ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಾದೇವ ರಾನಡೆ


 ಮಹಾದೇವ ಗೋವಿಂದ ರಾನಡೆ 

On the birth anniversary of great social reformer, historian, jurist and economist Mahadeva Govinda Ramada

ಮಹಾದೇವ ಗೋವಿಂದ ರಾನಡೆ ಭಾರತದ ಪ್ರಸಿದ್ಧ ಸಮಾಜ ಸುಧಾರಕ, ರಾಜನೀತಿಜ್ಞ, ಇತಿಹಾಸಕಾರ, ನ್ಯಾಯಾಧೀಶ ಹಾಗೂ ಅರ್ಥಶಾಸ್ತ್ರಜ್ಞ. 

ರಾನಡೆ 1842ರ ಜನವರಿ 18ರಂದು ಪುಣೆಯ ನಿಫಾದ್‍ನಲ್ಲಿ ಜನಿಸಿದರು. ತಾಯಿ ಗೋಪಿಕಾಬಾಯಿ, ತಂದೆ ಗೋವಿಂದರಾಯ.
ತಂದೆ ಕೊಲ್ಹಾಪುರದಲ್ಲಿ ನೌಕರಿ ಮಾಡುತ್ತಿದ್ದುದರಿಂದ ಅಲ್ಲಿಯ ರಾಜಾರಾಮ್ ಶಾಲೆ ಸೇರಿದರು. ಅಲ್ಲಿ ಮರಾಠಿ ಮಾಧ್ಯಮವಿತ್ತು. ಅನಂತರ ಆಂಗ್ಲಮಾಧ್ಯಮ ಶಾಲೆ ಸೇರಿದರು(1851-56). ಹನ್ನೆರಡನೆಯ ವರ್ಷದಲ್ಲಿ ಇವರ ತಾಯಿ ತೀರಿಕೊಂಡರು. ಮುಂಬಯಿಯ ಎಲ್ಫಿನ್‍ಸ್ಟನ್ ವಿದ್ಯಾಸಂಸ್ಥೆ ಸೇರಿ(1857) ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪ್ರಥಮವಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಪ್ರಾರಂಭವಾದಾಗ ಅದರಲ್ಲಿ ಉತ್ತೀರ್ಣರಾದ 21 ವಿದ್ಯಾರ್ಥಿಗಳಲ್ಲಿ ಇವರು ಒಬ್ಬರು. 1862 ಏಪ್ರಿಲ್‍ನಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.ಪದವಿ ಪಡೆದರು. ಆನರ್ಸ್‍ನಲ್ಲಿ ಚಿನ್ನದ ಪದಕಗಳಿಸಿದರು. 1864ರಲ್ಲಿ ಎಂ.ಎ.ಪದವಿ ಪಡೆದರು. ಅದೇ ವರ್ಷ ಪ್ರಥಮ ಶ್ರೇಣಿಯಲ್ಲಿ ಎಲ್.ಎಲ್.ಬಿ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದರು. ಅಡ್ವೊಕೇಟ್ ಪರೀಕ್ಷೆ ಪಾಸಾದದ್ದು 1877ರಲ್ಲಿ. ಮುಂಬಯಿ ವಿಶ್ವವಿದ್ಯಾಲಯದ ಫೆಲೋ(1815) ಆದ ಭಾರತೀಯರಲ್ಲಿ ಇವರೇ ಮೊದಲಿಗರು.

