ಜಯಂತಿ
ಜಯಂತಿ
ಚಲನಚಿತ್ರಲೋಕದ ಮಹತ್ವದ ಕಲಾವಿದರಾದ ಹಿರಿಯ ನಟಿ ಜಯಂತಿ ಅಭಿನಯ ಶಾರದೆ ಎಂದು ಪ್ರಖ್ಯಾತರಾದವರು. ಜೇನು ಗೂಡು ಕನ್ನಡ ಚಿತ್ರದಿಂದ ಪ್ರಾರಂಭಿಸಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮತ್ತು ಮರಾಠಿ ಭಾಷೆಗಳಲ್ಲಿ ಒಟ್ಟು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಈ ತಾರೆಯ ಪ್ರತಿಭೆ ಅಸಾಧಾರಣವಾದದ್ದು.
ಜಯಂತಿ ಅವರು 1945ರ ಜನವರಿ 6ರಂದು ಜನಿಸಿದರು. ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಅಂದಿನ ಹೆಸರು ಕಮಲಕುಮಾರಿ. ಚಿಕ್ಕಂದಿನಿಂದನಲ್ಲೇ ಜಯಂತಿ ಅವರು ತಂದೆಯಿಂದ ಬೇರ್ಪಟ್ಟು ತಾಯಿಯೊಡನೆ ಮದ್ರಾಸಿನಲ್ಲಿ ನೆಲೆಸಬೇಕಾಯಿತು. ತಮ್ಮ ಮಗಳು ಭರತನಾಟ್ಯ ಕಲಾವಿದೆಯಾಗಬೇಕೆಂಬ ಇಚ್ಛೆ ಹೊಂದಿದ್ದ ತಾಯಿ, ಆಕೆಯನ್ನು ಕಲಾವಿದೆ ಚಂದ್ರಕಲ ಅವರು ನಡೆಸುತ್ತಿದ್ದ ನೃತ್ಯ ಶಾಲೆಗೆ ಸೇರಿಸಿದರು. ದಕ್ಷಿಣ ಭಾರತ ಚಿತ್ರರಂಗದ ಮತ್ತೋರ್ವ ಪ್ರಖ್ಯಾತ ನಟಿ ಮನೋರಮ, ಜಯಂತಿ ಅವರಿಗೆ ನೃತ್ಯ ತರಗತಿಯ ಸಹಪಾಠಿಯಾಗಿದ್ದರು.
ಒಮ್ಮೆ ತಮಿಳು ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸುವಾಗ ಅಂದಿನ ಪ್ರಖ್ಯಾತ ನಟಿ ಸಾವಿತ್ರಿ, ಈ ಹೊಸ ನಟಿ ಜಯಂತಿಗೆ ಸಣ್ಣ ಸಂಭಾಷಣೆ ಕೂಡ ಹೇಳಲು ಬರುವುದಿಲ್ಲ ಎಂದು ಸಿಟ್ಟಿನಿಂದ ಆಚೆ ನಡೆದರಂತೆ. ಆ ಘಟನೆಯಿಂದ ವಿಚಲಿತರಾದರೂ ಮುಂದೆ ಅದನ್ನೇ ಗಂಭೀರ ಸವಾಲಾಗಿ ಸ್ವೀಕರಿಸಿ, ನಾನು ಉತ್ತಮ ನಟಿಯಾಗಿಯೇ ಆಗುತ್ತೇನೆ ಎಂದು ದೃಢಸಂಕಲ್ಪ ಹೊಂದಿದ ಜಯಂತಿ ಅಭಿನಯ ಶಾರದೆ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದು ಈಗ ಇತಿಹಾಸ. ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರ ಜೊತೆಯಲ್ಲೇ 36 ಚಿತ್ರಗಳಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದ್ದರು.
