ಸಂಪತ್
ಸಂಪತ್
ಸಂಪತ್ ನಾಡು ಕಂಡ ಮಹಾನ್ ಹವ್ಯಾಸಿ ರಂಗಭೂಮಿ ಕಲಾವಿದ ಮತ್ತು ಚಿತ್ರರಂಗದ ಅಸಾಮಾನ್ಯ ನಟರು. ತಂದೆಯಾಗಿ ಅವರು ನಟಿಸಿ ಸಂಭಾಷಣೆ ಹೇಳುತ್ತಿದ್ದ ರೀತಿ ನನಗೆ ಅಪ್ಯಾಯಮಾನವಾಗಿತ್ತು.
ಸಂಪತ್ 1904ರ ವರ್ಷದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಎಂ.ಎಸ್. ಚೆಲುವೈಯ್ಯಂಗಾರ್. ಗೆಳೆಯರ ಗುಂಪಿನಲ್ಲಿ ಸಂಪತ್ ಎಂದೇ ಹೆಸರು ಪಡೆದಿದ್ದರು.
ಹವ್ಯಾಸಿ ರಂಗಭೂಮಿಯ ಕೊಡುಗೆ ಎಂದೇ ಕರೆಸಿ ಕೊಂಡಿದ್ದ ಸಂಪತ್, ಇಂಗ್ಲಿಷ್ ನಾಟಕಗಳನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ತಂದ ಹೆಗ್ಗಳಿಕೆಯನ್ನು ಹೊಂದಿದ್ದರು. ಚೆಲುವೈಯ್ಯಂಗಾರ್ ಅವರನ್ನು ಪ್ರಖ್ಯಾತ ಕಲಾವಿದ ಎಚ್. ಜಿ. ಸೋಮಶೇಖರ ರಾವ್, ತಮ್ಮ ಅಭಿನಯ ಕಲೆಯ ಗುರುವೆಂದೇ ನೆನೆಯುತ್ತಿದ್ದರು. "ಸಂಪತ್ ಅವರ ಒಂದೊಂದು ದಿನದ ತಾಲೀಮು ಕೂಡ ಅಭಿನಯದ ಬಗ್ಗೆ ಗ್ರಂಥ ಓದಿದಂತೆ" ಎಂಬುದು ಸೋಮಶೇಖರ ರಾವ್ ಅವರ ಮಾತಾಗಿತ್ತು.
ಚೆಲುವ ಅಯ್ಯಂಗಾರ್ ಮೈಸೂರಿನ ಹನುಮಮಂತರಾವ್ ರಸ್ತೆಯಲ್ಲಿ ಪ್ರೆಸ್ ನಡೆಸುತ್ತಿದ್ದರು. ಆರ್. ಕೆ. ನಾರಾರಾಯಣ್ ತಮ್ಮ ಪ್ರಸಿದ್ಧವಾದ ‘ಮಿ.ಸಂಪತ್: ದಿ ಪ್ರಿಂಟರ್ ಆಫ್ ಮಾಲ್ಗುಡಿ’ ಕಥೆಯನ್ನು ಇವರ ಪ್ರೇರಣೆಯಿಂದ ಬರೆದಿದ್ದು ಮಾತ್ರವಲ್ಲದೆ ‘ಟು ದಿ ಒರಿಜಿನಲ್ ಸಂಪತ್’ ಎಂದು ಅರ್ಪಣೆ ಕೂಡ ಮಾಡಿದ್ದಾರೆ. ಸಂಪತ್ ಅವರು ಈ ಕಥಾನಕ ಮಾತ್ರವಲ್ಲದೆ ಸಂಪತ್ ಅವರ ತಮ್ಮ ಅನೇಕ ಕಥಾನಕಗಳ ವಿಶಿಷ್ಟ ಸಕಾರಾತ್ಮಕ ಗುಣಗಳಿಗೆ ಸಂಪತ್ ಅವರನ್ನು ಬಳಸಿಕೊಂಡಿದ್ದಾರೆ. ಈ ಮಾತನ್ನು ಸ್ವಯಂ ಆರ್. ಕೆ. ನಾರಾಯಣ್ ತಮ್ಮ My Days ಎಂಬ ಬರಹದಲ್ಲಿ ಹೇಳಿದ್ದಾರೆ.
ವರನಟ ಡಾ. ರಾಜ್‍ಕುಮಾರ್ ಅವರಂತೂ ಸಂಪತ್ ಅವರನ್ನು'ಅಪ್ಪಾಜಿ' ಎಂದೇ ಕರೆಯುತ್ತಿದ್ದರು. ಹಾಗಿದ್ದರೂ ಸಂಪತ್ ಬಾಕಿಯವರಿಗೆ ಅಭಾಸವಾಗಬಾರದು ಎಂಬ ನಿಟ್ಟಿನಲ್ಲಿ ರಾಜ್ ಅವರನ್ನು ಅಣ್ಣಾ ಎನ್ನುತ್ತಿದ್ದರಂತೆ.
ಸಂಪತ್ 1949ರಲ್ಲಿ 'ಭಾರತಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ಧನಪಿಶಾಚಿ, ನಕ್ಕರೆ ಅದೇ ಸ್ವರ್ಗ, ಮಲ್ಲಮ್ಮನ ಪವಾಡ, ಸರ್ವಮಂಗಳ, ಬಬ್ರುವಾಹನ, ಮಯೂರ, ಬಡವರ ಬಂಧು, ಗಿರಿಕನ್ಯೆ, ಸ್ವಯಂವರ, ಶಂಕರ್ ಗುರು, ಸಿರಿತನಕ್ಕೆ ಸವಾಲ್, ಮರೆಯದ ದೀಪಾವಳಿ, ಗೆಜ್ಜೆಪೂಜೆ, ಒಂದೇ ರೂಪ ಎರಡು ಗುಣ, ಎರಡು ಕನಸು, ಹೊಸ ಬೆಳಕು, ಚಂದನದ ಗೊಂಬೆ ಮೊದಲಾದ ಸುಮಾರು 130 ಚಿತ್ರಗಳಲ್ಲಿ ಅಭಿನಯಿಸಿದ್ದರು.