ಮಹಾದೇವ ಗೋವಿಂದ ರಾನಡೆ ಮೊದಲಿಗೆ ಮುಂಬಯಿ ಸರ್ಕಾರದ ಭಾಷಾಂತರಕಾರರಾಗಿ (1862) ಅನಂತರ ಅಕ್ಕಲಕೋಟೆಯ ಆಡಳಿತಗಾರರಾಗಿ ಸೇವೆ ಸಲ್ಲಿಸಿದರು. 1863ರಲ್ಲಿ ಎಲ್ಫಿನ್‍ಸ್ಟನ್ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. 1868ರಿಂದ 71ರ ತನಕ ಅದೇ ಕಾಲೇಜಿನಲ್ಲಿ ಇತಿಹಾಸ ಮತ್ತು ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. 1871ರಲ್ಲಿ ಮೊದಲನೆಯ ದರ್ಜೆಯ ಸಬಾರ್ಡಿನೇಟ್ ನ್ಯಾಯಾಧೀಶರಾಗಿ ಪುಣೆಗೆ ಹೋದರು. 1873ರಲ್ಲಿ ಪ್ರಥಮ ದರ್ಜೆಯ ಉಪನ್ಯಾಯಾಧೀಶರಾದರು. 1878ರಲ್ಲಿ ಅಮೀನರಾಗಿ ನಾಸಿಕಕ್ಕೆ ವರ್ಗವಾಗಿ ಹೋದರು. 1881ರಲ್ಲಿ ಮುಂಬಯಿಯ ಪ್ರೆಸಿಡೆನ್ಸಿ ನ್ಯಾಯಾಧೀಶರಾಗಿ ನೇಮಕಗೊಂಡರು. 1884ರಲ್ಲಿ ಲಘುವ್ಯಾಜ್ಯಗಳ ನ್ಯಾಯಾಧೀಶರಾಗಿ ನೇಮಕಗೊಂಡು ಪುಣೆಗೆ ತೆರಳಿದರು. 1896ರಲ್ಲಿ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡು ಜೀವಿತದ ಕೊನೆಯ ತನಕವೂ ಆ ಹುದ್ದೆಯಲ್ಲಿದ್ದರು. ಮೊಕದ್ದಮೆಯ ಪೂರ್ಣ ಸಮಾಲೋಚನೆ, ಸಾವಧಾನತೆ, ವಿವರಗಳ ಪರಿಶೀಲನೆ, ದಾಖಲೆಗಳ ಸೂಕ್ಷ್ಮಪರೀಕ್ಷೆ, ವಾಸ್ತವಾಂಶಗಳ ಚೊಕ್ಕ ನಿರೂಪಣೆ, ರುಜುವಾತುಗಳ ಸರಿಯಾದ ಗ್ರಹಿಕೆ, ಕಡೆಯ ನಿರ್ಣಯಕ್ಕೆ ಒಯ್ಯುವ ತರ್ಕಬದ್ದ ವಾದಸರಣಿ ಇವೆಲ್ಲ ಗುಣಗಳಿಂದಾಗಿ ಮೂವತ್ತರ ಹರೆಯದಲ್ಲೇ ಇವರು ನೀಡಿದ ತೀರ್ಪುಗಳು ಶ್ರೇಷ್ಠ ನ್ಯಾಯಾಲಯದ ಮೆಚ್ಚುಗೆ ಪಡೆದಿದ್ದವು. 

1886ರಲ್ಲಿ ಸರ್ಕಾರದ ವೆಚ್ಚಗಳನ್ನು ಪರಿಶೀಲಿಸಿ ಉಳಿತಾಯದ ಮಾರ್ಗಗಳನ್ನು ಸೂಚಿಸಲು ಸರ್ಕಾರ ರಚಿಸಿದ ಸಮಿತಿಗೆ ರಾನಡೆ ಅವರನ್ನು ಓರ್ವ ಸದಸ್ಯರಾಗಿ ನೇಮಿಸಲಾಯಿತು. ಆ ಸಮಿತಿಯಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗಾಗಿ ಸಿ.ಐ.ಇ. ಎಂಬ ಬಿರುದು ಇವರಿಗೆ ಲಭಿಸಿತು(1887). ಇವರು 1885, 1890, 1893ರಲ್ಲಿ ಮುಂಬಯಿ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.

ರಾನಡೆಯವರು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಅವುಗಳಲ್ಲಿ ಸಮಾಜಸೇವೆ, ರಾಜಕಾರಣ ಮತ್ತು ಆರ್ಥಿಕ ನೀತಿ ನಿರೂಪಣೆಯ ಕ್ಷೇತ್ರಗಳು ಉಲ್ಲೇಖಾರ್ಹವಾದವು. ಸ್ತ್ರೀಶಿಕ್ಷಣದ ಪ್ರಚಾರ, ಬಾಲ್ಯವಿವಾಹ ಮತ್ತು ಜಾತಿಭೇದಗಳ ವಿರೋಧ, ವಿಧವಾ ವಿವಾಹದ ಸಮರ್ಥನೆ, ಸಾಮಾಜಿಕ ದುಷ್ಟ ಸಂಪ್ರದಾಯಗಳ ಖಂಡನೆ ಹೀಗೆ ಹತ್ತಾರು ವಿಧದಲ್ಲಿ ಸಮಾಜ ಸುಧಾರಣೆಗಾಗಿ ಸರ್ಕಾರಿ ನೌಕರಿಯಲ್ಲಿದ್ದೇ ಶ್ರಮಿಸಿದರು. 

