ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆನಂದಿ


ಆನಂದಿ ಸದಾಶಿವರಾವ್


ಆನಂದಿ ಸದಾಶಿವರಾವ್ ಕನ್ನಡ ಮತ್ತು ಇಂಗ್ಲಿಷಿನ ಪ್ರಸಿದ್ಧರಾಗಿದ್ದ ಬರಹಗಾರ್ತಿ. ಇವರು ಮಾನವೀಯ ಸಂಬಂಧಗಳ ಸೂಕ್ಷ್ಮತೆ, ಗಾಢತೆ, ಸಮಸ್ಯೆಗಳು ಮತ್ತು ಪರಿಹಾರ ಮುಂತಾದ ವಸ್ತುಗಳನ್ನಾರಿಸಿಕೊಂಡು ಕಥೆ, ಕವನ, ಕಾದಂಬರಿ ಮತ್ತು ಲೇಖನಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಮರ್ಥವಾಗಿ ನಿರೂಪಿಸಿದವರು.

ಆನಂದಿ ಸದಾ ಶಿವರಾವ್‌ 1929ರ ಜನವರಿ 20ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ ನರಸಪ್ಪಯ್ಯ.  ತಾಯಿ ಕಾವೇರಿಬಾಯಿ. ಕದ್ರಿಯ ಮುನಿಸಿಪಲ್‌ ಶಾಲೆ, ಬೆಸೆಂಟ್‌ ಬಾಲಿಕಾ ಪಾಠಶಾಲೆ, ಬಲ್ಮಠದ (BELMONT ಎಂಬ ಯುರೋಪಿಯನ್‌ ಇದ್ದ ಮನೆ ಹೆಸರಿನ ಜಾಗ-ಈಗ ಬಲ್ಮಠ) ಸರಕಾರಿ ಹೆಣ್ಣುಮಕ್ಕಳಶಾಲೆ, ಮಂಗಳೂರಿನ ಸೇಂಟ್‌ ಆಗ್ನೇಸ್‌ ಕಾಲೇಜು ಹೀಗೆ ವಿವಿಧೆಡೆಯಲ್ಲಿ ಇವರ  ಶಿಕ್ಷಣ ನಡೆಯಿತು. 

ಕಾಲೇಜಿನಲ್ಲಿ  ಇಂಗ್ಲಿಷ್ ಸಾಹಿತ್ಯದ ಜೊತೆಗೆ ಕನ್ನಡವನ್ನು ಬೋಧಿಸುತ್ತಿದ್ದ ಕಡೆಂಗೋಡ್ಲೂ ಶಂಕರ ಭಟ್ಟರ ಪ್ರಭಾವದಿಂದ ಆನಂದಿ ಅವರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಪ್ರೀತಿ ಬೆಳೆಯಿತು. 

ಇಂಟರ್ ಮೀಡಿಯೆಟ್‌ ಮುಗಿಸಿದ ನಂತರ ನ್ಯಾಯವಾದಿ ಸದಾಶಿವರಾಯರೊಡನೆ ಆನಂದಿ ಅವರ ವಿವಾಹವಾಯಿತು. ಗಂಡನ ಮನೆಯಲ್ಲಿ ಸಾಹಿತ್ಯ ಕೃಷಿಗೆ ದೊರೆತ ಪ್ರೋತ್ಸಾಹದಿಂದ ಪತ್ರಿಕೆಗಳಿಗೆ ಬರೆಯತೊಡಗಿದರು. ಆನಂದಿ ಅವರು ಬರೆದ ಸಣ್ಣ ಕಥೆಗಳು ಜನಪ್ರಗತಿ, ಕಥಾವಳಿ, ಪ್ರಜಾಮತ, ಕರ್ಮವೀರ, ರಾಷ್ಟ್ರಬಂಧು, ಚಿತ್ರಗುಪ್ತ, ಸಚೇತನ ರಾಯಭಾರಿ, ನವಯುಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. 

1961ರಲ್ಲಿ ಪ್ರಕಟವಾದ ಆನಂದಿ ಅವರ ಮೊದಲ ಕಥಾ ಸಂಕಲನ ‘ಅಪರ್ಣಾ’. ಇದರಲ್ಲಿ ಹದಿಮೂರು ಕಥೆಗಳಿವೆ. ಎರಡನೆಯ ಕಥಾ ಸಂಕಲನ ‘ಕಲಾವಿದ’ 1985ರಲ್ಲಿ ಪ್ರಕಟವಾಯಿತು. ಇದರಲ್ಲಿ ಹನ್ನೆರಡು ಕಥೆಗಳಿವೆ. ನಂತರ ಪ್ರಕಟಗೊಂಡದ್ದು ‘ಸ್ವಾಭಿಮಾನ’. ಇದರಲ್ಲಿ ಹನ್ನೆರಡು ಕಥೆಗಳಿವೆ. 2003ರಲ್ಲಿ ಪ್ರಕಟಗೊಂಡ ಕಥಾಸಂಕಲನ ‘ಉಡುಗೊರೆ ಮತ್ತು ಇತರ ಕಥೆಗಳು’. 

