ಎನ್. ಗಾಯತ್ರಿ
ಎನ್. ಗಾಯತ್ರಿ
ಡಾ. ಎನ್. ಗಾಯತ್ರಿ ಕನ್ನಡದ ವಿಶಿಷ್ಟ ಬರಹಗಾರ್ತಿ ಮತ್ತು ಸ್ತ್ರೀಪರ ಕಾಳಜಿಯ ಕಾರ್ಯಕರ್ತೆ.
ಗಾಯತ್ರಿ ಅವರು 1957ರ ಜನವರಿ 17ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಕೆ. ನಾಗರಾಜರಾವ್. ತಾಯಿ ಕೆ.ಎನ್.ಜಯಲಕ್ಷ್ಮಿ. ಕನ್ನಡ ಎಂ.ಎ. ಅಲ್ಲದೆ ಮಹಿಳಾ ಅಧ್ಯಯನದಲ್ಲಿ ಎಂ.ಎ. ಪದವಿ ಗಳಿಸಿದರು. ‘ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳಲ್ಲಿ ಸ್ತ್ರೀ ವಸ್ತು ನಿರ್ವಹಣೆ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿದರು.
ಗಾಯತ್ರಿ ಅವರು ರಿಸರ್ವ್ ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.
ಡಾ. ಎನ್. ಗಾಯತ್ರಿ ಬರವಣಿಗೆಯಲ್ಲಿ ಸಕ್ರಿಯರಾಗಿರುವುದರ ಜೊತೆಗೆ ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು, ಮಹಿಳೆಯರ ಏಳಿಗೆ ಮತ್ತು ಜಾಗೃತಿಗಾಗಿ ಕೆಲಸ ಮಾಡುತ್ತ ಬಂದಿದ್ದಾರೆ. ಇವರು ಅನೇಕ ಮಾರ್ಗದರ್ಶಿ ಕೃತಿಗಳ ರಚನೆ ಮಾಡಿರುವುದಲ್ಲದೆ ಹಲವಾರು ನಿಯತ ಕಾಲಿಕೆಗಳ ಸಂಪಾದಕತ್ವ ನಿರ್ವಹಿಸಿದ್ದಾರೆ.
ಡಾ. ಎನ್. ಗಾಯತ್ರಿ ಅವರು ಮಹಿಳಾ ಜಾಗೃತಿ ಅಧ್ಯಯನ ಕೇಂದ್ರದಿಂದ ಮೂಡಿಬರುತ್ತಿರುವ ‘ಅಚಲ’ ಮಾಸ ಪತ್ರಿಕೆಯ ಸಂಪಾದಕರು. ರಿಸರ‍್ವ್ ಬ್ಯಾಂಕಿನ ಕನ್ನಡ ಸಂಘದ ‘ಕಿರಣ’ ಪತ್ರಿಕೆಯ ಸಂಪಾದಕತ್ವ ನಿರ್ವಹಿಸಿದ್ದರು. ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿರುವ ಪ್ರತಿಷ್ಠಿತ ಮಾಸ ಪತ್ರಿಕೆ ‘ಹೊಸತು’ ಸಹ ಸಂಪಾದಕರು. ಅಂತರಜಾಲ ಪತ್ರಿಕೆ 'ಹಿತೈಷಿಣಿ'ಯಲ್ಲೂ ಇವರ ಸಹಯೋಗವಿದೆ.
ಡಾ. ಎನ್. ಗಾಯತ್ರಿ ಅವರು ಕರ್ನಾಟಕ ಲೇಖಕಿಯರ ಸಂಘದ ಕಾರ‍್ಯದರ್ಶಿಯಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ‘ನೆರವು’- ಸೇವಾ ಸಂಸ್ಥೆಯ ಕಾರ‍್ಯದರ್ಶಿಯಾಗಿದ್ದರು.