ರಾನಡೆಯವರು ಕೇಶವಚಂದ್ರಸೇನರಿಂದ ಮುಂಬಯಿಯಲ್ಲಿ ಸ್ಥಾಪಿತವಾದ (1867) ಪ್ರಾರ್ಥನಾ ಸಮಾಜದ ಅನುಯಾಯಿಗಳಾಗಿದ್ದರು. ಇದರ ಮೂಲಕ ಭಾರತೀಯತ್ವ ಜಾಗೃತಿಗೊಳ್ಳುವಂತೆ ಶ್ರಮಿಸಿದರು. ಮಿತ್ರರ ನೆರವಿನಿಂದ ಪುಣೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಪ್ರೌಢಶಾಲೆಯೊಂದನ್ನು ಪ್ರಾರಂಭಿಸಿದರು (1882). ಪಂಡಿತ ರಮಾಬಾಯಿಯವರಿಂದ ಸ್ಥಾಪಿತವಾದ ಶಾರದಾ ಸದನದ ಬೆನ್ನೆಲುಬಾಗಿ ದುಡಿದರು. ಸಮಾಜ ಸುಧಾರಣೆಗಾಗಿ ಇವರು ಮಾಡಿದ ಕೆಲಸಗಳಲ್ಲಿ ಅದ್ವಿತೀಯವಾದದ್ದು ಭಾರತ ರಾಷ್ಟ್ರೀಯ ಸಮಾಜ, ಸಮ್ಮೇಳನದಲ್ಲಿ ಸಲ್ಲಿಸಿದ ಸೇವೆ. ಸಾಮಾಜಿಕ ಅನ್ಯಾಯಗಳನ್ನು ಎದುರಿಸುವುದಕ್ಕಾಗಿ ದೇಶದ ತುಂಬೆಲ್ಲ ಹರಡಿದ್ದ ಸಂಘಗಳ ಪ್ರತಿನಿಧಿಗಳನ್ನು ವರ್ಷಕ್ಕೊಮ್ಮೆ ಒಂದೆಡೆ ಸೇರಿಸಿ ಅವರಲ್ಲಿನ ಸುಧಾರಣಾ ಶಕ್ತಿಗಳನ್ನು ಬಲಪಡಿಸುವುದು ಈ ಸಮ್ಮೇಳನದ ಉದ್ದೇಶ. ಇದರ ಪ್ರಧಾನ ಕಾರ್ಯಕರ್ತರಾಗಿ ರಾನಡೆಯವರು ಮದರಾಸು, ಮುಂಬಯಿ, ನಾಗಪುರ, ಅಮರಾವತಿ, ಸತಾರಾ ಮುಂತಾದೆಡೆಗಳಲ್ಲಿ ಸಮ್ಮೇಳನಗಳನ್ನು ಏರ್ಪಡಿಸಿದರು. ಸುಮಾರು 20-30 ವರ್ಷಗಳ ಕಾಲ ಇವರು ಸುಧಾರಣಾ ಚಳವಳಿಯ ಜೀವಾಳವಾಗಿದ್ದರು. 