ಆನಂದಿ ಸದಾಶಿವರಾವ್ ಅವರುಇಂಗ್ಲಿಷ್‌ ಸಾಹಿತ್ಯದಲ್ಲೂ ಅಷ್ಟೇ ಪ್ರೌಢ ಬರವಣಿಗೆಯನ್ನು ರೂಢಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತಿ ವಿರಳ ಇಂಗ್ಲಿಷ್‌ ಬರಹಗಾರ್ತಿ ಎನಿಸಿದವರು.  ಇವರ ಇಂತಹ ಕಥೆ, ಕವನ, ಲೇಖನಗಳು ಪೊಯಟ್‌, ಉಷಾ ಮತ್ತು ಡೆಕ್ಕನ್‌ ಹೆರಾಲ್ಡ್‌ ಮುಂತಾದ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಮೊದಲ ಇಂಗ್ಲಿಷ್‌ ಕವನ ಸಂಕಲನ ‘ಎಕೋಸ್‌ ಆಫ್‌ ಫ್ರೀಡಮ್‌’ (ECHOES OF FREEDOM) 1981ರಲ್ಲಿ ಪ್ರಕಟಗೊಂಡಿತು. ಅದರಲ್ಲಿ 36 ಕವನಗಳಿವೆ.  ಎರಡನೆಯ ಕವನ ಸಂಕಲನ ‘ಸಾಂಗ್ಸ್‌ ಆಫ್‌ ಸೈಲನ್ಸ್’ (SONGS OF SILENCE) ನಲ್ಲಿ 39 ಕವನಗಳಿವೆ. 2005 ರಲ್ಲಿ ಪ್ರಕಟಗೊಂಡ ಮೂರನೆಯ ಕವನ ಸಂಕಲನ ಮ್ಯಾಜಿಕ್‌ ಆಫ್‌ ದಿ ಮೈಂಡ್‌ (MAGIC OF THE MIND) ನಲ್ಲಿ ಭಕ್ತಿಭಾವ, ಅಧ್ಯಾತ್ಮಿಕ ನೆಲೆಯ ಕವನಗಳು ತುಂಬಿವೆ. 

ಆನಂದಿ ಸದಾಶಿವರಾವ್ ಅನುವಾದದಲ್ಲಿಯೂ ಹೆಸರಾದವರು. ನ್ಯಾಷನಲ್‌ ಬುಕ್‌ ಟ್ರಸ್ಟ್‌ಗಾಗಿ ಚಕ್ರವರ್ತಿ ಸಿ. ರಾಜಗೋಪಾಲಚಾರಿಯವರ ಆಂಗ್ಲ ಉಪನ್ಯಾಸಗಳ ಅನುವಾದದ ಕೃತಿ ‘ನಿರ್ಲಿಪ್ತವಾಣಿ’, ಡಾ.ಬಾಬು ರಾಜೇಂದ್ರ ಪ್ರಸಾದರ ಆಂಗ್ಲಭಾಷಣಗಳ ಸಂಗ್ರಹ ‘ಭಾರತದ ಐಕ್ಯತೆ’ ಮತ್ತು ತಮ್ಮ ಮೆಚ್ಚಿನ ಲೇಖಕಿ ಪರ್ಲ್‌‌ಬಕ್‌ ಬರೆದ ಗುಡ್‌ ಅರ್ಥ್ ಕಾದಂಬರಿಯ ಕನ್ನಡಾನುವಾದಗಳನ್ನು ಮಾಡಿದ್ದರು. 

ಕ್ರಿಯಾಶೀಲ ವ್ಯಕ್ತಿತ್ವದ ಆನಂದಿ ಸದಾಶಿವರಾವ್ ಸಮಾಜ ಸೇವಕಿಯಾಗಿ, ಹಲವಾರು ಸಂಘ, ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದರು. ಮಂಗಳೂರಿನ ಭಗಿನಿ ಸಮಾಜ, ಈಶ್ವರಾನಂದ ಸೇವಾಶ್ರಮ, ಗಿಲ್ಡ್‌ ಆಫ್‌ ಸರ್ವೀಸ್‌, ಮಹಿಳಾ ಗುಡಿ ಕೈಗಾರಿಕೆ ಮತ್ತು ದ.ಕ. ಸಹಕಾರಿ ಯೂನಿಯನ್‌ ಮಹಿಳಾ ಸಲಹಾ ಸಮಿತಿ ಮುಂತಾದವುಗಳಲ್ಲಿ ಕಾರ್ಯದರ್ಶಿಯಾಗಿ, ಆಡಳಿತ ಮಂಡಳಿಯ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ದುಡಿದಿದ್ದರು. 

ಆನಂದಿ ಸದಾಶಿವರಾವ್ ಅವರಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಹಿತ್ಯ ಸೇವೆಗಾಗಿ ಅಂತಾರಾಷ್ಟ್ರೀಯ ಮಹಿಳಾ ವರ್ಷದಲ್ಲಿ ಆರನೆಯ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಕುಂದಾಪುರದಲ್ಲಿ, ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನದಲ್ಲಿ, ಕರಾವಳಿ ಲೇಖಕಿಯರ-ವಾಚಕಿಯರ ಸಂಘದಿಂದ, ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ,ಮಂಗಳೂರು ತಾಲ್ಲೂಕು ಮಟ್ಟದ 10 ನೆಯ ಕನ್ಡಡ ಸಾಹಿತ್ಯ ಸಮ್ಮೇಳನ, ಚೇತನ ಸಾಹಿತ್ಯ ಬಳಗ, ಮಹಿಳಾ ಸಭಾ, ಸಮತಾಬಳಗ, ಕಾಂತಾವರ ಕನ್ನಡ ಸಂಘ ಮುಂತಾದ ವೇದಿಕೆಗಳಂದ  ಸನ್ಮಾನಗಳು ಮತ್ತು ಅನುಪಮಾ ಪ್ರಶಸ್ತಿಯಂತಹ ಅನೇಕ ಗೌರವಗಳು ಸಂದಿದ್ದವು.

ಆನಂದಿ ಸದಾಶಿವರಾವ್ ಅವರು 2008ರ ಅಕ್ಟೋಬರ್ 13ರಂದು ಈ ಲೋಕವನ್ನಗಲಿದರು.

Photo courtesy: www.Kamat.com

On the birth anniversary of great Kannada and English writer Anandi Sadashivarao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