ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೋಜಾರ್ಟ್

ಮೋಜಾರ್ಟ್

ವುಲ್ಫ್‍ಗ್ಯಾಂಗ್ ಅಮಾಡಿಯಸ್ ಮೋಜಾರ್ಟ್ ಜಗತ್ಪ್ರಸಿದ್ಧ ಸಂಗೀತಗಾರ. 

ಮೋಜಾರ್ಟ್ ಆಸ್ಟ್ರಿಯದ ಸಾಲ್ಸ್‍ಬರ್ಗ್‍ನಲ್ಲಿ 1756ರ ಜನವರಿ 27ರಂದು ಜನಿಸಿದ. ಇವನ ತಂದೆ ಯೋಹಾನ್ ಜಾರ್ಜ್ ಲಿಯೊಪಾಲ್ಡ್ ಮೋಜಾರ್ಟ್ (1719-87) ಕೂಡ ಸಂಗೀತಗಾರನಾಗಿದ್ದ. ಬಾಲ್ಯದಲ್ಲಿ ಇಂಥ ಸಂಗೀತ ಪರಿಸರ ಮೋಜಾರ್ಟ್‍ನಲ್ಲಿ ಸಂಗೀತದ ಬಗ್ಗೆ ಪ್ರೀತಿಮೂಡುವಂತೆ ಮಾಡಿತು. ಸ್ಮರಣ ಸಾಮರ್ಥ್ಯ, ಕಛೇರಿ ಸಾಮರ್ಥ್ಯ, ವಾಗ್ಗೇಯಕಾರಕತ್ವ, ಸಂಗೀತ ರಚನಾವೈವಿಧ್ಯೆ, ನಾದಶಾಸ್ತ್ರೀಯಸೂಕ್ಷ್ಮ ಸಂವೇದನೆ ಇತ್ಯಾದಿ ಗುಣಗಳಿಂದ ಈತ ಪಾಶ್ಚಿಮಾತ್ಯಸಂಗೀತದ ವಿಭೂತಿಪುರುಷರಲ್ಲಿ ಅಗ್ರಗಣ್ಯನೆನಿಸಿಕೊಂಡ. 

3ನೆಯ ವಯಸ್ಸಿನಲ್ಲಿಯೇ ಮೋಜಾರ್ಟನಲ್ಲಿ ಸಂಗೀತ ಪ್ರತಿಭೆ ಗೋಚರವಾಯಿತು. ತಂದೆಯೊಡನೆ ಸೋದರರೊಡಗೂಡಿ ಯುರೋಪಿನ ಎಲ್ಲ ಪ್ರಮುಖ ಸಂಗೀತಕೇಂದ್ರಗಳಲ್ಲೂ ರಾಜಸ್ಥಾನಗಳಲ್ಲೂ ಸ್ವಂತ ಮತ್ತು ಇತರರ ರಚನೆಗಳ ಕಛೇರಿಗಳನ್ನು ನಡೆಸಿ, ಬೇರೆಯವರ ಸಹಾಯವಿಲ್ಲದೆ ತಾನೇ ಅರ್ಜಿಸಿಕೊಂಡ. ಹಲವು ಸಂಗೀತವಾದ್ಯಗಳ ವಾದನ ಮತ್ತು ಗಾಯನದ ಅದ್ಭುತದಿಂದಲೂ ಆಶುರಚನಾಪ್ರತಿಭೆಯಿಂದಲೂ ಗರಿಷ್ಠ ಪುರಸ್ಕಾರ ಪ್ರಶಸ್ತಿಗಳನ್ನು 10ನೆಯ ವಯಸ್ಸಿನಲ್ಲೇ ಗಳಿಸಿದ. ಸ್ವಂತರಚನೆಗಳು 7ನೆಯ ವಯಸ್ಸಿನಲ್ಲೇ ಪ್ರಕಟವಾಗತೊಡಗಿದವು. 12ನೆಯ ವಯಸ್ಸಿನಲ್ಲಿ ತಾನೇ ರಚಿಸಿದ `ಮಾಸ್ ಪ್ರಬಂಧ’ದ ನಿರ್ವಾಹಕನಾದ (ಕಂಡಕ್ಟರ್). ಸಾಲ್ಸ್‍ಬರ್ಗ್‍ನ ಆರ್ಚ್‍ಬಿಷಪ್ ಇವನನ್ನು ಕಾನ್ಸರ್ಟ್‍ಮಾಸ್ಟರ್ ಎಂಬ ಪ್ರತಿಷ್ಠಿತ ಹುದ್ದೆಗೆ ನೇಮಿಸಿದ. 14ನೆಯ ವಯಸ್ಸಿನಲ್ಲಿಯೇ 3 ಅಂಕಗಳ ಅಪೆರಾ ರೂಪಿಸಿದ. ಇದು 20 ಸಲ ಪ್ರಸ್ತುತಿಗೊಂಡಿತು; ಪ್ರತಿಸಲವೂ ಮೋಜಾರ್ಟನೆ ಅದರ ನಿರ್ವಾಹಕನಾಗಿದ್ದ. 