ರಾನಡೆಯವರು 19ನೆಯ ಶತಮಾನದ ಕಡೆಯ 25ವರ್ಷಗಳಲ್ಲಿ ಭಾರತದ ಅನೇಕ ರಾಜಕೀಯ ಚಳವಳಿಗೆ ಸ್ಫೂರ್ತಿದಾತರಾದರು. ಕಾಂಗ್ರೆಸ್ಸಿನ ಜನಕರೆಂದು ಪ್ರಸಿದ್ಧರಾದ ಎ.ಓ.ಹ್ಯೂಮ್ ರಾನಡೆಯವರನ್ನು ತಮ್ಮ ರಾಜಕೀಯ ಗುರು ಎಂದೇ ಹೇಳುತ್ತಿದ್ದರು. ರಾಜಕೀಯ ವಿಷಯದಲ್ಲಿ ಪ್ರಕಾಂಡ ಪಂಡಿತರಾಗಿದ್ದ ಇವರು ಬ್ರಿಟಿಷ್ ಭಾರತದ ಸರ್ಕಾರದಲ್ಲಿ ಉಚ್ಚಪದಾಧಿಕಾರಿಯಾಗಿದ್ದರೂ ಸ್ವದೇಶದಲ್ಲಿ ನಡೆಯುತ್ತಿದ್ದ ಎಲ್ಲ ರಾಜಕೀಯ ಆಂದೋಲನಗಳ ಕ್ರಿಯಾತ್ಮಕ ಕಾರ್ಯಕರ್ತರಾಗಿದ್ದುದೂ ಒಂದು ವಿಶೇಷ. ಇವರ ರಾಜಕೀಯ ವಿಚಾರಧಾರೆ, ಇವರು ಮಾಡಿದ ಭಾಷಣಗಳು, ಕಾಲಕಾಲಕ್ಕೆ ಬರೆಯುತ್ತಿದ್ದ ಲೇಖನಗಳೂ ಈ ಮೂಲಕ ಇವರ ಬಹುಮುಖ ವ್ಯಕ್ತಿತ್ವದ ಪ್ರತಿಭೆ ಸ್ಪಷ್ಟವಾಗುತ್ತದೆ. ಸ್ವದೇಶದ ದೋಷ ದೌರ್ಬಲ್ಯಗಳನ್ನು ಮುಚ್ಚುಮರೆಯಿಲ್ಲದೇ ಒಪ್ಪಿಕೊಳ್ಳುತ್ತಿದ್ದರು. ಸರ್ಕಾರದ ದೋಷಗಳನ್ನು ನಿರ್ಭಯವಾಗಿ ಟೀಕಿಸುತ್ತಿದ್ದರು. ಇದರೊಂದಿಗೆ ಬ್ರಿಟಿಷ್ ಸಂಬಂಧವನ್ನು ಅವರು ಮನಃಪೂರ್ವಕವಾಗಿ ಒಪ್ಪಿದ್ದರು. 

ರಾನಡೆಯವರು ಉದ್ಯೋಗದಲ್ಲಿದ್ದಾಗ ಎಲ್ಲೆಲ್ಲಿ ಪ್ರಯಾಣ ಹೋಗಬೇಕಾಗಿ ಬರುತ್ತಿತ್ತೋ ಅಲ್ಲೆಲ್ಲ ಜನರಲ್ಲಿ ನವಉತ್ಸಾಹ ತುಂಬುವ ಕಾರ್ಯ ಮಾಡಿದರು. ಅನೇಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದರು. ಕೆಲವು ಸಂಘಗಳು ನವಚೈತನ್ಯ ಪಡೆದವು. ಗಣೇಶ ವಾಸುದೇವ ಜೋಶಿ ಅವರಿಂದ ಸ್ಥಾಪಿತವಾದ ಸಾರ್ವಜನಿಕ ಸಭಾಕ್ಕೆ ಸುಮಾರು 22 ವರ್ಷಗಳ ಕಾಲ ರಾನಡೆಯವರು ಬೆನ್ನೆಲುಬಾಗಿದ್ದರು. ಪಶ್ಚಿಮ ಭಾರತದಲ್ಲಿ ಜನಜಾಗೃತಿಯನ್ನುಂಟುಮಾಡುವಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ವಿಚಾರಗಳಲ್ಲಿ ಸಾರ್ವಜನಿಕ ಅಭಿಪ್ರಾಯ ರೂಪಿಸುವುದರಲ್ಲಿ ಸಾರ್ವಜನಿಕ ಸಭಾ ಅಂದು ಪ್ರಮುಖ ಪಾತ್ರವಹಿಸುವಂತೆ ಮಾಡಿದರು. ದೇಶದ ಪ್ರಗತಿಪರ ಬದಲಾವಣೆಯಲ್ಲಿ ಪಾಶ್ಚಾತ್ಯ ಶಿಕ್ಷಣ ಮಹತ್ತರ ಪಾತ್ರ ನಿರ್ವಹಿಸಬಲ್ಲುದೆಂಬ ವಿಶ್ವಾಸ ಹೊಂದಿದ್ದ ಇವರು ಪಾಶ್ಚಾತ್ಯ ಶಿಕ್ಷಣದ ಪ್ರಸಾರಕ್ಕಾಗಿ ಕಾಲೇಜೊಂದನ್ನು ಸ್ಥಾಪಿಸಲು ಡೆಕ್ಕನ್ ಎಜ್ಯುಕೇಶನ್ ಸೊಸೈಟಿಯ ಹೊಣೆ ಹೊತ್ತರು. ಇದರ ಫಲವಾಗಿ ಫರ್ಗೂಸನ್ ಕಾಲೇಜು ಅಸ್ತಿತ್ವಕ್ಕೆ ಬಂತು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಇವರು ಗೋಪಾಲಕೃಷ್ಣ ಗೋಖಲೆಯವರ ರಾಜಕೀಯ ಗುರುಗಳೂ ಆಗಿದ್ದರು. 

