ಸೈಕಲ್ ಪಯಣ
ಕಳೆದ 10 ವರ್ಷಗಳ ರಮ್ಯ ಸೈಕಲ್ ಪಯಣ
On completion of 10 years of my cycling journey
ಆನಂದದೊಳು ತಾನಿರಲು,
ಸ್ವಾನಂದದಿ ರೆಕ್ಕೆಯ ಕೆದಲುತಲಿರಲು
ಬುವಿಯ ಮೇಲೆ ನಿಂತಿರಲು
ದೇವ ಶಿಶುನಾಳಧೀಶ ಗುರುಗೋವಿಂದನ ವರವು
-ಸಂತ ಶಿಶುನಾಳ ಶರೀಫರು
ಪುಟ್ಟ ಮಕ್ಕಳು ಸೈಕಲ್ ಕಲಿಯುವ ಪ್ರಯತ್ನದಲ್ಲಿ, ಒಂದು ಕಾಲನ್ನು ಪೆಡಲಿನ ಮೇಲೆ ಮತ್ತೊಂದು ಕಾಲನ್ನು ನೆಲದ ಮೇಲೆ ಇಟ್ಟು ಜೀಕುತ್ತ, ಜೀಕುತ್ತಾ, ಒಂದು ಅಮೂಲ್ಯ ಕ್ಷಣದಲ್ಲಿ ಎರಡೂ ಕಾಲುಗಳೂ ನೆಲದ ಆಶ್ರಯವನ್ನು ಬಿಟ್ಟು, ಎರಡೂ ಪೆಡಲುಗಳ ಮೇಲೆ ನಿಂತು, ತಾನೇ ತಾನಾಗಿ ಸೈಕಲ್ ಚಲಿಸಿದ ಅನುಭವವಿದೆಯೆಲ್ಲಾ, ಅದು ನಮ್ಮೊಳಗಿನ ಚೈತನ್ಯ, ದೇಹವನ್ನು ಮೀರಿನಿಂತ ಅಧ್ಯಾತ್ಮದ ಅನುಭಾವದ ಕ್ಷಣವೂ ಹೌದು. ನಿರಂತರವಾಗಿ ಐಶಾರಾಮಿ ಸಾಧನಗಳ ಹಿಂದೆ ಸಾಗುವ ನಮ್ಮ ಬದುಕಿನಲ್ಲಿ, ಸೈಕಲ್ಲುಗಳು ತಮ್ಮ ಸ್ಥಾನವನ್ನು ಕಳೆದುಕೊಂಡುಬಿಟ್ಟವು. ನಮ್ಮಲ್ಲಿ ನಮ್ಮ ಶಿಶುಸಹಜ ಸ್ವಭಾವ ಕೂಡಾ ಕಳೆದುಹೋಗಿಬಿಟ್ಟಿವೆ.
ಬದುಕಿನಲ್ಲಿ ವಿಧವಿಧದ ಸಾಧನೆ ಮಾಡಿರುವ ವ್ಯಕ್ತಿಚಿತ್ರಣಗಳನ್ನು ಬ್ಲಾಗಿಸುವ ನನ್ನ ಹವ್ಯಾಸದಲ್ಲಿ, ಒಮ್ಮೆ ಸೈಕ್ಲಿಂಗ್ ಪ್ರೀತಿಸುವ ಮಂಜುಳಾ ಬಬಲಾದಿ ಅವರನ್ನು ಮಾತನಾಡಿಸಿ ಆಕೆಯ ಅನುಭಾವವನ್ನು ತಿಳಿಯುವ ಅವಕಾಶ ಒದಗಿಬಂತು. ಈ ಮಾತುಕತೆ ನನ್ನ ಬಾಲ್ಯದಲ್ಲಿನ ಸೈಕಲ್ ಪ್ರೀತಿಯನ್ನು