸಾ
ನಂದದಲಿ ದ್ರೋಣಂಗೆ ವಿರಚಿಸಿ
ಬಂದು ನಿಜ ರಾಜ್ಯಾಭಿಷೇಕವ ಧರಿಸಿದನು ದ್ರುಪದ ೨೪
ಇತ್ತಲೀ ದ್ರೋಣನ ಪಿತನು ಸುರ
ರತ್ತ ಸರಿದನು ಕೆಲವು ದಿವಸಕೆ
ತತ್ತಪೋವನದಲ್ಲಿ ವಿಪ್ರಕ್ರಿಯೆಗಳನು ಮಾಡಿ
ಹೊತ್ತ ದಾರಿದ್ರ್ಯದಲಿ ಮನ ಮರು
ಗುತ್ತ ದೇಶಾಂತರದೊಳಗೆ ತೊಳ
ಲುತ್ತ ಬಂದನು ತನ್ನ ಮಗ ಸಹಿತಡವಿಯಲಿ ದ್ರೋಣ ೨೫
ಪರಶುರಾಮಾಶ್ರಮಕೆ ಮುನಿಯೈ
ತರಲು ಭಾರದ್ವಾಜನನು ಸ
ತ್ಕರಿಸಿ ನುಡಿದನು ಜಾಮದಗ್ನ್ಯನು ಮಧುರ ವಚನದಲಿ
ಧರೆಯನಿತ್ತೆನು ದ್ವಿಜರಿಗೀಯವ
ಸರದೊಳಾ ನಿರ್ಧನನು ನೀನೇ
ಪರಮ ಋಷಿಯಾತಿಥ್ಯ ಪೂಜೆಗಭಾಗ್ಯ ನಾನೆಂದ ೨೬
ಧನರಹಿತ ನಾ ಹೊತ್ತ ಭಾರಿಯ
ಧನುವಿದೊಂದಿದೆ ದಿವ್ಯಶರವಿದೆ
ಮನಕೆ ಬಂದುದ ವರಿಸು ನೀನೆನೆ ದ್ರೋಣ ನಸುನಗುತ
ಎನಗೆ ನಿಮ್ಮಡಿಗಳ ಕೃಪಾಲೋ
ಕನವಲೇ ಪರಿಯಾಪ್ತಿ ಲೋಕದ
ಜನಮನೋರಂಜನವೆ ಬೇಹುದು ಶರವ ಕೊಡಿಯೆಂದ ೨೭
ಇವು ಮಹಾ ನಿಸ್ಸೀಮತರ ವೈ
ಷ್ಣವವಲೇ ದಿವ್ಯಾಸ್ತ್ರ ನಿವಹವ
ನವರು ಕೊಟ್ಟರು ಕೊಂಡನುಚಿತ ವಿಧಾನದಲಿ ದ್ರೋಣ
ಇವು ಮಹಾರಣರಂಗದಲಿ ಶಾ
ತ್ರವ ನಿವಾರಣವೈಸಲೆಮ್ಮೀ
ವ್ಯವಹೃತಿಗೆ ತಾನೇನುಪಾಯವೆನುತ್ತ ಚಿಂತಿಸಿದ ೨೮
ಮಗನೆ ಬಲ್ಲೈ ದ್ರುಪದ ಭೂಪತಿ
ಮಗುವುತನದಿಂದೆಮ್ಮ ಸಖನೋ
ಲಗಿಸುವೆವು ನಾವಲ್ಲಿ ಸಲಹನೆ ಮಿತ್ರ ಭಾವದಲಿ
ಹೊಗುವ ನಡೆ ಪಂಚಾಲರಾಯನ
ನಗರಿಯನು ನಾವೆಂದು ಮುನಿಮೌ
ಳಿಗಳ ಮಣಿಯನು ಬೀಳುಕೊಂಡನು ರೇಣುಕಾ ಸುತನ ೨೯
ಬಂದನೀತನು ದ್ರುಪದ ರಾಯನ
ಮಂದಿರಕೆಯಾ ಬಾಗಿಲವನೊಡ
ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ
ಸಂದ ಮಿತ್ರರು ದ್ರೋಣಮುನಿಪತಿ
