ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಎಸ್. ಬಿಳಿಗಿರಿ


 ಎಚ್. ಎಸ್. ಬಿಳಿಗಿರಿ


ಡಾ.ಎಚ್.ಎಸ್. ಬಿಳಿಗಿರಿ ಮಹಾನ್ ಭಾಷಾಶಾಸ್ತ್ರಜ್ಞರು ಮತ್ತು ಕವಿ

ಬಿಳಿಗಿರಿ  ಅವರು 1925ರ ವರ್ಷದಲ್ಲಿ ಜನಿಸಿದರು. ಅವರು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಹೆಮ್ಮಿಗೆ ಗ್ರಾಮದವರು.  ತಂದೆ ಎಚ್. ಶ್ರೀನಿವಾಸ ರಂಗಾಚಾರ್. ತಾಯಿ ಆಂಡಾಳಮ್ಮ. ತಂದೆ ಅರಣ್ಯ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. ಹಾಗಾಗಿ ಬಿಳಿಗಿರಿ ಅವರು ಭದ್ರಾವತಿ, ಕುಂಸಿ, ಸಾಗರ, ಬೆಂಗಳೂರು, ಮೈಸೂರುಗಳಲ್ಲಿ ಪ್ರೌಢಶಾಲೆಯವರೆಗೆ ಅಭ್ಯಾಸ ಮಾಡಿದರು. 

ಶಿವಮೊಗ್ಗದಲ್ಲಿ ಇಂಟರ್‌ಮೀಡಿಯಟ್ ಮುಗಿಸಿದ ಬಿಳಿಗಿರಿ ಅವರು ತಂದೆಯವರ ಒತ್ತಾಯದ ಮೇರೆಗೆ ಮನಸ್ಸಿಲ್ಲದೆ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜ್ ಸೇರಿದರು.  ನಾಲ್ಕು ವರ್ಷ ಕಳೆದರೂ ಅವರಿಗೆ ಎರಡನೆಯ ವರ್ಷದ ಇಂಜಿನಿಯರಿಂಗ್ ಮುಗಿಸಲಾಗಲಿಲ್ಲ. ಅವರಿಗೋ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಎಸ್.ಎಸ್.ಎಲ್.ಸಿ. ಓದುತ್ತಿದ್ದಾಗಲೇ ಕವನ ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದರು. ಎಂಜಿನಿಯರಿಂಗ್ ಓದುತ್ತಿದ್ದಾಗ ಬರೆದ ಕವಿತೆಗಳನ್ನು ಹಿರಿಯ ಕವಿ ಪು.ತಿ.ನ ಅವರು ಓದಿ, ತಿದ್ದಿ, ಸಲಹೆ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಇಂಜಿನಿಯರಿಂಗ್ ಓದುತ್ತಿರುವಾಗಲೇ ಮೈಸೂರು ವಿಶ್ವವಿದ್ಯಾನಿಲಯದ ರಜತೋತ್ಸವದ ಕಾವ್ಯ ಸ್ಪರ್ಧೆಯಲ್ಲಿ ಭಾಗವಹಿಸಿ 'ಭದ್ರಾವತಿ' ಎಂಬ ಕವನಕ್ಕೆ ಸುವರ್ಣ ಪದಕ ಪಡೆದಿದ್ದರು. ಜಿ.ಪಿ. ರಾಜರತ್ನಂ, ಟಿ.ಪಿ. ಕೈಲಾಸಂ ಮತ್ತು ಪು.ತಿ.ನ. ಬಿಳಿಗಿರಿ ಅವರ ಕಾವ್ಯಕ್ಕೆ ಸ್ಫೂರ್ತಿಯ ಚೇತನರಾಗಿದ್ದರು.

ಬಿಳಿಗಿರಿ ಅವರು ಅಂತೂ ಇಂಜಿನಿಯರಿಂಗ್ ವಿದ್ಯಾಭ್ಯಾಸ ತೊರೆದು ಮೈಸೂರಿನ ಮಹಾರಾಜಾ ಕಾಲೇಜ್ ಸೇರಿ ಬಿ.ಎ. ಆನರ್ಸ್ (1952) ಹಾಗೂ ಕನ್ನಡ ಎಂ.ಎ. ಪದವಿ ಪಡೆದರು (1953). ಮೈಸೂರಿನಲ್ಲಿ ಓದುತ್ತಿದ್ದಾಗ ಕವಿ ಗೋಪಾಲಕೃಷ್ಣ ಅಡಿಗರ ಸಂಪರ್ಕ ದೊರಕಿತು. 

ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಬಿಳಿಗಿರಿ ಅವರು (1953) ಎರಡು ವರ್ಷದ ಬಳಿಕ ಭಾಷಾ ವಿಜ್ಞಾನದಲ್ಲಿ ವಿಶೇಷ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಪಡೆದು ಪುಣೆಯ ಡೆಕ್ಕನ್ ಕಾಲೇಜಿಗೆ ಹೋದರು. ಒಂದು ವರ್ಷದ ಬಳಿಕ ರಾಕ್ ಫೆಲ್ಲರ್ ಫೌಂಡೇಷನ್‌ನ ವಿದ್ಯಾರ್ಥಿವೇತನ ಪಡೆದು ಭಾಷಾ ಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನ ಪಡೆಯಲು, ಅಮೆರಿಕಾದ ಬರ್ಕ್ಲಿಯಲ್ಲಿ ಇರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯಕ್ಕೆ ತೆರಳಿದರು (1956). ವರ್ಷದ ಬಳಿಕ ಭಾರತಕ್ಕೆ ಮರಳಿದ ಅವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ರೀಡರ್ ಆಗಿ ನೇಮಕಗೊಂಡರು. ಆ ಹುದ್ದೆಯಲ್ಲಿರುವಾಗಲೇ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದರು.

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಕೇಂದ್ರಕ್ಕೆ ಡೆಪ್ಯುಟೇಷನ್ ಮೇಲೆ ಬಂದು 1970-1972 ಅವಧಿಯಲ್ಲಿ ಉಪ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಬಿಳಿಗಿರಿ ಅವರು ಪುಣೆಯ ಡೆಕ್ಕನ್ ಕಾಲೇಜಿಗೆ ಮರಳಿದರು. 1980ರವರೆಗೂ ಅಲ್ಲಿಯೇ ಕಾರ್ಯನಿರ್ವಹಿಸಿದರು. 1980ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದ ಭಾಷಾ ವಿಜ್ಞಾನದ ಪ್ರಾಧ್ಯಾಪಕರಾಗಿ ನೇಮಕಗೊಂಡು 1986ರಲ್ಲಿ ನಿವೃತ್ತರಾದರು.

'ನಂದನ', 'ನಾಯಿಕೊಡೆ', 'ನಿಗುರಿ ನಿಂತರೆ ನಾಲಿಗೆ' ಬಿಳಿಗಿರಿ ಅವರ ಕವನ ಸಂಕಲನಗಳು. 'ಆಲೋಕ' ಕನ್ನಡ ಸಾಹಿತ್ಯ ಲೋಕದಲ್ಲಿ ಬಿಳಿಗಿರಿಯವರಿಗೆ ಖ್ಯಾತಿ ತಂದುಕೊಟ್ಟ ಕೃತಿ. ಕೇಶಿರಾಜನ 'ಶಬ್ದ ಮಣಿ ದರ್ಪಣ'ಕ್ಕೆ ಅವರು ಬರೆದ ವ್ಯಾಖ್ಯಾನದ ಈ ಪುಸ್ತಕ ಅವರ ಭಾಷಾ ವಿಜ್ಞಾನ, ಛಂದಶಾಸ್ತ್ರ, ವ್ಯಾಕರಣದ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿ. 'ವರ್ಣನಾತ್ಮಕ ವ್ಯಾಕರಣದ ಮೂಲ ತತ್ವಗಳು', 'ವರಸೆ'- ಶಾಸ್ತ್ರೀಯ ಬರಹದ ಇನ್ನೆರಡು ಕೃತಿಗಳು. 

ಭಾಷೆ, ಛಂದಸ್ಸು, ವ್ಯಾಕರಣ, ಕಾವ್ಯ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಬಿಳಿಗಿರಿ ಅವರ ಒಟ್ಟು ಸಾಹಿತ್ಯ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರಿಗೆ 1995ರಲ್ಲಿ ಗೌರವ ಪ್ರಶಸ್ತಿ ನೀಡಿ ಗೌರವಿಸಿತು.

1992ರ ವರ್ಷದ ಸುಮಾರಿನಲ್ಲಿ ನಾವು ಎಚ್‍ಎಮ್‍ಟಿ ಕನ್ನಡ ಸಂಪದದ ವತಿಯಿಂದ ಆಯೋಜಿಸಿದ್ದ ಡಾ. ಆರ್. ಗಣೇಶ್ ಅವರ ಅಷ್ಟಾವಧಾನ ಕಾರ್ಯಕ್ರಮದಲ್ಲಿ ಕವಿಗಳಾಗಿ - ಪೃಚ್ಛಕರಾಗಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಮಲ್ಲೇಶ್ವರದಲ್ಲಿದ್ದ ಅವರ ಮನೆಗೆ ಹಲವು ಸಲ ಹೋಗಿ ಭೇಟಿ ಮಾಡಿದ್ದೆ. ಅವರಿಗೆ ಆ ಕಾರ್ಯಕ್ರಮ ಬಹಳ ಸಂತೋಷ ತಂದಿತ್ತು.

ಡಾ. ಎಚ್. ಎಸ್. ಬಿಳಿಗಿರಿ 1996ರಲ್ಲಿ ಈ ಲೋಕವನ್ನಗಲಿದರು.

Great scholar and poet Dr. H. S. Biligiri

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