ಮೀಟಿದಂತಾಗಿ, ಕಳೆದ 10 ವರ್ಷಗಳಲ್ಲಿ ನಾನೂ ಸೈಕಲ್ ಸವಾರಿಯನ್ನು ಪ್ರೀತಿಸುವವನಾದೆ. ಸುಮಾರು 35 ವರ್ಷಗಳ ನಂತರದಲ್ಲಿ, ನನ್ನ 57ನೇ ವಯಸ್ಸಿನ ಪ್ರಾರಂಭದಲ್ಲಿ ಸೈಕಲ್ ಮೇಲೆ ಕುಳಿತಾಗ ‘ನನ್ನಿಂದ ಇದು ಸಾಧ್ಯವೇ?’ ಎಂದು ಮೂಡಿದ್ದ ಅಳುಕು ಕ್ರಮೇಣ ಮಾಯವಾಗಿ, ಈಗ 66 ದಾಟಿ 67ನೇ ವಯಸ್ಸಿಗೆ ಕಾಲಿಟ್ಟಿರುವ ನಾನು ಕಳೆದ 10 ವರ್ಷದಲ್ಲಿ 30,೦೦೦ ಕಿಲೋಮೀಟರ್ ಮೀರಿ ಸೈಕಲ್ಲಿನಲ್ಲಿ ಕ್ರಮಿಸಿದ್ದೇನೆ. ಬೇಸಿಗೆ, ಚಳಿಗಾಲ, ಹನಿಮಳೆ, ಇನಿತು ದೇಹಶ್ರಮ, ಕೆಲವೊಮ್ಮೆ ಸೈಕಲ್ ಪಂಕ್ಚರ್ ತಾಪತ್ರಯ, ಹಲವು ಬಾರಿ ಬಿದ್ದದ್ದು, ಇದ್ಯಾವುದಕ್ಕೂ ಎಗ್ಗಿಲ್ಲದೆ ಪ್ರತಿನಿತ್ಯ ಸೈಕಲ್ ತುಳಿಯುತ್ತಾ ಬಂದಿದ್ದೇನೆ. ಭಯ ಹಿಡಿಸುವ ದುಬೈನ ಬೇಸಿಗೆಯಲ್ಲೂ ನಾನು ಸೈಕಲ್ ತುಳಿಯುತ್ತೇನೆ.
ಪ್ರತಿನಿತ್ಯ ಸೈಕಲ್ ಸವಾರಿಗೆ ನನ್ನನು ಪ್ರಚೋದಿಸುವುದು ಬೆಳಗಿನ ಆಪ್ತ ಆಹ್ಲಾದ ವಾತಾವರಣ. ಬೆಳಗಿನ ನಸುಕಿನಲ್ಲಿ, ಸೈಕಲ್ನಲ್ಲಿ ರಸ್ತೆಗಿಳಿಯುವಾಗ ಅದೆಂತದ್ದೋ ಒಳಗಿನ ಬೆಳಕು ಹೊರಗಿನ ನಸುಬೆಳಗಿನೊಂದಿಗೆ ಮಿಲನವಾದಂತ ಭಾವ ಆಂತರ್ಯದಲ್ಲಿ ಹರಿಯತೊಡಗುತ್ತದೆ. ಕೇವಲ 13 ಕೆ.ಜಿ. ತೂಕದ ಸೈಕಲ್ಲು ನಾನು ಅದರ ಮೇಲಿದ್ದೇನೆ ಎಂಬ ಭಾವವಿಲ್ಲದೆ ಸುಲಲಿತವಾಗಿ ಸಂಚರಿಸುವಂತೆಯೇ, ನನ್ನ ಆಂತರ್ಯ ಕೂಡಾ ನನ್ನ ದೇಹವೆಂಬ ಭಾರದಿಂದ ಸ್ವತಂತ್ರವಾದಂತಹ ಚಲನೆಯಲ್ಲಿ ಸುಖಿಸತೊಡಗುತ್ತದೆ.