ಯೆಂದು ನಮ್ಮಭಿದಾನ ನೀ ಹೇ
ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ ೩೦
ಸಿರಿಯ ಮದವಧಿಕ ಪ್ರತಾಪೋ
ತ್ಕರದ ಮದ ಮೊದಲಾದ ಮದ ಸಂ
ಚರಣ ರಜದಲಿ ಮಾಸಿತೀತನ ಮನದ ಮಡಿ ವರ್ಗ
ತಿರಿವ ಹಾರುವರೊಡನೆ ಭೂಮೀ
ತ್ವರರಿಗೆತ್ತಣ ಮೈತ್ರಿ ಹೋಗಲಿ
ಕರೆಯ ಬೇಡೆನೆ ಬಂದು ಬಾಗಿಲಲವ ನಿವಾರಿಸಿದ ೩೧
ಮರೆದನೇ ತಪ್ಪೇನು ನಾ ಕಂ
ಡರುಹಿ ಮರಳುವೆವೈಸಲೇಯೆನು
ತುರುಬಿದರೆ ತರುಬಿದರು ಕಂಬಿಯನಿಕ್ಕಿ ಬಾಗಿಲಲಿ
ಒರೆಯನುಗುಳಿಚಿ ಖಡ್ಗದಲಿ ಬಿಡ
ದರಿದನಿಕ್ಕೆಲದವರನೋಲಗ
ಕುರವಣಿಸಿದನು ಮುಂದೆ ನಿಂದನು ದ್ರುಪದ ಭೂಪತಿಯ ೩೨
ಏನೆಲವೊ ಪಾಂಚಾಲ ಚಿಕ್ಕಂ
ದಾನು ನೀನೊಂದಾಗಿ ತಂದೆಯೊ
ಳೇನನರಿದೆವು ಮರೆದು ಕಳೆದಾ ಹಾ ಮಹಾದೇವ
ಏನು ಬಂದಿರಿಯೆಂಬ ಗುಣವ
ನಾನುರಾಗವು ಸಾಲದೇ ಧನ
ವೇನು ಫಲ ಕಕ್ಕುಲಿತೆಯೆಮಗಿಲ್ಲೆಂದನಾ ದ್ರೋಣ ೩೩
ಸೂರಿಗಳಿಗತಿ ಮೂರ್ಖರಿಗೆ ಗಂ
ಭೀರರಿಗೆ ಭಂಡರಿಗೆ ವೇದಾ
ಚಾರ ಸಂಯುಕ್ತರಿಗನಾಚಾರ ಪ್ರಸಕ್ತರಿಗೆ
ಧೀರರಿಗೆ ಹಂದೆಗಳಿಗೆತ್ತಣ
ಸೇರುವೆಗಳೈ ಭೂಪರಿಗೆ ಬಡ
ಹಾರುವರಿಗೆತ್ತಣದು ಸಖತನವೆಂದನಾ ದ್ರುಪದ ೩೪
ಎಲವೊ ನಿನ್ನಾಸ್ಥಾನ ಸಹಿತೀ
ಹೊಳಲ ಸುಡುವೆನು ನಿನ್ನ ಸೀಳಿದು
ಬಲಿಯ ಕೊಡುವೆನು ಭೂತಗಣಕಿದಿರಲ್ಲ ನೀನೆನಗೆ
ಕಲಿತ ವಿದ್ಯದ ಕೋಲ ಮಕ್ಕಳ
ಕಳುಹಿ ಕಟ್ಟಿಸಿ ವಾಮಪಾದದಿ ೩೫
ತಲೆಯನೊದೆವೆನು ಮರೆಯದಿರು ನೀನೆಂದನಾ ದ್ರೋಣ
ಎಂದು ಭಾಷೆಯ ಮಾಡಿ ತನ್ನಯ
ನಂದನನನೊಡಗೊಂಡು ಜನಪದ
ವೃಂದ ಹಲವನು ಕಳೆದು ಬಂದನು ಹಸ್ತಿನಾಪುರಿಗೆ
ಅಂದು ಸಕಲ ಕುಮಾರಕರು ನಲ
ವಿಂದ ನಗರಿಯ ಹೊರಗೆ ಗುರಿಗಳ ೩೬