ಸಂಪತ್ ಅವರು ಶಿಸ್ತು ಮತ್ತು ಸಂಯಮಕ್ಕೆ ಚಿತ್ರರಂಗದಲ್ಲಿ ಹೆಸರಾಗಿದ್ದರು. ಎಂ.ಆರ್.ವಿಠಲ್ ‘ನಕ್ಕರದೇ ಸ್ವರ್ಗ’ ಚಿತ್ರದ ಚಿತ್ರೀಕರಣವನ್ನು ಮೈಸೂರಿನಲ್ಲಿ ನಡೆಸಿದಾಗ ಚಿಕ್ಕ ಪಾತ್ರದಲ್ಲಿ ಅಭಿನಯಿಸಬೇಕಿದ್ದ ಕಲಾವಿದ ಅನಾರೋಗ್ಯಕ್ಕೆ ಈಡಾದರು. ಆಗ ವಿಠಲ್ ಸಾಕಷ್ಟು ಯೋಚಿಸಿ ಮೈಸೂರಿನವರೇ ಆದ ಸಂಪತ್ ಅವರ ಬಳಿ ಈ ಪಾತ್ರವನ್ನು ಮಾಡಿಸಿದರು. ಅದಕ್ಕೆ ಜೀವ ತುಂಬಿ ಅಭಿನಯಿಸಿದ ಸಂಪತ್, ಈ ಚಿತ್ರಕ್ಕೆ ಗೌರವಧನ ಪಡೆಯಲಿಲ್ಲ. “ನಾನು ಈ ಚಿತ್ರದಲ್ಲಿ ಗೌರವ ನಟ, ಇದಕ್ಕೂ ಗೌರವ ಧನ ಪಡೆದರೆ ನನಗೆ ಗೌರವ ಎಲ್ಲಿ ಉಳಿಯುತ್ತದೆ” ಎಂದುಬಿಟ್ಟರು. ಅವರ ಈ ಗುಣವನ್ನು ಬಹಳ ಇಷ್ಟ ಪಟ್ಟ ವಿಠಲ್, ಮುಂದೆ ತಮ್ಮ ಎಲ್ಲಾ ಚಿತ್ರಗಳಲ್ಲಿಯೂ ಅವರಿಗೆ ಒಂದು ಪಾತ್ರವನ್ನು ಸೃಷ್ಟಿಸುತ್ತಲೇ ಹೋದರು. ಮಂಜುಳಾ ಅವರು ನಾಯಕಿಯಾದ ಮೊದಲ ಚಿತ್ರ ‘ಯಾರು ಸಾಕ್ಷಿ’ಯಲ್ಲಿ ಡಿಫೆನ್ಸ್ ಲಾಯರ್ ಪಾತ್ರದಲ್ಲಿ ಸಂಪತ್ ಅಮೋಘ ಅಭಿನಯ ನೀಡಿದ್ದರು.
ರಾಜ್ ಕುಮಾರ್ ಅವರಿಗೆ ಸಂಪತ್ ಅವರ ಅಭಿನಯ ಬಹಳ ಇಷ್ಟ. ‘ಬಡವರ ಬಂಧು’ ಒಂದು ರೀತಿಯಲ್ಲಿ ಸಂಪತ್‌ಗಾಗಿ ರೂಪಿಸಿದಂತಹ ಚಿತ್ರ. “ಈ ಚಿತ್ರದ ನಾಯಕ ನಾನಲ್ಲ ಅವರು” ಎಂದು ರಾಜ್ ಕುಮಾರ್ ಅವರೇ ಹೇಳುತ್ತಿದ್ದರು. ‘ನಿನ್ನ ಕಂಗಳ ಬಿಸಿಯ ಹನಿಗಳು’ ಗೀತೆ ಒಂದು ರೀತಿಯಲ್ಲಿ ರಾಜ್ ಮತ್ತು ಸಂಪತ್ ಅವರ ಬಾಂಧವ್ಯದ ಅಮೂಲ್ಯ ಪ್ರತೀಕದಂತಿದೆ. ಸಂಪತ್ ಅವರ ಅನಾರೋಗ್ಯದ ದಿನಗಳಲ್ಲಿ ರಾಜ್ ನಿರಂತರವಾಗಿ ಅವರ ಜೊತೆ ಇದ್ದರು.
ಜಿ. ಪಿ. ರಾಜರತ್ನಂ ಸಹಾ "ಸಂಪತ್ ಅವರು ಕನ್ನಡದ ಸಂಪತ್ತು" ಎಂದಿದ್ದರು.
ಸಂಪತ್ 1983ರ ಜನವರಿ 17ರಂದು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.
ಕೃತಜ್ಞತೆ: ಸಂಪತ್ ಅವರ ಕುರಿತು ಸಂಪದ್ಭರಿತ ಮಾಹಿತಿ ನೀಡಿದ ಶ್ರೀಧರಮೂರ್ತಿ ಸಾರ್ ಅವರಿಗೆ ನಾನು ಕೃತಜ್ಞ Sreedhara Murthy
On Remembrance Day of Great treasure of Kannada Theatre and Cinema Sampath 🌷🙏🌷
ಕಾಮೆಂಟ್‌ಗಳು