10 ವರ್ಷದ ಹಿಂದೆ ನಾನು ಸೈಕಲ್ ತುಳಿಯಲು ಪ್ರಾರಂಭಿಸುವವರೆವಿಗೂ, ನನಗೆ ನಮ್ಮ ಬೆಂಗಳೂರು ಕೆಟ್ಟು ಕೂತಿದೆ ಎಂಬ ಭಾವವೇ ಮನೆ ಮಾಡಿಕೊಂಡಿತ್ತು. ಒಮ್ಮೆ ಸೈಕಲ್ ತುಳಿಯುವ ಅಭ್ಯಾಸ ಆರಂಭಿಸುತ್ತಿದ್ದಂತೆಯೇ ನಾನು ಹಿಂದೆಂದೋ ಇಷ್ಟಪಟ್ಟಿದ್ದ ಜಾಗಗಳಿಗೆ ಹೋಗಬೇಕು ಅನಿಸತೊಡಗಿತು. ಸಾಮಾನ್ಯವಾಗಿ ಆಟೋದಲ್ಲಾಗಲಿ, ಟ್ಯಾಕ್ಸಿಯಲ್ಲಾಗಲಿ, ಸ್ಕೂಟರಿನಲ್ಲಾಗಲಿ ಕಚೇರಿಗೆ, ಶಾಪಿಂಗಿಗೆ, ಸಿನಿಮಾಗೆ, ಹೋಟೆಲಿಗೆ ಹೀಗೆ ಹೋಗಬೇಕಾದಾಗಲೆಲ್ಲಾ ಟ್ರಾಫಿಕ್ ಅನ್ನು, ರಸ್ತೆ ಪರಿಸ್ಥಿತಿಯನ್ನು, ಹವಾಮಾನವನ್ನು, ರಾಜಕಾರಣಿಗಳನ್ನು, ನಿಯಮ ಉಲ್ಲಂಘನೆಗಳನ್ನು ಹೀಗೆ ಹಲವನ್ನು ಕುರಿತು ಮನವನ್ನು ಕಹಿ ಮಾಡಿಕೊಂಡು ಒತ್ತಡದಲ್ಲಿ ಪಯಣಿಸುವುದೇ ನಮ್ಮ ಜಾಯಮಾನ. ಆದರೆ ಸೈಕಲ್ ಸವಾರಿ ಮಾತ್ರ ನನಗೆ ಹಾಗಲ್ಲ. ಇದು ಪೂರ್ಣ ನನಗಾಗಿ. ಅನಪಾನಸತಿ ಧ್ಯಾನದಲ್ಲಿ ನಮ್ಮ ಉಸಿರಾಟದ ಎಳೆಯನ್ನು ಎಣಿಸುವಷ್ಟೇ ಜಾಗೃತಿಯಲ್ಲಿ, ಸೈಕಲ್ ಸವಾರಿ ಮಾಡುವಾಗ ನನಗೆ ಪೆಡಲ್ ಮೇಲಿನ ನನ್ನ ಕಾಲಿನ ಚಲನೆ, ಸೈಕಲ್ ಚೈನಿನ ಅಲುಗಾಟ, ಚಕ್ರದ ಓಟ, ಹ್ಯಾಂಡಲಿನ ತಿರುಗು, ಮಿಣುಕು ದೀಪದ ಮಿಟುಕು ಮುಂತಾದ ಸೂಕ್ಷ್ಮಗಳೆಲ್ಲ ನನ್ನೊಡನೆ ಸ್ಪಂದಿಸುತ್ತಿರುವ ಅನುಭಾವವಿರುತ್ತದೆ.