ಮುಂದುವರಿದೆಸುತಿರಲು ಮುದದಲಿ ಕಂಡನಾ ದ್ರೋಣ
ಬೆರಸಿದನು ನೆರವಿಯನು ನೋಡು
ತ್ತಿರೆ ಯುಧಿಷ್ಠಿರನೃಪನ ಹರಳುಂ
ಗುರ ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ
ನೆರೆದು ತಡಿಯಲಿ ನಿಂದು ನೂರರು
ವರು ನಿರೀಕ್ಷಿಸಿ ಸಾಧ್ಯವಲ್ಲೆನು ೩೭
ತಿರೆ ಮಗಂಗೆ ಮುನೀಂದ್ರನೆಂದನು ಬೇಗ ತೆಗೆಯೆಂದು
ಸರಳ ತೊಡಚಿ ತದೀಯ ಮಣಿ ಬಂ
ಧುರದ ಮುದ್ರಿಟೆಗೆಚ್ಚು ಹಿಳುಕಿನ
ಶಿರಕೆ ತರವಾ ಹಿಳುಕಿನಲಿ ಕಣೆಯೆಚ್ಚು ಬಂಧದಲಿ
ಸರಳ ಸಂದರ್ಭದಲಿ ನಿಮಿಷಾಂ
ತರಕೆ ಫಣಿಪನ ಹೆಡೆವಣಿಯನು ೩೮
ದ್ಧರಿಸುವಂತಿರೆ ತೆಗೆದು ಬಿಸುಟನು ರತುನಮುದ್ರಿಕೆಯ
ಕಂಡು ಬೆರಗಾದುದು ಕುಮಾರರ
ತಂಡ ತನತನಗೈದಿ ಭೀಷ್ಮನ
ನಂಡಲೆದುದೀ ಮುನಿಯನೀಗಲೆ ಸಂತವಿಡಿಯೆಂದು
ಚಂಡ ಭುಜಬಲನವರ ಕಾಣಿಸಿ
ಕೊಂಡು ಕೊಟ್ಟನು ಭೀಷ್ಮನವರಿಗೆ ೩೯
ಖಂಡ ವಿಭವವನತುಳ ಧನಪತಿಯಾದನಾ ದ್ರೋಣ
ವರ ಮುಹೂರ್ತದೊಳವರ ನೂರರು
ವರನು ಕೊಟ್ಟನು ಶಸ್ತ್ರವಿದ್ಯಾ
ಪರಿಣತರ ಮಾಡೆಂದು ದ್ರೋಣನ ಕೈಯಲಾ ಭೀಷ್ಮ
ಗರುಡಿ ಕಟ್ಟಿತು ನೂರು ಯೋಜನ
ವರೆಯ ವಿಸ್ತಾರದಲಿ ಸಾವಿರ ೪೦
ಕುರಿಯ ಹೊಯ್ದರು ಪೂಜಿಸಿದರಾ ಚದುರ ಚಂಡಿಕೆಯ
ಗರುಡಿ ಪೂಜಾ ವಿಭವ ಸಮನಂ
ತರದಲನಿಬರು ಸಮವ ತೊಡಗಿದ
ರರಸು ಮಕ್ಕಳು ಕೇಳಿದರು ನಾನಾ ದಿಗಂತದಲಿ
ಬರುತಲಿದ್ದರು ಕೂಡೆ ಹಸ್ತಿನ
ಪುರಿಗೆ ವಿದ್ಯಾರ್ಥಿಗಳು ಪಾರ್ಥಿವ
ವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ ೪೧
ರಾಯ ಬಲ್ಲೈ ಮುನ್ನ ಶಿಶುವನು
ತಾಯಿ ಬಿಸುಟಳು ಗಂಗೆಯಲಿ ರಾ
ಧೇಯನಾದನು ರಾಧೆಯೆಂಬವಳೊಲಿದು ಸಾಕಿದರೆ
ಆಯತಾಕ್ಷನು ಪರಶುರಾಮನೊ
