ಬಸ್ತಿ ವಾಮನ ಶೆಣೈ
ಬಸ್ತಿ ವಾಮನ ಶೆಣೈ ನಮನ
ವಿಶ್ವ ಕೊಂಕಣಿ ನಾಯಕರೆಂದು ಜನಪ್ರಿಯರಾದ ಬಸ್ತಿ ವಾಮನ ಮಾಧವ್ ಶೆಣೈ ಈ ಲೋಕವನ್ನಗಲಿದ್ದಾರೆ.
ಬಸ್ತಿ ವಾಮನ ಶೆಣೈ 1934ರ ನವೆಂಬರ್ 6ರಂದು ಬಂಟ್ವಾಳದಲ್ಲಿ ಜನಿಸಿದರು. ಅವರ ತಂದೆ ಬಸ್ತಿ ಮಾಧವ ಶೆಣೈ ಮಂಗಳೂರಿನ ಪ್ರಸಿದ್ಧ ಸಿಪಿಸಿ ಬಸ್ ಸೇವೆಯ ಬುಕಿಂಗ್ ಏಜೆಂಟ್ ಆಗಿದ್ದರು. ತಾಯಿ ಗೌರಿ ಅಥವಾ ಭಾಗೀರಥಿ.
ವಾಮನ ಶೆಣೈ 1952ರಲ್ಲಿ ಬಂಟ್ವಾಳದ ಎಸ್‌ವಿಎಸ್ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ತೇರ್ಗಡೆಯಾದರು. ಕುಟುಂಬದ ಪರಿಸ್ಥಿತಿಗಳಿಂದಾಗಿ ವಿದ್ಯಾಭ್ಯಾಸ ನಿಲ್ಲಿಸಿ ತಂದೆಯೊಂದಿಗೆ ವ್ಯವಹಾರಕ್ಕೆ ಸೇರಬೇಕಾಯಿತು. ಸ್ವಲ್ಪ ಕಾಲ ಕೆನರಾ ಬ್ಯಾಂಕ್‌ನಲ್ಲಿಯೂ ಕೆಲಸ ಮಾಡಿದರು. ವಾಮನ ಶೆಣೈ ಅವರ ತಂದೆ 1957ರಲ್ಲಿ ನಿಧನರಾದಾಗ ಇಡೀ ಕುಟುಂಬದ ಜವಾಬ್ದಾರಿ ವಾಮನ ಶೆಣೈ ಅವರ ಹೆಗಲ ಮೇಲೆ ಬಂತು. 1959ರಲ್ಲಿ ಸಾವಿತ್ರಿ ಅವರನ್ನು ವಿವಾಹವಾದರು.
ಬಸ್ತಿ ವಾಮನ ಶೆಣೈ ಅವರು 1954 ಮತ್ತು 1962ರ ನಡುವೆ ಬಂಟ್ವಾಳದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ಕಾರ್ಮಿಕ ವಿಭಾಗದ ಅಗವಾದ ಐಎನ್‍ಟಿಯುಸಿ ಚಟುವಟಿಕೆಗಳಲ್ಲಿ ತೊಡಗಿದ್ದರು. 1958ರಲ್ಲಿ ಬಂಟ್ವಾಳದಲ್ಲಿ ಸರಸ್ವತಿ ಕಲಾ ಪ್ರಸಾರಕ ಸಂಘ ಮತ್ತು ಸರಸ್ವತಿ ಸಂಗೀತ ಶಾಲೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಯಶವಂತ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯರಾಗಿದ್ದರು. ಬಂಟ್ವಾಳದಲ್ಲಿ ಹಬ್ಬ ಹರಿದಿನಗಳಲ್ಲಿ ಕೊಂಕಣಿ ನಾಟಕ ಹಾಗೂ ರಂಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. 1972ರಲ್ಲಿ ರೋಟರಿ ಇಂಟರ್‌ನ್ಯಾಶನಲ್‌ಗೆ ಸೇರಿ ವಿವಿಧ ಹುದ್ದೆಗಳಲ್ಲಿ ರೋಟೇರಿಯನ್ ಆಗಿ ಸಮಾಜಕ್ಕೆ ಸೇವೆ ಸಲ್ಲಿಸಿದರು. 1977ರಲ್ಲಿ ಬಂಟ್ವಾಳದ ಎಸ್‍ವಿಎಸ್ ಶಾಲೆಗಳ ಸಮನ್ವಯಕಾರರಾದರು.
ಟಿ.ಎ.ಪೈ ಅವರು ಯುವ ವಾಮನ ಶೆಣೈ ಅವರ ನಾಯಕತ್ವದ ಗುಣಗಳು ಮತ್ತು ಉತ್ಸಾಹವನ್ನು ಮೆಚ್ಚಿ 1962ರಲ್ಲಿ ಸಿಂಡಿಕೇಟ್ ಬ್ಯಾಂಕ್‌ಗೆ ಸೇರಲು ಆಹ್ವಾನ ನೀಡಿದರು. ವಾಮನ ಶೆಣೈ ಕೃಷಿ ಹಣಕಾಸು ಕ್ಷೇತ್ರದಲ್ಲಿನ ಅನುಕರಣೀಯ ಸಾಧನೆಗಾಗಿ ಚಿನ್ನದ ಪದಕವನ್ನು ಪಡೆದರು. 1992ರಲ್ಲಿ ಸ್ವಯಂ ನಿವೃತ್ತಿ ಹೊಂದುವವರೆಗೂ ಶಿವಮೊಗ್ಗ ಮತ್ತು ಮೂಡಬಿದ್ರಿ ಸೇರಿದಂತೆ ವಿವಿಧ ಶಾಖೆಗಳಲ್ಲಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದರು.