ಮೋಜಾರ್ಟ್ 15ನೆಯ ವಯಸ್ಸಿನಲ್ಲಿ ಮೊದಲನೆಯ ನಾಟಕೀಯ ಸೆರೆನೇಡ್ ರಚಿಸಿದ. ಇವನ ಮುಖ್ಯ ಪೋಷಕನಾಗಿದ್ದ ಆರ್ಚ್ ಬಿಷಪ್‍ನ ಮರಣಾನಂತರ ಆ ಗದ್ದುಗೆಗೇರಿದ ಹೈರೊನಿಮಿಸ್ ಅರಸಿಕ; ಮೋಜಾರ್ಟ್‍ನನ್ನು ಸಣ್ಣಪುಟ್ಟ ಕಾರಣಗಳಿಗಾಗಿ ಅವಮಾನಿಸಿ ಹಿಂಸಿಸಿದ. ಆಗ ಕಾನ್ಸರ್ಟ ಮಾಸ್ಟರ್ ಹುದ್ದೆಯನ್ನು ತೊರೆದು ತಾಯಿಯೊಡನೆ ಪ್ಯಾರಿಸ್ಸಿಗೆ ಹೋದ. ಅಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯದೆ ನಿರಾಶನಾಗಿ ಪುನಃ ಸಾಲ್ಸ್‍ಬರ್ಗ್‍ಗೆ ಹಿಂತಿರುಗಿ ಅನಂತರ ವಿಯನ್ನಾದಲ್ಲಿ ನೆಲೆಸಿದ. ಆಸ್ಟ್ರಿಯ ಚಕ್ರವರ್ತಿಯ ಆಶ್ರಯ ಮತ್ತು ಪ್ರೋತ್ಸಾಹಗಳಿಂದ ಹಲವು ಕೃತಿಗಳನ್ನು ನಿರ್ಮಿಸಿದ. ಮ್ಯಾನ್‍ಹೈಂನಲ್ಲಿ ಹಿಂದೆ ಪ್ರೀತಿಸಿ ವಿಯೋಗಗೊಂಡಿದ್ದ ಕಾನ್‍ಸ್ಟೆನ್ಸ್ ವೀಬರಳನ್ನು 1782ರಲ್ಲಿ ಮದುವೆಯಾದ. ಅವಳಲ್ಲಿ ನಾಲ್ವರು ಪುತ್ರರೂ ಇಬ್ಬರು ಪುತ್ರಿಯರೂ ಜನಿಸಿದರು. ಪುತ್ರರಲ್ಲಿ ಒಬ್ಬ ಪಿಯಾನೊ ವಾದಕನಾಗಿ ಸ್ವಲ್ಪ ಪ್ರಸಿದ್ಧನಾದ. 

ಹೆಂಡತಿಯು ದುಂದುಗಾರ್ತಿಯೂ ಅಸಹಕಾರಿಯೂ ಆಗಿದ್ದುದರಿಂದ ಮೋಜಾರ್ಟನ ಬದುಕನ್ನು ದುಃಖ ದಾರಿದ್ರ್ಯಗಳು ಆವರಿಸಿಕೊಂಡವು. ಇದರ ಜೊತೆಗೆ ಹೆಂಡತಿಯು ಬೇರೆಯವನನ್ನು ಮದುವೆಯಾದಳು. ಮೋಜಾರ್ಟ್ ಮನೋವ್ಯಾಧಿಗೀಡಾದ. ಇವನಲ್ಲಿ ಶರೀರ ದೌರ್ಬಲ್ಯ ಮೂರ್ಛಾರೋಗಗಳು ಕಾಣಿಸಿಕೊಂಡವು. 1791ರ ಡಿಸೆಂಬರ್ 5ರಂದು ಕಡುಬಡತನದಲ್ಲಿ ವಿಯನ್ನಾದಲ್ಲಿ ಏಕಾಂಗಿಯಾಗಿ ನಿಧನಹೊಂದಿದ. ಇವನ ಶವ ಸಂಸ್ಕಾರ ಕೂಡ ಸರಿಯಾಗಿ ನಡೆಯಲಿಲ್ಲ. ಇವನ ಸಮಾಧಿ ಅನಾಮಧೇಯವಾಗಿಯೇ ಉಳಿದದ್ದು ಇವನ ಬದುಕಿನ ದೊಡ್ಡ ವಿಪರ್ಯಾಸಗಳಲ್ಲೊಂದು.