ಳಾಯುಧದ ಶ್ರಮಗಲಿತು ಬಳಿಕದು
ವಾಯವಾದೊಡೆ ಬಂದನಾ ಗಜಪುರಿಗೆ ಕಲಿಕರ್ಣ ೪೨
ಬಂದು ಹಸ್ತಿನಪುರಿಗೆ ರಾಧಾ
ನಂದನನು ದುರ್ಯೋಧನನನೈ
ತಂದು ಕಂಡನು ಕೌರವೇಶ್ವರನಿವರ ಕಾಣಿಸಿದ
ಅಂದು ಮೊದಲಾಗವರ ಸಖ್ಯಕೆ
ಸಂದ ಕಾಣೆನು ಕರ್ಣ ಕುರುಪತಿ
ಗೊಂದೆ ಜೀವನವೊಂದೆ ಮನ ಮತವೊಂದೆ ಕೇಳೆಂದ ೪೩
ಬೇಟೆ ಕರ್ಣನ ಕೂಡೆ ಹಗಲಿರು
ಳಾಟ ಕರ್ಣನ ಕೂಡೆ ಷಡು ರಸ
ದೂಟ ಕರ್ಣನ ಕೂಡೆ ಶಸ್ತ್ರಾಭ್ಯಾಸವವ ಕೂಡೆ
ತೋಟ ಮನದಲಿ ನಗೆಯ ಮಧುರದ
ನೋಟ ಕಣ್ಣಿನೊಳುಳಿದವರ ಕೂ
ಡಾಟಗಳು ತಾವಿಬ್ಬರೊಂದೆನಿಸಿದರು ಜಗವರಿಯೆ ೪೪
ಸುರಗಿ ಸಬಳ ಕಠಾರಿಯುಬ್ಬಣ
ಹರಿಗೆ ಹಿರಿಯುಬ್ಬಣವಡಾಯುಧ
ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳ ಚಯ
ಪರಶು ಕಕ್ಕಡೆ ಮುಸಲ ಹಲ ಮು
ದ್ಗರ ಧನುರ್ದಂಡಾದಿ ಶಸ್ತ್ರೋ
ತ್ಕರದಲನಿಬರು ಕುಶಲರಾದರು ಮುನಿಯ ಗರುಡಿಯಲಿ ೪೫
ಜನಪ ಕೇಳೈ ಭೀಮ ದುರ‍್ಯೋ
ಧನರು ಗದೆಯಲಿ ಮಿಗಿಲು ಕರ್ಣಾ
ರ್ಜುನರು ಧನುವಿನಲಧಿಕರಾದರು ನೃಪ ಕುಮಾರರಲಿ
ತನತನಗೆ ಸರ್ವಾಯುಧಂಗಳ
ಲನಿಬರರಿದರು ಕೂಡೆ ಗುರುವಿನ
ಮನಕೆ ಹತ್ತೆಯವಾದನರ್ಜುನನಸ್ತ್ರ ಶಿಕ್ಷೆಯಲಿ ೪೬
ಸಂಕ್ಷಿಪ್ತ ಭಾವ
ಈ ಭಾಗದಲ್ಲಿ ಪಾಂಡವರು ಮತ್ತು ಕೌರವರು ಒಟ್ಟಿಗೆ ಆಟಗಳನ್ನು ಆಡುತ್ತ ಬೆಳೆದ ವಿಚಾರವಿದೆ. ವಿವಿಧ ಬಗೆಯ ಆಟಗಳ ಹೆಸರುಗಳಿವೆ.
ಎಲ್ಲದರಲ್ಲಿಯೂ ಭೀಮ ಬಲಶಾಲಿ. ಎಲ್ಲರನ್ನೂ ಸೋಲಿಸುತ್ತಿದ್ದನು. ಏನು ದೂರು ನೀಡಿದರೂ ಸುಮ್ಮನಿರುತ್ತಿರಲಿಲ್ಲ. ಅವನನ್ನು ಉಪಾಯವಾಗಿ ಕಟ್ಟಿ ಹಾಕಿದರು, ವಿಷದ ತಿನಿಸುಗಳನ್ನು ಕೊಟ್ಟರು..ಆದರೆ ಆಯುಷ್ಯ ಗಟ್ಟಿ ಇತ್ತು.