ಬಸ್ತಿ ವಾಮನ ಶೆಣೈ ಅವರ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಸದಸ್ಯತ್ವವು 1980ರಷ್ಟು ಹಿಂದಿನದು. 1992ರಲ್ಲಿ ಬ್ಯಾಂಕಿಂಗ್ ವೃತ್ತಿಜೀವನದಿಂದ ನಿವೃತ್ತರಾದ ನಂತರ ಅವರು ಸಂಪೂರ್ಣವಾಗಿ ಕೊಂಕಣಿ ಚಟುವಟಿಕೆಗಳಿಗೆ ತಮ್ಮ ಸಮಯವನ್ನು ಮೀಸಲಿಟ್ಟರು. 1993ರಲ್ಲಿ ಬಸ್ತಿ ವಾಮನ ಶೆಣೈ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾದರು. ಅವರ ಪ್ರಯತ್ನದಿಂದಾಗಿ 1994-95ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಅಸ್ತಿತ್ವಕ್ಕೆ ಬಂದಿತು.
ಬಸ್ತಿ ವಾಮನ ಶೆಣೈ ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಮಾವೇಶವನ್ನು ಬೃಹತ್ ರೀತಿಯಲ್ಲಿ ಆಯೋಜಿಸಿದ್ದರು. ಸಮಾವೇಶವು ಬಸ್ತಿ ವಾಮನ್ ಶೆಣೈ ಅವರಿಗೆ "ವಿಶ್ವ ಕೊಂಕಣಿ ಸರ್ದಾರ್" ಎಂಬ ಬಿರುದು ನೀಡಿ ಗೌರವಿಸಿತು. 1996ರಲ್ಲಿ ಅಮೆರಿಕದ ನ್ಯೂಜೆರ್ಸಿಯಲ್ಲಿ ಮೊದಲ ಉತ್ತರ ಅಮೆರಿಕಾದ ಕೊಂಕಣಿ ಸಮಾವೇಶವನ್ನು ಉದ್ಘಾಟಿಸಿದರು.
1997ರಲ್ಲಿ ಬಸ್ತಿ ವಾಮನ್ ಶೆಣೈ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದರು. ಅವರು 2001ರವರೆಗೆ ಅಕಾಡೆಮಿಯ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. 1998ರಲ್ಲಿ ಅಕಾಡೆಮಿಯ ಮೂಲಕ ನವದೆಹಲಿಯಲ್ಲಿ 3 ದಿನಗಳ "ಕೊಂಕಣಿ ಕಲಾ ಉತ್ಸವ"ವನ್ನು ಆಯೋಜಿಸಿದರು. 2002ರಲ್ಲಿ, ಸಂಘಟನಾ ಸಮಿತಿಯ ಅಧ್ಯಕ್ಷರಾಗಿ, ಮಂಗಳೂರಿನಲ್ಲಿ ಅಖಿಲ ಭಾರತ ಕೊಂಕಣಿ ಪರಿಷತ್ತಿನ 20ನೇ ಅಧಿವೇಶನವನ್ನು ಯಶಸ್ವಿಯಾಗಿ ಆಯೋಜಿಸಿದರು. 2004ರಲ್ಲಿ ಅವರು ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾದರು. ಕೊಂಕಣಿ ಭಾಷಾ ಆನಿ ಸಂಸ್ಕೃತಿ ಪ್ರತಿಷ್ಟಾನ್ ಕೆಎಲ್‌ಸಿಎಫ್ ಹುಟ್ಟು ಪಡೆದು ಅದರ ಆಶ್ರಯದಲ್ಲಿ, ಬಸ್ತಿ ವಾಮನ ಶೆಣೈ ಅವರು ಕೊಂಕಣಿ ಬರಹಗಾರರು ಮತ್ತು ದೇಶದ ಇತರ ಭಾಷೆಗಳಲ್ಲಿನ ಬರಹಗಾರರೊಂದಿಗೆ ಸಂವಹನದ ಅವಕಾಶವನ್ನು ಸೃಷ್ಟಿಸುವ ಉದ್ದೇಶದಿಂದ ವಿಶ್ವ ಕೊಂಕಣಿ ಅಭಿಯಾನ ಎಂಬ ಆಂದೋಲನವನ್ನು ಪ್ರಾರಂಭಿಸಿದರು. ವಿಶ್ವ ಕೊಂಕಣಿ ಕೇಂದ್ರವನ್ನು 17ನೇ ಜನವರಿ 2009ರಂದು ಮಂಗಳೂರಿನ ಶಕ್ತಿ ನಗರದಲ್ಲಿ ಕೊಂಕಣಿ ಗಾಂವ್ (ಕೊಂಕಣಿ ಗ್ರಾಮ) ಎಂಬ ಹೆಸರಿನಲ್ಲಿ 3 ಎಕರೆ ಜಾಗದಲ್ಲಿ ನಿರ್ಮಿಸಲಾಯಿತು. 6 ನೇಮಾರ್ಚ್ 2010 ರಂದು ವಿಶ್ವ ಕೊಂಕಣಿ ಭಾಷಾ ಸಂಸ್ಥಾನವನ್ನು ವಿಶ್ವ ಕೊಂಕಣಿ ಕೇಂದ್ರದಲ್ಲಿ ಉದ್ಘಾಟಿಸಲಾಯಿತು.
ಮಹಾನ್ ಸಂಘಟಕರಾದ ಬಸ್ತಿ ವಾಮನ್ ಶೆಣೈ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಬಸ್ತಿ ವಾಮನ ಶೆಣೈ 2022ರ ಜನವರಿ 2ರಂದು ಈ ಲೋಕವನ್ನಗಲಿದರು.
Respects to departed soul great Konkani leader Basti Vaman Shenoy
ಕಾಮೆಂಟ್‌ಗಳು