ರಾಭೂ
ರಾಜಶೇಖರ ಭೂಸನೂರಮಠ
ಪ್ರೊ. ರಾಜಶೇಖರ ಭೂಸನೂರಮಠ ಅವರು 'ರಾಭೂ' ಎಂದು ಖ್ಯಾತರಾದಗಿದ್ದ ವಿಜ್ಞಾನಿ, ಸಾಹಿತಿ ಮತ್ತು ಗುರು .
ರಾಜಶೇಖರ ಭೂಸನೂರಮಠ 1938ರ ಜನವರಿ 16ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ನಿಡಗುಂದಿಯವರಾದ ಇವರ ತಂದೆ ಪ್ರಸಿದ್ಧ ಸಂಶೋಧಕರೂ ಸಾಹಿತಿಗಳೂ ಆಗಿದ್ದ ಪ್ರೊ. ಸಂ.ಶಿ.ಭೂಸನೂರಮಠ ಅವರು.
ರಾಜಶೇಖರ ಭೂಸನೂರಮಠ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಹುಬ್ಬಳ್ಳಿಯಲ್ಲಿ ನಡೆಯಿತು. ಹೈಸ್ಕೂಲು ಓದಿದ್ದು ಬೆಳಗಾವಿಯಲ್ಲಿ. ಮುಂಬೈನಲ್ಲಿ ಬಿ.ಎಸ್‌ಸಿ. ಪದವಿ ಪಡೆದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎಸ್‌ಸಿ. ಪದವಿ ಪಡೆದರು. ಬರ್ಟ್ರಂಡ್ ರಸೆಲ್ ಮತ್ತು ಎ.ಎನ್. ವೈಟ್‌ಹೆಡ್ ಅವರು ಮೆಚ್ಚಿದ ಬರಹಗಾರರಾಗಿದ್ದರು.
ರಾಜಶೇಖರ ಭೂಸನೂರಮಠ ಅವರು ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭ ಮಾಡಿದರು. ಅವರದ್ದು ವೈಜ್ಞಾನಿಕ ಕಥೆಗಳ ನಿರಾಯಾಸ ಬರವಣಿಗೆ. ಮಕ್ಕಳಿಗಾಗಿ ಹಲವಾರು ವೈಜ್ಞಾನಿಕ ಕಥೆಗಳ ಪ್ರಕಟಣೆ ಮಾಡಿದರು. ನಿಯತಕಾಲಿಕಗಳಲ್ಲಿ ಅವರ ಅನೇಕ ಲೇಖನಗಳು ನಿರಂತರವಾಗಿ ಹರಿದುಬಂದವು. ಹಲವಾರು ಕಥೆ, ಕಾದಂಬರಿ, ನಾಟಕಗಳು
ಮತ್ತು ಸಂಪಾದನೆಗಳನ್ನು ಮೂಡಿಸಿದರು. ಪ್ರಾಥಮಿಕ ಶಾಲಾಮಟ್ಟದಿಂದ ಸ್ನಾತಕೋತ್ತರ ಮಟ್ಟದವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಪಠ್ಯಪುಸ್ತಕ ರಚನೆ ಮಾಡಿದರು.
ರಾಜಶೇಖರ ಭೂಸನೂರಮಠ ಅವರ ವೈಜ್ಞಾನಿಕ ಕಾದಂಬರಿಗಳು ಹಲವಾರು ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಕನ್ನಡದಲ್ಲಿ ಒಂದು ಹೊಸ ಶೈಲಿ ಮೂಡಿಸಿದ್ದವು. 'ಸುಧಾ' ವಾರಪತ್ರಿಕೆಯಲ್ಲಿ ಏರ‍್ಪಡಿಸಿದ್ದ ಸ್ಪರ್ಧೆಯಲ್ಲಿ ಅವರ ‘ಮನ್ವಂತರ’ ಕಾದಂಬರಿಗೆ ಬಹುಮಾನ ಸಂದಿತ್ತು. ಮಹಾವಿಜಯ ಬಾನುಲಿಯಲ್ಲಿ ಬಹುಮಾನ ಪಡೆದು ಬಿತ್ತರಗೊಂಡ ನಾಟಕ. ಅವರು ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ನೂರಾರು ಗೋಷ್ಠಿ, ಕಮ್ಮಟ, ಸಮ್ಮೇಳನಗಳಲ್ಲಿ ಭಾಗಿಯಾಗುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿ ತಮ್ಮಶಿಷ್ಯವೃಂದವನ್ನು ಸದಾ ವಿಭಿನ್ನ ಅಭಿರುಚಿಗಳತ್ತ ಸೆಳೆಯುತ್ತಿದ್ದರು.