ಬಹಳಷ್ಟು ಜನ ಹಾಸಿಗೆ ಸುಖದಲ್ಲಿರುವಾಗಲೇ, ಅಷ್ಟೇಕೆ ಇನ್ನೂ ಆ ಸೂರ್ಯ ಕೂಡಾ ಆಗಸದಲ್ಲಿ ತನ್ನಿರವನ್ನು ಕಾಣಿಸುವುದಕ್ಕೆ ಎಷ್ಟೋ ಮುಂಚೆಯೇ ತರಕಾರಿ-ಹೂವು-ಹಣ್ಣು ಮಾರುವವರು, ಪೇಪರ್ ಹುಡುಗರು, ಹೋಟೆಲಿನ ಕೆಲಸಗಾರರು ತಮ್ಮ ದಿನಚರಿಯ ಬಹುಮುಖ್ಯವಾದ ಕೆಲಸಗಳನ್ನು ಮಾಡಿರುತ್ತಾರೆಂಬ ಸಂವೇದನೆ ನನ್ನಿಂದ ಮರೆಯಾಗಿ ಬಹಳಷ್ಟು ವರುಷಗಳೇ ಕಳೆದಿದ್ದವು. ರಸ್ತೆ ಮತ್ತು ಮೆಟ್ರೊ ಕೆಲಸದವರೆಲ್ಲಾ ಇರುಳಿನಲ್ಲಿ ಯಾವುದರ ಕೆಳಗೆ ಆಶ್ರಯ ಪಡೆದಿರುತ್ತಾರೆ ಎಂಬುದನ್ನು ನಾನು ಯೋಚಿಸಿದ್ದೂ ಅಪರೂಪವೇ. ಇವರುಗಳು ಬೇಸಿಗೆಯಲ್ಲಿ ಫುಟ್ಪಾತಿನಲ್ಲೂ, ಮಳೆಗಾಲದಲ್ಲಿ ಮೆಟ್ರೊ ಸೇತುವೆಯ ಕೆಳಗೂ ತಮ್ಮ ಪುಟ್ಟ ಮಕ್ಕಳನ್ನೊಳಗೊಂಡಂತೆ ಸಮಸ್ತದೊಡನೆ ತಂಗಿರುವುದು ದಿನಂಪ್ರತಿ ಕಾಣುತ್ತದೆ. ಯಾರಾದರೂ ರಸ್ತೆಗಳನ್ನು ಗುಡಿಸುತ್ತಾರೆಯೇ ಎಂಬ ಸಂದೇಹ ಕೂಡಾ ನನ್ನಲ್ಲಿ ಮೂಡುತ್ತಿತ್ತು. ಈ ರಸ್ತೆಗಳನ್ನು ಬಹಳಷ್ಟು ಜನ ಪ್ರಾಮಾಣಿಕವಾಗಿ, ಜೊತೆಗೆ ಎರಡೆರಡೂ ಕೈಗಳಲ್ಲೂ ಗುಡಿಸುವುದು ನನಗೆ ನಿತ್ಯ ಕಂಡಿದೆ. ಹಕ್ಕಿಗಳ ಇಂಚರಕ್ಕೆ ಅಪರೂಪಕ್ಕೊಮ್ಮೆ ನಾ ಕಿವಿಗೊಡುತ್ತಿದ್ದೆ. ತುಂಬಾ ತುಂಬಾ ಅಪರೂಪಕ್ಕೆ ಅರಳಿದ ಹೂಗಳನ್ನು, ಮೂಗ್ಗುಗಳನ್ನು, ಗಿಡ ಮರಗಳನ್ನು ಅನುಭಾವಿಸುತ್ತಿದ್ದೆ. ಸಂಧ್ಯೆಯ ಸೊಬಗಿನ ಆಗಸವನ್ನು ದಿಟ್ಟಿಸಿದ್ದು ಎಂದೋ! ಮುದ ನೀಡುವ ಮಳೆಗಾಲದ ಮಳೆ ಹನಿಗಳಲ್ಲಿ ನೆನೆಯುವ ಸುಖವನ್ನು, ತಣ್ಣನೆಯ ಗಾಳಿಯ ಮೃದು ಸ್ಪರ್ಶವನ್ನು ಪೂರ್ಣವಾಗಿ ಕಳೆದುಕೊಂಡು ಬಿಟ್ಟಿದ್ದೆ. ಈ ಮುದದ ಮಾರುತದ ಸ್ಪರ್ಶವಿದೆಯೆಲ್ಲ ಇದು ನಡೆತಕ್ಕಿಂತ ಸ್ವಲ್ಪ ವೇಗದಲ್ಲಿ ಮತ್ತು ಯಾವುದೇ ಇಂಧನ ವಾಹನದ ವೇಗಕ್ಕಿಂತ ಕಡಿಮೆಯ ವೇಗದಲ್ಲಿ ಮಾತ್ರ ದಕ್ಕುವಂತದ್ದಾಗಿದ್ದು, ಅದು ಸೈಕಲ್ ಚಲನೆಯಲ್ಲಿ ಮಾತ್ರ ದಕ್ಕಲು ಸಾಧ್ಯವಿರುವಂತದ್ದು. ನಾನು ಹಿಂದಿನ ದಶಕಗಳಲ್ಲಿ ಭೇಟಿ ನೀಡುತ್ತಿದ್ದ ಕಬ್ಬನ್ ಪಾರ್ಕ್, ಲಾಲ್ಬಾಗ್, ದೊಡ್ಡ ಆಲದ ಮರ, ಮುತ್ಯಾಲ ಮಡುವು, ಹೊರ ವಲಯದಲ್ಲಿರುವ ಕೃಷಿ ಭೂಮಿ, ನಮ್ಮ ಸುಂದರ ದೇಗುಲಗಳು ಇವನ್ನೆಲ್ಲಾ, ಇಲ್ಲೇ ಇರುವುದೇ ತಾನೇ ಎಂದು ಉಪೇಕ್ಷಿಸಿದ್ದೆ. ನನ್ನ ಸೈಕಲ್ಲು ನಾನು ಕಳೆದುಕೊಂಡಿದ್ದ ಇಂತಹ ಎಲ್ಲ ಸೌಭಾಗ್ಯಗಳ ಸಖ್ಯಕ್ಕೆ ಪುನಃ ನನ್ನನ್ನು ಕರೆತಂದಿತು.