ಶರಧ್ವನುವಿನ ವೀರ್ಯದಿಂದ ಜನಿಸಿದ ಮಕ್ಕಳನ್ನು ಭೀಷ್ಮ ಸಲಹುತ್ತಿದ್ದನು. ಅವರೇ ಕೃಪ ಮತ್ತು ಕೃಪಿ. ಈ ಕೃಪನಿಂದ ಮಕ್ಕಳು ವೇದ, ತರ್ಕ ಮುಂತಾದ ವಿದ್ಯೆಗಳನ್ನು ಕಲಿತರು. ಮುನಿ ಭಾರಧ್ವಾಜನ ವೀರ್ಯವು ಕುಂಭದಲ್ಲಿ ಬಿದ್ದು ಅದರಿಂದ ಮಗ ಹುಟ್ಟಿದನು. ದ್ರೋಣನೆಂಬ ಹೆಸರು.
ದ್ರೋಣನು ಪಾಂಚಾಲ ರಾಜಕುಮಾರ ದ್ರುಪದನೊಂದಿಗೆ ವಿದ್ಯೆ ಕಲಿತು ನಂತರ ಪರಶುರಾಮನಿಂದ ಶಸ್ತ್ರಾಸ್ತ್ರಗಳನ್ನು ಪ್ರಸಾದವಾಗಿ ಪಡೆದನು. ರಾಜನಾದ ದ್ರುಪದನಿಂದ ಅವಮಾನಿತನಾದ ದ್ರೋಣನು ಕೋಪದಿಂದ ಹೊರಟು ದ್ರುಪದನನ್ನು ತನ್ನ ಶಿಷ್ಯರಿಂದ ಸೋಲಿಸುವೆನೆಂದು ಶಪಥ ಮಾಡಿ ಬಂದು ಹಸ್ತಿನಾವತಿಯನ್ನು ಸೇರಿದನು. ಇವನಿಗೆ ಕೃಪಿಯಿಂದ ಜನಿಸಿದ ಪುತ್ರ ಅಶ್ವತ್ಥಾಮ.
ಊರ ಹೊರಗಿನ ಬಯಲಿನಲ್ಲಿ ಆಟವಾಡುತ್ತಿದ್ದ ಮಕ್ಕಳಲ್ಲಿ ಧರ್ಮಜನ ಉಂಗುರ ಬಾವಿಯಲ್ಲಿ ಬಿದ್ದಿತು. ಅದನ್ನು ಶರ ಚಮತ್ಕಾರದಿಂದ ತೆಗೆದುದನ್ನು ಕಂಡ ಮಕ್ಕಳು ಭೀಷ್ಮನಲ್ಲಿಗೆ ಕರೆದೊಯ್ದರು. ಭೀಷ್ಮನು ಇವರೆಲ್ಲರಿಗೆ ಶಸ್ತ್ರವಿದ್ಯೆಯನ್ನು ಕಲಿಸಿಕೊಡಲು ಹೇಳಿ ವ್ಯವಸ್ಥೆ ಮಾಡಿದನು.
ಇದೇ ಸಮಯದಲ್ಲಿ ಕರ್ಣನಿಗೂ ದುರ್ಯೋಧನನಿಗೂ ಗೆಳೆತನ ಬೆಳೆಯಿತು. ಕರ್ಣನು ಪರಶುರಾಮನಲ್ಲಿ ವಿದ್ಯೆ ಕಲಿತು ಕೊನೆಯಲ್ಲಿ ಅವನಿಂದ ಶಾಪಕ್ಕೊಳಗಾಗಿ ಹಸ್ತಿನಾಪುರಕ್ಕೆ ಬಂದಿದ್ದನು. ವಿವಿಧ ರೀತಿಯ ಕಲೆಗಳಲ್ಲಿ ಮಕ್ಕಳು ಪರಿಣಿತರಾದರು. ಅರ್ಜುನನು ತನ್ನ ವಿಶೇಷ ಕೌಶಲ್ಯದಿಂದ ಧನುರ್ವಿದ್ಯೆಯಲ್ಲಿ ಮುಂದುವರಿದು ಗುರುಗಳ ಪರಮ ಶಿಷ್ಯನಾದನು.
ಕಾಮೆಂಟ್‌ಗಳು