ರಾಜಶೇಖರ ಭೂಸನೂರಮಠ ಅವರ ಕೃತಿಗಳಲ್ಲಿ ಶುಕ್ರಗ್ರಹದ ಸಾಹಸಿ, ಯೀಝಾನ್, ರಾಕ್ಷಸ ದ್ವೀಪ, ಅಟ್ಲಾಂಟಿಸ್, ನಾಳಿನ ಮಕ್ಕಳ ಕಥೆಗಳು (೧,೨,೩,೪), ವಿಜ್ಞಾನದೃಷ್ಟಿಯಲ್ಲಿ ಸೃಷ್ಟಿ, ಶತಮಾನದಾಚೆ, ಭೌತಶಾಸ್ತ್ರ ಪ್ರವೇಶ, ನೀವು ಮತ್ತು ನಿಮ್ಮ ಚಕ್ರಗಳು, ಭವಿಷ್ಯಾವಧಾನ, ಪರ್ಯಾಯ ಚಿಕಿತ್ಸೆಗಳು,ಅತೀಂದ್ರಿಯ ಪ್ರಪಂಚ; ಕಾದಂಬರಿಗಳಾದ ಯಂತ್ರಮಾನವ, ಮನ್ವಂತರ, ಮಾಯಾ, ಆಪರೇಷನ್ ಯು.ಎಫ್.ಓ, ನೌಕಾಘಾತ; ಸೈಕೋರಮಾ, ಸಿಗ್ನೀಸಂಗೀತ, ಟಚೀರಮಾ, ಕಿರಣಾ, ಮಂಗಳಾ, .007 ಮತ್ತು ಇತರರು, ನಗೆರಾಯನ ಹುಚ್ಚು ಸಾಹಸಗಳು, ನಾನು ಮೆಚ್ಚಿದ ಪಾಶ್ಚಾತ್ಯ ವೈಜ್ಞಾನಿಕ ಕಥೆಗಳು, ನನ್ನ ನಾ ಕಂಡಂತೆ - ಆತ್ಮಕಥೆ: ನಾಟಕಗಳಾದ ಆಧುನಿಕ ಅಮರಾವತಿ, ಓಂಕಾರ; ಪ್ರೌಢದೇವರಾಯನ ಕಾವ್ಯಕಥಾ ಸಂಗ್ರಹ, ಮುಂತಾದುವು ಸೇರಿದಂತೆ ಕನ್ನಡ ಮತ್ತು ಇಂಗ್ಲಿಷಿನಲ್ಲಿ 100ಕ್ಕೂ ಹೆಚ್ಚು ಪ್ರಕಟಣೆಗಳಿವೆ.
ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕ ಸದಸ್ಯರಾಗಿ ಆನಂತರ ರಾಜ್ಯ ಉಪಾಧ್ಯಕ್ಷರಾಗಿದ್ದ ರಾಜಶೇಖರ ಭೂಸನೂರಮಠ ಅವರು, ಅಮೆರಿಕನ್ ಬಯಾಗ್ರಾಫಿಕಲ್ ಇನ್‍ಸ್ಟಿಟ್ಯೂಟ್ ವತಿಯಿಂದ 1999ರಲ್ಲಿ ವರ್ಷದ ವ್ಯಕ್ತಿ ಮತ್ತು 2000ದಲ್ಲಿ ಯುನಿವರ್ಸಲ್ ಅವಾರ್ಡ್ ಆಫ್ ಅಕಂಪ್ಲಿಷಮೆಂಟ್ ಪ್ರಶಸ್ತಿ ಗಳಿಸಿದ್ದರು.
ರಾಜಶೇಖರ ಭೂಸನೂರಮಠ ಅವರು 2015ರ ಏಪ್ರಿಲ್ 12ರಂದು ನಿಧನರಾದರು.
On the birth anniversary of science writer Prof. Rajashekhara Bhoosanurmathರಭೂ
ರಾ.ಭೂ ಮಠ ಅವರ ಬಗ್ಗೆ ಬಂದ ಈ ಆರ್ಟಿಕಲ್ ನೋಡಿ ಬಹಳ ಖಷಿ ಆಯ್ತು. ಇವರ ಬಗ್ಗೆ ಅಷ್ಟೇನು ಮಾಹಿತಿ ಗೂಗಲ್ ಅಥವ ಇತರೆ ಮಾಧ್ಯಮದಲ್ಲಿ ಲಭ್ಯವಿಲ್ಲ. ಇವರ ಶೂನ್ಯಧ್ಯಾನ , ಕಲ್ಪಧ್ಯಾನ ಇನ್ನು ಇತರೆ ನವಯುಗದ ಕೈಪಿಡಿಗಳನ್ನ ನಾನು ಓದಿದಿನಿ. ಇವರು ಅಸ್ತಂಗತರಾದ್ದನ್ನ ಪೇಪರ್ನಲ್ಲಿ ಓದಿದ್ದೆ. ಇವರ ಮನೆ ವಿಳಾಸವನ್ನು ಹುಡುಕಿದೆ ಹುಡುಕ್ತಾನೆ ಇದೀನಿ ಇನ್ನು ಸಿಕ್ಕಿಲ್ಲ.
ಪ್ರತ್ಯುತ್ತರಅಳಿಸಿ