ಡಾ. ಎನ್ . ಗಾಯತ್ರಿ ಅವರ ಪ್ರಕಟಿತ ಕೃತಿಗಳಲ್ಲಿ ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು, ಕ್ಲಾರಾ ಜೆಟ್‍ಕಿನ್, ಎಚ್.ವಿ. ಸಾವಿತ್ರಮ್ಮ ಕುರಿತಾದ 'ವಿಮುಕ್ತೆಯ ಹಾದಿ’ ಗೀತಾ ನಾಗಭೂಷಣ, ದೇವಿಪ್ರಸಾದ್ ಚಟ್ಟೋಪಾಧ್ಯಾಯ ಮುಂತಾದ ವ್ಯಕ್ತಿ ಚಿತ್ರಗಳು; ಮಹಿಳೆ-ಬಿಡುಗಡೆಯ ಹಾದಿಯಲ್ಲಿ , ‘ಸ್ತ್ರೀವಾದಿ ಪ್ರವೇಶಿಕೆ’, 'ಮಹಿಳಾ ವಿಮೋಚನೆ ಹೋರಾಟದ ನೂರು ವರ್ಷಗಳು', 'ಮಹಿಳಾ ಚಳವಳಿಯ ಮಜಲುಗಳು', 'ಸಂಚಲ', 'ಮಹಿಳಾ ಮೀಸಲಾತಿ ಮತ್ತು ಲಿಂಗರಾಜಕಾರಣ',
ಮುಂತಾದ ಚಿಂತನಗಳು; 'ಮುಖತಃ' (ಸಂದರ್ಶನಗಳ ಸಂಕಲನ); ಹೊಸತು ಪತ್ರಿಕೆಯಲ್ಲಿನ ಆಯ್ದ ಸಂಪಾದಿತ ಲೇಖನಗಳು, ಬಿ.ಎನ್. ಸುಮಿತ್ರಾಬಾಯಿಯವರೊಡನೆ,
ಜಾತಿ-ಲಿಂಗತ್ವದ ಒಳನೇಯ್ಗೆ (ಆರ್. ಪೂರ್ಣಿಮಾ ಅವರೊಂದಿಗೆ) ಮುಂತಾದ ಸಂಪಾದನೆಗಳು; ಫ್ರೆಡರಿಕ್ ಜೋಲಿಯೂ ಕ್ಯೂರಿ, ನಾನೇಕೆ ನಾಸ್ತಿಕ, ಸ್ತ್ರೀ-ಪುರುಷ ತುಲನೆ, ಖೋತಿ ವಿರುದ್ಧದ ಹೋರಾಟ, ಶೃಂಖಲೆಯ ಝೇಂಕಾರ, ಅಡ್ಡಗೋಡಿಗಳನೊಡೆದು ಮುಂತಾದ ಅನುವಾದಗಳು; ಇತ್ಯಾದಿ ವೈವಿಧ್ಯಗಳು ಸೇರಿವೆ. ಗಾಯತ್ರಿಯವರು 'ದಕ್ಷಿಣ ಭಾರತದ ಸಾಂಸ್ಕೃತಿಕ ಅಧ್ಯಯನದ ಸಾಂಸ್ಕೃತಿಕ ಕೋಶ AN ENCYCLOPAEDIA OF SOUTH INDIAN CULTURE’ ಗ್ರಂಥವನ್ನು ಪ್ರೊ. ಜಿ. ರಾಮಕೃಷ್ಣ ಮತ್ತು ದೇವಿಪ್ರಸಾದ್ ಚಟ್ಟೋಪಾಧ್ಯಾಯರೊಡನೆ ಸಂಪಾದಿಸಿದ್ದಾರೆ.
ಡಾ. ಎನ್. ಗಾಯತ್ರಿ ಅವರ ಮಹಿಳೆ ಬಿಡುಗಡೆಯ ಹಾದಿಯಲ್ಲಿ ಕೃತಿಗೆ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಮಹಿಳಾ ಚಳುವಳಿಯ ಮಜಲುಗಳು ಕೃತಿಗೆ ಕ.ಸಾ.ಪದ ದತ್ತಿನಿಧಿ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿವೆ.
ಡಾ. ಎನ್. ಗಾಯತ್ರಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birth day of writer and activist Dr. N. Gayathri
ಕಾಮೆಂಟ್‌ಗಳು