ಕರ್ವೆಯವರು ಹೇಳುವಂತೆ ರಾನಡೆಯವರ ಕಾಲದ 22 ವರ್ಷದ ಇತಿಹಾಸ ಪುಣೆಯ ರಾಜಕೀಯ ಇತಿಹಾಸವೂ ಹೌದು.
ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ದೇಶದ ಅಭ್ಯುದಯವಿದೆ ಎಂದು ತಿಳಿದ ರಾನಡೆಯವರು ಭಾರತದ ಆರ್ಥಿಕ ಅಭಿವೃದ್ಧಿಯ ಸ್ಥಿತಿಗತಿಗಳನ್ನು ಮೊದಲು ನಮೂದಿಸಿದ ಅರ್ಥಶಾಸ್ತ್ರಜ್ಞರು. ಆಂಗ್ಲ ಅರ್ಥಶಾಸ್ತ್ರಜ್ಞರ ಸಿದ್ಧಾಂತಗಳನ್ನು ಭಾರತದ ಪರಿಸ್ಥಿತಿಯ ದೃಷ್ಟಿಯಿಂದ ಅಲ್ಲಗಳೆದವರಲ್ಲಿ ಮೊದಲಿಗರು. ಕೈಗಾರಿಕಾ ಮತ್ತು ಕೃಷಿ ಅಭಿವೃದ್ಧಿಯಲ್ಲಿ ಸರ್ಕಾರ ನೇರವಾದ ಹಾಗೂ ಕ್ರಮಬದ್ಧ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ವಾದಿಸಿದವರಲ್ಲಿ ಇವರೇ ಆದ್ಯರು. ಹೀಗೆ ರಾನಡೆಯವರು ಭಾರತದ ಯೋಜನಾಬದ್ಧ ಪ್ರಗತಿಯ ಪ್ರವರ್ತಕರೆನಿಸಿಕೊಂಡರು. ರಾಜಕೀಯ, ಸಾಮಾಜಿಕ ಚಳವಳಿಗೆ ಪೂರಕವಾಗಿ ಕೈಗಾರಿಕಾ ಚಳವಳಿ ಅಗತ್ಯವೆಂದು ತಿಳಿದಿದ್ದ ಇವರು ಪುಣೆಯಲ್ಲಿ ಪ್ರಥಮ ಕೈಗಾರಿಕಾ ಸಮ್ಮೇಳನ ನಡೆಸಿದರು (1890). ನೆದರ್ಲೆಂಡ್ಸ್, ಭಾರತ ಮತ್ತು ವ್ಯವಸಾಯ ಪದ್ಧತಿ ಎಂಬ ಲೇಖನವನ್ನು ಆ ಸಮ್ಮೇಳನದಲ್ಲಿ ಮಂಡಿಸಿದರು. 1872 ರಲ್ಲಿ ಬರೆದ ಮರಾಠಾ ಜಿಲ್ಲೆಗಳಲ್ಲಿಯ ಅರ್ಥಿಕ ಸ್ಥಿತಿ, ರೆಡವಿನ್ಯೂ ಮೆನ್ಯುಯಲ್ ಆಫ್ ದಿ ಬ್ರಿಟಿಷ್ ಎಂಪಾಯರ್ ಇನ್ ಇಂಡಿಯಾ, ಮುಂಬಯಿ ಪ್ರಾಂತ್ಯದಲ್ಲಿ ಬರಗಾಲದ ಆಡಳಿತ ಮುಂತಾದ ಮಹತ್ತ್ವವನ್ನು ತೋರಿಸುತ್ತದೆ. ರಾನಡೆಯವರು ಮುಖ್ಯವಾಗಿ ಫ್ರೆಂಚ್ ಅರ್ಥಶಾಸ್ತ್ರಜ್ಞರಿಂದಲೂ ಅಮೆರಿಕನ್ ವಿಚಾರವಾದಿಗಳಾದ ಹ್ಯಾಮಿಲ್ಟನ್ ಮತ್ತು ಕ್ಯಾರ ಅವರಿಂದಲೂ ಪ್ರಭಾವಿತರಾಗಿದ್ದರು. ಜರ್ಮನ್ ಪಂಥದ ಅರ್ಥಶಾಸ್ತ್ರಜ್ಞರಾದರೂ ಕ್ಲೀಸ್, ರೂಶ್ಚರ್, ಹಿಲ್ಡೆಬ್ರಾಂಡ್, ವ್ಯಾಗ್ನರ್ ಮುಂತಾದವರ ಅಭಿಪ್ರಾಯದ ರೀತ್ಯಾ ಅರ್ಥಶಾಸ್ತ್ರ ಸಚೇತನವಾದ ಸಾಪೇಕ್ಷತಾವಾದ, ಸಾಮಾಜಿಕ ಚಾರಿತ್ರಿಕ ಸಿದ್ಧಾಂತವೆಂದು ಇವರು ಭಾವಿಸಿದ್ಧರು. 