ನಾನು ಸೈಕಲ್ ಪುನರಾರಂಭಿಸಿದ ಎರಡು ವರ್ಷಗಳಲ್ಲಿ ದುಬೈಗೆ ಉದ್ಯೋಗದ ನಿಮಿತ್ತ ಬರಬೇಕಾಯಿತು. ದುಬೈನಲ್ಲಿನ ಬಿರುಸಿನ ವಾಹನ ಸಂಚಾರದ ರಸ್ರೆಗಳಲ್ಲಿ ನಾನು ಸೈಕಲ್ ಹತ್ತಿದಂತೆಯೇ ಎಂದುಕೊಂಡಿದ್ದೇ. ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಇಲ್ಲಿನ ಸುಂದರ ರಸ್ತೆಯ ಬದಿಗಳಲ್ಲಿ ಹಾಗೂ ಕೊಳಗಳ ಆಸುಪಾಸಿನಲ್ಲಿ ನನ್ನ ಸೈಕಲ್ ಸರಾಗವಾಗಿ ಹರಿಯುತ್ತಿದೆ.
ನಾನು ಈಗ ಪ್ರತಿ ದಿನವೂ ಸೂರ್ಯೋದಯವನ್ನು ಕಾಣುತ್ತಿದ್ದೇನೆ, ಪ್ರತಿದಿನ ಹಕ್ಕಿಗಳ ಸಂಗೀತವನ್ನು ಕೇಳುತ್ತಿದ್ದೇನೆ. ಹೂವುಗಳನ್ನು ಮಾತ್ರವಲ್ಲ, ನಮ್ಮ ಕಬ್ಬನ್ ಪಾರ್ಕ್,ಲಾಲ್ಬಾಗಿನಲ್ಲಿರುವ ಇಂಚಿಂಚು ಹುಲ್ಲನ್ನೂ , ಮತ್ತು ಈಗಿರುವ ದುಬೈನಲ್ಲಿನ ಹೂವುಗಳನ್ನೂ, ಸಮುದ್ರದಲೆಗಳನ್ನೂ ಆನಂದಿಸುತ್ತಿದ್ದೇನೆ. ಗಿಣಿಗಳು, ಪಾರಿವಾಳಗಳು, ಅಳಿಲುಗಳು, ಕಾಗೆಗಳು, ಕೋತಿಗಳು ಮುಂತಾದವುಗಳನ್ನು ನಾನು ಇಷ್ಟೊಂದು ಹತ್ತಿರದಿಂದ, ಆಪ್ತತೆಯಿಂದ ಹಿಂದೆಂದೂ ಕಂಡವನಾಗಿರಲಿಲ್ಲ. ನೋಡಿದರಾಯಿತು ಎಂದುಕೊಂಡು ಬಿಟ್ಟಿದ್ದ ಅನೇಕ ಸುಂದರಾದ್ಭುತ ಸ್ಥಾವರಗಳನ್ನು ಕಂಡಿದ್ದೇನೆ. ಈ ಎಲ್ಲ ಸಂದರ್ಭಗಳಲ್ಲಿ ನನ್ನೊಡನಿರುವ ಐಫೋನು ಅದು ಮಾತನಾಡುವ ಸಾಧನ ಎಂಬುದಕ್ಕಿಂತ ಹೆಚ್ಚಾಗಿ ಕ್ಯಾಮೆರಾ ಕಣ್ಣಾಗಿ ಕೆಲಸ ಮಾಡುತ್ತಿದೆ. ಇವೆಲ್ಲಕ್ಕೂ ಮಿಗಿಲೆಂಬಂತೆ, ನನ್ನ ಹೃದಯಾಂತರಾಳವು ಬಗೆ ಬಗೆಯ ಬದುಕಿನ ಸೌಂದರ್ಯದ ತೆನೆಗಳನ್ನು ಬೆಳೆಯಲಿಕ್ಕೆ ಆಸ್ಪದವೀಯಬಲ್ಲ ನೆಲದಂತೆ, ಫಲವತ್ತತೆಯಿಂದಿರುವುದು ನನ್ನ ಅನುಭಾವಕ್ಕೆ ಬಂದಿದೆ.
