ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್. ವಿನಯ್ ಹೆಗ್ಡೆ


 ಎನ್.ವಿನಯ ಹೆಗ್ಡೆ ನಿಧನ


ಹೆಸರಾಂತ ಶಿಕ್ಷಣ ತಜ್ಞ, ಉದ್ಯಮಿ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ, ಮಹಾನ್ ಸಮಾಜಮುಖಿ ಕೊಟುಗೆದಾರರಾದ ಡಾ. ಎನ್.ವಿನಯ ಹೆಗ್ಡೆ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. 

ವಿನಯ ಹೆಗ್ಡೆ ಅವರು 1939ರ ಏಪ್ರಿಲ್ 3ರಂದು ಜನಿಸಿದರು.  ತಂದೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ಮತ್ತು ಲೋಕಸಭಾ ಸ್ಪೀಕರ್ ಆಗಿ ಪ್ರಸಿದ್ಧರಾಗಿದ್ದವರು.  ತಾಯಿ ಮೀನಾಕ್ಷಿ ಹೆಗಡೆ ಅವರು ನಿಟ್ಟೆ ಗ್ರಾಮಕ್ಕೆ ಸೇರಿದವರು.

ವಿನಯ ಹೆಗ್ಡೆ ಅವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದು ಮುಂದೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಿಂದ ಬಿ.ಎಸ್ಸಿ ಪದವಿಯನ್ನು ಪಡೆದರು. ಕೆನರಾ ವರ್ಕ್‌ಶಾಪ್ಸ್ ಲಿಮಿಟೆಡ್‌ನಲ್ಲಿ ಸಂಕ್ಷಿಪ್ತ ವೃತ್ತಿಪರ ಕೆಲಸದ ನಂತರ, ಅವರು ಉದ್ಯಮಶೀಲತೆಗೆ ಕಾಲಿಟ್ಟರು. 1975 ರಲ್ಲಿ, ಅವರು ತಮ್ಮ ಪ್ರಮುಖ ಉದ್ಯಮವಾದ ಲ್ಯಾಮಿನಾ ಸಸ್ಪೆನ್ಷನ್ ಪ್ರಾಡಕ್ಟ್ಸ್ ಲಿಮಿಟೆಡ್ ಅನ್ನು ಸ್ಥಾಪಿಸಿದರು.  ಇದು ಅವರ ಗಮನಾರ್ಹ ಉದ್ಯಮಶೀಲ ಪ್ರಯಾಣದ ಆರಂಭವನ್ನು ಗುರುತಿಸಿತು. ದೂರದೃಷ್ಟಿ, ಪರಿಶ್ರಮ ಮತ್ತು ಪ್ರೇರಿತ ತಂಡದ ನಾಯಕತ್ವದೊಂದಿಗೆ, ಹೆಗ್ಡೆ ಅವರು ಯಶಸ್ವಿ ಕೈಗಾರಿಕಾ ಉದ್ಯಮವನ್ನಲ್ಲದೆ ಹೊಸ ದೃಷ್ಟಿಯ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು.