ಮೋಜಾರ್ಟ್‍ನ ಸಂಗೀತಕೃತಿ ನಿರ್ಮಿತಿ ಬೃಹತ್ತು ಮಹತ್ತುಗಳಲ್ಲಿ ಬೆರಗುಪಡಿಸುವಂತದು. ಕಂಠಕ್ಕೆಂದು 220 ರಚನೆಗಳಿವೆ. ಇವುಗಳನ್ನು ನಾಟಕ (21), ಚರ್ಚ್‍ಸಂಗೀತ (56), ಆರ್ಕೆಸ್ಟ್ರಾಸಹಿತ ಆರಿಯಾ (57), ವೃಂದಗಾಯನ (7), ಅನಿರ್ದಿಷ್ಟ (35), ಸಂರ್ಕಿರ್ಣ (18), ಪಿಯಾನೊಸಹಿತದ ಹಾಡು (36) ಎಂದು ವರ್ಗೀಕರಿಸಬಹುದು; ಇವಲ್ಲದೆ ವಾದ್ಯಗಳಿಗೆಂದು ಬರೆದ 407 ರಚನೆಗಳಿವೆ. ಇವುಗಳಲ್ಲಿ ಸಿಂಫೊನಿ (183), ಪಿಟೀಲು-ಆರ್ಕೆಸ್ಟ್ರಾ ಕಾನ್ಸರ್ಟೊ (27), ಆರ್ಗನ್ ಮತ್ತು ಆರ್ಕೆಸ್ಟ್ರಾಗಳ ಸೊನಾಟು (3), ತಂತೀವಾದ್ಯಗಳ ಸೊನಾಟು (14), ತಂತೀದ್ವಯ-ತ್ರಯ (5), ತಂತೀ ಚತುಷ್ಟಯ (25), ತಂತೀ ಪಂಚಕ (6), ಪಿಯಾನೊ ಚತುಷ್ಟಯ (25), ತಂತೀ ಪಂಚಕ (6), ಪಿಯಾನೊ ಚತುಷ್ಟಯ (23), ಪಿಟೀಲು-ಪಿಯಾನೊ (41), ಪಿಯಾನೊ ತನಿ (80)-ಇವು ಸೇರಿವೆ. ಲೆಕ್ಕಕ್ಕೆ ಸೇರದ, ಸಂದಿಗ್ಧ ಕರ್ತೃತ್ವದ ರಚನೆಗಳೂ ಬೇರೆ ಇವೆ. ಇವನ ಸಂಪೂರ್ಣ ಕೃತಿಗಳ ಸಂಗ್ರಹ, ಜೀವನ-ಸಾಧನೆ, ವಿಮರ್ಶೆ, ಇವನು ಬರೆದ ಪತ್ರಗಳು ಇವೆಲ್ಲ ವಿಪುಲವಾಗಿ ಪ್ರಕಟಗೊಂಡಿವೆ. ದಿ ಮ್ಯಾರೇಜ್ ಆಫ್ ಫಿಗರೊ (1786), ಡಾನ್ ಗಿಯೊವನಿ (1787), ದಿ ಮ್ಯಾಜಿಕ್ ಫ್ಲೂಟ್ 1791,-ಇವು ಇವನ ಸುಪ್ರಸಿದ್ಧ ಅಪೆರಾಗಳು. ಕೆಲವು ವಿಮರ್ಶಕರು ಡಾನ್ ಗಿಯೊವನಿಯನ್ನು ಜಗತ್ತಿನ ಅತ್ಯುತ್ತಮ ಅಪೆರಾ ಎಂದು ಪರಿಗಣಿಸಿದ್ದಾರೆ. ಇವನ ಸಿಂಫೊನಿಗಳಲ್ಲಿ ಜ್ಯೂಪಿಟರ್ ಎಂಬ ಅಡ್ಡ ಹೆಸರಿರುವ ನಂಬರ್ 41 (1788) ತುಂಬ ಪ್ರಸಿದ್ಧವಾದದ್ದು. ಇಂದು ಜಗತ್ತಿನ ಎಲ್ಲೆಡೆ ಮೋಜಾರ್ಟ್‍ನ ಸಂಗೀತಾರಾಧಕರಿದ್ದಾರೆ. ಪ್ರತಿವರ್ಷದ ಬೇಸಗೆಯಲ್ಲಿ ಸಾಲ್ಸ್‍ಬರ್ಗ್‍ನಲ್ಲಿ ಇವನ ಹೆಸರಿನಲ್ಲಿ ಸಂಗೀತೋತ್ಸವ ನಡೆಯುತ್ತದೆ.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

On the birth anniversary of great music composer of Classic period Wolfgang Amadeus Mozart

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