ಇವತ್ತು ಸೈಕಲ್ನಲ್ಲಿ ಸವಾರಿಸುವಾಗ ಒಂದು ವಿಶಿಷ್ಟ ಹೊಳಹು ಮೂಡಿತು. ನಾ ಪ್ರತಿದಿನ ಕಚೇರಿಗೆ ಬರುವ ದಾರಿಯಲ್ಲಿ ಒಂದು ಜಾಗದಲ್ಲಿ ಒಂದಿನಿತು ಜಾಗ ಕಿರಿದಾಗಿದೆ. ಆ ಜಾಗದಲ್ಲಿ ಬಂದಾಗ ಯಾರೋ ನನ್ನ ಸರಾಗ ಹರಿಯುವಿಕೆಯನ್ನು ತಡೆದ ತೆಳು ಅಹಮಿಕೆಯ ಭಾವ ಕಾಡುತ್ತದೆ. ಇಂದು ಅನಿಸಿತು. ಈ ಒಂದು ಪುಟ್ಟ ತಡೆಯನ್ನು ನನ್ನ ಮನ ಸಹಜ ಎಂಬಂತೆ, ಒಂದು ಕ್ಷಣ ನಿಂತತೆ ಮಾಡಿ ಯಾಕೆ ಸರಾಗವಾಗಿ ತೆಗೆದುಕೊಳ್ಳುತ್ತಿಲ್ಲ! ಯಾಕೊ ಕಣ್ತೆರೆಸಿದ ದೈವ ನೆನೆದು ಕಣ್ತುಂಬಿ ಬಂತು. ಬದುಕಿನಲ್ಲಿ ಬರುವ ಸಣ್ಣ ಪುಟ್ಟ ತಡೆಗಳು ನಮಗೆ ಒಂದು ಕ್ಷಣ ನಿಂತು ಮೌನದಾಲಿಕೆಯ ಅರಿವಿನಲ್ಲಿ ಬದುಕಲಿರುವ ಅಮೂಲ್ಯ ಸದಾವಕಾಶಗಳು.
ಆತನ ಕೃಪೆಯಿರುವವರೆಗೆ, ನಾವವನು ಹೇಳುವ ಮೌನದಲಿನ ಸಂಜ್ಞೆಗಳನು ಆಲಿಸುತ ಸಾಗುತ್ತಿರುವವರೆಗೆ, ಈ ಪಯಣ ಅವನೊಂದಿಗೆಂದೆಂದೂ ಸುಂದರವೆ!
(ಇದರ ಮೂಲ ಲೇಖನವನ್ನು ಕೆಲವು ವರ್ಷಗಳ ಹಿಂದೆ ಆತ್ಮೀಯ ಪತ್ರಕರ್ತೆ ಶ್ರೀದೇವಿ ಕಳಸದ ಅವರ ಒತ್ತಾಸೆಯಿಂದ ಬರೆದಿದ್ದೆ. ಇಂದು ಕಾಲದ ಬದಲಾವಣೆಯೊಂದಿಗೆ ಒಂದಷ್ಟು ಬಾಲ ಅಂಟಿಸಿದ್ದೇನೆ)
Affectionate respectful remembrances: Manjula Babaladi and Shreedevi Kalasad
ಕಾಮೆಂಟ್‌ಗಳು