ಸಾರ್ವಜನಿಕರನ್ನು ಪ್ರತಿನಿಧಿಸುವ ಸರ್ಕಾರಕ್ಕೆ ಸಾರ್ವಜನಿಕ ಹಿತದೃಷ್ಟಿಯಲ್ಲಿ ಅತಿ ಮುಖ್ಯವಾಗಿ ಮಾಡಬೇಕಾದ ಎಲ್ಲ ಕಾರ್ಯಗಳನ್ನು ಮಾಡುವ ಹಕ್ಕು ಮಾತ್ರವಲ್ಲ. ಅಧಿಕಾರವೂ ಇದೆ ಎಂದೂ ಸಾರಿದವರು ರಾನಡೆ. ರಾನಡೆ ಉತ್ತಮ ಲೇಖಕರು ಕೂಡ. 1862 ರಷ್ಟು ಮೊದಲೇ ಇಂದು ಪ್ರಕಾಶ ಎಂಬ ಇಂಗ್ಲಿಷ್ - ಮರಾಠಿ ವಾರಪತ್ರಿಕೆಯ ಇಂಗ್ಲಿಷ್ ವಿಭಾಗದ ಸಂಪಾದಕರಾಗಿದ್ದರು. ಅಂದಿನಿಂದ 1901 ರ ತನಕ ಬರೆದ ನೂರಾರು ಲೇಖನಗಳು ಸಮಕಾಲೀನವಾಗಿಯೂ ಪ್ರಾಮುಖ್ಯ ಪಡೆಯುವಂಥವು. ಉದಾಹರಣೆಗೆ ವಿದ್ಯಾವಂತ ತರುಣರ ಕರ್ತವ್ಯಗಳು (1859), ಮರಾಠ ರಾಜರು ಮತ್ತು ಶ್ರೀಮಂತರು (1860) ಜನಸಂಖ್ಯೆಯ ಬೆಳೆವಣಿಗೆಯ ದುಷ್ಪರಿಣಾಮಗಳು (1864), ದೇಶೀಯ ಸಂಸ್ಥಾನಗಳಿಗೊಂದು ಸಂಘಟನೆ (1880), ಪ್ರಾಥಮಿಕ ವಿದ್ಯಾಭ್ಯಾಸ ಮತ್ತು ದೇಶೀಯ ಶಾಲೆಗಳು (1882). ಸಾರ್ವಜನಿಕಸಭಾದ ತ್ರೈಮಾಸಿಕ ಪತ್ರಿಕೆಯಲ್ಲಿ ಸುಮಾರು 19 ವರ್ಷಗಳ ಕಾಲ ಪ್ರಮುಖ ಲೇಖನಗಳನ್ನು ಪ್ರಕಟಿಸಿದರು. ಹದವರಿತ ನಿರೂಪಣೆ, ವಿಚಾರವಂತ ಪ್ರಶಂಸೆ, ನೇರ, ಸ್ವತಂತ್ರ ವಿಮರ್ಶೆ ಇವರ ಲೇಖನಿಯ ಗುಣ. ಭಾರತೀಯ ಅರ್ಥಶಾಸ್ತ್ರದ ಪ್ರಬಂಧಗಳು ಇವರ ಮಹತ್ವದ ಗ್ರಂಥ. 

ಮಹಾದೇವ ಗೋವಿಂದ ರಾನಡೆ ಅವರು 1901ರ ಜನವರಿ 16 ರಂದು ನಿಧನರಾದರು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