ಕನ್ನಡದ ಪ್ರಖ್ಯಾತ ಸಿನಿಮಾ ನಿರ್ದೇಶಕರಾದ ವೈ.ಆರ್. ಸ್ವಾಮಿ, ಅಂದಿನ ಈ ಕಮಲ ಕುಮಾರಿಯನ್ನು ನೃತ್ಯ ಕಾರ್ಯಕ್ರಮದ ತಾಲೀಮಿನ ಸಂದರ್ಭವೊಂದರಲ್ಲಿ ಗುರುತಿಸಿ, ‘ಜೇನುಗೂಡು’ ಚಿತ್ರದಲ್ಲಿ ಜಯಂತಿ ಎಂಬ ಹೊಸ ಹೆಸರಿನಿಂದ ಪರಿಚಯಿಸಿದರು. ಈ ಚಿತ್ರದಲ್ಲಿ ಜಯಂತಿಯವರು ಅಶ್ವಥ್ ಮತ್ತು ಪಂಡರೀಬಾಯಿ ಅವರೊಂದಿಗೆ ನಟಿಸಿದ್ದರು. ‘ಜೇನುಗೂಡು ಚಿತ್ರ’ ಅಪಾರ ಯಶಸ್ಸು ಗಳಿಸಿತು. ಜಯಂತಿಯವರ ಎರಡನೇ ಚಿತ್ರ ತರಾಸು ಅವರ ಕಾದಂಬರಿ ಆಧಾರಿತ ಚಿತ್ರ ‘ಚಂದವಳ್ಳಿಯ ತೋಟ’. ಈ ಚಿತ್ರದಲ್ಲಿ ಜಯಂತಿಯವರು ಉದಯಕುಮಾರ್, ರಾಜಕುಮಾರ್ ಮತ್ತು ಜಯಶ್ರೀ ಅವರೊಂದಿಗೆ ನಟಿಸಿದರು. ‘ಚಂದವಳ್ಳಿಯ ತೋಟ’ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಚಿತ್ರವೆಂದು ರಾಷ್ಟ್ರಪತಿಗಳ ಪದಕ ಪಡೆಯಿತು.
ಆ ನಂತರದಲ್ಲಿ ಜಯಂತಿ ಅವರ ಪ್ರಮುಖ ಚಿತ್ರವೆಂದರೆ ‘ಮಿಸ್ ಲೀಲಾವತಿ’. ಅಂದಿನ ಮಡಿವಂತಿಕೆ ಸಮಾಜದ ಹಿನ್ನೆಲೆಯಲ್ಲಿ ‘ಮಿಸ್ ಲೀಲಾವತಿ’ ಅತ್ಯಂತ ಬಿಸಿ ವಾತಾವರಣ ಸೃಷ್ಟಿಸುವಂತಹ ಕಥಾಹಿನ್ನೆಲೆ ಹೊಂದಿದ್ದು, ಜಯಂತಿ ಅವರನ್ನು ಅತ್ಯಂತ ಮೋಹಕ ನಟಿಯನ್ನಾಗಿ ಬಿಂಬಿಸಿತ್ತು. ಈ ಚಿತ್ರದಲ್ಲಿ ‘ನೋಡು ಬಾ ನೋಡು ಬಾ ನಮ್ಮೂರ’ ಮತ್ತು ಕುವೆಂಪುರವರ ‘ದೋಣಿ ಸಾಗಲಿ ಮುಂದೆ ಹೋಗಲಿ’ ಅಂತಹ ಸುಶ್ರಾವ್ಯ ಗೀತೆಗಳೂ ಇದ್ದವು. ಹೀಗೆ ಹಲವು ರೀತಿಯ ವಿಶೇಷತೆಗಳನ್ನು ಹೊಂದಿದ್ದ ‘ಮಿಸ್ ಲೀಲಾವತಿ’ ಅಪಾರ ಜನಪ್ರಿಯತೆ ಪಡೆಯುವುದರ ಜೊತೆಗೆ ಜಯಂತಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ತಂದುಕೊಟ್ಟಿತು. ಜಯಂತಿಯವರು ಅಂದು ತಾವು ಪಡೆದ ರಾಷ್ಟ್ರಪ್ರಶಸ್ತಿಯ ಹಣದಲ್ಲಿ “ಒಂದು ಉಯ್ಯಾಲೆ ಕೊಂಡುಕೊಂಡೆ” ಎಂದು ಮುಗ್ಧವಾಗಿ ಸ್ಮರಿಸುತ್ತಿದ್ದರು.