ಶಿಕ್ಷಣವನ್ನು ವಿಸ್ತರಿಸಲು ಮಾತ್ರವಲ್ಲದೆ ಯುವ ಪೀಳಿಗೆಯನ್ನು ಸಬಲೀಕರಣಗೊಳಿಸಲು ಅವರು 1979 ರಲ್ಲಿ ನಿಟ್ಟೆ ಶಿಕ್ಷಣ ಟ್ರಸ್ಟ್ ಅನ್ನು ಸ್ಥಾಪಿಸಿದರು. ಇದು ದ.ಕ.ದ ಅತಿದೊಡ್ಡ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿದೆ. ಈ ಶಿಕ್ಷಣ  ಟ್ರಸ್ಟ್ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯವು ತನ್ನ ಆಶ್ರಯದಲ್ಲಿ ಇಪ್ಪತ್ತೆರಡು ಸಂಸ್ಥೆಗಳ ಸರಮಾಲೆಯನ್ನು ಹೊಂದಿದ್ದು, ಶಾಲೆಗಳಿಂದ ಪದವಿ ಪೂರ್ವ, ಪ್ರಥಮ ದರ್ಜೆ ಕಾಲೇಜುಗಳು ಪಾಲಿಟೆಕ್ನಿಕ್,  ಇಂಜಿನಿಯರಿಂಗ್, ವೈದ್ಯಕೀಯ, ದಂತ, ಔಷಧೀಯ, ನರ್ಸಿಂಗ್ ಮತ್ತು ಹೋಟೆಲ್ ನಿರ್ವಹಣೆಯಂತಹ ವೃತ್ತಿಪರ ಕಾಲೇಜುಗಳೂ ಸೇರಿದಂತೆ ನಿಟ್ಟೆ, ಮಂಗಳೂರು ಮತ್ತು ಬೆಂಗಳೂರುಗಳಲ್ಲಿನ  ಕ್ಯಾಂಪಸ್ಗಳಲ್ಲಿ ವ್ಯಾಪಿಸಿವೆ.

ಅನೇಕ ಸಾಧಾರಣ ಯಶಸ್ಸಿನ ಕಥೆಗಳಿಗಿಂತ ವಿಭಿನ್ನವಾಗಿ, ವಿನಯ್ ಹೆಗ್ಡೆ ಅವರು ಅತ್ಯುತ್ತಮವಾದದ್ದನ್ನೇ ಸಾಧಿಸಿದವರು. ತಮ್ಮ ಸಾಧನೆಗಳ ಮೇಲೆ ವಿಶ್ರಮಿಸದ ಅವರು ತಮ್ಮ ಗಳಿಕೆಯನ್ನು ಸಾಮಾಜಿಕ ಒಳಿತಿಗಾಗಿ ಬಳಸಿದವರು. ಗ್ರಾಮೀಣ ಅಭಿವೃದ್ಧಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಹಲವಾರು ಗ್ರಾಮೀಣ ಉನ್ನತಿ ಯೋಜನೆಗಳನ್ನು ವೈಯಕ್ತಿಕ ಮೇಲ್ವಿಚಾರಣೆಯಲ್ಲಿ ಕೈಗೊಂಡವರು. ಇವುಗಳಲ್ಲಿ 24 ಗ್ರಾಮೀಣ ಆಸ್ಪತ್ರೆಗಳನ್ನು ನಡೆಸಿದ್ದು, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡ ಯೋಜನೆಗಳು ಸೇರಿವೆ. 

ವಿನಯ ಹೆಗ್ಡೆ ಅವರ ಸಾಧನೆಗಳಿಗಾಗಿ ನವದೆಹಲಿಯ ವ್ಯಾಪಾರ ಮತ್ತು ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯಿಂದ ಉದ್ಯೋಗ ಪತ್ರ ಪ್ರಶಸ್ತಿ (1980); ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಪ್ರಶಸ್ತಿ (1999); ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿ (1999);  ಅತ್ಯುತ್ತಮ ಸಾರ್ವಜನಿಕ ಸಂಪರ್ಕ ವ್ಯಕ್ತಿ ಪ್ರಶಸ್ತಿ (2001) ಸೇರಿದಂತೆ ಹಲವಾರು ಗೌರವಗಳು ಸಂದವು. ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತ್ತು. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು. 

ವಿನಯ ಹೆಗ್ಡೆ ಅವರು 2026ರ ಜನವರಿ 1ರಂದು ನಿಧನರಾದರು. ಅವರು ಪತ್ನಿ ಸುಜಾತ, ಮಗಳು ಅಶ್ವಿತಾ ಆರ್. ಪುಂಜಾ ಮತ್ತು ಮಗ ವಿಶಾಲ್ ಹೆಗ್ಡೆ ಅವರನ್ನು ಅಗಲಿದ್ದಾರೆ.  ಈ ಮಹಾನ್ ಚೇತನಕ್ಕೆ ನಮನ 🌷🙏🌷

Respects to departed soul Dr. N. Vinay Hegde 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