ಮುಂದೆ ಜಯಂತಿಯವರು ಕನ್ನಡದ ಚಿತ್ರರಂಗದ ಜನಪ್ರಿಯ ನಾಯಕರಾದ ರಾಜಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್, ರಾಜೇಶ್ ಅವರೊಂದಿಗಷ್ಟೇ ಅಲ್ಲದೆ ನಂತರದ ತಲೆಮಾರಿನವರಾದ ವಿಷ್ಣುವರ್ಧನ, ಶ್ರೀನಾಥ್ ಮುಂತಾದವರೊಂದಿಗೆ ಕೂಡ ಹಲವಾರು ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾದರು. ‘ಚಕ್ರತೀರ್ಥ’, ‘ಪರೋಪಕಾರಿ’, ‘ಅನ್ನಪೂರ್ಣ’, ‘ಕಲಾವತಿ’, ‘ಶ್ರೀ ಕೃಷ್ಣ ದೇವರಾಯ’, ‘ಕಸ್ತೂರಿ ನಿವಾಸ’ ಹೀಗೆ ಒಂದಾದ ಮೇಲೊಂದು ಯಶಸ್ವಿ ಹಾಗೂ ಮೌಲ್ಯಯುತ ಚಿತ್ರಗಳಲ್ಲಿ ಜಯಂತಿಯವರು ನಟಿಸುತ್ತ ಬಂದರು. ನಾಯಕಿ ಪಾತ್ರವಿರಲಿ, ಇಲ್ಲ ಪೋಷಕ ನಟಿಯ ಪಾತ್ರವೇ ಇರಲಿ, ಅವರು ಶ್ರದ್ಧೆಯಿಂದ ಪಾತ್ರದಲ್ಲಿ ಲೀನವಾಗುವುದನ್ನು ನೋಡುವುದೇ ಒಂದು ಸೊಗಸು ಎನಿಸುತ್ತಿತ್ತು. ‘ನಾಗರಹಾವು’ ಚಿತ್ರದಲ್ಲಿ, ‘ಕನ್ನಡನಾಡಿನ ವೀರರಮಣಿಯ’ ಹಾಡಿನ ಹಿನ್ನೆಲೆಯಲ್ಲಿ ಮೂಡಿ ಬರುವ ಆಕೆಯ ಓಬವ್ವನ ಪಾತ್ರ, ಅಸಾಧಾರಣ ಪ್ರತಿಭೆಯ ಜೊತೆಗೆ ಓಬವ್ವನನ್ನೂ ಕನ್ನಡ ಜನತೆಗೆ ಇನ್ನಷ್ಟು ಹತ್ತಿರವಾಗಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ. ಜಯಂತಿ ಅವರ ಚಿತ್ರ ಜೀವನದಲ್ಲಿ ಮತ್ತೊಂದು ಮೈಲುಗಲ್ಲಾದ ಚಿತ್ರ ಪುಟ್ಟಣ್ಣ ಕಣಗಾಲರ ‘ಎಡಕಲ್ಲು ಗುಡ್ಡದ ಮೇಲೆ’.
ಅಭಿನಯ ಕ್ಷೇತ್ರದಲ್ಲಿ ಸಂದಿರುವ ಹಲವು ಪ್ರಶಸ್ತಿ ಗೌರವಗಳಲ್ಲದೆ ಅಭಿನಯ ಶಾರದೆ ಜಯಂತಿ ಅವರನ್ನು ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟೊರೇಟ್ ನೀಡಿ ಗೌರವಿಸಿತ್ತು.
ಅಭಿನಯ ಶಾರದೆ 2021ರ ಜುಲೈ 26ರಂದು ಈ ಲೋಕವನ್ನಗಲಿದರು. ಹಲವು ರೀತಿಯಲ್ಲಿ ಬದುಕಿನ ಕಷ್ಟಗಳನ್ನು ಅನುಭವಿಸಿದ ಈ ಅಭಿನಯ ಶಾರದೆ ಎಲ್ಲ ನೋವು ನಲಿವುಗಳನ್ನು ಮೀರಿದ ಲೋಕಕ್ಕೆ ನಡೆದರು. ಅವರು ನೆನಪು ನಮ್ಮ ಕಾಲದವರಿಗಂತೂ ಸ್ಮರಣೀಯವಾದದ್ದು.
- On the birthday anniversary of actress Jayanthi
ಕಾಮೆಂಟ್‌ಗಳು